ಸೋಯಾಬೀನ್, ತೊಗರಿ ಬಣವೆ ಭಸ್ಮ

ಶಿಗ್ಗಾಂವಿ: ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಸೋಯಾಬೀನ್, ತೊಗರಿ ಬಣವೆ ಸುಟ್ಟು 10 ಲಕ್ಷ ರೂ. ಗೂ ಅಧಿಕ ಹಾನಿಯಾದ ಘಟನೆ ತಾಲೂಕಿನ ಹಿರೇಮಲ್ಲೂರ ಗ್ರಾಮದಲ್ಲಿ ಗುರುವಾರ ತಡರಾತ್ರಿ ನಡೆದಿದೆ.

ಗ್ರಾಮದ ರೈತ ಹಿರೇಗೌಡ್ರ ಪಾಟೀಲ ಅವರಿಗೆ ಸೇರಿದ 15 ಎಕರೆ ಜಮೀನಿನಲ್ಲಿ ಬೆಳೆದಿದ್ದ ಸೋಯಾಬೀನ್ ಬಣವೆ ಮತ್ತು ಪಕ್ಕದ ಈಶ್ವರಗೌಡ ಕರೆಗೌಡ್ರ ಅವರಿಗೆ ಸೇರಿದ ತೊಗರಿ ಬಣವೆ ಹಾನಿಗೊಳಗಾಗಿದೆ. ಸ್ಥಳಕ್ಕೆ ಪೊಲೀಸರು, ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಘಟನೆ ಕುರಿತು ಶಿಗ್ಗಾಂವಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಹಾನಿಗೊಳಗಾದ ರೈತರಿಗೆ ಪರಿಹಾರ ನೀಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ವರ್ಷಪೂರ್ತಿ ಶ್ರಮಪಟ್ಟು ಬೆಳೆದ ಬೆಳೆ ಕೈಗೆ ಬಂದು ಬಾಯಿಗೆ ಬರಲಿಲ್ಲ. ಈ ಕೃತ್ಯದ ಕುರಿತು ಪೊಲೀಸರು ತನಿಖೆ ನಡೆಸಬೇಕು. ಹಾನಿಗೊಳಗಾದ ರೈತರ ನೆರವಿಗೆ ಕಂದಾಯ ಇಲಾಖೆ ಧಾವಿಸಬೇಕು. ಕೃಷಿ ಇಲಾಖೆ ಈ ಕುರಿತು ಪರಿಶೀಲನೆ ಕೈಗೊಂಡು ತಕ್ಷಣ ವರದಿ ನೀಡುವ ಮೂಲಕ ಪರಿಹಾರ ದೊರಕಿಸಿ ಕೊಡಬೇಕು ಎಂದು ರೈತ ಈಶ್ವರಗೌಡ ಕರಿಗೌಡ್ರ ಆಗ್ರಹಿಸಿದರು.