More

  ಸೋಮೇಶ್ವರ ಸನ್ನಿಧಿಯಲ್ಲಿ ಸಾಂಸ್ಕೃತಿಕ ಮೆರುಗು

  ಲಕ್ಷ್ಮೇಶ್ವರ: ಇಲ್ಲಿಯ ಸೋಮನಾಥ ದೇವಾಲಯದ ಆವರಣದಲ್ಲಿ ಜ.3 ರಿಂದ ಮೂರು ದಿನಗಳ ಕಾಲ ಪುಲಿಗೆರೆ ಉತ್ಸವ ಆಯೋಜಿಸಲಾಗಿದ್ದು ಸಾಂಸ್ಕೃತಿಕ ಮೆರುಗು ಮೇಳೈಸಲಿದೆ. ಇನ್ಪೋಸಿಸ್ ಪ್ರತಿಷ್ಠಾನದ ವತಿಯಿಂದ ಡಾ. ಸುಧಾ ಮೂರ್ತಿಯವರು 4.5 ಕೋಟಿ ರೂ. ವೆಚ್ಚದಲ್ಲಿ ಐತಿಹಾಸಿಕ ಶ್ರೀ ಸೋಮೇಶ್ವರ ದೇವಸ್ಥಾನವನ್ನು ಜೀಣೋದ್ಧಾರಗೊಳಿಸಿದ ನಂತರ, ಕಳೆದ 5 ವರ್ಷಗಳಿಂದ ದೇವಸ್ಥಾನದಲ್ಲಿ ಪುಲಿಗೆರೆ ಉತ್ಸವ ಆರಂಭಿಸಿದ್ದಾರೆ.

  ಶಿಲ್ಪಕಲೆ, ಸಂಗೀತ, ನೃತ್ಯಗಳನ್ನೊಳಗೊಂಡ ಸಾಂಸ್ಕೃತಿಕ ಉತ್ಸವಕ್ಕೆ 2016 ರ ಮಾರ್ಚ್​ನಲ್ಲಿ ಡಾ. ಸುಧಾಮೂರ್ತಿಯವರೇ ಲಕ್ಷ ದೀಪೋತ್ಸವದೊಂದಿಗೆ ಮೊದಲ ವರ್ಷದ ಪುಲಿಗೆರೆ ಉತ್ಸವಕ್ಕೆ ಚಾಲನೆ ನೀಡಿದರು. ಅಂದಿನಿಂದ ಪ್ರತಿವರ್ಷ ಜನವರಿ ಮೊದಲ ವಾರದಲ್ಲಿ 3 ದಿನಗಳ ಕಾಲ ಪುಲಿಗೆರೆ ಉತ್ಸವದ ಹೆಸರಿನಲ್ಲಿ ಸಂಗೀತ, ನೃತ್ಯ, ಚಿತ್ರ ಸಂಭ್ರಮದಂತಹ ಕಾರ್ಯಕ್ರಮಗಳನ್ನು ಬೆಂಗಳೂರಿನ ಭಾರತೀಯ ವಿದ್ಯಾಭವನದವರು ಆಯೋಜಿಸಿಕೊಂಡು ಬಂದಿದ್ದಾರೆ.

  ಸೋಮೇಶ್ವರ ದೇವಸ್ಥಾನದ ಇತಿಹಾಸ:
  ಕ್ರಿ.ಶ. 6ನೇ ಶತಮಾನದಲ್ಲಿ ಪುಲಿಗೆರೆ ಕಲ್ಯಾಣ ಚಾಲುಕ್ಯರ ಆಳ್ವಿಕೆಯಲ್ಲಿತ್ತು. 11ನೇ ಶತಮಾನದಲ್ಲಿ ಈ ಪ್ರಾಂತ್ಯವನ್ನಾಳುತ್ತಿದ್ದ ಸರ್ವೆಶ್ವರನೆಂಬ ಮಾಂಡಲಿಕ ದೊರೆ ತನ್ನ ಮಗ ಸೋಮದೇವನ ಜನ್ಮೋತ್ಸವ ಶುಭ ಸಂದರ್ಭದಲ್ಲಿ ಈ ದೇವಸ್ಥಾನ ಕಟ್ಟಿಸಿದನೆಂಬುದು ಐತಿಹ್ಯ. ಆ ಕಾಲದಲ್ಲಿ ಸೌರಾಷ್ಟ್ರದಿಂದ ಮುತ್ತು-ರತ್ನ ವ್ಯಾಪಾರಕ್ಕಾಗಿ ಪುಲಿಗೆರೆಗೆ ಬಂದಿದ್ದ ಆದಯ್ಯನೆಂಬ ಶಿವಭಕ್ತ ಸೌರಾಷ್ಟ್ರದಿಂದ ಸೋಮೇಶ್ವರನ ಮೂರ್ತಿ ತಂದು ಪ್ರತಿಷ್ಠಾಪಿಸಿದ್ದಾನೆಂಬ ಪ್ರತೀತಿ ಇದೆ.

  ದೇವಸ್ಥಾನದ ವೈಶಿಷ್ಟ್ಯ:
  ದೇವಾಲಯದ ಗರ್ಭಗೃಹದಲ್ಲಿ ನಂದಿಯ ಮೇಲೆ ಶಿವನು ಪಾರ್ವತಿಯೊಡಗೂಡಿ ಹೊರಟಂತಿರುವ ಶ್ರೀ ಸೋಮೇಶ್ವರನ ಅಪರೂಪದ ವಿಗ್ರಹವಿದೆ. ಒಳಗೆ ನವರಂಗ ಹಾಗೂ ರಂಗಮಂಟಪಗಳಿವೆ. ಪೂರ್ವ, ದಕ್ಷಿಣ ಮತ್ತು ಉತ್ತರಕ್ಕೆ ಪ್ರವೇಶ ದ್ವಾರಗಳಿವೆ. ಪ್ರಾಂಗಣದಲ್ಲಿ ಗಣೇಶ ದೇವಸ್ಥಾನ, ತೀರ್ಥಬಾವಿ, ದಂಡೇಶ್ವರ, ಚಂದ್ರಮೌಳೇಶ್ವರ, ತ್ರಿಕೂಟಾಚಲ, ವೀರಭದ್ರೇಶ್ವರ, ಮಲ್ಲಿಕಾರ್ಜುನ ದೇವಸ್ಥಾನ ಹತ್ತಾರು ದೇವ ಮಂಟಪಗಳು, ಲಜ್ಜಾಗೌರಿ ಮೂರ್ತಿ, ಕಲ್ಯಾಣಿ ಇದೆ. ಮೇ ತಿಂಗಳ ಮಾಘಶುದ್ಧ ಬಹುಳ ನಕ್ಷತ್ರದಂದು ಸೂರ್ಯೋದಯದ ಹೊಂಗಿರಣಗಳು ಗರ್ಭಗುಡಿಯಲ್ಲಿರುವ ಶ್ರೀ ಸೋಮೇಶ್ವರ ಮೂರ್ತಿ ಮೇಲೆ ಬೀಳುತ್ತವೆ.

  ಉತ್ಸವದಲ್ಲಿಂದು:
  ಜ.3 ರಂದು ಬೆಳಗ್ಗೆ 6.15ಕ್ಕೆ ರಾಜ್ಯ ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಟಿ.ಕೆ. ಅನಿಲಕುಮಾರ ಉತ್ಸವಕ್ಕೆ ಚಾಲನೆ ನೀಡುವರು. 6.30ಕ್ಕೆ ಉದಯ ರಾಗ-1ರಲ್ಲಿ ಖ್ಯಾತ ಕಲಾವಿದ ಮಂಜುನಾಥ ಭಜಂತ್ರಿ ಮತ್ತು ತಂಡದವರಿಂದ ಶಹನಾಯಿ ವಾದನ, 7.30ಕ್ಕೆ ಖ್ಯಾತ ಹಿಂದುಸ್ತಾನಿ ಸಂಗೀತ ಕಲಾವಿದೆ ರಾಜೇಶ್ವರಿ ಪಾಟೀಲ ಅವರಿಂದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಜರುಗುವುದು. ಸಂಜೆ 4 ಕ್ಕೆ ಮುಂಡರಗಿಯ ಎಸ್.ನಿಂಗಪ್ಪ, ಎಚ್. ಗುಡ್ಡಾಡ ತಂಡದ ಡೊಳ್ಳು ಕುಣಿತ ಸೇರಿ ವಿವಿಧ ವಾದ್ಯ ವೈಭವಗಳೊಂದಿಗೆ ಭಕ್ತರ ಸಮ್ಮಿಲನದೊಂದಿಗೆ ಅಲಂಕೃತ ಶ್ರೀ ಸೋಮೇಶ್ವರ ದೇವರ ಪಲ್ಲಕ್ಕಿ ಉತ್ಸವ ಜರುಗಲಿದೆ. ಸಂಜೆ 6ಕ್ಕೆ ಹಫೀಸ್ ಖಾನ್ ಅವರಿಂದ ಸಿತಾರ್​ವಾದನ, 7.30ಕ್ಕೆ ಉಡುಪಿಯ ಸೃಷ್ಟಿ ನೃತ್ಯ ಕಲಾ ಕುಟೀರದ ಕಲಾವಿದರಿಂದ ಶಿವಾರ್ಪಣಂ ಭರತನಾಟ್ಯ ನೃತ್ಯ ಪ್ರದರ್ಶನ, 8.30ಕ್ಕೆ ಚಿತ್ರದುರ್ಗದ ಅಂಜನಾ ನೃತ್ಯಕಲಾ ಕೇಂದ್ರ ತಂಡದವರಿಂದ ಭರತನಾಟ್ಯದ ಪ್ರದರ್ಶನ ನಡೆಯಲಿದೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts