ಸೋಮವಾರ ದೋಸ್ತಿಗಳ ಕೊನೇ ಸದನ

ಚಿಕ್ಕಬಳ್ಳಾಪುರ: ಸಾಂರ್ದಭಿಕ ಶಿಶುವಿನ ಆಡಳಿತ ಅಂತ್ಯವಾಗುವ ಸಮಯ ಬಂದಿದೆ. ಸೋಮವಾರ ಸದನದಲ್ಲಿ ವಿಶ್ವಾಸ ಮತಯಾಚನೆ ವೇಳೆ ಬಹುಮತವಿಲ್ಲದೆ ಸಮ್ಮಿಶ್ರ ಸರ್ಕಾರ ಪತನವಾಗುತ್ತದೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಭವಿಷ್ಯ ನುಡಿದರು.

ಚಿಂತಾಮಣಿ ತಾಲೂಕು ಕೈವಾರದ ಶ್ರೀ ಯೋಗಿ ನಾರೇಯಣ ತಾತಯ್ಯ ಮಠಕ್ಕೆ ಭಾನುವಾರ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಬಿಜೆಪಿ ಅಧಿಕಾರ ಹಿಡಿಯುವುದನ್ನು ತಪ್ಪಿಸಲು ಜೆಡಿಎಸ್-ಕಾಂಗ್ರೆಸ್ ಸೇರಿ ಸಮ್ಮಿಶ್ರ ಸರ್ಕಾರ ರಚಿಸಿದವು. ಆದರೆ, ಉತ್ತಮ ಆಡಳಿತ ನೀಡಲಿಲ್ಲ. ಘೊಷಣೆಗಳನ್ನು ಬಿಟ್ಟರೆ ಏನನ್ನೂ ಮಾಡಲಿಲ್ಲ, ಇದರ ನಡುವೆ ಭ್ರಷ್ಟಾಚಾರ, ವರ್ಗಾವಣೆ ದಂಧೆ ಹೆಚ್ಚಾಗಿದ್ದು ಸಿಎಂ ಎಚ್.ಡಿ.ಕುಮಾರಸ್ವಾಮಿ ಮತ್ತು ಸಚಿವ ಎಚ್.ಡಿ.ರೇವಣ್ಣ ಧೋರಣೆಗೆ ಕಾಂಗ್ರೆಸ್ ಶಾಸಕರು ಅಸಮಾಧಾನಗೊಂಡು ಕೈಕೊಡುತ್ತಿದ್ದಾರೆ. ಇಷ್ಟಾದರೂ ಅಧಿವೇಶನದಲ್ಲಿ ಸ್ಪೀಕರ್ ಮೂಲಕ ಕಾಲಹರಣ ಮಾಡಲಾಗುತ್ತಿದೆ. ಸೋಮವಾರದ ಸದನ ಈ ಸರ್ಕಾರದ ಕೊನೇ ಅಧಿವೇಶನ ಎಂದರು.

ಕಾಂಗ್ರೆಸ್-ಜೆಡಿಎಸ್ ಎಷ್ಟೇ ತಿಪ್ಪರಲಾಗ ಹಾಕಿದರೂ ಸಮ್ಮಿಶ್ರ ಸರ್ಕಾರ ಉಳಿಯುವುದಿಲ್ಲ. ಈ ಕೂಡಲೇ ಅವರು ಎಲ್ಲ ಕಸರತ್ತುಗಳನ್ನು ನಿಲ್ಲಿಸಬೇಕು. ಕೆಲವೇ ದಿನಗಳಲ್ಲಿ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಂಸದ ಮುನಿಸ್ವಾಮಿ, ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ, ಮುಖಂಡ ಮಾಡಿಕೇರಿ ಅರುಣ್ ಬಾಬು ಇತರರಿದ್ದರು.

ಎಷ್ಟು ದಿನ ಸರ್ಕಾರ ಉಳಿಸಬಹುದು?: ರಾಜಕಾರಣ ನಿಂತ ನೀರಲ್ಲ. ಕಾಲಚಕ್ರ ಉರುಳಿದಂತೆ ಹಲವು ಬದಲಾವಣೆಗಳಾಗುತ್ತವೆ. ಹೇಗೋ ಕುಮಾರಸ್ವಾಮಿ ಅಧಿಕಾರ ಪಡೆದುಕೊಂಡರು. ಇದೀಗ ಕಳೆದುಕೊಳ್ಳುವ ಸಮಯ ಬಂದಿದೆ ಎಂದು ಶಾಸಕ ಸಿ.ಟಿ.ರವಿ ವ್ಯಂಗ್ಯವಾಡಿದರು. ಸ್ಪೀಕರ್ ರಮೇಶ್ ಕುಮಾರ್ ಮಾಡಬೇಕಿದ್ದ ಕೆಲಸ ಮಾಡಿದ್ದಾರೆ. ಇನ್ನೂ ಎಷ್ಟು ದಿನ ಅವರು ಸರ್ಕಾರ ಉಳಿಸಬಹುದು? ಸೋಮವಾರ ಎಲ್ಲವೂ ಗೊತ್ತಾಗಲಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಮನೆಗೆ ಹೋಗುತ್ತಾರೆ ಎಂದರು.

ತಾತಯ್ಯ ವಿಗ್ರಹಕ್ಕೆ ವಿಶೇಷ ಪೂಜೆ: ಬಿಜೆಪಿ ಮುಖಂಡರು ಕೈವಾರ ತಾತಯ್ಯನವರ ವಿಗ್ರಹಕ್ಕೆ ವಿಶೇಷ ಪೂಜೆ ಸಲ್ಲಿಸಿದರು. ಮಠದ ಸಂಚಾಲಕ ಬಾಲಕೃಷ್ಣ ಭಾಗವತಾರ್, ವಿಶೇಷ ಪೂಜಾ ಕಾರ್ಯಕ್ರಮ ಮತ್ತು ಭಕ್ತಾಧಿಗಳಿಗೆ ಕೈಗೊಂಡಿರುವ ವ್ಯವಸ್ಥೆ ಬಗ್ಗೆ ಮಾಹಿತಿ ನೀಡಿದರು. ಮಠದ ಪರವಾಗಿ ಕೆ.ಎಸ್.ಈಶ್ವರಪ್ಪ, ಸಿ.ಟಿ.ರವಿ, ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಸಂಸದ ಮುನಿಸ್ವಾಮಿ ಅವರನ್ನು ಸನ್ಮಾನಿಸಿದರು. ಸನ್ಮಾನಿಸಲಾಯಿತು. ಮಠದ ಆಡಳಿತಾಧಿಕಾರಿ ಕೆ.ಲಕ್ಷ್ಮೀನಾರಾಯಣ ಇದ್ದರು.

Leave a Reply

Your email address will not be published. Required fields are marked *