ಹುಬ್ಬಳ್ಳಿ: ಪ್ರಸಕ್ತ ಜನವರಿ ಅಂತ್ಯಕ್ಕೆ ಕೋವಿಡ್ ಅತ್ಯಂತ ಅಧಿಕ ಏರಿಕೆ ಪ್ರಮಾಣ ತಲುಪುವ ಸಂಭವವಿದ್ದು, ಧಾರವಾಡ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ನಗರದ ಪ್ರವಾಸಿ ಮಂದಿರದ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಕೋವಿಡ್ 3ನೇ ಅಲೆ ನಿಯಂತ್ರಣ ಹಾಗೂ ಸಿದ್ಧತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಫೆಬ್ರವರಿಯಲ್ಲಿ ಸೋಂಕು ಇಳಿಮುಖವಾಗಬಹುದೆಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ ಎಂದರು.
ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮಾತನಾಡಿ, ಕೋವಿಡ್ ಚಿಕಿತ್ಸೆಯಲ್ಲಿ ಹುಬ್ಬ್ಬ್ಳು ಕಿಮ್ಸ್ ಮೊದಲಿನಿಂದಲೂ ಉತ್ತಮ ಸೇವೆ ನೀಡುತ್ತಿದೆ.ಈಗ ಚಳಿ ಇರುವುದರಿಂದ ಕಿಮ್ಸ್ನ ಖಾಯಂ ಕಟ್ಟಡಗಳಲ್ಲಿಯೇ ಕೋವಿಡ್ ವಾರ್ಡ್ಗಳನ್ನು ನಿರ್ವಹಿಸಬೇಕು. ಸೋಂಕು ಅತ್ಯಧಿಕವಾದಾಗ ಮೇಕ್ ಶಿಫ್ಟ್ ಆಸ್ಪತ್ರೆಗಳನ್ನು ಬಳಸಿಕೊಳ್ಳುವ ಕುರಿತು ಯೋಜನೆ ರೂಪಿಸಿ ಎಂದು ಸಲಹೆ ನೀಡಿದರು.
ಜಿಲ್ಲಾಧಿಕಾರಿ ನಿತೇಶ ಪಾಟೀಲ ಮಾತನಾಡಿ, ಜಿಲ್ಲೆಯಲ್ಲಿ ಸಧ್ಯ 3,149 ಸಕ್ರಿಯ ಕೋವಿಡ್ ಪ್ರಕರಣಗಳಿವೆ. ಹುಬ್ಬಳ್ಳಿಯಲ್ಲಿ ಅತ್ಯಧಿಕ 1,740, ಧಾರವಾಡದಲ್ಲಿ 823 ಪ್ರಕರಣಗಳಿವೆ. ಕಳೆದ 7 ದಿನಗಳಲ್ಲಿ 39,959 ಸ್ಯಾಂಪಲ್ಗಳನ್ನು ಕೋವಿಡ್ ತಪಾಸಣೆಗೆ ಒಳಪಡಿಸಲಾಗಿದೆ. 4,419 ಪಾಸಿಟಿವ್ ದೃಢ ಪಟ್ಟಿವೆ. 1 ವಾರದಲ್ಲಿ ಸರಾಸರಿ ಶೇ. 11.06 ಪಾಸಿಟಿವಿಟಿ ದರ ದಾಖಲಾಗಿದೆ. ಗ್ರಾಮೀಣ ಭಾಗದಲ್ಲಿ ಕಡಿಮೆ ಇದೆ ಎಂದು ವಿವರಿಸಿದರು.
ಕಿಮ್ಸ್ ನಲ್ಲಿ 27, ಜಿಲ್ಲಾ ಆಸ್ಪತ್ರೆಯಲ್ಲಿ 18, ರೈಲ್ವೆ ಆಸ್ಪತ್ರೆಯಲ್ಲಿ 39 ಸೇರಿ ಒಟ್ಟು 152 ಸೋಂಕಿತರು ಮಾತ್ರ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 3,137 ಹಾಸಿಗೆಗಳನ್ನು ಕೋವಿಡ್ ಚಿಕಿತ್ಸೆಗೆ ಮೀಸಲಿಡಲಾಗಿದೆ. ಆಕ್ಸಿಜನ್, ಔಷಧ ಸೇರಿ ಯಾವುದೇ ಕೊರತೆಗಳು ಇಲ್ಲ. ಹೋಮ್ ಐಸೋಲೇಷನ್ನಲ್ಲಿ ಇರುವವರಿಗೆ ಫಿಸಿಕಲ್ ಟ್ರಯೇಜಿಂಗ್ ನಡೆಸಲು 30 ತಂಡಗಳನ್ನು ನಿಯೋಜಿಸಲಾಗಿದೆ. ಇದಕ್ಕಾಗಿ 30 ವಾಹನಗಳನ್ನು ಮಹಾನಗರ ಪಾಲಿಕೆ ಹಾಗೂ ಜಿಲ್ಲಾಡಳಿತದಿಂದ ಬಾಡಿಗೆ ಪಡೆಯಲಾಗಿದೆ ಎಂದು ತಿಳಿಸಿದರು.
ಕೋವಿಡ್ ತಪಾಸಣೆಗೆ 15 ಸಂಚಾರಿ ವಾಹನಗಳು ಕಾರ್ಯ ನಿರ್ವಹಿಸುತ್ತಿವೆ. ಸೋಂಕು ನಿಯಂತ್ರಿಸಲು ಕೋವಿಡ್ ತಪಾಸಣೆಗೆ ಬಂದ ಸಮಯದಲ್ಲಿಯೇ ಔಷಧ ಕಿಟ್ ನೀಡಿ ಕಳುಹಿಸಲಾಗುತ್ತಿದೆ. ಸಾರ್ವಜನಿಕ ಹಾಗೂ ಖಾಸಗಿ ಸಂಸ್ಥೆಗಳ ಕಟ್ಟಡಗಳಲ್ಲಿ ಕೋವಿಡ್ ಕೇರ್ ಸೆಂಟರ್ ಆರಂಭಿಸಲಾಗಿದೆ. ಸಧ್ಯ 46 ಜನರು ಮಾತ್ರ ಈ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದರು.
ಹೋಮ್ ಐಸೋಲೇಷನ್ನಲ್ಲಿರುವ ಕೋವಿಡ್ ಸೋಂಕಿತರಿಗೆ ಸಮರ್ಪಕ ಚಿಕಿತ್ಸೆ ನೀಡಲು ಮಹಾನಗರ ಪಾಲಿಕೆ ಹಾಗೂ ಜಿಲ್ಲಾಡಳಿತದಿಂದ ಬಾಡಿಗೆ ಪಡೆದಿರುವ 30 ವಾಹನಗಳಿಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಇದೇ ಸಂದರ್ಭದಲ್ಲಿ ಚಾಲನೆ ನೀಡಿದರು.