More

  ಸೊಳ್ಳೆ ನಿರೋಧಕ ಬಟ್ಟೆ ಅನ್ವೇಷಕಿಗೆ ಪ್ರಶಸ್ತಿ

  ಬೆಳ್ತಂಗಡಿ: ಕೇಂದ್ರ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವಾಲಯ ಘೋಷಿಸಿದ ಈ ಸಾಲಿನ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿಗೆ ಸೊಳ್ಳೆ ನಿವಾರಕ ಬಟ್ಟೆಗಳ ಅನ್ವೇಷಕಿ, ಬಾಲಕಿ ಬೆಳ್ತಂಗಡಿಯ ಮೂರ್ಜೆ ಸುನೀತಾ ಪ್ರಭು ಭಾಜನರಾಗಿದ್ದಾರೆ. ಬುಧವಾರ ರಾಷ್ಟ್ರಪತಿ ಭವನದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಒಂದು ಲಕ್ಷ ರೂಪಾಯಿ ನಗದು ಸಹಿತ ಪ್ರಶಸ್ತಿಯನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್ ಪ್ರದಾನ ಮಾಡಿದರು. ಮಂಗಳೂರಿನ ಸಿಎಫ್‌ಎಎಲ್ ವಿದ್ಯಾ ಸಂಸ್ಥೆಯಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿರುವ ಸುನೀತಾ ಬೆಳ್ತಂಗಡಿಯ ವಿನಾಯಕ ವುಡ್ ಇಂಡಸ್ಟ್ರೀಸ್‌ನ ಮಾಲೀಕ ವಿವೇಕಾನಂದ ಪ್ರಭು -ಶಾಂತಲಾ ಪ್ರಭು ದಂಪತಿ ಪುತ್ರಿ. ಉಜಿರೆ ಶ್ರೀ ಮಂಜುನಾಥೇಶ್ವರ ಸಿಬಿಎಸ್‌ಸಿ ಶಾಲೆಯ ಹಳೇ ವಿದ್ಯಾರ್ಥಿನಿ.
  ಕೃಷಿಕ ಕುಟುಂಬದಿಂದ ಬಂದಿರುವ ಸುನೀತಾ ಬಾಲ್ಯದಿಂದಲೇ ಕುತೂಹಲ ಪ್ರವೃತ್ತಿಯವರು, ಹೊಸದನ್ನು ಕಲಿಯಬೇಕೆಂಬ ಆಸಕ್ತಿ ಹೊಂದಿದವರು. ಇದಕ್ಕೆ ಅವರಲ್ಲಿದ್ದ ಬದ್ಧತೆ, ಛಲ ಜತೆಯಾಗಿತ್ತು. ಇದಕ್ಕೆ ನೀರೆರೆದು ಪೋಷಿಸಿದವರು ಉಜಿರೆ ಎಸ್‌ಡಿಎಂ ಸಿಬಿಎಸ್‌ಇ ಶಾಲೆಯ ಶಿಕ್ಷಕರು ಮತ್ತು ಹೆತ್ತವರು. ಮೊದಲೇ ಉತ್ಸಾಹದ ಬುಗ್ಗೆಯಾಗಿದ್ದ ಸುನೀತಾರಿಗೆ ಅವಕಾಶಗಳ ಜಗತ್ತು ತೆರೆದುಕೊಂಡಿತು. 8ನೇ ತರಗತಿಯಲ್ಲಿ ಓದುತ್ತಿರುವಾಗ ಮಹಾರಾಷ್ಟ್ರದ ಬಾರಾಮತಿಯಲ್ಲಿ ನಡೆದ ನ್ಯಾಷನಲ್ ಚಿಲ್ಡ್ರನ್ ಸೈನ್ಸ್ ಕಾಂಗ್ರೆಸ್, 9ನೇ ತರಗತಿಯಲ್ಲಿರುವಾಗ ರಿಮೋಟ್ ಕಂಟ್ರೋಲ್ಡ್ ರಬ್ಬರ್ ಟ್ಯಾಪಿಂಗ್ ಯಂತ್ರದ ಅನ್ವೇಷಣೆಯು ಬೆಂಗಳೂರಿನ ಶಿಕ್ಷಕರ ಸದನದಲ್ಲಿ ನಡೆದ ಸೈನ್ಸ್ ಅಂಡ್ ಇಂಜಿನಿಯರಿಂಗ್ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಮೆಚ್ಚುಗೆ ಪಡೆದಿತ್ತು. ನಂತರ 10ನೇ ತರಗತಿಯಲ್ಲಿ ಸೊಳ್ಳೆ ನಿರೋಧಕ ಬಟ್ಟೆ ಅನ್ವೇಷಣೆಗೆ ಮುಂದಾಗಿದ್ದರು. ಇದೇ ಹಿನ್ನೆಲೆಯಲ್ಲಿ 2019ರಲ್ಲಿ ಅಮೆರಿಕದಲ್ಲಿ ನಡೆದ ಫೀನಿಕ್ಸ್-80ನೇ ವಿಜ್ಞಾನ ಮತ್ತು ತಂತ್ರಜ್ಞಾನ ಮೇಳದಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶ ಲಭಿಸಿತ್ತು. ಇದುವೇ ರಾಷ್ಟ್ರಪತಿಗಳಿಂದ ಪ್ರಶಸ್ತಿ ಸ್ವೀಕರಿಸುವ ಅಪೂರ್ವ ಅವಕಾಶವನ್ನೂ ಒದಗಿಸಿತು.

  ಡೆಂಘೆಗೆ ನಿರಂತರ ಬಲಿ ಸ್ಪೂರ್ತಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡೆಂಘೆ ಜ್ವರ ಪ್ರತಿವರ್ಷ ತೀವ್ರಗೊಂಡು ಹಲವರು ಬಲಿಯಾಗುತ್ತಿರುವುದನ್ನು ಕಂಡು ಇದಕ್ಕೊಂದು ಪರಿಹಾರ ಹುಡುಕಬೇಕೆಂದು ಸುನೀತಾ ಪ್ರಭು ಚಿಂತಿಸಿದ್ದರು. ಈ ಯೋಚನೆಗೆ ಜತೆಯಾಗಿದ್ದು ಪುಣೆಯ ಸಂಜೀವ ಹೋತ ಎಂಬವರು. ಇಬ್ಬರು ಸೇರಿ ಸೊಳ್ಳೆ ನಿರೋಧಕ ಬಟ್ಟೆ ತಯಾರಿಸುವ ಪರಿಕಲ್ಪನೆಗೆ ಚಾಲನೆ ನೀಡಿದ್ದರು. ಅದರ ಫಲವೇ ಈ

  ಸಂಶೋಧನೆ. ಈ ಹೊಸ ವಿಧಾನವನ್ನು ಪುಣೆಯ ಐಐಎಸ್‌ಇಆರ್ ಸಹಕಾರದೊಂದಿಗೆ ಅನ್ವೇಷಿಸಿದ್ದು, ಅಲ್ಲೇ ಅಭಿವೃದ್ಧಿಪಡಿಸಿ, ಪರೀಕ್ಷೆಗೊಳಪಡಿಸಲಾಯಿತು. ಬಟ್ಟೆಯನ್ನು 36 ಬಾರಿ ತೊಳೆದರೂ ಶೇ.90ರಷ್ಟು ನಿರೋಧಕ ಸಾಮರ್ಥ್ಯ ಉಳಿದುಕೊಳ್ಳುವುದು ಸಂಶೋಧನೆಯಲ್ಲಿ ಸಾಬೀತಾಗಿದೆ. ಇದಕ್ಕೆ ತಗಲುವ ವೆಚ್ಚ 14 ರೂಪಾಯಿ ಮಾತ್ರ ಎನ್ನುವುದು ವಿಶೇಷ.

  ರಾಷ್ಟ್ರಪತಿಗಳು ನನ್ನ ಹೆಸರಿನಲ್ಲಿ ‘ಪ್ರಭು’ ಎಂದಿರುವುದನ್ನು ನೋಡಿ ‘ದೇವರು.. ದೇವರು’ ಎಂದರು. ಪ್ರಶಸ್ತಿ ಬಂದಿರುವುದು ಸಂತಸ ತಂದಿದೆ. ಗುರುವಾರ ಸಚಿವೆ ಸ್ಮತಿ ಇರಾನಿಯವರ ಜತೆ ಹಾಗೂ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿಯವರ ಜತೆ ಸಂವಾದ ಕಾರ್ಯಕ್ರಮವಿದೆ. ಗಣರಾಜ್ಯೋತ್ಸವ ದಿನ ಪರೇಡ್‌ನಲ್ಲೂ ಭಾಗವಹಿಸಲಿದ್ದೇನೆ.
  – ಸುನೀತಾ ಪ್ರಭು ಮೂರ್ಜೆ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts