ಸೊರಗುತ್ತಿರುವ ಕೆರೆಗೆ ಒತ್ತುವರಿ ಹಾವಳಿ

ರಾಮನಗರ: ನಗರಕ್ಕೆ ಹೊಂದಿಕೊಂಡಂತಿರುವ ಬೋಳಪ್ಪನಹಳ್ಳಿ ಕೆರೆ ಸಮರ್ಪಕ ನಿರ್ವಹಣೆಯಿಲ್ಲದೆ ಸೊರಗುತ್ತಿದೆ. ಅಕ್ರಮ ಒತ್ತುವರಿ ಹಾವಳಿಗೆ ಕೆರೆಯೇ ಮಾಯವಾಗುವ ಆತಂಕ ಎದುರಾಗಿದೆ.

ತಾಲೂಕಿನಲ್ಲಿರುವ ವಿಶಾಲವಾದ ಕೆರೆಗಳಲ್ಲಿ ಇದೂ ಒಂದು. ಈ ಕೆರೆ ಮಳೆ ನೀರು ಸಂಗ್ರಹಿಸಿಕೊಂಡು ಈ ಭಾಗದಲ್ಲಿ ಅಂತರ್ಜಲಮಟ್ಟ ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಸುಮಾರು 8.93 ಟಿಎಂಸಿಎಫ್​ಟಿ ನೀರು ಸಂಗ್ರಹಣಾ ಸಾಮರ್ಥ್ಯ ಹೊಂದಿರುವ ಈ ಕೆರೆ 2017, 2018ರಲ್ಲಿ ಸುರಿದ ಮಳೆಯಿಂದ ಭರ್ತಿಯಾಗಿತ್ತು. ಆದರೆ, ಈ ವರ್ಷ ಮಳೆಯಾಗದ ಕಾರಣ ಕೆರೆ ಬತ್ತಿ ಹೋಗುತ್ತಿದೆ. ಇಂಥ ಕೆರೆಯನ್ನು ಸಮಗ್ರವಾಗಿ ನಿರ್ವಹಣೆ ಮಾಡುವಲ್ಲಿ ಸಣ್ಣ ನೀರಾವರಿ ಇಲಾಖೆ ನಿರ್ಲಕ್ಷ್ಯಹಿಸಿದೆ.

ಕಟ್ಟಡಗಳ ತ್ಯಾಜ್ಯವನ್ನು ಕೆರೆ ಅಂಗಳದಲ್ಲಿ್ಲ ಸುರಿಯಲಾಗುತ್ತಿದೆ. ಈ ಭಾಗದಲ್ಲಿರುವ ಕೆಲ ಇಟ್ಟಿಗೆ ಕಾರ್ಖಾನೆಗಳ ಮಾಲೀಕರು ಕೆರೆಯ ಮಣ್ಣನ್ನು ಅಕ್ರಮವಾಗಿ ದೋಚುತ್ತಿರುವ ದೂರಿದೆ. ಅಲ್ಲದೆ ಕೆಲವರು ನಿಧಾನವಾಗಿ ಕೆರೆ ಜಾಗವನ್ನು ಒತ್ತುವರಿ ಮಾಡಿಕೊಳ್ಳುತ್ತಿರುವುದು ಮುಂದಿನ ದಿನಗಳಲ್ಲಿ ಕೆರೆ ಮಾಯವಾಗುವ ಆತಂಕ ಎದುರಾಗಿದೆ. ಈ ಎಲ್ಲ ಸಂಗತಿಗಳ ಬಗ್ಗೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಅರಿವಿದ್ದರೂ ನಿರ್ಲಕ್ಷ್ಯ ವಹಿಸಿರುವುದು ಆಡಳಿತ ವ್ಯವಸ್ಥೆಯ ಜಡ್ಡುತನಕ್ಕೆ ಹಿಡಿದ ಕೈಗನ್ನಡಿಯಾಗಿದೆ.

2006ರಲ್ಲಿ ಅಭಿವೃದ್ಧಿ ಕಂಡಿತ್ತು: ಕೆರೆ 48.56 ಹೆಕ್ಟೇರ್ ವಿಸ್ತಾರವಾಗಿದ್ದು, 8.29 ಹೆಕ್ಟೇರ್ ನೀರು ಸಂಗ್ರಹಿಸುವ ಪ್ರದೇಶ ಹೊಂದಿದೆ. ಒಟ್ಟು 1.9 ಚದರ ಕಿ.ಮೀ. ಜಲಾನಯನ ಪ್ರದೇಶವಿದೆ. ಕೆರೆಯ ಏರಿ 450 ಮೀಟರ್ ಉದ್ದವಿದೆ. ಎತ್ತರ 8.5 ಮೀಟರ್. 2006ರಲ್ಲಿ ಸಣ್ಣ ನೀರಾವರಿ ಇಲಾಖೆ ವ್ಯವಸಾಯಕ್ಕೆ ಸಂಬಂಧಿಸಿದ ಜಲ ಪಾತ್ರಗಳ ದುರಸ್ತಿ, ಜೀಣೋದ್ಧಾರ ಹಾಗೂ ಪುನರುಜ್ಜೀವನ ಯೋಜನೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅರ್ಥಿಕ ನೆರವಿನಲ್ಲಿ 12.23 ಲಕ್ಷ ರೂ. ವೆಚ್ಚ ಮಾಡಿ ಕೆರೆ ಅಭಿವೃದ್ಧಿಪಡಿಸಲಾಗಿತ್ತು. ಕೆರೆ ಹೂಳೆತ್ತುವ ಜತೆಗೆ ಏರಿ, ಕೋಡಿ ಹಾಗೂ ತೂಬುಗಳನ್ನು ದುರಸ್ತಿ ಮಾಡಲಾಗಿತ್ತು. ನಂತರದ ದಿನಗಳಲ್ಲಿ ಕೆರೆ ಬಗ್ಗೆ ಇಲಾಖೆ ತೋರಿದ ನಿರ್ಲಕ್ಷ್ಯದಿಂದಾಗಿ ಅಕ್ರಮ ಒತ್ತುವರಿದಾರರ ಸ್ವತ್ತಾಗುವ ಆತಂಕ ಎದುರಾಗಿದೆ.

ಆಣೆಕಟ್ಟೆಯಲ್ಲಿ ಕಾಲೇಜು ನಿರ್ವಣ: ಮಾಗಡಿ ರಸ್ತೆಯ ರಾಯರದೊಡ್ಡಿ ಬಳಿ ಇದ್ದ ‘ಅಣೆಕಟ್ಟೆಗೆ’ ಬೋಳಪ್ಪನಹಳ್ಳಿ ಕೆರೆಯ ಮೂಲಕವೇ ನೀರು ಬರುತ್ತಿದ್ದುದರಿಂದ ಅಣೆಕಟ್ಟೆ ನೀರಿನಿಂದ ತುಂಬಿರುತ್ತಿತ್ತು. ಅಣೆಕಟ್ಟೆಯಲ್ಲೇ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲಾಗುತ್ತಿತ್ತು. ಕಾಲಕ್ರಮೇಣ ಮಳೆ ಪ್ರಮಾಣ ಕಡಿಮೆಯಾಗುತ್ತಿದ್ದಂತೆ ನೀರಿನ ಪ್ರಮಾಣ ಕುಸಿದು ಒಣಗಿ ಹೋಯಿತು. ಈ ಅಣೆಕಟ್ಟೆಯ 5.5 ಎಕರೆ ಜಾಗದಲ್ಲಿ 2007ರಲ್ಲಿ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಕಟ್ಟಡ ನಿರ್ಮಾಣ ಮಾಡಲಾಯಿತು. ಇಂಥದೇ ಸ್ಥಿತಿ ಬೋಳಪ್ಪನಹಳ್ಳಿ ಕೆರೆಗೂ ಬರುವ ಆತಂಕ ಎದುರಾಗಿದೆ.

ಬೋಳಪ್ಪನಹಳ್ಳಿ ಕೆರೆ ನಿರ್ವಹಣೆ ಮಾಡದಿದ್ದರೆ ಜಲಮೂಲ ನಾಶವಾಗುತ್ತದೆ. ಈಗಾಗಲೇ ನಗರದ ಮಾಗಡಿ ರಸ್ತೆಯಲ್ಲಿದ್ದ ಅಣೆಕಟ್ಟು ಒಣಗಿಹೋಗಿದ್ದರಿಂದ ಅಲ್ಲಿ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಕಟ್ಟಡ ತಲೆ ಎತ್ತುವಂತಾಯಿತು. ಅಂತೆಯೇ ಈ ಕೆರೆಯೂ ಮಾಯವಾಗಬಾರದು.

| ಶಿವಾಜಿರಾವ್, ಕಲಾವಿದ, ರಾಮನಗರ

ಈ ಕೆರೆಯನ್ನು ಬೆಂಗಳೂರಿನ ಅಲಸೂರು ಕೆರೆಯಂತೆ ಅಭಿವೃದ್ಧಿ ಪಡಿಸಿದರೆ, ನೀರಿನ ಶೇಖರಣಾ ಸಾಮರ್ಥ್ಯ ವೃದ್ಧಿಯಾಗುತ್ತದೆ. ನಗರಕ್ಕೆ ಹೊಂದಿಕೊಂಡಿರುವುದರಿಂದ ಪ್ರವಾಸಿ ತಾಣವಾಗಿಯೂ ಅಭಿವೃದ್ಧಿ ಪಡಿಸಬಹುದು.

| ನಾಗರಾಜ್, ಸ್ಥಳೀಯ

Leave a Reply

Your email address will not be published. Required fields are marked *