ಸೊರಗುತ್ತಿದೆ ರೇಷ್ಮೆ ಮಾರುಕಟ್ಟೆ

ಶಿರಹಟ್ಟಿ:ಉತ್ತರ ಕರ್ನಾಟಕದಲ್ಲಿಯೇ ಅತಿ ಹೆಚ್ಚು ರೇಷ್ಮೆಗೂಡಿನ ವಹಿವಾಟು ನಡೆಸುವ ಮಾರುಕಟ್ಟೆ ಎಂಬ ಹೆಗ್ಗಳಿಕೆಗೆ ಪಾತ್ರವಾದ ಪಟ್ಟಣದ ರೇಷ್ಮೆ ಗೂಡು ಮಾರುಕಟ್ಟೆಯು ಸಿಬ್ಬಂದಿ ಕೊರತೆಯಿಂದ ಬೀಕೋ ಎನ್ನುತ್ತಿದೆ. ದೂರದ ಜಿಲ್ಲೆ ಹಾಗೂ ತಾಲೂಕುಗಳಿಂದ ಮಾರಾಟಕ್ಕೆ ಬರುವ ರೈತರು ಪರದಾಡುವಂತಾಗಿದೆ.

18 ವರ್ಷಗಳ ಹಿಂದೆ ರಾಜ್ಯದಲ್ಲಿ ಆರಂಭಿಸಿದ್ದ 13 ಸಾಮೂಹಿಕ ರೇಷ್ಮೆ ನೂಲು ಬಿಚ್ಚಣಿಕೆ ಕೇಂದ್ರಗಳಲ್ಲಿ ಬಹುತೇಕ ಮುಚ್ಚಲ್ಪಟ್ಟರೆ, ಉತ್ತರ ಕರ್ನಾಟಕದ ಶಿರಹಟ್ಟಿ ಮತ್ತು ಧಾರವಾಡ ರಾಯಾಪುರದಲ್ಲಿ ಮಾತ್ರ ಸುಸ್ಥಿತಿಯಲ್ಲಿವೆ. ಹೀಗಾಗಿ, ರೇಷ್ಮೆ ಗೂಡು ಮಾರಾಟ ಹಾಗೂ ನೂಲು ಬಿಚ್ಚಣಿಕೆ ಕೇಂದ್ರವಾಗಿ ಬಿಂಬಿತವಾಗಿರುವುದರಿಂದ ನೆರೆಯ ಬೆಳಗಾವಿ, ಕೊಪ್ಪಳ, ಬಾಗಲಕೋಟೆ, ಹಾವೇರಿ, ರಾಯಚೂರು, ದಾವಣಗೆರೆ, ಬಳ್ಳಾರಿ, ಜಿಲ್ಲೆಗಳಿಂದ ರೇಷ್ಮೆ ಬೆಳೆಗಾರರು ನಿತ್ಯ ರೇಷ್ಮೆಗೂಡು ಮಾರಾಟಕ್ಕೆ ಶಿರಹಟ್ಟಿಗೆ ಬರುತ್ತಾರೆ. ತಿಂಗಳಿಗೆ ಬರೋಬ್ಬರಿ 28 ಟನ್ ಗೂಡು ಮಾರಾಟದಿಂದ 1 ಕೋಟಿ ರೂ. ವಹಿವಾಟು ನಡೆಯುತ್ತಿದ್ದು, ಇದರಿಂದ ಶುಲ್ಕದ ರೂಪದಲ್ಲಿ ಸರ್ಕಾರದ ಬೊಕ್ಕಸಕ್ಕೆ 10 ಲಕ್ಷ ರೂ. ಜಮೆಯಾಗುತ್ತಿದೆ.

ಸಿಬ್ಬಂದಿ ಕೊರತೆ

ಮಾರುಕಟ್ಟೆಯಲ್ಲಿ ಕೆಲಸ ಮಾಡುತ್ತಿದ್ದ ಹಲವು ಸಿಬ್ಬಂದಿ ನಿವೃತ್ತರಾಗಿದ್ದಾರೆ. ಈಗ 7 ಸಿಬ್ಬಂದಿ ಅಗತ್ಯತೆ ಇದ್ದು, ಸದ್ಯ ಒಬ್ಬ ರೇಷ್ಮೆ ಪ್ರವರ್ತಕ ಮತ್ತು ಡಿ ದರ್ಜೆ ನೌಕರನನ್ನು ಬಿಟ್ಟರೆ ಬೇರೆ ಯಾವ ಅಧಿಕಾರಿಗಳು ಇಲ್ಲಿಲ್ಲ. ಅದರಲ್ಲೂ ನಿಯೋಜನೆ ಮೇರೆಗೆ ನೇಮಿಸಿದ ರೇಷ್ಮೆ ಪ್ರವರ್ತಕ ಮಾರುಕಟ್ಟೆಯ ಜವಾಬ್ದಾರಿ ನಿಭಾಯಿಸಬೇಕು. ಒಂದು ವೇಳೆ ಯಾವುದೋ ಕಾರಣದಿಂದ ಈತ ಬರದಿದ್ದರೆ, ಮತ್ತೊಬ್ಬ ಡಿ ದರ್ಜೆ ನೌಕರನಿಂದ ಯಾವ ಕೆಲಸವೂ ಆಗದು. ವಹಿವಾಟು ನಡೆಸುವ ಮುಖ್ಯ ಅಧಿಕಾರಿಗಳ ಕೊರತೆಯಿಂದ ಗೂಡು ಹರಾಜಿನಲ್ಲಿ ವ್ಯತ್ಯಯವಾಗುತ್ತಿದೆ. ಇದರಿಂದ ರೀಲರ್​ಗಳು ಸವಾಲ್​ನಲ್ಲಿ ಮನಬಂದಂತೆ ದರ ನಿಗದಿ ಮಾಡುತ್ತಿದ್ದಾರೆ. ಹೀಗಾಗಿ, ರೈತರು ಕಡಿಮೆ ಬೆಲೆಗೆ ಮಾರಾಟ ಮಾಡಲಾಗದೆ, ಗೂಡು ಮರಳಿ ಮನೆಗೆ ಒಯ್ಯಲಾರದೆ ಸಂಕಷ್ಟ ಅನುಭವಿಸುತ್ತಿದ್ದಾರೆ.

ಅಂತರ್ಜಲ ಮಟ್ಟ ಕುಸಿತದಿಂದ ನೀರಿನ ಕೊರತೆಯುಂಟಾಗಿರುವ ಇಂದಿನ ದಿನಗಳಲ್ಲಿ ರೇಷ್ಮೆ ಬೆಳೆಯುವುದೇ ಕಷ್ಟವಾಗಿದೆ. ಇಂತಹ ಸ್ಥಿತಿಯಲ್ಲಿಯೇ ಕಷ್ಟಪಟ್ಟು ದುಡಿದು, ಅಪಾರ ಹಣ ಖರ್ಚು ಮಾಡಿ, ಗುಣಮಟ್ಟದ ರೇಷ್ಮೆ ಗೂಡು ಮಾರುಕಟ್ಟೆಗೆ ತಂದರೂ ಯೋಗ್ಯ ಬೆಲೆ ಸಿಗದಿರುವುದರಿಂದ ರೈತರು ಕಂಗಾಲಾಗಿದ್ದಾರೆ.

ರೇಷ್ಮೆ ಉಸಾಬರಿಯೇ ಬೇಡ: ರೇಷ್ಮೆ ಬೆಳೆಯಲು ರೈತರಿಗೆ ಪ್ರೋತ್ಸಾಹಿಸುವ ಸರ್ಕಾರ ನಂತರ ಆತನ ಸ್ಥಿತಿಗತಿ ಏನೆಂದು ಅರಿಯದಿರುವುದು ದೌರ್ಭಾಗ್ಯದ ಸಂಗತಿ. ರೇಷ್ಮೆ ಬೆಳೆಗಾರರಿಗೆ ಈ ಹಿಂದೆ ನೀಡುತ್ತಿದ್ದ ಎಲ್ಲ ಸೌಲಭ್ಯಗಳನ್ನು ಸ್ಥಗಿತಗೊಳಿಸಿ ಸಾಗಣೆ ವೆಚ್ಚ ಮಾತ್ರ ನೀಡುತ್ತಿದೆ. ಅಲ್ಲದೆ, ಸಮಯಕ್ಕೆ ಸರಿಯಾಗಿ ರೈತರಿಗೆ ಮಾರಾಟದ ಹಣ ಪಾವತಿಯಾಗುವುದಿಲ್ಲ. ಇದರಿಂದ ಆರ್ಥಿಕ ತೊಂದರೆ ಅನುಭವಿಸುತ್ತಿರುವ ಬಹುತೇಕ ಸಣ್ಣ ರೈತರು ರೇಷ್ಮೆ ಬೆಳೆಯ ಉಸಾಬರಿಯೇ ಬೇಡ ಎಂಬ ಮನಸ್ಥಿತಿಗೆ ಬರುತ್ತಿದ್ದಾರೆ ಎನ್ನುತ್ತಾರೆ ಬೆಳಗಾವಿ ಜಿಲ್ಲೆಯ ಮಾಡಮ್ಮಗೇರಿಯ ರೈತ ಮಾದೇವಪ್ಪ ಬಾಗಿಲದ.

ಸರ್ಕಾರವು ಮಾರುಕಟ್ಟೆ ವ್ಯವಸ್ಥೆ ಹಾಗೂ ರೇಷ್ಮೆ ಬೆಳೆಗಾರನ ಸ್ಥಿತಿ ಗತಿ ಏನೆಂಬುದರ ಬಗ್ಗೆ ಕಿಂಚಿತ್ತು ತಿರುಗಿ ನೋಡುತ್ತಿಲ್ಲ. ಸಿಬ್ಬಂದಿ ನೇಮಿಸಲು ಮೇಲಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಹೀಗಾಗಿ, ರೇಷ್ಮೆ ಗೂಡಿಗೆ ಉತ್ತಮ ಬೆಲೆ ಸಿಗುತ್ತಿಲ್ಲ. ಯೋಗ್ಯ ಬೆಲೆ ದೊರೆಯದಿರುವುದು ಹಾಗೂ ಹಾಳಾದ ಮಾರುಕಟ್ಟೆ ವ್ಯವಸ್ಥೆಯಿಂದ ರೈತರು ಬೇಸತ್ತು ರೇಷ್ಮೆ ಬೆಳೆಯಿಂದ ವಿಮುಖರಾಗುತ್ತಿದ್ದಾರೆ. ಸರ್ಕಾರ ಸಮಸ್ಯೆ ಸರಿಪಡಿಸದಿದ್ದರೆ ರೈತರೆಲ್ಲ ಸೇರಿ ಮಾರುಕಟ್ಟೆಗೆ ಬೀಗ ಹಾಕಿ ಪ್ರತಿಭಟನೆ ಮಾಡಬೇಕಾಗುತ್ತದೆ.

| ಎಚ್.ಎಂ. ದೇವಗಿರಿ, ಅಧ್ಯಕ್ಷ, ರೇಷ್ಮೆ ಬೆಳೆಗಾರರ ಸಂಘ

ಅಗತ್ಯ ಸಿಬ್ಬಂದಿ ಕೊರತೆಯಿಂದ ಸಕಾಲಕ್ಕೆ ಹರಾಜು ಪ್ರಕ್ರಿಯೆ ಮತ್ತು ಮಾರಾಟ ಹಣದ ಬಿಡ್ಡಿಂಗ್ ರಸೀದಿ ಮಾಡೋರಿಲ್ಲ. ಇದರಿಂದ ನಿಗದಿತ ಸಮಯಕ್ಕೆ ರೈತರಿಗೆ ಪೇಮೆಂಟ್ ಮಾಡಲು ಅನನುಕೂಲವಾಗುತ್ತಿದ್ದು, ಸರ್ಕಾರ ಶೀಘ್ರ ಸಿಬ್ಬಂದಿ ನೇಮಕಕ್ಕೆ ಮುಂದಾಗಲಿ.

| ಚಂದ್ರಕಾಂತ ಅಕ್ಕಿ, ರೀಲರ್

ಸಂಘದ ಅಧ್ಯಕ್ಷ

ನಮ್ಮ ಇಲಾಖೆಯಲ್ಲಿ ಕಮಿಷನರ್, ಜೆಡಿಯಿಂದ ಹಿಡಿದು ಜಿಲ್ಲೆ ಮತ್ತು ತಾಲೂಕು ಮಟ್ಟದ ಅಧಿಕಾರಿಗಳ ಕೊರತೆ ಇದೆ. ಹೀಗಾಗಿ, ಹೊಸ ನೇಮಕಾತಿ ಆಗುವವರೆಗೆ ಇದ್ದ ಸಿಬ್ಬಂದಿಯನ್ನು ನಿಯೋಜನೆ ಮೇರೆಗೆ ನೇಮಿಸಿ ಕೆಲಸ ನಿರ್ವಹಿಸಲಾಗುತ್ತಿದೆ. ಶಿರಹಟ್ಟಿ ಮಾರುಕಟ್ಟೆ ಸಿಬ್ಬಂದಿ ಕೊರತೆ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತಂದಿದ್ದು, ಪರ್ಯಾಯ ವ್ಯವಸ್ಥೆ ಮೂಲಕ ಸಮಸ್ಯೆ ಬಗೆಹರಿಸಲಾಗುವುದು.

| ಸಿ.ಎಚ್. ಮುದಗಲ್ ಜಿಲ್ಲಾ ಪ್ರಭಾರಿ ಸಹಾಯಕ ನಿರ್ದೇಶಕರು ರೇಷ್ಮೆ ಇಲಾಖೆ ಗದಗ

Leave a Reply

Your email address will not be published. Required fields are marked *