ಸೊರಗುತಿದೆ ಸಹಕಾರ ಕ್ಷೇತ್ರ

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಬೀದರ್ ಜಿಲ್ಲೆ ಹೊರತುಪಡಿಸಿ ಹೈದರಾಬಾದ್ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಸಹಕಾರ ಕ್ಷೇತ್ರ ಪ್ರಗತಿ ಸಾಧಿಸುತ್ತಿಲ್ಲ ಎಂದು ಯಾದಗಿರಿ ಜಿಲ್ಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷ ಬಸವರಾಜ ವಾಲಿ ಕಳವಳ ವ್ಯಕ್ತಪಡಿಸಿದರು.

ನಗರದ ಚೇಂಬರ್ ಆಫ್ ಕಾಮರ್ಸ ಸಭಾಂಗಣದಲ್ಲಿ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ಕಾರ್ಯ ನಿರ್ವಾಹಕರ ವಾರ್ಷಿಕ ಸಭೆ ಉದ್ಘಾಟಸಿದ ಅವರು ಮಾತನಾಡಿದರು.

ಬೀದರ್ ಜಿಲ್ಲೆಯೂ ಸಹಕಾರ ಕ್ಷೇತ್ರದಲ್ಲಿ ದೇಶದಲ್ಲಿ ಮೂರನೇ ಸ್ಥಾನ ಪಡೆದಿದೆ. ಆದರೆ ಪಕ್ಕದ ಕಲಬುರಗಿ, ಯಾದಗಿರಿ ಜಿಲ್ಲೆಯಲ್ಲಿ ಸಹಕಾರ ಕ್ಷೇತ್ರ ಅಸ್ತಿತ್ವ ಉಳಿಸಿಕೊಳ್ಳುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಇಂತಹ ಸಂದರ್ಭದಲ್ಲಿ ಸಂಯುಕ್ತ ಸಹಕಾರಿಯು ಸಭೆ ಮತ್ತು ತರಬೇತಿ ನಿರಂತರವಾಗಿ ಆಯೋಜಿಸುವ ಮೂಲಕ ಸಹಕಾರಿ ಬೆಳವಣಿಗೆಗೆ ಪೂರಕ ವಾತಾವರಣ ಸೃಷ್ಟಿಸಬೇಕು ಎಂದರು.

ನಿರ್ದೇಶಕ ವೈ.ಟಿ.ಪಾಟೀಲ್ ಮಾತನಾಡಿ, ಸಂಯುಕ್ತ ಸಹಕಾರಿ ಹಮ್ಮಿಕೊಳ್ಳುವ ಎಲ್ಲ್ಲ ತರಬೇತಿ ಕಾರ್ಯಕ್ರಮಗಳಿಗೆ ಕಡ್ಡಾಯವಾಗಿ ಹಾಜರಾಗಬೇಕು ಮತ್ತು ಅದರ ಲಾಭವನ್ನು ತಾವು ಎಲ್ಲರೂ ಪಡೆದುಕೊಳ್ಳಬೇಕು. 124 ಸಹಕಾರ ಸಂಘಗಳ ಪೈಕಿ ಕೇವಲ 30 ಜನರು ಮಾತ್ರ ಪಾಲ್ಗೊಂಡಿದ್ದಾರೆ. ಸತತ ಗೈರಾಗುವ ಸಂಘಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ರಾಜ್ಯ ಬಸವೇಶ್ವರ ಸುದ್ದಿ ಮಾಧ್ಯಮ ಮಹಾಮಂಡಳದ ನಿರ್ದೇಶಕ ಸಿದ್ರಾಮಪ್ಪ ಪಾಟೀಲ್, ರಾಜ್ಯದಲ್ಲಿ ಸಹಕಾರ ಕ್ಷೇತ್ರದಿಂದ ಟಿವಿ ಚಾನಲ್ ಆರಂಭಿಸುವ ಮೂಲಕ ಸಹಕಾರಿ ಕ್ಷೇತ್ರದ ಬಗ್ಗೆ ಕ್ಷಣ ಕ್ಷಣಕ್ಕೆ ಮಾಹಿತಿ ಒದಗಿಸಲು ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.

ಪ್ರಾಂತೀಯ ಅಧಿಕಾರಿ ರಾಜಶೇಖರ ಎಚ್, ನಿರ್ದೇಶಕರಾದ ಸಂಜೀವ ಮಹಾಜನ್, ರಾಘವೇಂದ್ರ ಪತಂಗೆ ಮತ್ತು ವಿವಿಧ ಸಹಕಾರಿ ಸಂಘಗಳ ಕಾರ್ಯ ನಿರ್ವಾಹಕಾಧಿಕಾರಿಗಳು ಪಾಲ್ಗೊಂಡಿದ್ದರು.

ಪ್ರಾಂತೀಯ ಕಚೇರಿಯ ಕಾನೂನು ಅಧಿಕಾರಿ ಸೂರ್ಯಕಾಂತ ರ್ಯಾಕಲೆ ವಂದಿಸಿದರು. ಸಹಕಾರಿಯ ಸೌಹಾರ್ದ ಅಭಿವೃದ್ಧಿ ಅಧಿಕಾರಿ ಓಂಕಾರ ಧರಣೆ ಕಾರ್ಯಕ್ರಮ ನಿರೂಪಣೆ ಮಾಡಿದರು.

ಸಹಕಾರಿ ಕ್ಷೇತ್ರ ಬೆಳೆಯಬೇಕಾದರೆ ಆಯಾ ಸಂಘಗಳ ಕಾರ್ಯ ನಿರ್ವಾಹಕಾಧಿಕಾರಿಗಳ ಮೇಲೆ ಅವಲಂಬಿತವಾಗಿರುತ್ತದೆ. ಇನ್ನೂ 60 ಸಂಘಗಳು ಅಡಿಟ್ ರಿಪೋರ್ಟ್​ ನೀಡಿಲ್ಲ. ಯಾವ ಕಾರಣಕ್ಕೆ ನೀಡಿಲ್ಲ ಎಂಬುದು ಗೊತ್ತಾಗುತ್ತಿಲ್ಲ. ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವ ಮೂಲಕ ಸಂಘಗಳ ಅಭಿವೃದ್ಧಿಗೆ ಶ್ರಮಿಸಬೇಕು.

| ವೈ.ಟಿ.ಪಾಟೀಲ್ ನಿರ್ದೇಶಕ ಸೌಹಾರ್ದ ಸಹಕಾರಿ ಸಂಘ