ಸೊರಗಿದ ದೋಣಿ ವಿಹಾರ ಉದ್ಯಾನ

  • ಶಶಿಧರ ಕುಲಕರ್ಣಿ ಮುಂಡಗೋಡ

ಪಕ್ಕದಲ್ಲಿಯೇ ಜಲಾಶಯ, ಸುತ್ತಮುತ್ತಲಿನ ಅರಣ್ಯ ಪ್ರದೇಶದಿಂದ ಕೇಳಿಬರುವ ಹಕ್ಕಿಗಳಿಂಚರ, ತಂಪಾದ ಗಾಳಿ, ಸದ್ದು ಗದ್ದಲವಿಲ್ಲದ ವಾತಾವರಣ ಜೊತೆಗೆ ದೋಣಿ ವಿಹಾರದ ಖುಷಿಯನ್ನು ಸವಿಯುವ ಸಂಭ್ರಮ ಇವೆಲ್ಲ ಕಾಣಬರುವುದು ಮುಂಡಗೋಡದಿಂದ ಬಂಕಾಪುರ ರಸ್ತೆಯಲ್ಲಿ 5 ಕಿ.ಮೀ. ದೂರದಲ್ಲಿರುವ ರಮಣೀಯ ಪ್ರವಾಸಿ ತಾಣವಾದ ತಾಲೂಕಿನ ಸನವಳ್ಳಿ ದೋಣಿ ವಿಹಾರ ಉದ್ಯಾನವನ.

ಸನವಳ್ಳಿ ಗ್ರಾಮದಿಂದ 1 ಕಿ.ಮೀ. ದೂರದಲ್ಲಿದೆ. ಜಲಾಶಯದಲ್ಲಿ ನಿಲ್ಲುವ ಹಿನ್ನೀರಿನ ವಿಹಂಗಮ ನೋಟವೂ ಆಕರ್ಷಣೀಯ ಕೇಂದ್ರವಾಗಿದೆ. ಆದರೆ, ವ್ಯವಸ್ಥಿತ ನಿರ್ವಹಣೆ ಕೊರತೆಯಿಂದ ಉದ್ಯಾನವನವು ದಿನೇ ದಿನೆ ಸೊರಗುತ್ತಿದೆ.

ಜಿಲ್ಲಾ ಪ್ರವಾಸೋದ್ಯಮ ಇಲಾಖೆಯಿಂದ 2008-09ರಲ್ಲಿ ಗ್ರಾಮ ಅರಣ್ಯ ಸಮಿತಿ ಖಾತೆಗೆ 30 ಲಕ್ಷ ರೂ. ಅನುದಾನದ ಮಂಜೂರಾಯಿತಿಯಲ್ಲಿ ಸನವಳ್ಳಿ ಜಲಾಶಯದ ಪರಿಸರದಲ್ಲಿ ನಿಸರ್ಗ ಪ್ರವಾಸೋದ್ಯಮದಡಿ ಉದ್ಯಾನವನ, ಹಿನ್ನೀರಿನ ದೋಣಿ ವಿಹಾರ, ಪ್ಯಾರಾಗೋಲ್ ಮತ್ತು ಜಟ್ಟಿ, ಶೌಚಗೃಹ ಸಂರ್ಕಿಣ, ಮಕ್ಕಳಿಗೆ ಆಟವಾಡುವ ಸೌಲಭ್ಯ, ಸ್ವಾಗತ ಕೇಂದ್ರ ಸೇರಿ ಪ್ರವಾಸಿಗರಿಗೆ ಪ್ರವಾಸಿ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ವಿಶೇಷವಾಗಿ 1-20-0 ಎಕರೆ ಅರಣ್ಯ ಪ್ರದೇಶವನ್ನು ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಅಭಿವೃದ್ಧಿಪಡಿಸಿ ಪ್ರವಾಸಿಗರ ಜಲವಿಹಾರಕ್ಕಾಗಿ 8 ಸೀಟಿನ 1 ಎಂಜಿನ್ ಬೋಟ್ ಹಾಗೂ 4 ಸೀಟುಗಳುಳ್ಳ 4 ಪೆಡಲ್ ಬೋಟ್​ಗಳನ್ನು ಒದಗಿಸಲಾಗಿದೆ.

ಆಡಳಿತಾತ್ಮಕ ಅನುಮೋದನೆಯ ನಿರ್ದೇಶನದ ಮೇರೆಗೆ ಸನವಳ್ಳಿ ಗ್ರಾಮ ಅರಣ್ಯ ಸಮಿತಿಗೆ ಉದ್ಯಾನವನದ ಮೇಲುಸ್ತುವಾರಿಯನ್ನು, ದೈನಂದಿನ ನಿರ್ವಹಣೆಯನ್ನು, ದೋಣಿ ವಿಹಾರ, ಕ್ಯಾಂಟೀನ್ ನಿರ್ವಹಣೆಯನ್ನು ನೀಡಿದ್ದು, ಆರಂಭದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿತ್ತು. ಆದರೆ, ಉದ್ಯಾನವನದ ನಿರ್ವಹಣೆ ಸರಿಯಾದ ರೀತಿಯಲ್ಲಿ ಆಗದ ಕಾರಣ ಅದರಲ್ಲೂ ದೋಣಿ ವಿಹಾರಕ್ಕೆಂದು ಬಂದು ನಿರಾಶರಾಗಿ ವಾಪಸ್ಸು ಹೋಗುತ್ತಿರುವವರ ಸಂಖ್ಯೆ ಹೆಚ್ಚಾಗಿದೆ.

ವಿಶೇಷವಾಗಿ ಮೂರು ವರ್ಷಕ್ಕೊಮ್ಮೆ ಜರುಗುವ ಮುಂಡಗೋಡ ಮಾರಿಕಾಂಬಾ ಜಾತ್ರೆಯ ಸಂದರ್ಭದಲ್ಲಿ ಜಾತ್ರೆಗೂ ಮುನ್ನ ಹೊರಬೀಡು ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ಪಟ್ಟಣದ ಜನರು ಟಿಬೆಟಿಯನ್ ಕ್ಯಾಂಪ್, ಅತ್ತಿವೇರಿ ಜಲಾಶಯ ಅಥವಾ ತಮ್ಮ ತಮ್ಮ ತೋಟಗಳಿಗೆ ಹೋಗುತ್ತಾರೆ. ಬರುವ ಫೆಬ್ರವರಿ ತಿಂಗಳಿನಲ್ಲಿ ಹೊರಬೀಡು ಪ್ರಾರಂಭವಾಗಲಿದ್ದು, ಅಷ್ಟರೊಳಗೆ ಸನವಳ್ಳಿ ದೋಣಿ ವಿಹಾರ ಉದ್ಯಾನವನವನ್ನು ಸ್ವಚ್ಛಗೊಳಿಸಿದರೆ ಹೊರಬೀಡಿಗೆ ಹೋಗುವ ಜನರಿಗೆ ಅನುಕೂಲವಾಗುತ್ತದೆ.

| ನಾಗರಾಜ ಕುಸನೂರ, ಮುಂಡಗೋಡ ನಿವಾಸಿ