ಸೊಗಲ ಕ್ಷೇತ್ರದಲ್ಲಿ ಸಡಗರ ವೈಭವದ ಜಾತ್ರಾಮಹೋತ್ಸವ

ಫಕೀರಗೌಡ ಎಸ್. ಸಿದ್ದನಗೌಡರ

ಪಾರ್ವತಿ ಶಂಕರರು ನಿತ್ಯ ಇರುವ ಸ್ಥಾನವೇ ಕೈಲಾಸ ಎಂಬ ಮಾತಿದೆ. ಇಂಥ ಅಪರೂಪದ ಕ್ಷೇತ್ರ ಸೊಗಲ ಬೆಳಗಾವಿ ಜಿಲ್ಲೆ ಬೈಲಹೊಂಗಲದಿಂದ ಪೂರ್ವದಿಕ್ಕಿಗೆ 12 ಕೀ. ಮಿ ದೂರದಲ್ಲಿದೆ. ಇದು ಈ ಭಾಗದ ಪ್ರಮುಖ ಧಾರ್ವಿುಕ ಕ್ಷೇತ್ರಗಳಲ್ಲಿ ಒಂದು.

ಐತಿಹಾಸಿಕ ಹಿನ್ನೆಲೆ: ಕ್ರಿ.ಶ. 980ರ ಚಾಲುಕ್ಯ ಇಮ್ಮಡಿ ತೈಲಪನ ಆಳ್ವಿಕೆಗೆ ಒಳಪಟ್ಟಿದ್ದ ಈ ನಾಡು ಮೊದಲನೆಯ ಕಾರ್ತವೀರ್ಯನ ಕಾಲಕ್ಕೆ ಸೋಲು ಎಂಬ ಹೆಸರುಳ್ಳದ್ದಾಗಿತ್ತು. ಸೋಲು ಅಂದರೆ ಮೂವತ್ತು ಗ್ರಾಮಗಳ ಮಂಡಳ. ಅದೇ ಇಂದಿನ ಸೊಗಲ ಕ್ಷೇತ್ರ. ಈ ಕ್ಷೇತ್ರದಲ್ಲಿರುವ ಹಲವಾರು ದೇವಸ್ಥಾನಗಳಲ್ಲಿ ಸೋಮಲಿಂಗ ದೇವಸ್ಥಾನ ಹಾಗೂ ಪಕ್ಕದಲ್ಲಿರುವ ಶಿವ ಪಾರ್ವತಿಯ ಲಗ್ನಮಂಟಪ ಅತ್ಯಂತ ಪ್ರಮುಖವಾದವು. ಹತ್ತನೇ ಶತಮಾನದ ಈ ದೇವಸ್ಥಾನಗಳು ಚಾಲುಕ್ಯರ ವಾಸ್ತುಶೈಲಿಯಲ್ಲಿ ನಿರ್ವಿುಸಲ್ಪಟ್ಟಿವೆ. ದೇವಸ್ಥಾನದ ಗರ್ಭಗುಡಿಯ ಮೇಲೆ ಕದಂಬ ನಾಗರಶೈಲಿಯ ಶಿಖರವಿದೆ. ಮೂರು ಪ್ರವೇಶ ದ್ವಾರಗಳ ನವರಂಗ ಇರುವುದು ವಿಶೇಷ.

ಪೌರಾಣಿಕ ಹಿನ್ನೆಲೆ: ತ್ರೇತಾಯುಗದಲ್ಲಿ ದಂಡಕಾರಣ್ಯವಾಗಿದ್ದ ಈ ಸ್ಥಳವು ರಾಕ್ಷಸರಾದ ಮಾಲಿ, ಸುಮಾಲಿಯರ ವಾಸಸ್ಥಾನವಾಗಿತ್ತು. ಅಲ್ಲದೆ ಅವರಿಂದ ಸ್ಥಾಪಿತವಾದ ಸುವರ್ಣಾಕ್ಷಿಯ ಸ್ಥಾನವೂ ಆಗಿತ್ತು ಎಂಬುದು ಶಾಸನಗಳ ಮಾಹಿತಿ. ಈ ರಾಕ್ಷಸರ ಹಾವಳಿಯಿಂದ ದೇವಾನುದೇವತೆಗಳನ್ನು ರಕ್ಷಿಸುವುದಕ್ಕೋಸ್ಕರ ಶಿವನು ಬಂದು ನೆಲೆಸಿ ಅವರನ್ನು ಸಂಹರಿಸಿದ. ಇದಕ್ಕೆ ಪ್ರತಿಯಾಗಿ ದೇವಾನುದೇವತೆಗಳೆಲ್ಲ ಸೇರಿ ಶಿವನಿಗೆ ಪಾರ್ವತಿಯನ್ನು ಧಾರೆಯೆರೆದು ವಿವಾಹ ಮಾಡಿದ ಸ್ಥಳ ಇದಾಗಿದೆ. ಇದಕ್ಕೆ ಪುಷ್ಟಿ ನೀಡುವಂತೆ ಸಾಕ್ಷಾತ್ ಶಿವ-ಪಾರ್ವತಿಯರು ವಧು-ವರರಾಗಿರುವ ಮೂರ್ತಿಯಿದೆ. ಅವರ ಮುಂದೆ ಬೆಟ್ಟದ ಮೇಲಿಂದ ಧುಮಕುವ ಜಲಧಾರೆಯ ಕೆಳಗೆ ಭಕ್ತಾದಿಗಳು ಪುಣ್ಯಸ್ನಾನ ಮಾಡುತ್ತಾರೆ. ಇಲ್ಲಿನ ಪ್ರಶಾಂತ ವಾತಾವರಣದಲ್ಲಿ ತಣ್ಣಗೆ ಧುಮುಕುವ ಜಲಪಾತ ಮನ ಸೆಳೆಯುವಂತಿದೆ.

ಜಾತ್ರೆ, ಮಹಾರಥೋತ್ಸವ: ಇದೇ ಮಾರ್ಚ್ 17, 18 ಹಾಗೂ 19ರಂದು ಸೊಗಲ ಕ್ಷೇತ್ರದಲ್ಲಿ ನೆರವೇರುವ ಜಾತ್ರೆಗೆ ಕರ್ನಾಟಕದ ಹಾಗೂ ಮಹಾರಾಷ್ಟ್ರಗಳಿಂದ ಸಾವಿರಾರು ಭಕ್ತಾದಿಗಳು ಆಗಮಿಸುತ್ತಾರೆ. 18ರಂದು ಉಚಿತ ಸಾಮೂಹಿಕ ವಿವಾಹ, ರಾತ್ರಿ ಶಿವ-ಪಾರ್ವತಿಯ ಅಕ್ಷತಾರೋಪಣ ಜರುಗಲಿದೆ. 19ರಂದು ಸಂಜೆ ನಾಡಿನ ಹರ ಗುರು ಚರಮೂರ್ತಿಗಳ ಸಾನ್ನಿಧ್ಯದಲ್ಲಿ ಮಹಾರಥೋತ್ಸವ ಹಾಗೂ ವಿವಿಧ ಸಾಂಸ್ಕೃತಿಕ, ಧಾರ್ವಿುಕ ಕಾರ್ಯಗಳು ನಡೆಯಲಿವೆ.