ಸೈನಿಕ ಕುಟುಂಬಕ್ಕೆ ಉಚಿತ ವೈದ್ಯಕೀಯ ಸೇವೆ

ಶಿರಸಿ: ನಗರದ ಆಯುರ್ವೆದ ವೈದ್ಯ ಡಾ. ರವಿಕಿರಣ ಪಟವರ್ಧನ ಅವರು ಸೈನಿಕರು, ನಿವೃತ್ತ ಸೈನಿಕರು ಮತ್ತು ಅವರ ಕುಟುಂಬಕ್ಕೆ ತಮ್ಮ ಆಸ್ಪತ್ರೆಯಲ್ಲಿ ಶುಲ್ಕರಹಿತ ಸೇವೆ ಮತ್ತು ಉಚಿತ ಔಷಧ ಒದಗಿಸಲು ನಿರ್ಧರಿಸಿದ್ದಾರೆ.
ಹೌದು, ದೇಶದ ಗಡಿಯಲ್ಲಿ ಬಂದೂಕು ಹಿಡಿದು ನಿಲ್ಲಲು ನಮಗೆ ಅವಕಾಶವಿಲ್ಲ. ಈ ಮಹತ್ತರ ಸೇವೆ ಸಲ್ಲಿಸಿ ದೇಶ ಕಾಪಾಡುವ ಸೈನಿಕರ ಕುಟುಂಬದ ಆರೋಗ್ಯವನ್ನಾದರೂ ಕಾಯಬೇಕು ಎಂಬ ನಿರ್ಧಾರದೊಂದಿಗೆ ಅವರು ಈ ಕಾಯಕಕ್ಕೆ ಇಳಿದಿದ್ದಾರೆ. ಆಸ್ಪತ್ರೆಯ ಬಾಗಿಲಿನಲ್ಲಿಯೇ ‘ಯೋಧರ ಗೌರವಾರ್ಥವಾಗಿ ಶುಲ್ಕ ರಹಿತ ಸೇವೆ ನೀಡಲಾಗುವುದು’ ಎಂಬ ಫಲಕ ಅಳವಡಿಸಿದ್ದಾರೆ. ಗುರುತಿನ ಚೀಟಿ ತೋರಿಸಿ ಯೋಧರು ಮತ್ತು ಕುಟುಂಬ ಈ ಸೇವೆಯನ್ನು ಪಡೆದುಕೊಳ್ಳಬಹುದಾಗಿದೆ.
‘ಗಣರಾಜ್ಯೋತ್ಸವ ದಿನದಂದು ಈ ಸೇವೆ ಆರಂಭಿಸುವ ಬಗ್ಗೆ ಯೋಚನೆ ಬಂದಿತ್ತು. ಆದರೆ, ಸೈನಿಕರು ಮತ್ತು ಅವರ ಕುಟುಂಬದಿಂದ ಯಾವ ರೀತಿಯ ಸ್ಪಂದನೆ ಸಿಗಬಹುದು ಎಂಬ ಬಗ್ಗೆ ಸ್ಪಷ್ಟ ಕಲ್ಪನೆ ಇರಲಿಲ್ಲ. ಪುಲ್ವಾಮಾದಲ್ಲಿ ನಮ್ಮ ಯೋಧರ ಹತ್ಯೆ ನಡೆದ ಬಳಿಕ ಸೈನಿಕರು ಮತ್ತು ಕುಟುಂಬಕ್ಕೆ ಶುಲ್ಕ ರಹಿತ ಸೇವೆ ನೀಡಲು ನಿರ್ಧರಿಸಿದ್ದೇನೆ’ ಎನ್ನುತ್ತಾರೆ ಡಾ. ರವಿಕಿರಣ ಪಟವರ್ಧನ.
ಈಗಾಗಲೇ ಸೈನಿಕ ಕುಟುಂಬದ ಸದಸ್ಯರು ಈ ಸೌಲಭ್ಯ ಪಡೆದುಕೊಂಡಿದ್ದಾರೆ. ಆಸ್ಪತ್ರೆಗೆ ಬರುವ ಉಳಿದ ರೋಗಿಗಳೂ ಈ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಆಸ್ಪತ್ರೆಯ ಆವರಣದಲ್ಲಿ ಹಾಕಲಾಗಿರುವ ಫಲಕವನ್ನು ಕೆಲವರು ಫೊಟೋ ಹೊಡೆದು ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಕಟಿಸಿದ್ದಾರೆ. ಜಿಲ್ಲೆಯ ಕರಾವಳಿ ಭಾಗದ ಕೆಲವು ವೈದ್ಯರು ಮತ್ತು ಮೈಸೂರಿನಲ್ಲಿ ಕೆಲ ವೈದ್ಯರು ತಾವೂ ಸೈನಿಕ ಕುಟುಂಬಕ್ಕೆ ಶುಲ್ಕ ರಹಿತ ಸೇವೆ ನೀಡುವುದಾಗಿ ಪ್ರಕಟಿಸಿದ್ದಾರೆ’ ಎನ್ನುತ್ತಾರೆ ಅವರು.
ದೇಶ ಸೇವಕರ ಕುಟುಂಬದ ಸೇವೆಗೆ ನಿಂತಿರುವ ಡಾ. ರವಿಕಿರಣ ಪಟವರ್ಧನ ಅವರ ಈ ಯತ್ನಕ್ಕೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.