ಸೈನಿಕರ ಪಾಲಕರ ಮೇಲೆ ಹಲ್ಲೆ

ಭಟ್ಕಳ: ಸೈನಿಕರ ಪಾಲಕರ ಮೇಲೆ ಮಾರ ಣಾಂತಿಕ ಹಲ್ಲೆ ನಡೆಸಿ, ಜೀವಬೆದರಿಕೆ ಹಾಕಿದ ಘಟನೆ ಮುರ್ಡೆಶ್ವರ ಮಾವಳ್ಳಿ 1 ಪಂಚಾಯಿತಿ ವ್ಯಾಪ್ತಿಯ ಹಿರೇ ದೋಮಿಯಲ್ಲಿ ಭಾನು ವಾರ ನಡೆದಿದೆ. ಮುರ್ಡೆಶ್ವರ ಹಿರೇದೋಮಿಯ ಮಂಜುನಾಥ ಶನಿಯಾರ ನಾಯ್ಕ, ಯಮುನಾ ಮಂಜುನಾಥ ನಾಯ್ಕ ಹಲ್ಲೆಗೊಳಗಾದವರು. ಹಿರೇದೋಮಿಯ ಶ್ರೀಧರ ತಿಮ್ಮಪ್ಪ ಮೊಗೇರ, ತಿಮ್ಮಪ್ಪ ನಾರಾಯಣ ಮೊಗೇರ, ಮಾದೇವಿ ತಿಮ್ಮಪ್ಪ ಮೊಗೇರ, ನೇತ್ರಾ ಉಮೇಶ ಮೊಗೇರ ಹಲ್ಲೆ ನಡೆಸಿದ ಆರೋಪಿಗಳು. ನೀರಿನ ಪೈಪ್​ನ ವಿಚಾರವಾಗಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಪ್ರತಿ ಬಾರಿಯೂ ಸೈನಿಕರ ಮನೆಗೆ ಬರುವ ನೀರಿನ ಪೈಪ್ ಅನ್ನು ಆರೋಪಿಗಳು ತುಂಡರಿಸುತ್ತಿದ್ದರು. ಇದರಿಂದ ಬೇಸತ್ತ ಮಂಜುನಾಥ ನಾಯ್ಕ ಜಿಪಂ ಸಿಇಒಗೆ ದೂರು ಸಲ್ಲಿಸಿದ್ದರು. ಪರಿಶೀಲಿಸಿ ಸಿಇಒ ಪೈಪ್ ದುರಸ್ತಿ ಮಾಡಲು ಮಾವಳ್ಳಿ ಪಂಚಾಯಿತಿ ಪಿಡಿಒಗೆ ಸೂಚಿಸಿದರು. ಪಿಡಿಒ ಸ್ಥಳಕ್ಕೆ ತೆರಳಿದಾಗಲೂ ಆರೋಪಿಗಳು ಖ್ಯಾತೆ ತೆಗೆದಿದ್ದರು. ಆದರೆ, ಇದು ಸರ್ಕಾರದ ಆದೇಶ ಇದನ್ನು ಉಲ್ಲಂಘಿಸಿದರೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದರು. ಈ ಹಿನ್ನೆಲೆಯಲ್ಲಿ ದನ ಮೇಯಿಸಲು ಯಮುನಾ ಮಂಜುನಾಥ ನಾಯ್ಕ ತೆರಳಿದಾಗ ಹಿಂದಿನಿಂದ ಬಂದು ಹಲ್ಲೆ ನಡೆಸಿದ್ದಾರೆ. ಮಂಜುನಾಥ ಶನಿಯಾರ ನಾಯ್ಕ ಅವರ ಮೇಲೂ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಗಾಯಾಳುಗಳನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.