ಸೈನಿಕರ ಕಲ್ಯಾಣ ಭವನ ನಿರ್ಮಾಣಕ್ಕೆ ಕ್ರಮ

Action for construction of soldiers' welfare house

ವಿಜಯಪುರ: ದೇಶಕ್ಕಾಗಿ ಕುಟುಂಬಸ್ಥರನ್ನು, ಬಂಧು-ಬಳಗವನ್ನೇ ತೊರೆದು ಕಷ್ಟಗಳನ್ನು ಎದುರಿಸಿದ ಸೈನಿಕರಿಗೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದು. ಯೋಧರನ್ನು ನಿತ್ಯ ಸ್ಮರಿಸುವ ಕೆಲಸವಾಗಬೇಕು. ಆ ನಿಟ್ಟಿನಲ್ಲಿ ಸೈನಿಕ ಕಲ್ಯಾಣ ಭವನ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವುದಾಗಿ ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಮತ್ತು ಮೂಲಸೌಲಭ್ಯಗಳ ಸಚಿವ ಎಂ.ಬಿ. ಪಾಟೀಲ ಭರವಸೆ ನೀಡಿದರು.

ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಮಾಜಿ ಸೈನಿಕರ ಕಲ್ಯಾಣ ಸಂಘ ಹಾಗೂ ವಿಜಯವಾಣಿ-ದಿಗ್ವಿಜಯ ವಾಹಿನಿ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಗಿಲ್ ವಿಜಯ ದಿವಸ ಆಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ದೇಶದ ಗಡಿ ಕಾಯುವ ಸೈನಿಕರಿಗೆ ಸೌಲಭ್ಯ ಕಲ್ಪಿಸುವುದು ಪ್ರತಿಯೊಬ್ಬರ ಜವಾಬ್ದಾರಿ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೈನಿಕರ ಕಲ್ಯಾಣಕ್ಕೆ ಶ್ರಮಿಸಬೇಕು. ಈ ಹಿಂದೆ ಮಾಜಿ ಸೈನಿಕರ ಬೇಡಿಕೆಯಂತೆ ಸೈನಿಕರ ಕಲ್ಯಾಣ ಭವನ ನಿರ್ಮಿಸಿಕೊಡುವ ಭರವಸೆ ನೀಡಿದ್ದೆ. ಇದೀಗ ಆ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಲಾಗುವುದು. ಶೀಘ್ರದಲ್ಲಿಯೇ ‘ಸಿಎ ಸೈಟ್’ ಗುರುತಿಸಿ ಭವನ ನಿರ್ಮಾಣ ಮಾಡಿಕೊಡಲಾಗುವುದು ಎಂದರು.

ಸೈನಿಕರ ತ್ಯಾಗ ಬಲಿದಾನವನ್ನು ಸ್ಮರಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ. 1999 ಜುಲೈ 26 ರಂದು ಕಾರ್ಗಿಲ್ ಯುದ್ಧವನ್ನು ನಾವು ಜಯಿಸಿದೆವು. ಅದರ ಸವಿ ನೆನಪಿಗಾಗಿ ನಾವಿಂದು ವಿಜಯೋತ್ಸವ ಆಚರಿಸುತ್ತಿದ್ದೇವೆ. ಕಾರ್ಗಿಲ್ ಯುದ್ಧ ಕೇವಲ ಒಂದು ದಿನದ್ದಾಗಿರಲಿಲ್ಲ. ಸುದೀರ್ಘ ಯುದ್ಧದಲ್ಲಿ ಅನೇಕರು ಹುತಾತ್ಮರಾದರು. ಅವರನ್ನು ನಾವೆಲ್ಲರೂ ಸ್ಮರಿಸೋಣ ಎಂದರು.

ನಮ್ಮ ಹಿರಿಯರು ಬ್ರಿಟಿಷ್‌ರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರೃ ದೊರಕಿಸಿಕೊಟ್ಟರು. ಸ್ವಾತಂತ್ರೃ ಚಳವಳಿಯಲ್ಲಿ ಲಕ್ಷಾಂತರ ಜನ ಪ್ರಾಣ ತ್ಯಾಗ ಮಾಡಿದರು. ಆಸ್ತಿಪಾಸ್ತಿ ಕಳೆದುಕೊಂಡರು. ದೇಶದ ಇತಿಹಾಸದಲ್ಲಿ ಅದೊಂದು ಪ್ರಮುಖ ಘಟ್ಟ. ಸ್ವಾತಂತ್ರೃ ನಂತರ ದೇಶವನ್ನು ಕಾಯುವಲ್ಲಿ ಸೈನಿಕರು ಎರಡನೇ ಪ್ರಮುಖ ಘಟ್ಟವಾಗಿದ್ದಾರೆ. ಈ ಕಾರ್ಯದಲ್ಲಿ ಅನೇಕರು ದೇಶಕ್ಕಾಗಿ ಪ್ರಾಣ ತ್ಯಾಗವನ್ನು ಮಾಡಿದ್ದಾರೆ. ಅನೇಕ ಸೈನಿಕರು ತಾಯಿ, ತಂದೆ, ಬಂಧು-ಬಳಗವನ್ನು ಬಿಟ್ಟು ಕಷ್ಟಕರ ಜೀವನ ನಡೆಸುತ್ತಿದ್ದಾರೆ. ತೀವ್ರ ಹೋರಾಟದೊಂದಿಗೆ ಕಾರ್ಗಿಲ್‌ನಲ್ಲಿ ವಿಜಯವನ್ನು ಸಾಧಿಸಿದ್ದಾರೆ. ದೇಶಕ್ಕೆ ಅವರ ಕೊಡುಗೆ ಅಪಾರ. ಹೀಗಾಗಿ ಸ್ವಾತಂತ್ರೃ ಯೋಧರಷ್ಟೇ ಮಹತ್ವ ಸ್ವಾತಂತ್ರೊೃೀತ್ತರ ಹುತಾತ್ಮರಿಗೂ ಸಿಗಬೇಕು. ಏಕೆಂದರೆ ಅವರ ತ್ಯಾಗ ಬಲಿದಾನದ ಫಲವಾಗಿ ನಾವೆಲ್ಲರೂ ನೆಮ್ಮದಿಯ ಜೀವನ ಸಾಗಿಸಲು ಸಾಧ್ಯವಾಗಿದೆ ಎಂದರು.

ಯೋಧರ ತ್ಯಾಗ ಮತ್ತು ಬಲಿದಾನದ ಬಗ್ಗೆ ಮುಂದಿನ ಪೀಳಿಗೆಗೆ ತಿಳಿಸಿಕೊಡಬೇಕು. ಆ ನಿಟ್ಟಿನಲ್ಲಿ ವಿಜಯವಾಣಿ ಹಾಗೂ ದಿಗ್ವಿಜಯ ವಾಹಿನಿ ಸೈನಿಕರ ಕಲ್ಯಾಣ ಸಂಘದ ಜತೆಗೆ ಕೈ ಜೋಡಿಸಿ ಕಾರ್ಗಿಲ್ ವಿಜಯೋತ್ಸವ ಆಚರಿಸಿ ಅವರನ್ನು ಸ್ಮರಿಸುವ ಕೆಲಸ ಮಾಡುತ್ತಿದ್ದು ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.

ಸಾನಿಧ್ಯ ವಹಿಸಿದ್ದ ಜ್ಞಾನ ಯೋಗಾಶ್ರಮದ ಪರಮಪೂಜ್ಯ ಬಸವಲಿಂಗ ಶ್ರೀಗಳು ಆಶೀರ್ವಚನ ನೀಡಿ, ದೇಶಕ್ಕೆ ಸ್ವಾತಂತ್ರೃ ಸಿಕ್ಕು 75 ವರ್ಷಗಳಾದವು. ತನ್ನಿಮಿತ್ತ ಪೂಜ್ಯ ಸಿದ್ಧೇಶ್ವರ ಶ್ರೀಗಳ ಸಾನ್ನಿಧ್ಯದಲ್ಲಿ ಸೈನಿಕರನ್ನು ಸನ್ಮಾನಿಸುವ ಕಾರ್ಯಕ್ರಮ ಜ್ಞಾನಯೋಗಾಶ್ರಮದಲ್ಲಿ ಹಮ್ಮಿಕೊಳ್ಳಲಾಗಿತ್ತು. ಆ ನೆನಪು ಮರೆಯಲಸಾಧ್ಯ. ಅದಾದ ಬಳಿಕ ಇದೀಗ ಕಾರ್ಗಿಲ್ ವಿಜಯೋತ್ಸವದಲ್ಲಿ ಭಾಗಿಯಾಗಿರುವುದು ಸಂತೋಷದಾಯಕ ಎಂದರು.

ಭಾರತ ಸೋತವರದ್ದಲ್ಲ ಗೆದ್ದವರದ್ದು. ಭಾರತ ಎಂದಿಗೂ ಗೆಲ್ಲುವಂಥ ದೇಶ. ಅನೇಕರು ಈ ದೇಶ, ಭಾಷೆ, ಸಂಸ್ಕೃತಿಯನ್ನು ನಾಶ ಮಾಡಲು ಯತ್ನಿಸಿದರು. ಮಠ ಮಾನ್ಯಗಳನ್ನು ಒಡೆಯಲು ಪ್ರಯತ್ನಿಸಿದರು. ಆದರೂ ಇಂದಿಗೂ ಭಾರತವನ್ನು ಒಡೆಯಲು ಸಾಧ್ಯವಾಗಿಲ್ಲ. ಏಕೆಂದರೆ ಭಾರತ ಎಂಬುದು ದೇಶದ ಪ್ರಜೆಗಳ ಅಂತರಾಳದಲ್ಲಿ ಅಡಗಿದೆ. ಹೀಗಾಗಿ ಪ್ರತಿಯೊಬ್ಬರ ಅಂತರಂಗದಲ್ಲಿ ಅಡಗಿದ ನಿಷ್ಠೆ, ಶ್ರದ್ಧೆ, ಭಕ್ತಿಯನ್ನು ಒಡೆಯಲು ಯಾರಿಂದಲೂ ಸಾಧ್ಯವಾಗಲಿಲ್ಲ. ಎಷ್ಟೇ ಕಷ್ಟ, ನಷ್ಟ ಅನುಭವಿಸಿದರೂ ಭಾರತ ಮತ್ತೆ ಮತ್ತೆ ತಲೆ ಎತ್ತಿ ನಿಲ್ಲುತ್ತಲೇ ಇದೆ. ಇದು ಭಾರತಕ್ಕಿರುವ ಶಕ್ತಿ ಎಂದರು.

ಮಾಜಿ ಸೈನಿಕ ಆರ್.ಐ. ಹಿರೇಮಠ ಮಾತನಾಡಿ, 1999ರಲ್ಲಿ ಪಾಕಿಸ್ತಾನದ ಜನರಲ್ ಪರ್ವೇಜ್ ಮುಶ್ರೀಫ್ ಕುತಂತ್ರದಿಂದಾಗಿ ಕಾರ್ಗಿಲ್‌ನಲ್ಲಿ ಯುದ್ಧವಾಯಿತು. 1971ರಲ್ಲಿ ಬಾಂಗ್ಲಾ ವಿಮೋಚನೆ ಸಂದರ್ಭದಲ್ಲಿ ಇಂದಿರಾಗಾಂಧಿ ಉಗ್ರಾವತಾರ ತಾಳಿದ್ದರು. ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿದ್ದರು. ಈ ಅಪಮಾನ ಸಹಿಸದೆ ಪರ್ವೇಜ್ ಮುಶ್ರೀಫ್ ಕಾರ್ಗಿಲ್ ಯುದ್ಧಕ್ಕೆ ಪ್ರಚೋದನೆ ನೀಡಿದನು. ಆದರೆ, ಭಾರತೀಯ ಸೈನಿಕರು ಎಂದೆಂದೂ ಮರೆಯದಂಥ ಪಾಠವನ್ನು ಪಾಕಿಸ್ತಾನಕ್ಕೆ ಕಲಿಸಿದ ಕ್ಷಣ ಕ್ಷಣದ ಯುದ್ಧದ ಸಮಗ್ರ ವಿವರ ನೀಡಿದರು.

ವಿಜಯವಾಣಿ ಸ್ಥಾನಿಕ ಸಂಪಾದಕ ಕೆ.ಎನ್. ರಮೇಶ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಗಠಾಣ ಶಾಸಕ ವಿಠಲ ಕಟಕಧೋಂಡ, ದೇವರಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ, ಎಎಸ್‌ಪಿ ಶಂಕರ ಮಾರಿಹಾಳ, ಮಾಜಿ ಸೈನಿಕರ ಸಂಘದ ಗೌರವಾಧ್ಯಕ್ಷ ಎಚ್.ಆರ್. ಮಾಚಪ್ಪನವರ, ನಿವೃತ್ತ ಕರ್ನಲ್ ಎಚ್. ಸಂಗಪ್ಪ, ನಿವೃತ್ತ ಕರ್ನಲ್ ಬಿ.ಎಸ್. ಹಿಪ್ಪರಗಿ, ನಿವೃತ್ತ ವಿಂಗ್ ಕಮಾಂಡರ್ ಎಂ.ಸಿ. ಕೋರಿ, ಸಂಘದ ಅಧ್ಯಕ್ಷ ಹಾನರರಿ ಕ್ಯಾಪ್ಟನ್ ಎಸ್.ಎಸ್. ಶೇಗುಣಸಿ, ಸಂಘದ ಕಾರ್ಯದರ್ಶಿ ಜೈನುದ್ದೀನ ಗುಂಡಬಾವಡಿ, ಸುಬೇದಾರ್ ನಾನಾಗೌಡ ಹಿರೇಗೌಡರ್, ಮಾಜಿ ಸೈನಿಕರಾದ ಎಸ್.ಡಿ. ಮಾನೆ, ಕೆ.ಪಿ. ಬಿರಾದಾರ ಮತ್ತಿತರರಿದ್ದರು.

ಕಾರ್ಗಿಲ್ ಯುದ್ಧದಲ್ಲಿ ಪಾಲ್ಗೊಂಡಿದ್ದ ವೀರಯೋಧ ಹಾನರರಿ ಕ್ಯಾಪ್ಟನ್ ಕಾಶಿಲಿಂಗ ಸಿದ್ಧಲಿಂಗ ಶೇಗಾಂವಿ, ಹಾನನರಿ ಕ್ಯಾಪ್ಟನ್ ಜಗನ್ನಾಥ್ ಪಾಂಡ್ರೆ, ಹಾನರರಿ ಕ್ಯಾಪ್ಟನ್ ಬಸವರಾಜ ಕೋಟಾರಗಸ್ತಿ, ನಾಯಕ್ ಸುಬೇದಾರ ಸಂಗಪ್ಪ ಕಟ್ಟಿ, ಹವಾಲ್ದಾರ್ ಮಹಾದೇವ ಇಟ್ಟಪ್ಪಗೋಳ, ಹವಾಲ್ದಾರ್ ಸದಾಶಿವ ಶ್ರೀನಿವಾಸ ಕುಲಕರ್ಣಿ, ಹವಾಲ್ದಾರ್ ಸಂಗಪ್ಪ ಶಿವಪ್ಪ ವಾಣಿ, ನಾಯಕ್ ಮಾರುತಿ ಬಿ. ಭಜಂತ್ರಿ, ಬಸಪ್ಪ ಬೆಳ್ಳೂರ ಅವರನ್ನು ಹೃದಯ ಸ್ಪರ್ಶಿಯಾಗಿ ಸನ್ಮಾನಿಸಲಾಯಿತು.

ನಿವೃತ್ತ ಸೈನಿಕರ ಕುಟುಂಬದ ಒಂದೂವರೆ ಸಾವಿರಕ್ಕೂ ಅಧಿಕ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ದ್ರೋಣ ಕರಿಯರ್ ಅಕಾಡೆಮಿ, ಹೊಯ್ಸಳ ಅಕಾಡೆಮಿ, ಎನ್‌ಸಿಸಿ ಕ್ಯಾಂಡೆಟ್ಸ್, ಪೊಲೀಸ್ ಸಿಬ್ಬಂದಿ ಕಾರ್ಯಕ್ರಮಕ್ಕೆ ಸಹಕರಿಸಿದರು.

ಹಾನರರಿ ಕ್ಯಾಪ್ಟನ್ ಸಂಗಪ್ಪ ದೇಗಿನಾಳ ನೇತೃತ್ವದಲ್ಲಿ ನಿಶಾನ್ ಟೋಳಿ ಪರೇಡ್ ನೀಡಿ, ರಾಷ್ಟ್ರಗೀತೆಗೆ ಚಾಲನೆ ನೀಡಿ, ಹುತಾತ್ಮ ಯೋಧರಿಗೆ ಒಂದು ನಿಮಿಷದ ಮೌನಾಚರಣೆ ನಡೆಸಿಕೊಟ್ಟರು. ನಿವೃತ್ತ ಶಿಕ್ಷಕ ಹುಮಾಯೂನ್ ಮಮದಾಪುರ ಹಾಗೂ ಸಂಗೀತ ಮಠಪತಿ ಅದ್ಭುತವಾಗಿ ನಿರೂಪಿಸಿದರು. ಆರಂಭದಲ್ಲಿ ಭರತನಾಟ್ಯ ಕಲಾವಿದೆ ಶ್ರೇಯಾ ಪಾಟೀಲ್ ಶ್ರೀ ಸಿದ್ಧೇಶ್ವರ ಶ್ರೀಗಳಿಗೆ ನೃತ್ಯ ನಮನ ಸಲ್ಲಿಸಿದ್ದು ವಿಶೇಷವಾಗಿತ್ತು.

Share This Article

ಪಿತ್ತಕೋಶದ ಕಲ್ಲು; ಸಮಸ್ಯೆ ತಪ್ಪಿಸಲು ಈ ಪದಾರ್ಥಗಳಿಂದ ದೂರವಿರಿ | Health Tips

ಮೂತ್ರಪಿಂಡದಲ್ಲಿ ಮಾತ್ರ ಕಲ್ಲುಗಳಾಗುತ್ತದೆ ಎಂದು ನೀವು ಭಾವಿಸುತ್ತೀರಾ? ನೀವು ಹಾಗೆ ಭಾವಿಸಿದರೆ ಅದು ತಪ್ಪು. ಏಕೆಂದರೆ…

30-40ನೇ ವಯಸ್ಸಿನಲ್ಲಿ ಜೀವನವನ್ನು ಹೇಗೆ ನಡೆಸಬೇಕು; ವೃದ್ಧಾಪ್ಯದ ಮೇಲೆ ಬೀರುವ ಪರಿಣಾಮದ ಡೀಟೇಲ್ಸ್​ ಇಲ್ಲಿದೆ | Health Tips

ಪ್ರೌಢವಸ್ಥೆ ಮತ್ತು ಯೌವನದಲ್ಲಿ ದೇಹವು ಉತ್ತಮ ಸ್ಥಿತಿಯಲ್ಲಿರುತ್ತದೆ. ಪ್ರತಿಯೊಂದು ಸ್ನಾಯು ಮತ್ತು ಅಂಗವು ಶಕ್ತಿಯಿಂದಿರುತ್ತದೆ. ಈ…

Night Shift Work : ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದೀರಾ?ಹಾಗಿದ್ರೆ ಈ ಸುದ್ದಿ ನಿಮಗಾಗಿ..

ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಕಚೇರಿಗಳಲ್ಲಿ ರಾತ್ರಿ ಪಾಳಿಯಲ್ಲಿ (Night Shift Work) ಕೆಲಸ ಮಾಡುತ್ತಿದ್ದಾರೆ.…