ಸೈನಿಕರನ್ನು ಗೌರವಿಸುವ ಕಾರ್ಯ ನಡೆಯಲಿ

ವಿಜಯವಾಣಿ ಸುದ್ದಿಜಾಲ ಸೇಡಂ
ದೇಶ ಕಾಯುವ ಸೈನಿಕನಲ್ಲಿ ಆತ್ಮಸ್ಥೈರ್ಯ, ವಿಶ್ವಾಸ ಹೆಚ್ಚಿಸುವ ನಿಟ್ಟಿನಲ್ಲಿ ಸಾರ್ವಜನಿಕರು ಅವರನ್ನು ಗೌರವದಿಂದ ಕಾಣುವುದು ಅವಶ್ಯವಾಗಿದೆ ಎಂದು ಕರವೇ ತಾಲೂಕು ಅಧ್ಯಕ್ಷ ರಾಮಚಂದ್ರ ಗುತ್ತೇದಾರ ಹೇಳಿದರು.

ರಂಜೋಳದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ(ಶೆಟ್ಟಿ ಬಣ)ಯಿಂದ ಹಮ್ಮಿಕೊಂಡಿದ್ದ ಸೈನಿಕರಿಗೆ ಗೌರವ ಸಲ್ಲಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಮ್ಮ ಜೀವದ ಹಂಗನ್ನು ತೊರೆದು ಗಡಿಯಲ್ಲಿ ನಮಗಾಗಿ ಜೀವ ತೆತ್ತುವ ಅವರಿಗೆ ಪ್ರತಿ ಗ್ರಾಮಗಳಲ್ಲಿ, ಮನೆಗಳಲ್ಲಿ ಇಂತಹ ಸತ್ಕಾರದ ಭಾವನೆ ಸಿಗಬೇಕಾಗಿದೆ. ಅಂದಾಗ ಅವರ ಕಾರ್ಯದಲ್ಲಿ ಹೆಚ್ಚಿನ ಶಕ್ತಿ ತುಂಬಲು ಸಾಧ್ಯವಾಗಲಿದೆ ಎಂದರು.

ಇತ್ತೀಚೆಗೆ ಜಮ್ಮು ಕಾಶ್ಮಿರದ ಪುಲ್ವಾಮದಲ್ಲಿ ನಡೆದ ಸೈನಿಕರ ಮೇಲಿನ ದಾಳಿಗೆ ಸುಮಾರು 46 ಯೋಧರು ಬಲಿಯಾಗಿದ್ದಾರೆ. ಇದರಿಂದಾಗಿ ಭಾರತ ದೇಶದ ಜನರಲ್ಲಿ ಸೂತಕ ಮನೆ ಮಾಡಿತ್ತು, ಆದರೆ ಘಟನೆ ನಡೆದ ಕೆಲ ದಿನಗಳಲ್ಲಿಯೇ ನಮ್ಮ ಸೈನ್ಯ ಪಾಕಿಸ್ತಾನದ ಒಳ ಹೊಕ್ಕು ಉಗ್ರರನ್ನು ಸದೆ ಬಡಿದಿರುವದು ಸಂತಸ ತಂದಿದೆ ಎಂದು ತಿಳಿಸಿದರು.

ಬಿಎಸ್ಎಫ್ ಯೋಧ, ಕುರಕುಂಟಾದ ನಸಿರೋದ್ದಿನ್, ಮುಖಂಡರಾದ ನಾಗೇಶರೆಡ್ಡಿ ಪಾಟೀಲ್, ನಾರಾಯಣರೆಡ್ಡಿ ಶೇರಿಕಾರ, ಪತ್ರಕರ್ತ ಶರಣು ಮಹಾಗಾಂವ, ಮಹಾಂತೇಶ ಸುತಾರ ಮಾತನಾಡಿದರು.

ಯೋಧರಾದ ಬಾಲಚಂದ್ರ ಕುಂಬಾರ, ಅನಂತಯ್ಯ ಗೌಡ್ಸ್, ವೆಂಕಟಪ್ಪ ಬಿಲಾಕಲ್, ನಸಿರೋದ್ದಿನ್ ಕುರಕುಂಟಾ, ಸಿದ್ದಣ್ಣ ಕುರಕುಂಟಾ, ತಿಪ್ಪಯ್ಯ ಮದಕಲ್, ಮಲ್ಲಿಕಾರ್ಜುನ ಪಾಟೀಲ್ ಕುರಕುಂಟಾ, ಬಿ.ಬಿ.ಸ್ವಾಮಿ, ಮುರುಗೇಣ್ಣ ಭೋಮಾ, ವಸಂತರಾವ ಕುರಕುಂಟಾ ಅವರನ್ನು ಪಾದಪೂಜೆ ಮಾಡಿ ಸತ್ಕರಿಸಲಾಯಿತು. ಯೋಧರನ್ನು ಗ್ರಾಮದ ತುಂಬೆಲ್ಲ ಮೆರವಣಿಗೆ ನಡೆಸಲಾಯಿತು.

ಪತ್ರಕರ್ತ ಅವಿನಾಶ ಬೋರಂಚಿ, ಪೊಲೀಸ್ ಇಲಾಖೆಯ ಆನಂದರೆಡ್ಡಿ, ಪ್ರಮುಖರಾದ ಸುನೀಲ್ ರಾಣೇವಾಲ್, ವಿದ್ಯಾಸಾಗರ ದುದ್ದೇಲಿ, ಭೀಮಯ್ಯ ಗುತ್ತೇದಾರ, ಶ್ರೀನಿವಾಸರೆಡ್ಡಿ ಮದನಾ, ಸುಭಾಷ ಇಮಡಾಪುರ, ರವಿಸಿಂಗ್, ಭಗವಂತು, ಭೀಮಾಶಂಕರ, ಆಶಪ್ಪ, ಅನೀಲ್ ಇದ್ದರು.