ಸೇವೆ ಸರಳೀಕರಣಕ್ಕೆ ಭವನ 

ಬೆಂಗಳೂರು: ಸರ್ಕಾರಿ ಸೇವೆಗಳು ಒಂದೇ ಸೂರಿನಡಿ ಸಿಗಬೇಕೆಂಬ ಮುಖ್ಯಧ್ಯೇಯದಿಂದ ದೇವನಹಳ್ಳಿಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನ ನಿರ್ವಿುಸಲಾಗಿದೆ. ಇದರಿಂದ ವಿವಿಧ ಇಲಾಖೆಗಳ ಕೆಲಸ ಕಾರ್ಯಗಳಿಗೆ ಸಾರ್ವಜನಿಕರು ಅಲೆದಾಡುವುದು ತಪ್ಪಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ಹೇಳಿದರು.

ತಾಲೂಕಿನ ಚಪ್ಪರದಕಲ್ಲುನಲ್ಲಿ ಜಿಲ್ಲಾಡಳಿತ ಭವನದಲ್ಲಿ ಬುಧವಾರ ಜಿಪಂ ಕಚೇರಿ ಉದ್ಘಾಟಿಸಿ ಮಾತನಾಡಿದರು. ನಗರದಲ್ಲಿ ಗ್ರಾಮಾಂತರ ಜಿಲ್ಲೆಗೆ ಸಂಬಂಧಪಟ್ಟ ಇಲಾಖೆಗಳು ಒಂದೊಂದು ದಿಕ್ಕಿನಲ್ಲಿದ್ದವು. ಇದರಿಂದ ಸಾರ್ವಜನಿಕ ಕೆಲಸ ಕಾರ್ಯಗಳಿಗೆ ಬಹಳ ತೊಂದರೆಯಾಗುತ್ತಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿ ಸತತ 5 ವರ್ಷಗಳ ಶ್ರಮದಿಂದ ಈ ಭಾಗದಲ್ಲಿ ಜಿಲ್ಲಾಡಳಿತ ಭವನ ಕಾರ್ಯಾರಂಭವಾಗಿದೆ ಎಂದರು.

ಸಂಸದ ವೀರಪ್ಪಮೊಯ್ಲಿ ಮಾತನಾಡಿ, ಜಿಪಂ ಇಲ್ಲಿಗೆ ಸ್ಥಳಾಂತರವಾಗಿರುವುದರಿಂದ ಜಿಲ್ಲೆಯ ಎಲ್ಲ ತಾಲೂಕಿನವರಿಗೆ ಅನುಕೂಲವಾಗಿದೆ.

ಕೆಲ ಅಧಿಕಾರಿಗಳು ಹಾಗೂ ಸಿಬ್ಬಂದಿ ಇಲ್ಲಿಗೆ ಬರಲು ಹಿಂದೇಟು ಹಾಕಿ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಅನೇಕರು ಖುಷಿಯಿಂದಲೇ ಇಲ್ಲಿಗೆ ಬರುತ್ತಿದ್ದಾರೆ. ನಮಗೆ ಸಾರ್ವಜನಿಕ ಸೇವೆ ಮುಖ್ಯ ಎಂದು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲತಾ ಹೇಳಿದರು.

ಶಾಸಕರಾದ ನಿಸರ್ಗ ಎಲ್.ಎನ್.ನಾರಾಯಣಸ್ವಾಮಿ, ವೆಂಕಟರಮಣಯ್ಯ, ವಿಧಾನ ಪರಿಷತ್ ಸದಸ್ಯ ಎಸ್.ರವಿ, ಜಿಲ್ಲಾಧಿಕಾರಿ ಸಿ.ಎಸ್.ಕರೀಗೌಡ, ಜಿಪಂ ಸಿಇಒ ಆರ್.ಲತಾ, ಅಧ್ಯಕ್ಷೆ ಜಯಮ್ಮ, ಉಪಾಧ್ಯಕ್ಷೆ ಕನ್ಯಾಕುಮಾರಿ ಮತ್ತಿತರರು ಇದ್ದರು.

ಕುದುರೆ ವ್ಯಾಪಾರ, ಆಪರೇಷನ್ ಕಮಲದ ಮೂಲಕ ಬಿಜೆಪಿ ಪ್ರಜಾಪ್ರಭುತ್ವದ ಆಶಯಕ್ಕೆ ಧಕ್ಕೆ ತರುತ್ತಿದೆ.

| ಕೃಷ್ಣಬೈರೇಗೌಡ, ಜಿಲ್ಲಾ ಉಸ್ತುವಾರಿ ಸಚಿವ

ಪ್ರಧಾನಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್​ಶಾ ಕರ್ನಾಟಕ ರಾಜಕೀಯದಲ್ಲೇ ತಲ್ಲೀನರಾಗಿದ್ದಾರೆ. ದೇಶದ ಅಭಿವೃದ್ಧಿ ಬಿಟ್ಟು ರಾಜ್ಯ ರಾಜಕೀಯದಲ್ಲಿ ಆಪರೇಷನ್ ಕಮಲಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ.

| ಡಾ.ವೀರಪ್ಪಮೊಯ್ಲಿ, ಸಂಸದ

ಹೈಕಮಾಂಡ್ ಮಾರ್ಗದರ್ಶನದಲ್ಲಿ ನಾವೆಲ್ಲರೂ ನಡೆಯುತ್ತಿದ್ದೇವೆ. ಸಮ್ಮಿಶ್ರ ಸರ್ಕಾರದಲ್ಲಿ ಯಾವುದೇ ಬಿರುಕಿಲ್ಲ. ಬಿಜೆಪಿ ಜನರ ದಾರಿತಪ್ಪಿಸುತ್ತಿದೆ.

| ವೆಂಕಟರಮಣಯ್ಯ ಟಿ., ಶಾಸಕ, ದೊಡ್ಡಬಳ್ಳಾಪುರ