ಸೇವೆಗಿಳಿದ ಐಟಿ-ಬಿಟಿ ಉದ್ಯೋಗಿ • ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ
  ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಕೊಡಗು ಮೂಲದ ಯುವಜನ ಸೇರಿ ಅಸ್ತಿತ್ವಕ್ಕೆ ತಂದಿರುವ ಕೊಡಗು ಫಾರ್ ಟೂಮಾರೊ (ಕೆಎಫ್‌ಟಿ) ಸಂಘಟನೆ ಶ್ಲಾಘನೀಯ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿದೆ.
  ಐಟಿ-ಬಿಟಿ ಉದ್ಯೋಗದಲ್ಲಿರುವ, ಸಾವಿರಾರು ರೂ. ಮಾಸಿಕ ವೇತನ ಪಡೆಯುವ ಯುವಜನತೆ ತಮ್ಮ ಹುಟ್ಟೂರು ಕೊಡಗಿನಲ್ಲಿ ಸಮಾಜ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವುದು ವಿಶೇಷ.
  ವಾರಾಂತ್ಯದಲ್ಲಿ ಪಬ್-ಕ್ಲಬ್‌ಗಳಲ್ಲಿ ಮೋಜು-ಮಸ್ತಿ ಮಾಡುವ, ಕಾರು-ಜೀಪು-ಬೈಕ್‌ಗಳಲ್ಲಿ ಲಾಂಗ್ ಡ್ರೈವ್ ಹೋಗುವ ಐಟಿ-ಬಿಟಿ ಉದ್ಯೋಗಿಗಳ ಸಹಜ ಚಟುವಟಿಕೆಗೆ ಬದಲಾಗಿ ಕೆಎಫ್‌ಟಿ ತಂಡ ಸಮಾಜಮುಖಿ ಕಾರ್ಯದ ಮೂಲಕ ಸಮಾಜದ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ತಮ್ಮ ಗಳಿಕೆಯ ಒಂದಿಷ್ಟು ಭಾಗವನ್ನು ಅಗತ್ಯ ಇರುವವರಿಗಾಗಿ ವಿನಿಯೋಗಿಸುವ ಮೂಲಕ ಒಳ್ಳೆಯ ಮನೋಭಾವ ಬೆಳೆಸಿಕೊಂಡಿದ್ದಾರೆ.
  ಆಗಸ್ಟ್ ತಿಂಗಳಿನಲ್ಲಿ ಕೊಡಗಿನಲ್ಲಿ ಪ್ರಕೃತಿ ವಿಕೋಪ ಘಟಿಸಿದ್ದಾಗ ಸಂತ್ರಸ್ತರ ನೆರವಿಗಾಗಿ ಉತ್ಸಾಹಿ ತರುಣ ಪೊನ್ನೊಳತಂಡ ಕಾವೇರಪ್ಪ ಮುಂದಾಳತ್ವದಲ್ಲಿ ಅವರ ಸ್ನೇಹಿತರು ಧಾವಿಸಿದ್ದರು. ತಕ್ಷಣಕ್ಕೆ ಬೇಕಾದ ಆಹಾರ ಪದಾರ್ಥ ಸೇರಿದಂತೆ ವಿವಿಧ ಸವಲತ್ತು ಒದಗಿಸಲು ತಮ್ಮ ಇತಿಮಿತಿಯೊಳಗೆ ಕಾರ್ಯ ನಿರ್ವಹಿದ್ದರು. ಬೆಂಗಳೂರು ಕೊಡವ ಸಮಾಜದೊಂದಿಗೆ ಕೈಜೋಡಿಸಿ, ಪರಿಹಾರ ಸಾಮಗ್ರಿಯನ್ನು ಕೊಡಗಿಗೆ ರವಾನಿಸಿದ್ದರು.
  ಪ್ರಕೃತಿ ವಿಕೋಪದಿಂದ ಹಾನಿಗೀಡಾದ ಪ್ರದೇಶಗಳಿಗೆ ತಮ್ಮ ಸ್ನೇಹಿತರೊಂದಿಗೆ ಆಗಮಿಸಿದ್ದ ಕಾವೇರಪ್ಪ ತಂಡ, ಪರಿಹಾರ ಕಾರ್ಯದಲ್ಲಿಯೂ ಸದ್ದುಸುದ್ದಿ ಇಲ್ಲದೆ ಸಕ್ರಿಯವಾಗಿ ತೊಡಗಿಸಿಕೊಂಡಿತ್ತು.
  ಹರದೂರು ಸೇತುವೆ, ಬೇತ್ರಿ ಸೇತುವೆ, ಕಕ್ಕಬೆ ಸೇತುವೆ ಸೇರಿದಂತೆ ವಿವಿಧೆಡೆ ಶೇಖರಣೆಗೊಂಡಿದ್ದ ಅಪಾರ ಪ್ರಮಾಣದ ತ್ಯಾಜ್ಯವನ್ನು ಹಲವು ದಿನಗಳ ಶ್ರಮದಾನದ ಮೂಲಕ ಉತ್ಸಾಹಿ ತರುಣ-ತರುಣಿಯರು ಸ್ವಚ್ಛಗೊಳಿಸಿದ್ದರು.
  ಕಳೆದ ಶನಿವಾರ, ಭಾನುವಾರ ಎರಡು ದಿನ ನೂರಾರು ಯುವಜನ ಸೇರಿ, ಜೀವನದಿ ಕಾವೇರಿ ಉಗಮ ಸ್ಥಾನ ತಲಕಾವೇರಿ ಕ್ಷೇತ್ರ ವ್ಯಾಪ್ತಿಯಲ್ಲಿ ಶ್ರಮದಾನ ಮಾಡುವುದರ ಮೂಲಕ ತ್ಯಾಜ್ಯ ವಿಲೇವಾರಿ ಮಾಡಿದ್ದಾರೆ.
  ತ್ಯಾಜ್ಯ ಬೆಂಗಳೂರಿಗೆ ರವಾನೆ: ಬೆಂಗಳೂರಿನಿಂದ ನೂರಾರು ಸಂಖ್ಯೆಯಲ್ಲಿ ತಮ್ಮ ವಾಹನಗಳ ಮೂಲಕ ಆಗಮಿಸುವ ಯುವಜನ, ಸ್ಥಳೀಯರ ಬೆಂಬಲದೊಂದಿಗೆ ಶ್ರಮದಾನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಾರೆ. ತಾವು ಸಂಗ್ರಹಿಸಿದ ತ್ಯಾಜ್ಯಗಳನ್ನು ಒಂದೆಡೆ ಗುಡ್ಡೆ ಹಾಕಿ, ಅಲ್ಲಿ ಪ್ರತ್ಯೇಕಿಸುವ ಕಾರ್ಯ ನಡೆಯುತ್ತದೆ.
  ಎಲ್ಲ ತ್ಯಾಜ್ಯಗಳನ್ನು ತಮ್ಮದೆ ವೆಚ್ಚದಲ್ಲಿ ವಾಹನದಲ್ಲಿ ಬೆಂಗಳೂರಿನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ರವಾನಿಸುತ್ತಾರೆ. ಆ ಮೂಲಕ ಕೊಡಗಿನಲ್ಲಿ ಸಂಗ್ರಹವಾದ ತ್ಯಾಜ್ಯವನ್ನು ವ್ಯವಸ್ಥಿತವಾಗಿ ವಿಲೇವಾರಿ ಮಾಡುತ್ತಿದ್ದಾರೆ. ಈಗಾಗಲೇ 25 ಟನ್‌ನಷ್ಟು ತ್ಯಾಜ್ಯವನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗಿದ್ದಾರೆ. ಕನಿಷ್ಠ ತಿಂಗಳಿಗೊಮ್ಮೆ ಕೊಡಗಿನ ಆಯ್ದ ಪ್ರದೇಶದಲ್ಲಿ ಸ್ವಚ್ಛತಾ ಕಾರ್ಯ ನಡೆಸುತ್ತಿದ್ದಾರೆ.
  ಸಂತ್ರಸ್ತರಿಗೆ ನೆರವು: ಪ್ರಕೃತಿ ವಿಕೋಪ ಸಂತ್ರಸ್ತರಿಗೆ ಅಪಾರ ಪ್ರಮಾಣದ ನೆರವು ಒದಗಿಸಿದ್ದಾರೆ. 7 ಜನರಿಗೆ ಉದ್ಯೋಗ ಕಲ್ಪಿಸಿದ್ದಾರೆ. 12 ಜನರ ಆರೋಗ್ಯ ಚಿಕಿತ್ಸೆಗೆ ನೆರವು ನೀಡಿದ್ದಾರೆ. 60 ಕುಟುಂಬಕ್ಕೆ ಒಟ್ಟು 12 ಲಕ್ಷ ರೂ. ಆರ್ಥಿಕ ನೆರವು ಒದಗಿಸಿದ್ದಾರೆ. ಹಲವರ ವಿದ್ಯಾಭ್ಯಾಸಕ್ಕೆ ನೆರವು ನೀಡಿದ್ದಾರೆ. ತಮ್ಮ ಸಂಪರ್ಕದಲ್ಲಿರುವ ದಾನಿಗಳನ್ನು ಕರೆದುಕೊಂಡು ಬಂದು ಸಂತ್ರಸ್ತರಿಗೆ ನೇರವಾಗಿ ಪರಿಹಾರ ನೀಡುವ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದ್ದಾರೆ.
  ಹಣ ಕ್ರೋಢೀಕರಣ:
  ಉತ್ತಮ ವೇತನ ಪಡೆಯುತ್ತಿರುವ 40 ಜನರು ಪ್ರತಿ ತಿಂಗಳು ಸಮಾಜಮುಖಿ ಕಾರ್ಯಕ್ಕಾಗಿ ಒಂದಿಷ್ಟು ಹಣವನ್ನು ಕೆಎಫ್‌ಟಿ ಸಂಘಟನೆಗೆ ದೇಣಿಗೆ ನೀಡುತ್ತಿದ್ದಾರೆ. ಇದರೊಂದಿಗೆ ತಮಗೆ ಪರಿಚಿತರವಾಗಿರುವ ಸ್ನೇಹಿತರು, ಕುಟುಂಬ ಸದಸ್ಯರು, ಆಪ್ತರಿಂದ ಆರ್ಥಿಕ ನೆರವನ್ನು ಸಂಗ್ರಹಿಸುತ್ತಿದ್ದಾರೆ. ಈ ಎಲ್ಲ ಹಣವನ್ನು ಬಳಸಿಕೊಂಡು ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.