ಶನಿವಾರಸಂತೆ: ಗುಡುಗಳಲೆ ಬಳಿ ಕಾರು ಬೈಕ್‌ಗೆ ಡಿಕ್ಕಿಯಾದ ಬಳಿಕ ಚಾಲಕನ ನಿಯಂತ್ರಣ ತಪ್ಪಿದ ಕಾರು ಸೇತುವೆಯ ಕಟ್ಟೆಮೇಲೆ ಹತ್ತಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಹಂಡ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಾಳೂರು ಗ್ರಾಮದ ನವೀನ್ ಎಂಬುವರು ಇನೋವಾ ಕಾರಿನಲ್ಲಿ ಶುಕ್ರವಾರ ರಾತ್ರಿ 7 ಗಂಟೆ ಸುಮಾರಿಗೆ ಶನಿವಾರಸಂತೆಯ ಕೆಆರ್‌ಸಿ ವೃತ್ತದಿಂದ ಗುಡುಗಳಲೆ ಕಡೆಗೆ ಕಾರನ್ನು ವೇಗವಾಗಿ ಚಲಾಯಿಸಿಕೊಂಡು ಹೋಗುತ್ತಿದ್ದರು. ಈ ವೇಳೆ ಆಸ್ಪತ್ರೆ ಬಳಿ ಕಾರು ಶನಿವಾರಸಂತೆ ಕಡೆಗೆ ಬರುತ್ತಿದ್ದ ಬೈಕ್‌ಗೆ ಡಿಕ್ಕಿಯಾಗಿದೆ. ಬಳಿಕ ಚಾಲಕನ ನಿಯಂತ್ರಣ ಕಳೆದುಕೊಂಡ ಕಾರು ಗುಡುಗಳಲೆ ಬಳಿಯಲ್ಲಿರುವ ಸೇತುವೆ ಕಟ್ಟೆಮೇಲೆ ಹತ್ತಿದೆ.
ನದಿಯೊಳಗೆ ಕಾರು ಬೀಳುವುದು ಸ್ವಲ್ಪದರಲ್ಲಿ ತಪ್ಪಿದ್ದು, ಕಾರಿನ ಮುಂಭಾಗ ಚಕ್ರಗಳು ನದಿಗೆ ಚಾಚಿಕೊಂಡಂತೆ ಸೇತುವೆ ಕಂಬಿ ಮೇಲೆ ಸಿಕ್ಕಿಕೊಂಡಿದೆ. ಘಟನೆ ನಂತರ ಕಾರು ಚಾಲಕ ನವೀನ್ ಹಾಗೂ ಆತನ ಜತೆಗಿದ್ದ ಮತ್ತೊಬ್ಬ ಕಾರನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಅಪಘಾತದಲ್ಲಿ ಬೈಕ್ ಸವಾರರಾದ ಹಾಸನ ಜಿಲ್ಲೆಯ ಕೌಕೋಡಿ ಗ್ರಾಮದ ವಿನೋದ್ ಮತ್ತು ಸತೀಶ್ ಎಂಬುವರಿಗೆ ಸಣ್ಣಪುಟ್ಟ ಗಾಯವಾಗಿದೆ. ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.