ಸೇತುವೆಯಿಂದ ಹೊಳೆಗೆ ಹಾರಿ ಆತ್ಮಹತ್ಯೆ

ಶಿರ್ವ: ವಿಪರೀತ ಸಾಲಭಾದೆಯಿಂದ ಕಂಗಾಲಾಗಿದ್ದ ಉದ್ಯಾವರದ ಬೋಳಾರಗುಡ್ಡೆ ನಿವಾಸಿ ಅಶೋಕ್ ಅಮೀನ್(40) ಅವರು ರಾಷ್ಟ್ರೀಯ ಹೆದ್ದಾರಿಯಲ್ಲಿ ಉದ್ಯಾವರ ಸೇತುವೆಯಿಂದ ಪಾಪನಾಶಿನಿ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಉದ್ಯಾವರದಲ್ಲಿ ಕಳೆದ ಹಲವಾರು ವರ್ಷಗಳಿಂದ ಪ್ಲಾಸ್ಟಿಕ್ ಫ್ಯಾಕ್ಟರಿಯಲ್ಲಿ ಆಪರೇಟರ್ ಆಗಿದ್ದ ಅವರು, ಬುಧವಾರ ಮದುವೆಗೆ ಹೋಗಲಿದೆ ಎಂದು ತನ್ನ ಭಾವನ ಬೈಕ್‌ನಲ್ಲಿ ಹೋಗಿದ್ದರು.
ರಾತ್ರಿ ಆದರೂ ಅಶೋಕ್ ಮನೆಗೆ ಬಾರದ ಹಿನ್ನೆಲೆಯಲ್ಲಿ ಫೋನ್ ಮಾಡಿದಾಗ ತಾನು ಉದ್ಯಾವರ ಸೇತುವೆಯ ಮೇಲಿದ್ದೇನೆ ಎಂದು ಅವರು ತಿಳಿಸಿದ್ದರು. ಬೆಳಗ್ಗಿನವರೆಗೂ ಬಾರದ ಹಿನ್ನೆಲೆಯಲ್ಲಿ ಅಲ್ಲಿಗೆ ಹೋದಾಗ ಸೇತುವೆಯ ಪಕ್ಕ ಅವರ ಬೈಕ್, ಮೊಬೈಲ್ ಹಾಗೂ ಚಪ್ಪಲಿ ಪತ್ತೆಯಾಗಿದೆ. ಹೊಳೆಗೆ ಹಾರಿರುವ ಸಂಶಯದ ಮೇರೆಗೆ ಸ್ಥಳೀಯರ ನೆರವಿನಿಂದ ಹುಡುಕಾಡಿದಾಗ ಅಲ್ಲಿಂದ ಸ್ವಲ್ಪ ದೂರದಲ್ಲಿರುವ ಅಂಕುದ್ರು ಹೊಳೆಯಲ್ಲಿ ಮೃತ ದೇಹ ಪತ್ತೆಯಾಗಿದೆ. ಗುರುವಾರ ರಾತ್ರಿಯೇ ಅವರು ಹೊಳೆಗೆ ಹಾರಿರುವ ಸಾಧ್ಯತೆ ಇದೆ ಎನ್ನಲಾಗಿದೆ.

ವಿಪರೀತ ಸಾಲಭಾದೆ: ಅಶೋಕ್ ವಿಪರೀತ ಸಾಲ ಮಾಡಿಕೊಂಡಿದ್ದರು. ಸಾಲ ನೀಡಿದವರು ಅದರ ವಸೂಲಿಗೆ ಹಿಂದೆ ಬಿದ್ದಿರುವ ಸಾಧ್ಯತೆಗಳಿದ್ದು ಅವರು ತೀವ್ರವಾಗಿ ಮಾನಸಿಕವಾಗಿ ನೊಂದಿದ್ದರು ಎನ್ನಲಾಗಿದೆ. ವಿವಾಹಿತರಾಗಿದ್ದ ಅಶೋಕ್ ಪತ್ನಿ, 9 ಹಾಗೂ 4 ವರ್ಷದ ಪುತ್ರ ಹಾಗೂ ಪುತ್ರಿ ಮತ್ತು ತಂದೆಯೊಂದಿಗೆ ವಾಸವಾಗಿದ್ದರು. ಹಿಂದೆ ಅವರು ಮೇಸ್ತ್ರಿ ಕೆಲಸಕ್ಕೂ ಹೋಗುತ್ತಿದ್ದರು ಎನ್ನಲಾಗಿದೆ. ಅಶೋಕ್ ಸ್ಥಳೀಯ ಕೆಲವು ಸಂಘಟನೆಗಳ ಚಟುವಟಿಕೆಗಳಲ್ಲೂ ಸಕ್ರಿಯರಾಗಿದ್ದರು.

ಹೆದ್ದಾರಿ ಸಂಚಾರಕ್ಕೆ ಅಡಚಣೆ: ಯುವಕ ಹೊಳೆಗೆ ಹಾರಿದ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದರಿಂದ ಹಲವಾರು ಮಂದಿ ಸ್ಥಳದಲ್ಲಿ ಜಮಾಯಿಸಿದ್ದರು. ಸೇತುವೆ ಮೇಲೆಯೂ ನಿಂತು ಶವ ಹುಡುಕುವುದನ್ನು ನೋಡುತ್ತಿದ್ದರು. ಇದರಿಂದ ಹೆದ್ದಾರಿ ಸಂಚಾರಕ್ಕೆ ತೊಡಕಾಗಿದ್ದು ಪೊಲೀಸರು ಶ್ರಮಪಟ್ಟು ಸಂಚಾರ ಸುಗಮಗೊಳಿಸುತ್ತಿದ್ದರು. ಸ್ಥಳೀಯ ಮೀನುಗಾರರು, ಹೊಯ್ಗೆ ಕಾರ್ಮಿಕರು ಮತ್ತು ಪೊಲೀಸರು ಎರಡು ಗಂಟೆ ಕಾಲ ಹುಡುಕಿ ಶವವನ್ನು ದಡಕ್ಕೆ ತಂದಿದ್ದಾರೆ.
ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *