ಸೇಡಿನ ತವಕದಲ್ಲಿ ಕರ್ನಾಟಕ

ಮೊಹಾಲಿ: ರಣಜಿ ಟ್ರೋಫಿ ದೇಶೀಯ ಕ್ರಿಕೆಟ್ ಟೂರ್ನಿ ಈಗ ಲೀಗ್ ಹಂತದ ಅಂತಿಮ ಘಟ್ಟಕ್ಕೆ ಬಂದಿದ್ದು, ನಾಕೌಟ್ ಪ್ರವೇಶಕ್ಕೆ ನಿಕಟ ಪೈಪೋಟಿ ಎದುರಾಗಿದೆ. 9ನೇ ಹಾಗೂ ಅಂತಿಮ ಸುತ್ತಿನ ಲೀಗ್ ಪಂದ್ಯಗಳು ಬುಧವಾರ ಆರಂಭವಾಗಲಿದ್ದು, ಈಗಾಗಲೆ ಕ್ವಾರ್ಟರ್ಫೈನಲ್ ಸ್ಥಾನ ಖಚಿತಪಡಿಸಿಕೊಂಡಿರುವ 8 ಬಾರಿಯ ಚಾಂಪಿಯನ್ ಕರ್ನಾಟಕ ತಂಡ ಪಿಸಿಎ ಕ್ರೀಡಾಂಗಣದಲ್ಲಿ ಮಹಾರಾಷ್ಟ್ರ ವಿರುದ್ಧ ಪಂದ್ಯ ಆಡಲಿದೆ. ಕಳೆದ ವರ್ಷ ಮಹಾರಾಷ್ಟ್ರ ವಿರುದ್ಧವೇ ಆಡಿದ ಕಡೇ ಪಂದ್ಯದಲ್ಲಿ ಸೋತು ಲೀಗ್ ಹಂತದಲ್ಲೇ ನಿರ್ಗಮನ ಕಂಡಿದ್ದ ರಾಜ್ಯ ತಂಡ ಈ ಬಾರಿ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ.

ಸತತ 4 ಗೆಲುವಿನ ಬಳಿಕ ಒಡಿಶಾ ವಿರುದ್ಧ ಇನಿಂಗ್ಸ್ ಹಿನ್ನಡೆ ಕಂಡಿದ್ದ ಕರ್ನಾಟಕ ತಂಡ ಸೌರಾಷ್ಟ್ರ ವಿರುದ್ಧ ಕಳೆದ ಪಂದ್ಯದಲ್ಲಿ 4 ವಿಕೆಟ್ಗಳಿಂದ ಸೋಲು ಅನುಭವಿಸಿತ್ತು. ಇದೀಗ ಮಹಾರಾಷ್ಟ್ರ ವಿರುದ್ಧ ಪುಟಿದೇಳುವ ಮೂಲಕ ನಾಕೌಟ್ ಸಮರಕ್ಕೆ ಸಜ್ಜಾಗುವ ಹಂಬಲವನ್ನು ವಿನಯ್ಕುಮಾರ್ ಪಡೆ ಹೊಂದಿದೆ. ನಾಕೌಟ್ ಹಂತಕ್ಕೇರಲು ಗೆಲ್ಲಲೇಬೇಕಾದ ಒತ್ತಡದಲ್ಲಿರುವ ಮಹಾರಾಷ್ಟ್ರ ಇದುವರೆಗೆ ಆಡಿದ 7 ಪಂದ್ಯಗಳಲ್ಲಿ ತಲಾ 2 ಜಯ, ಸೋಲು ಕಂಡಿದ್ದು, 3ರಲ್ಲಿ ಡ್ರಾ ಸಾಧಿಸಿದೆ. ಮಹಾರಾಷ್ಟ್ರಕ್ಕೆ ನಾಕೌಟ್ ಪ್ರವೇಶ ನಿರಾಕರಿಸುವ ಮೂಲಕ ಮುಯ್ಯಿ ತೀರಿಸುವ ಅವಕಾಶ ವಿನಯ್ ಪಡೆ ಮುಂದಿದೆ.

ಮಯಾಂಕ್ ಅಲಭ್ಯ: ಕಳೆದ ಪಂದ್ಯದಲ್ಲಿ ಸೋಲು ಕಂಡಿದ್ದರಿಂದ ರಾಜ್ಯ ತಂಡದಲ್ಲಿ ಈ ಬಾರಿ ಕೆಲ ಬದಲಾವಣೆ ನಿರೀಕ್ಷಿಸಲಾಗಿದೆ. ಮಯಾಂಕ್ ಅಗರ್ವಾಲ್ ಗಾಯದಿಂದಾಗಿ ಪಂದ್ಯಕ್ಕೆ ಅಲಭ್ಯರಾಗಿದ್ದು, ಅರ್ಜುನ್ ಹೊಯ್ಸಳ ಅಥವಾ ಪವನ್ ದೇಶಪಾಂಡೆ ರಣಜಿ ಕ್ರಿಕೆಟ್ಗೆ ಪದಾರ್ಪಣೆ ಮಾಡುವ ನಿರೀಕ್ಷೆ ಇದೆ.

ಸಂಕ್ಲೇಚ ಭೀತಿ: ಪ್ರಸಕ್ತ ಟೂರ್ನಿಯಲ್ಲಿ 14.92ರ ಸರಾಸರಿಯಲ್ಲಿ 40 ವಿಕೆಟ್ ಕಬಳಿಸಿ ಭರ್ಜರಿ ಫಾಮರ್್ನಲ್ಲಿರುವ 34 ವರ್ಷದ ವೇಗಿ ಅನುಪಮ್ ಸಂಕ್ಲೇಚ ಕರ್ನಾಟಕಕ್ಕೆ ಪ್ರಮುಖ ಸವಾಲಾಗಬಲ್ಲರು. ಇನ್ನು ಬ್ಯಾಟಿಂಗ್ ವಿಭಾಗದಲ್ಲಿ ಸ್ವಪ್ನಿಲ್ ಗುಗಲೆ ಮತ್ತು ಅಂಕಿತ್ ಭಾವ್ನೆ ಮಹಾರಾಷ್ಟ್ರದ ಪ್ರಮುಖ ಶಕ್ತಿ ಎನಿಸಿದ್ದಾರೆ. -ಏಜೆನ್ಸೀಸ್

ಕ್ವಾರ್ಟರ್ಫೈನಲ್ ಲೆಕ್ಕಾಚಾರ…

ಎಂಟು ಸುತ್ತಿನ ಲೀಗ್ ಕಾದಾಟದ ಬಳಿಕ ಇದುವರೆಗೆ ಮೂರು ತಂಡಗಳು (ಮುಂಬೈ, ಜಾರ್ಖಂಡ್, ಕರ್ನಾಟಕ) ಮಾತ್ರ ಡಿ. 24ರಿಂದ ನಡೆಯಲಿರುವ ಕ್ವಾರ್ಟರ್ಫೈನಲ್ಗೆ ಸ್ಥಾನ ಖಚಿತಪಡಿಸಿಕೊಂಡಿವೆ. ಉಳಿದ 5 ಸ್ಥಾನಗಳಿಗೆ 12 ತಂಡಗಳ ನಡುವೆ ನಿಕಟ ಸ್ಪರ್ಧೆ ಏರ್ಪಟ್ಟಿದೆ. ಎ ಗುಂಪಿನಿಂದ ಮುಂಬೈ (29) ನಾಕೌಟ್ಗೇರಿದ್ದರೆ, ಗುಜರಾತ್ (25), ತಮಿಳುನಾಡು (23) ಸನಿಹದಲ್ಲಿವೆ. ಇವೆರಡು ತಂಡಗಳಿಗೆ ಇನಿಂಗ್ಸ್ ಮುನ್ನಡೆ ಪಡೆದರೂ ಮುನ್ನಡೆಯುವ ಅವಕಾಶವಿದೆ. ಇನ್ನು ಮಧ್ಯಪ್ರದೇಶ (19), ಪಂಜಾಬ್ (18) ಮತ್ತು ಬಂಗಾಳ (18) ಅಂತಿಮ ಪಂದ್ಯದಲ್ಲಿ ಬೋನಸ್ ಸಹಿತ ಗೆಲುವು ಕಂಡರೆ ಮತ್ತು ಇತರ ಫಲಿತಾಂಶಗಳು ಪೂರಕವಾಗಿ ಬಂದರಷ್ಟೇ ಆಸೆ ಇಡಬಹುದಾಗಿದೆ.

ಬಿ ಗುಂಪಿನಲ್ಲಿ ತ್ರಿಕೋನ ಸ್ಪರ್ಧೆ: ಜಾರ್ಖಂಡ್ (32), ಕರ್ನಾಟಕ (30) ನಾಕೌಟ್ ಖಚಿತಪಡಿಸಿಕೊಂಡಿರುವುದರಿಂದ ಉಳಿದೊಂದು ಸ್ಥಾನಕ್ಕೆ ಒಡಿಶಾ (22), ದೆಹಲಿ (21), ಮಹಾರಾಷ್ಟ್ರ (21) ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಈ 3ರಲ್ಲಿ ಅಂತಿಮ ಪಂದ್ಯ ಗೆದ್ದ ತಂಡಕ್ಕೆ ಉತ್ತಮ ಅವಕಾಶ ಒಲಿಯಲಿದೆ. ಒಡಿಶಾ ಬೋನಸ್ ಸಹಿತ ಗೆದ್ದರೆ ಮಾತ್ರ ಉಳಿದೆರಡು ತಂಡಗಳಿಗೆ ಅವಕಾಶವೇ ಉಳಿಯುವುದಿಲ್ಲ.

ಸಿ ಗುಂಪಿನಲ್ಲಿ ಮುಕ್ತ ಅವಕಾಶ: ಸಿ ಗುಂಪಿನ 2 ಕ್ವಾರ್ಟರ್ಫೈನಲ್ ಸ್ಥಾನಗಳನ್ನು ಬಾಚಿಕೊಳ್ಳಲು ಹೈದರಾಬಾದ್ (30), ಆಂಧ್ರ (25), ಹರಿಯಾಣ (25) ಮತ್ತು ಕೇರಳಕ್ಕೆ (22) ಉತ್ತಮ ಅವಕಾಶವಿದೆ. ಆಂಧ್ರ-ಹೈದರಾಬಾದ್ ಪಂದ್ಯ ಪ್ರಿ ಕ್ವಾರ್ಟರ್ಫೈನಲ್ ಮಾದರಿಯಲ್ಲೂ ಇದ್ದರೆ, ಹರಿಯಾಣಕ್ಕೆ ಇನಿಂಗ್ಸ್ ಮುನ್ನಡೆ ಸಾಧಿಸಿದರೂ ಸ್ಥಾನ ಖಚಿತ.

ತಂಡಗಳು ಸಮಾನ ಅಂಕ ಗಳಿಸಿದ್ದಾಗ ಅತಿ ಹೆಚ್ಚು ಪಂದ್ಯ ಗೆದ್ದಿದ್ದ ತಂಡ ಮುನ್ನಡೆಯುತ್ತದೆ. ಅದರಲ್ಲೂ ಸಮಬಲವಿದ್ದರೆ ಅತ್ಯುತ್ತಮ ರನ್ರೇಟ್ ಹೊಂದಿರುವ ತಂಡ ಮುನ್ನಡೆಯುತ್ತದೆ.

9ನೇ ಸುತ್ತಿನ ಇತರ ಪಂದ್ಯಗಳು

ಎ: ದೆಹಲಿ: ಬಂಗಾಳ-ಮಧ್ಯಪ್ರದೇಶ; ಬೆಳಗಾವಿ: ಗುಜರಾತ್-ತಮಿಳುನಾಡು; ರಾಜ್ಕೋಟ್: ಮುಂಬೈ-ಪಂಜಾಬ್; ನಾಸಿಕ್: ಬರೋಡ-ಉತ್ತರಪ್ರದೇಶ.

ಬಿ: ವಡೋದರ: ದೆಹಲಿ-ಸೌರಾಷ್ಟ್ರ; ನೋಯ್ಡಾ: ರಾಜಸ್ಥಾನ-ವಿದರ್ಭ.

ಸಿ: ಗ್ವಾಲಿಯರ್: ಛತ್ತೀಸ್ಗಢ-ಜಮ್ಮು ಕಾಶ್ಮೀರ; ಮುಂಬೈ (ಬಾಂದ್ರ ಕುರ್ಲಾ): ಗೋವಾ-ಹಿಮಾಚಲ ಪ್ರದೇಶ; ಕೋಲ್ಕತ: ಹರಿಯಾಣ-ತ್ರಿಪುರ; ದೆಹಲಿ (ಕರ್ನೆಲ್): ಕೇರಳ-ಸರ್ವೀಸಸ್; ಲಖನೌ: ಆಂಧ್ರ-ಹೈದರಾಬಾದ್.

ದಿಂಡಿಗಲ್ ಪಂದ್ಯ ಮುಂದೂಡಿಕೆ

ಜಯಲಲಿತಾ ನಿಧನದ ಹಿನ್ನೆಲೆಯಲ್ಲಿ ತಮಿಳುನಾಡಿನ ದಿಂಡಿಗಲ್ನಲ್ಲಿ ಬುಧವಾರದಿಂದ ನಡೆಯಬೇಕಾಗಿದ್ದ ಜಾರ್ಖಂಡ್ ಮತ್ತು ಒಡಿಶಾ ನಡುವಿನ ರಣಜಿ ಪಂದ್ಯವನ್ನು ಮುಂದೂಡಲಾಗಿದೆ. ಪಂದ್ಯ ನಡೆಯಲಿರುವ ಬದಲಿ ತಾಣ ಮತ್ತು ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಬಿಸಿಸಿಐ ತಿಳಿಸಿದೆ.

ರದ್ದಾಗಿದ್ದ 2 ಪಂದ್ಯ ಮರುನಿಗದಿ ಇಲ್ಲ

ಕಳೆದ ತಿಂಗಳು ದೆಹಲಿಯಲ್ಲಿ ಮಾಲಿನ್ಯದಿಂದಾಗಿ ದಟ್ಟ ಹೊಗೆ ಆವರಿಸಿದ್ದರಿಂದ 2ನೇ ದಿನದ ಬಳಿಕ ರದ್ದುಗೊಂಡಿದ್ದ ಬಂಗಾಳ-ಗುಜರಾತ್ ಮತ್ತು ಹೈದರಾಬಾದ್-ತ್ರಿಪುರ ನಡುವಿನ 2 ಪಂದ್ಯಗಳನ್ನು ಮರುನಿಗದಿಗೊಳಿಸಿದ್ದ ಬಿಸಿಸಿಐ ಇದೀಗ ತನ್ನ ನಿರ್ಧಾರವನ್ನು ಹಿಂಪಡೆದಿದೆ. ಮುಂಬೈ ಮತ್ತು ತಮಿಳುನಾಡು ಕ್ರಿಕೆಟ್ ಸಂಸ್ಥೆಗಳ ತೀವ್ರ ವಿರೋಧ ಮತ್ತು ಪಂದ್ಯದ ಟಾಸ್ ಹಾಕಲಾಗಿದ್ದರಿಂದ ನಿಯಮ ಪ್ರಕಾರ ಮರುನಿಗದಿ ಸಾಧ್ಯವಿಲ್ಲವೆಂದು ಮಂಡಳಿ ಈ ನಿರ್ಧಾರ ತೆಗೆದುಕೊಂಡಿದೆ ಎನ್ನಲಾಗಿದೆ. ಇದರಿಂದ ಎಲ್ಲ 4 ತಂಡಗಳಿಗೆ ತಲಾ 1 ಅಂಕ ಹಂಚಲಾಗಿದೆ. ಮುಂಬೈನಲ್ಲಿ ಮಂಗಳವಾರ ನಡೆದ ಸೀನಿಯರ್ ಟೂರ್ನಮೆಂಟ್ ಸಮಿತಿ ಸಭೆಯಲ್ಲಿ ತೆಗೆದುಕೊಳ್ಳಲಾಗಿರುವ ಈ ನಿರ್ಧಾರ ಬಂಗಾಳ ತಂಡದ ನಾಕೌಟ್ ಆಸೆಗೆ ದೊಡ್ಡ ಹೊಡೆತ ನೀಡಿದೆ. ಹೀಗಾಗಿ ಈ ಬಗ್ಗೆ ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಮತ್ತು ಕಾರ್ಯದರ್ಶಿ ಅಜಯ್ ಶಿರ್ಕೆ ಜತೆ ರ್ಚಚಿಸಲಾಗುವುದು ಎಂದು ಬಂಗಾಳ ಕ್ರಿಕೆಟ್ ಸಂಸ್ಥೆ (ಬಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ. ನಿರ್ಧಾರ ಬದಲಿಸದಂತೆ ಬಿಸಿಎ ಈ ಮುನ್ನ ಬಿಸಿಸಿಐಗೆ ಪತ್ರ ಬರೆದು ಒತ್ತಾಯಿಸಿತ್ತು.

Leave a Reply

Your email address will not be published. Required fields are marked *