ಸೆರೆಯಾದ ಸರಗಳ್ಳ

ರಾಣೆಬೆನ್ನೂರ: ಮನೆ ಮಾಲಕಿಯೊಬ್ಬರ ಕೊರಳಲ್ಲಿದ್ದ ಚಿನ್ನದ ಸರ ಕದ್ದವನನ್ನು ಪೊಲೀಸರು ಬಂಧಿಸಿದ್ದಾರೆ. ತಾಲೂಕಿನ ಮುಷ್ಟೂರು ಗ್ರಾಮದ ಪುನೀತ್ ಬಸವಣ್ಣೆಪ್ಪ ತಳವಾರ ಉರ್ಫ್ ಗಂಗಮ್ಮನವರ (25) ಕಳವು ಮಾಡಿದ ಆರೋಪಿ. ಇಲ್ಲಿಯ ರಾಜೇಶ್ವರಿ ನಗರದ ಮಹಿಳೆಯೊಬ್ಬರ ಮನೆಗೆ ನುಗ್ಗಿ 7 ತೊಲೆ ಚಿನ್ನದ ಮಾಂಗಲ್ಯ ಸರವನ್ನು ದೋಚಿ ಪರಾರಿಯಾಗಿದ್ದ. ಮಹಿಳೆ ಕೂಡಲೇ ಪೊಲೀಸರಿಗೆ ತಿಳಿಸಿದ್ದು, ನಗರದ ರೈಲ್ವೆ ನಿಲ್ದಾಣದಲ್ಲಿ ಆರೋಪಿ ಪುನೀತ್​ನನ್ನು ಶಹರ ಠಾಣೆ ಪೊಲೀಸರು ಬಂಧಿಸಿ, ಮಾಂಗಲ್ಯ ಸರ ವಶಪಡಿಸಿಕೊಂಡಿದ್ದಾರೆ.
ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಹುಡುಗಿಯರಿಲ್ಲ ಎಂದಿದ್ದಕ್ಕೆ: ರಾಜೇಶ್ವರ ನಗರದ ಮನೆಯೊಂದರಲ್ಲಿ ಮಹಿಳೆ ಈ ಹಿಂದೆ ಹೊರ ರಾಜ್ಯದ ಯುವತಿಯರನ್ನು ಕರೆತಂದು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರು. ಎರಡ್ಮೂರು ತಿಂಗಳ ಹಿಂದೆ ಪೊಲೀಸರು ದಾಳಿ ನಡೆಸಿ ಆಕೆಯನ್ನು ಜೈಲಿಗೆ ಅಟ್ಟಿದ್ದರು. ಜಾಮೀನು ಮೇಲೆ ಹೊರಗಡೆ ಬಂದಿರುವ ಆಕೆ ಮನೆಯಲ್ಲಿದ್ದಾಗ, ಪುನೀತ್ ಹುಡುಗಿಯರನ್ನು ಕೇಳಿಕೊಂಡು ಹೋಗಿದ್ದಾನೆ. ‘ಈಗ ಯಾವ ಹುಡುಗಿಯರು ಇಲ್ಲ. ನಾನು ದಂಧೆ ಬಿಟ್ಟಿದ್ದೇನೆ ಎಂದು ಮಹಿಳೆ ತಿಳಿಸಿದ್ದಾಳೆ. ಆಗ ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಖಚಿತ ಪಡಿಸಿಕೊಂಡ ಪುನೀತ್, ಸರ ದೋಚಿ ಪರಾರಿಯಾಗಿದ್ದ.
ಮೋಜು-ಮಸ್ತಿಗಾಗಿ ಕಳವು: ಪುನೀತ್ ಚಳಕೇರಿ ರೈಲ್ವೆ ನಿಲ್ದಾಣದಲ್ಲಿ ಚಹಾ ಮಾರಾಟ ಮಾಡಿಕೊಂಡಿದ್ದಾನೆ. ಆದರೆ ಐಪಿಎಲ್ ಬೆಟ್ಟಿಂಗ್ ಹಾಗೂ ಮೋಜು-ಮಸ್ತಿಗಾಗಿ ಕೈಗಡ ಸಾಲ ಮಾಡಿಕೊಂಡಿದ್ದನು. ಅದನ್ನು ಸರಿದೂಗಿಸಲು ಇದೀಗ ಕಳ್ಳತನ ಹಾದಿ ಹಿಡಿದಿದ್ದಾನೆ. ಈತನ ವಿರುದ್ಧ ಈ ಹಿಂದೆ ಯಾವುದೇ ಕಳ್ಳತನ ಪ್ರಕರಣ ದಾಖಲಾಗಿಲ್ಲ. ಸದ್ಯ ಆತನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ.