ಸೆನ್ಸೆಕ್ಸ್ 382 ಅಂಕ ಜಿಗಿತ

ಮುಂಬೈ: ಲೋಕಸಭಾ ಚುನಾವಣೆಗೆ ಮುಹೂರ್ತ ಘೋಷಣೆಯಾದ ಬೆನ್ನಿಗೆ ಸೋಮವಾರ ಷೇರುಪೇಟೆಯಲ್ಲಿ ಉತ್ಸಾಹ ಹೆಚ್ಚಿತ್ತು. ಹೂಡಿಕೆದಾರರು ಸಕ್ರಿಯವಾಗಿದ್ದ ಕಾರಣ ಸೆನ್ಸೆಕ್ಸ್ 382 ಅಂಕ ಮತ್ತು ನಿಫ್ಟಿ 132 ಅಂಕ ಜಿಗಿತ ದಾಖಲಿಸಿದೆ.

ಸೆನ್ಸೆಕ್ಸ್​ನ ಈ ಭಾರಿ ಜಿಗಿತದಿಂದ ಕಳೆದ ಆರು ತಿಂಗಲ್ಲಿ ಗರಿಷ್ಠ ಮಟ್ಟಕ್ಕೆ ತಲುಪಿದೆ. 2018ರ ಸೆಪ್ಟೆಂಬರ್ ಬಳಿಕ 37ಸಾವಿರ ಗಡಿ ದಾಟದ ಸೆನ್ಸೆಕ್ಸ್ ಸೋಮವಾರದ ವಹಿವಾಟು ಅಂತ್ಯಕ್ಕೆ 37,054 ತಲುಪಿತ್ತು.

ಸೆನ್ಸೆಕ್ಸ್ ಜಿಗಿತದಿಂದ ಎಸ್​ಬಿಐ, ಎಚ್​ಪಿಸಿಎಲ್, ಏರ್​ಟೆಲ್, ಜೆಟ್ ಏರ್​ವೇಸ್ ಸೇರಿದಂತೆ ಒಟ್ಟು 1574 ಕಂಪನಿಗಳ ಷೇರುಮೌಲ್ಯ ಹೆಚ್ಚಳವಾಗಿದೆ.

ಹೂಡಿಕೆದಾರರು ಖುಷ್: ಷೇರುಪೇಟೆ ಚೇತರಿಕೆಯಿಂದ ಹೂಡಿಕೆದಾರರಿಗೆ ಒಟ್ಟು 2.27 ಲಕ್ಷ ಕೋಟಿ ರೂ. ಲಾಭವಾಗಿದೆ ಎಂದು ವಿಶ್ಲೇಷಣಾ ಸಂಸ್ಥೆಯೊಂದು ತಿಳಿಸಿದೆ. ಈ ತಿಂಗಳು ಮಾರುಕಟ್ಟೆಗೆ 5,621 ಕೋಟಿ ರೂ. ಹೂಡಿಕೆ ಹರಿದುಬಂದಿದೆ. ಜತೆಗೆ ಲೋಕಸಭಾ ಚುನಾವಣೆ ಘೋಷಣೆ ಜತೆಗೆ ಪ್ರಚಾರ ಅಭಿಯಾನ ಚುರುಕುಗೊಂಡು ಪಕ್ಷಗಳು ಸಕ್ರಿಯವಾಗುವ ಸೂಚನೆಯಿಂದಾಗಿ ಷೇರುಪೇಟೆ ಏರಿಕೆ ಕಂಡಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.