ಸೆಂಚುರಿಯನ್ ಸವಾಲಿಗೆ ಭಾರತ ಸಿದ್ಧ

ಸೆಂಚುರಿಯನ್: ವರ್ಷಾರಂಭದಲ್ಲೇ ಸೋಲಿನ ಆಘಾತ ಎದುರಿಸಿರುವ ವಿಶ್ವ ನಂ.1 ಭಾರತ ತಂಡ ಶನಿವಾರ ಆರಂಭವಾಗಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಪುಟಿದೇಳುವ ಹಂಬಲದಲ್ಲಿದೆ. ತವರು ನೆಲದಲ್ಲಿ ಕಳೆದ ವರ್ಷಪೂರ್ತಿ ಸಿಕ್ಕ ಭರ್ಜರಿ ಯಶಸ್ಸಿನ ಬಳಿಕ ಈ ವರ್ಷ ವಿದೇಶಿ ನೆಲದ ಮೊದಲ ಸವಾಲಿನಲ್ಲಿ ಸೋಲಿನ ರುಚಿ ಕಂಡಿರುವ ಭಾರತ ತಂಡಕ್ಕೆ ಸರಣಿಯಲ್ಲಿ ತನ್ನ ಹೋರಾಟ ಉಳಿಸಿಕೊಳ್ಳಲು ಗೆಲುವೊಂದೇ ದಾರಿಯಾಗಿದೆ. ವಿರಾಟ್ ಕೊಹ್ಲಿ ಪಡೆಗೆ ಸತತ ಸರಣಿ ಗೆಲುವಿನ ಓಟವನ್ನು 10ಕ್ಕೆ ವಿಸ್ತರಿಸಿಕೊಳ್ಳಲು ಮಾಡು ಇಲ್ಲವೇ ಮಡಿ ಒತ್ತಡವೂ ಎದುರಾಗಿದೆ. 3 ಪಂದ್ಯಗಳ ಸರಣಿಯಲ್ಲಿ ಭಾರತ 0-1 ಹಿನ್ನಡೆಯಲ್ಲಿದೆ.

ಕಠಿಣ ಅಭ್ಯಾಸದಲ್ಲಿ ಭಾರತ: ಸೂಪರ್ ಸ್ಪೋರ್ಟ್ ಪಾರ್ಕ್​ನಲ್ಲಿ ನಡೆಯಲಿರುವ ಪಂದ್ಯಕ್ಕೆ ಸರಣಿ ಸಮಬಲ ದೃಷ್ಟಿಯಿಂದ ಭಾರತ ತಂಡ ಕಠಿಣ ಅಭ್ಯಾಸ ನಡೆಸಿದೆ. ಮೊದಲ ಟೆಸ್ಟ್​ನಲ್ಲಿ ಮಳೆಯಿಂದ 3ನೇ ದಿನದಾಟ ರದ್ದುಗೊಂಡರೂ ನಾಲ್ಕೇ ದಿನಕ್ಕೆ ಶರಣಾಗಿದ್ದ ಭಾರತ ತಂಡ ಬ್ಯಾಟಿಂಗ್​ನಲ್ಲಿ ಸಾಕಷ್ಟು ವೈಫಲ್ಯ ಅನುಭವಿಸಿತ್ತು. ಕೆಎಲ್ ರಾಹುಲ್, ಮುರಳಿ ವಿಜಯ್, ಟೆಸ್ಟ್ ತಜ್ಞ ಚೇತೇಶ್ವರ ಪೂಜಾರ, ನಾಯಕ ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ, ರೋಹಿತ್ ಶರ್ಮ ಹಾಗೂ ವೃದ್ಧಿಮಾನ್ ಸಾಹ ಒಳಗೊಂಡ ಬ್ಯಾಟಿಂಗ್ ಪಡೆ ನೆಟ್ಸ್​ನಲ್ಲಿ ಸಾಕಷ್ಟು ಅಭ್ಯಾಸ ನಡೆಸಿದ್ದು, ಹಿಂದಿನ ಪಂದ್ಯದಲ್ಲಿ ಮಾಡಿಕೊಂಡ ಎಡವಟ್ಟುಗಳನ್ನು ತಿದ್ದುಕೊಳ್ಳಲು ಯತ್ನಿಸಿದೆ. 2018-19ನೇ ಸಾಲಿನಲ್ಲಿ ಭಾರತ ವಿದೇಶಿ ನೆಲದಲ್ಲಿ ಆಡಲಿರುವ 12 ಟೆಸ್ಟ್ ಪಂದ್ಯಗಳ ಪೈಕಿ 2ನೇ ಪಂದ್ಯ ಆಡಲು ಸಜ್ಜಾಗಿದ್ದು, ಬ್ಯಾಟಿಂಗ್​ಗೆ ಹೆಚ್ಚು ಒತ್ತು ನೀಡಿದೆ. ನೆಟ್ಸ್​ನಲ್ಲಿ ಬ್ಯಾಟ್ಸ್​ಮನ್​ಗಳು ಸಾಕಷ್ಟು ಹೊತ್ತು ಬೆವರು ಹರಿಸಿದ್ದೆ ಇದಕ್ಕೆ ಸಾಕ್ಷಿ. -ಪಿಟಿಐ/ಏಜೆನ್ಸೀಸ್

ಪಂದ್ಯ ಆರಂಭ:

ಮಧ್ಯಾಹ್ನ 1.30

ನೇರಪ್ರಸಾರ:

ಸೋನಿ ಟೆನ್

ಪಿಚ್ ರಿಪೋರ್ಟ್

ವೇಗಿಗಳಿಗೆ ಸ್ವರ್ಗದಂತಿರುವ ಸೂಪರ್​ಸ್ಪೋರ್ಟ್ ಪಾರ್ಕ್ ಪಿಚ್​ನಲ್ಲಿ ಹೆಚ್ಚಾಗಿ ಸ್ವಿಂಗ್ ಹಾಗೂ ಬೌನ್ಸಿ ಎಸೆತಗಳನ್ನು ನೋಡಬಹುದು. ಪಿಚ್ ಮೇಲಿನ ಹಸಿರು ಹುಲ್ಲನ್ನು ಸಂಪೂರ್ಣವಾಗಿ ತೆಗೆದಿರುವುದು ವೇಗಿಗಳಿಗೆ ನೆರವಾಗಲಿದೆ. ಹವಾಮಾನ 30 ಡಿಗ್ರಿ ಸೆಲ್ಸಿಯಸ್ ಇದ್ದು, ಪಂದ್ಯಕ್ಕೆ ಮಳೆ ಭೀತಿ ಇಲ್ಲ. ಜತೆಗೆ ಉರಿ ಬಿಸಿಲು ಆಟಗಾರರನ್ನು ಕಾಡುವ ನಿರೀಕ್ಷೆ ಇದೆ.

ಭರವಸೆ ಹುಸಿಗೊಳಿಸದ ವೇಗಿಗಳು

ಆತಿಥೇಯ ತಂಡಕ್ಕೆ ಕಂಟಕವಾಗಿದ್ದ ಭಾರತೀಯ ವೇಗಿಗಳ ಪಡೆ ಎರಡನೇ ಸಮರಕ್ಕೂ ಸಜ್ಜುಗೊಂಡಿದೆ. ಅನುಭವಿ ಇಶಾಂತ್ ಶರ್ಮ ಸಂಪೂರ್ಣವಾಗಿ ಚೇತರಿಕೆ ಕಂಡರೂ ಭುವನೇಶ್ವರ್ ಸಾರಥ್ಯದಲ್ಲೇ ದಾಳಿ ನಡೆಯಲಿದೆ. ಪದಾರ್ಪಣೆ ಪಂದ್ಯದಲ್ಲೇ ಗಮನಾರ್ಹ ನಿರ್ವಹಣೆ ತೋರಿದ್ದ ಜಸ್​ಪ್ರೀತ್ ಬುಮ್ರಾ ಸೂಪರ್ ಸ್ಪೋರ್ಟ್​ನಲ್ಲೂ ಕಣಕ್ಕಿಳಿಯುವುದು ಖಚಿತ. ಭುವಿ, ಬುಮ್ರಾ, ಮೊಹಮದ್ ಶಮಿ ಹಾಗೂ ಹಾರ್ದಿಕ್ ಪಾಂಡ್ಯ ಒಳಗೊಂಡ ವೇಗಿಗಳ ಪಡೆ ಕಣಕ್ಕಿಳಿಯಲಿದೆ.

ಆಟಗಾರರು ಗಾಬರಿಗೊಳ್ಳುವ ಅವಶ್ಯಕತೆ ಇಲ್ಲ. ಬ್ಯಾಟ್ಸ್ ಮನ್​ಗಳು ಸಾಕಷ್ಟು ಕಠಿಣ ಶ್ರಮ ಹಾಕುವ ಅಗತ್ಯವಿದೆ. 6 ಬ್ಯಾಟ್ಸ್​ಮನ್​ಗಳು ಆಡಿದರೂ ಅನಗತ್ಯ ಹೊಡೆತಗಳಿಗೆ ಮುಂದಾಗಬಾರದು. ರಹಾನೆಯನ್ನು ಕೈಬಿಡಬೇಕೆಂದು ಹೇಳುತ್ತಿದ್ದವರೇ ಈಗ ಅವರನ್ನು ಆಡಿಸಬೇಕೆನ್ನುತ್ತಿರುವುದು ಹಾಸ್ಯಾಸ್ಪದ. ಆಡುವ ಬಳಗದ ಬಗ್ಗೆ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ.

| ವಿರಾಟ್ ಕೊಹ್ಲಿ ಭಾರತ ತಂಡದ ನಾಯಕ

ಸೂಪರ್​ಸ್ಪೋರ್ಟ್ ಪಾರ್ಕ್​ನಲ್ಲಿ ದಕ್ಷಿಣ ಆಫ್ರಿಕಾ ಆಡಿರುವ 22 ಟೆಸ್ಟ್​ಗಳಲ್ಲಿ 17ರಲ್ಲಿ ಜಯ ದಾಖಲಿಸಿ ಶೇ. 77ರಷ್ಟು ಗೆಲುವಿನ ದಾಖಲೆ ಹೊಂದಿದೆ. ಇದುವರೆಗೂ ಕೇವಲ 2 ಪಂದ್ಯಗಳಲ್ಲಿ ಇಂಗ್ಲೆಂಡ್ (2000) ಹಾಗೂ ಆಸ್ಟ್ರೇಲಿಯಾ (2014) ವಿರುದ್ಧ ಸೋತಿದೆ.

ಧವನ್ ಬದಲು ರಾಹುಲ್​ಗೆ ಸ್ಥಾನ?

ವಿದೇಶಿ ನೆಲದಲ್ಲಿ ರನ್​ಬರ ಎದುರಿಸುತ್ತಿರುವ ಶಿಖರ್ ಧವನ್ ಬದಲಿಗೆ ಕನ್ನಡಿಗ ಕೆಎಲ್ ರಾಹುಲ್​ರನ್ನು ಕಣಕ್ಕಿಳಿಯುವ ಸಾಧ್ಯತೆಗಳಿವೆ. ನ್ಯೂಲ್ಯಾಂಡ್ಸ್ ಅಂಗಣದಲ್ಲಿ ಎರಡೂ ಇನಿಂಗ್ಸ್​ಗಳಲ್ಲಿ ತಲಾ 16 ರನ್​ಗಳಿಸಲಷ್ಟೇ ಶಕ್ತರಾಗಿರುವ ಧವನ್, ಆಫ್ರಿಕಾ ವೇಗಿಗಳನ್ನು ಎದುರಿಸಲು ವಿಫಲರಾಗಿದ್ದಾರೆ. 2013-14ನೇ ಸಾಲಿನ ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆಯಲ್ಲೂ ವಿಫಲರಾಗಿದ್ದ ಧವನ್, ಸರಾಸರಿ 18ರಂತೆ ರನ್ ಗಳಿಸಿದ್ದರು. ಇದೀಗ ಬ್ಯಾಟಿಂಗ್ ತಾಂತ್ರಿಕತೆಯಲ್ಲಿ ನಿಪುಣರಾಗಿರುವ ಕೆಎಲ್ ರಾಹುಲ್, ಉತ್ತಮ ಫಾಮರ್್​ನಲ್ಲಿದ್ದು ಅವಕಾಶದ ನಿರೀಕ್ಷೆಯಲ್ಲಿದ್ದಾರೆ.

ಸ್ಟೈನ್ ಬದಲಿಗೆ ಮೋರಿಸ್ ಕಣಕ್ಕೆ

ವೇಗಿ ಡೇಲ್ ಸ್ಟೈನ್ ಮೊದಲ ಪಂದ್ಯದಲ್ಲಿ ಅರ್ಧದಲ್ಲೇ ಹೊರಬಿದ್ದರೂ ಸರಣಿ ಮುನ್ನಡೆ ಗಳಿಸಲು ಯಶಸ್ವಿಯಾಗಿರುವ ಆತಿಥೇಯ ದಕ್ಷಿಣ ಆಫ್ರಿಕಾ ತಂಡ ಮತ್ತೆ ನಾಲ್ವರು ವೇಗಿಗಳೊಂದಿಗೆ ಕಣಕ್ಕಿಳಿಯಲಿದೆ. ಸ್ಟೈನ್ ಸ್ಥಾನದಲ್ಲಿ ಆಲ್ರೌಂಡರ್ ಕ್ರಿಸ್ ಮೋರಿಸ್ ಸಾಥ್ ನೀಡಲಿದ್ದಾರೆ. ಉಳಿದಂತೆ ಮೊದಲ ಪಂದ್ಯ ಆಡಿದ ತಂಡವನ್ನೇ ಆತಿಥೇಯ ಬಳಗ ಕಣಕ್ಕಿಳಿಸಲಿದೆ.

ಭಾರತ ತಂಡ 7 ವರ್ಷಗಳ ಬಳಿಕ ಸೆಂಚುರಿಯನ್​ನಲ್ಲಿ ಟೆಸ್ಟ್ ಪಂದ್ಯ ಆಡಲಿದೆ. 2010ರ ಡಿಸೆಂಬರ್​ನಲ್ಲಿ ಈ ಹಿಂದೆ ಎಂಎಸ್ ಧೋನಿ ಸಾರಥ್ಯದಲ್ಲಿ ಏಕೈಕ ಟೆಸ್ಟ್ ಪಂದ್ಯ ಆಡಿದ್ದ ಭಾರತ ತಂಡ ಇನಿಂಗ್ಸ್ ಹಾಗೂ 25 ರನ್​ಗಳಿಂದ ಶರಣಾಗಿತ್ತು.

ಸಂಭಾವ್ಯ ತಂಡಗಳು

ಭಾರತ: ಧವನ್/ಕೆಎಲ್ ರಾಹುಲ್, ಮುರಳಿ ವಿಜಯ್, ಪೂಜಾರ, ಕೊಹ್ಲಿ (ನಾಯಕ), ರೋಹಿತ್ ಶರ್ಮ, ಆರ್.ಅಶ್ವಿನ್/ರಹಾನೆ, ಹಾರ್ದಿಕ್ ಪಾಂಡ್ಯ, ವೃದ್ಧಿಮಾನ್ ಸಾಹ/ಪಾರ್ಥಿವ್ ಪಟೇಲ್ (ವಿ.ಕೀ), ಭುವನೇಶ್ವರ್/ಇಶಾಂತ್ ಶರ್ಮ, ಶಮಿ, ಬುಮ್ರಾ.

ದಕ್ಷಿಣ ಆಫ್ರಿಕಾ: ಎಲ್ಗರ್, ಮಾರ್ಕ್​ರಾಮ್ ಆಮ್ಲ, ಡು ಪ್ಲೆಸಿಸ್ (ನಾಯಕ), ಡಿವಿಲಿಯರ್ಸ್, ಡಿಕಾಕ್ (ವಿ.ಕೀ), ಫಿಲಾಂಡರ್, ಕ್ರಿಸ್ ಮೋರಿಸ್, ಕೇಶವ್ ಮಹಾರಾಜ್, ರಬಾಡ, ಮಾರ್ನೆ ಮಾರ್ಕೆಲ್.

Leave a Reply

Your email address will not be published. Required fields are marked *