ಸೂರ್ಲಬ್ಬಿ ಗ್ರಾಮಸ್ಥರಿಗೆ ಬೆಳಕಿನ ಭಾಗ್ಯ ಕಲ್ಪಿಸಿದ ಬೆಂಗಳೂರಿನ ಜಾಗೃತಿ ಸಂಸ್ಥೆ

ಮಡಿಕೇರಿ: ಸೂರ್ಲಬ್ಬಿ ಗ್ರಾಮ ಸೋಮವಾರಪೇಟೆ ತಾಲೂಕಿನಲ್ಲಿ ಇಂದಿಗೂ ಹಿಂದುಳಿದ ಗ್ರಾಮವೆಂದೇ ಕರೆಸಿಕೊಳ್ಳುತ್ತಿದೆ. ಗ್ರಾಮದ ಅನೇಕ ಮನೆಗಳು ವಿದ್ಯುತ್ ಸಂಪರ್ಕದಿಂದ ವಂಚನೆಗೊಳಗಾಗಿವೆ. ಕೆಲವು ಕಡೆ ವಿದ್ಯುತ್ ಕಂಬಗಳಿದ್ದರೂ ವಿದ್ಯುತ್ ಸಂಪರ್ಕವಿಲ್ಲ. ರಾತ್ರಿ ವೇಳೆ ಮಕ್ಕಳಿಗೆ ಓದಲು ಸೀಮೆಎಣ್ಣೆ ದೀಪವೇ ಗತಿಯಾಗಿತ್ತು. ರಾತ್ರಿ ಕತ್ತಲಲ್ಲಿ ಓದಿ ಮರು ದಿನ ದೂರದಲ್ಲಿರುವ ಶಾಲೆಗೆ ನಡೆದುಕೊಂಡು ಹೋಗಬೇಕಾದ ಅನಿವಾರ್ಯತೆ ಕೂಡ ಇದೆ.

ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಗ್ರಾಮಸ್ಥರ ಮತ್ತು ಮಕ್ಕಳ ಆಶಾಕಿರಣವಾಗಿ ಮೂಡಿಬಂದಿದ್ದು ಬೆಂಗಳೂರಿನ ಜಾಗೃತಿ ಸಂಸ್ಥೆ ಮತ್ತು ಸಿಸ್ಕೋ ಕಂಪನಿ.

ಕಳೆದ ವರ್ಷ ನೆರೆಹಾವಳಿಯಿಂದ ಸೂರ್ಲಬ್ಬಿ ಗ್ರಾಮ ಕೂಡ ತತ್ತರಿಸಿಹೋಗಿತ್ತು. ಈ ನಿಟ್ಟಿನಲ್ಲಿ ಜಾಗೃತಿ ಸಂಸ್ಥೆಯವರು ಸಿಸ್ಕೋ ಕಂಪನಿಯ ಸಹಭಾಗಿತ್ವದಲ್ಲಿ ಪ್ರಕೃತಿ ವಿಕೋಪಕ್ಕೆ ತುತ್ತಾದ ಸ್ಥಳಗಳಲ್ಲಿ ಪರಿಹಾರ ಕಾರ್ಯವನ್ನು ಕೈಗೊಂಡಿತ್ತಲ್ಲದೇ ಸ್ಪೂರ್ತಿಚೇತನ ಎಂಬ ಹೆಸರಿನಲ್ಲಿ ಶೈಕ್ಷಣಿಕ ಹಾಗೂ ಕ್ರೀಡಾ ಸ್ಪರ್ಧೆಗಳನ್ನು ಏರ್ಪಡಿಸುವ ಮೂಲಕ ಮಕ್ಕಳಲ್ಲಿ ಸ್ಥೈರ್ಯ ತುಂಬುವ ಕೆಲಸವನ್ನು ಮಾಡುತ್ತಿತ್ತು.

ವಿದ್ಯುತ್ ದೀಪವಿಲ್ಲದ ಮನೆಗಳು: ಈ ತಂಡದವರು ಸೂರ್ಲಬ್ಬಿ ಶಾಲೆಗೆ ಭೇಟಿ ನೀಡಿದ್ದಾಗ ಮುಖ್ಯೋಪಾಧ್ಯಾಯರು ವಿದ್ಯಾರ್ಥಿಗಳ ಮನೆಗಳಲ್ಲಿ ವಿದ್ಯುತ್ ವ್ಯವಸ್ಥೆ ಇಲ್ಲದಿರುವ ಬಗ್ಗೆ ಗಮನಕ್ಕೆ ತಂದರು. ಖುದ್ದು ಪರಿಸ್ಥಿತಿಯನ್ನು ಅರಿಯಲು ಜಾಗೃತಿ ಸಂಸ್ಥೆಯ ಪ್ರತಿನಿಧಿಗಳು ಮಾರ್ಚ್ ತಿಂಗಳ ಪ್ರಾರಂಭದಲ್ಲಿ ವಿದ್ಯಾರ್ಥಿಗಳ ಮನೆಗಳಿಗೆ ಭೇಟಿ ನೀಡಿದಾಗ ಸಮಸ್ಯೆಯ ಗಂಭೀರತೆ ಮನದಟ್ಟಾಗಿತ್ತು.

ವಿದ್ಯುತ್ ಸಂಪರ್ಕ ಇಲ್ಲದ ವಿದ್ಯಾರ್ಥಿಗಳ ಮನೆಗಳು, ಕೆಲವೆಡೆ ವಿದ್ಯುತ್ ಸಂಪರ್ಕವಿದ್ದರೂ ಕೆಲವು ಕಾರಣಗಳಿಂದ ಉಪಯೋಗಿಸಲಾಗದ ಪರಿಸ್ಥಿತಿ, ಹೀಗೆ ಹಲವು ಕಾರಣಗಳಿಂದ ವಿದ್ಯಾರ್ಥಿಗಳಿಗೆ ಸೀಮೆಎಣ್ಣೆ ದೀಪವೆ ಗತಿ ಎಂಬುದು ಅರಿವಾಗಿತ್ತು. ಹೀಗಾಗಿ ಸೌರವಿದ್ಯುತ್ ಘಟಕಗಳು ಇಲ್ಲಿಗೆ ಸರಿಹೊಂದುತ್ತವೆಂಬುದನ್ನು ಕಂಡುಕೊಂಡ ಜಾಗೃತಿ ತಂಡ ವಿದ್ಯಾರ್ಥಿಗಳ ಮನೆಗಳಿಗೆ ಸೌರವಿದ್ಯುತ್ ಸಂಪರ್ಕ ಕಲ್ಪಿಸಲು ಕಾರ್ಯಕ್ರಮದ ರೂಪುರೇಷೆ ಸಿದ್ದ ಪಡಿಸಿತು.

ಸಿದ್ಧವಾದವು ಸೌರ ವಿದ್ಯುತ್ ದೀಪಗಳು: ಮೂರು ವಿದ್ಯುತ್ ಬಲ್ಬ್ ಗಳು ಸತತ ಆರು ಘಂಟೆಗಳಷ್ಟು ಉರಿಯುವಂತಹ ಸೌರಫಲಕಗಳು, ಸುಲಭವಾಗಿ ಬಳಸಲು ಸಾಧ್ಯವಾಗುವ ವಿದ್ಯುತ್ ಉಪಕರಣಗಳು ಮನೆಯ ಮೂರು ಕೋಣೆಯನ್ನು ಬೆಳಗಲು – ತ್ರಿವಳಿ ಸೌರದೀಪ (ಬಲ್ಬ್)ಗಳು ನಾಲ್ಕು ವಾರಗಳಲ್ಲಿ ಸಿದ್ದಗೊಂಡವು.

ಸೂರ್ಲಬ್ಬಿ ಗ್ರಾಮಕ್ಕೆ ತೆರಳಿದ ಜಾಗೃತಿ ಮತ್ತು ಸಿಸ್ಕೋ ಸಂಸ್ಥೆಗಳ ಸದಸ್ಯರು ಸೌರಘಟಕ, ಬಲ್ಬ್, ಅವಶ್ಯಕ ಸಾಮಾಗ್ರಿಗಳೊಂದಿಗೆ ವಿದ್ಯುತ್ ದೀಪ ಸೌಲಭ್ಯ ವಂಚಿತ ಮನೆಗಳಿಗೆ ತೆರಳಿ ಅಳವಡಿಸಿಕೊಟ್ಟರಲ್ಲದೇ ಅದನ್ನು ಉಪಯೋಗಿಸುವ ಬಗ್ಗೆ ಮಾಹಿತಿ ನೀಡಿದರು.

ಮಕ್ಕಳಲ್ಲಿ ಅರಳಿದ ನಗುಮೊಗದ ಚಿತ್ತಾರ: ವಿದ್ಯಾರ್ಥಿಗಳಿಗಾಗಿ ಸಿದ್ದಪಡಿಸಿದ ಸೌರ ವಿದ್ಯುತ್ ದೀಪದ ವ್ಯವಸ್ಥೆ ಇಡೀ ಕುಟುಂಬಕ್ಕೆ ಸಹಾಯವಾಗುವಂತಾಯಿತು. ವಿದ್ಯುತ್ ದೀಪವನ್ನೇ ಕಾಣದ ಮಕ್ಕಳ ಮುದ್ದು ಮುಖಗಳು ಸೌರದೀಪದ ಬೆಳಕಿನಲ್ಲಿ ನಗುಮುಖಕ್ಕೆ ತಿರುಗಿದ್ದು ಜಾಗೃತಿ ಸಂಸ್ಥೆಯ ಸ್ಪೂರ್ತಿಚೇತನ ಕಾರ್ಯಕ್ರಮಕ್ಕೆ ಸಾಫಲ್ಯತೆಯನ್ನು ತಂದು ಕೊಟ್ಟಿದೆ.