ಸೂರ್ಯನ ಆರಾಧನೆಯ ಪುಣ್ಯಕಾಲ

| ಮಂಡಗದ್ದೆ ಪ್ರಕಾಶ ಬಾಬು

ಪ್ರತಿವರ್ಷ ರಥಸಪ್ತಮಿ ಬರುವುದು ಮಾಘಮಾಸ ಶುಕ್ಲಪಕ್ಷದ ಸಪ್ತಮಿಯಂದು (ಏಳನೆಯ ದಿನ). ಅದು ಸೂರ್ಯಾರಾಧನೆಗೆ ವಿಶೇಷ ಪರ್ವದಿನ. ಸೂರ್ಯನು ಉತ್ತರಾಭಿಮುಖವಾಗಿ ಸಮಭಾಜಕ ರೇಖೆಯನ್ನು ಹಾದುಹೋಗುವ ಸಮಯ. ಇಲ್ಲಿಂದ ಹಗಲು ಮತ್ತು ರಾತ್ರಿಯು ಸಮಪ್ರಮಾಣದಲ್ಲಿರುತ್ತದೆ. ಈ ರಥಸಪ್ತಮಿಗಿಂತ ಕೆಲವು ದಿನಗಳ ಹಿಂದಿನಿಂದ ಶಿಶಿರಋತು ಆರಂಭವಾಗುತ್ತದೆ. ಸೂರ್ಯನ ಉಷ್ಣತೆಯೂ ಹೆಚ್ಚುತ್ತದೆ.

ಅರುಣನು ಸಾರಥಿಯಾಗಿ ಏಳು ಕುದುರೆಗಳಿಂದ ಎಳೆಯಲ್ಪಡುತ್ತಿರುವ ರಥದಲ್ಲಿ ಸೂರ್ಯನು ಉಲ್ಲಾಸದಿಂದ ವಿರಾಜಿಸಿದ್ದಾನೆಂದು ಪುರಾಣ ತಿಳಿಸುತ್ತದೆ. ಈ ಏಳು ಕುದುರೆಗಳು ಏಳು ಬಣ್ಣಗಳ ಸ್ವರೂಪ ಎಂದು ಹೇಳುತ್ತಾರೆ. ಈ ಸೂರ್ಯನಾರಾಯಣನನ್ನು ಬ್ರಹ್ಮ, ವಿಷ್ಣು, ಮಹೇಶ್ವರ ಎಂದು ವೇದಗಳು ವರ್ಣಿಸುತ್ತವೆ. ಸೂರ್ಯಮಂಡಲವನ್ನು ಋಗ್ವೇದ ಎಂದೂ, ಅದರಲ್ಲಿರುವ ಜ್ವಾಲೆಯನ್ನು ಸಾಮವೇದ ಎಂದೂ ಛಾಂದೋಗ್ಯೇಪನಿಷತ್ ವಿವರಿಸುತ್ತದೆ. ಅಲ್ಲದೆ ಸೂರ್ಯನ ಆತ್ಮ ಮನುಷ್ಯನ ಆತ್ಮ ಎರಡೂ ಒಂದೇ ಎಂದು ತೈತ್ತಿರೀಯ ಉಪನಿಷತ್ ತಿಳಿಸುತ್ತದೆ. ದೇವಲೋಕಕ್ಕೆ ಸೇರಿಕೊಳ್ಳಬೇಕೆಂದರೆ ಈ ಅರುಣನೇ ಸಿಂಹದ್ವಾರ ಎಂದು ಮಹಾಭಾರತದಲ್ಲಿ ಹೇಳಿದೆ. ಈ ಸೂರ್ಯ ಸಾಕ್ಷಾತ್ ಶ್ರೀಮನ್ನಾರಾಯಣ ಪ್ರತಿರೂಪ. ಈತನನ್ನು ನಾವು ತ್ರಿಕಾಲಸಂಧ್ಯೆಗಳಲ್ಲಿ ಆರಾಧಿಸಬೇಕು. ಸೂರ್ಯನು ಉದಯ ಆಗುತ್ತಿರುವಾಗ, ನೆತ್ತಿಯ ಮೇಲೆ ಬಂದಾಗ (ಮಧ್ಯಾಹ್ನ 12ಕ್ಕೆ) ಹಾಗೂ ಸಂಜೆ ಸೂರ್ಯ ಅಸ್ತನಾಗುತ್ತಿರುವಾಗ ಸಂಧ್ಯಾವಂದನೆಯನ್ನು ಮಾಡಿ ಆತನಿಗೆ ಅಘರ್Âವನ್ನು ನೀಡಬೇಕು. ಆಗ ಆತನಿಂದ ತೇಜಸ್ಸು, ಬಲ, ಆಯಸ್ಸು, ಹಾಗೂ ನೇತ್ರಕಾಂತಿ ಲಭಿಸುತ್ತದೆ. ಅಲ್ಲದೆ ಈತನನ್ನು ಆರಾಧಿಸುವುದರಿಂದ ಆಪತ್ತಿನಿಂದ ಸಾತ್ವಿಕತೆಯ ಕಡೆಗೆ, ತಮಸ್ಸಿನಿಂದ ಬೆಳಕಿನಡೆಗೆ, ಮೃತ್ಯುವಿನಿಂದ ಅಮರತ್ವದ ಕಡೆಗೆ ಹೋಗುವ ಪ್ರೇರಣೆ ಲಭಿಸುತ್ತದೆ.

ಈ ಸೂರ್ಯನಿಗೆ ಇನ್ನೊಂದು ಹೆಸರು ಕೂಡ ಇದೆ. ಅದೇ ‘ಸವಿತಾ’ ಎಂದು. ಸವಿತಾ ಎಂದರೆ ಬುದ್ಧಿಗೆ ಪ್ರೇರಣೆ ಕೊಡುವವನು ಎಂದರ್ಥ. ಅದಕ್ಕಾಗಿಯೇ ಗಾಯತ್ರಿಮಂತ್ರದಲ್ಲಿ ‘ಧಿಯೋ ಯೋ ನಃ ಪ್ರಚೋದಯಾತ್’ ಎಂದು ಹೇಳಿರುವುದು. ಬ್ರಹ್ಮವಿದ್ಯೆ, ಮಹಾವಿದ್ಯೆಗಳು ಈ ಸೂರ್ಯೋಪಾಸನೆಯಿಂದ ಬಂದದ್ದು.

ಸೂರ್ಯನ ಕುಟುಂಬ: ಸೂರ್ಯನ ಪತ್ನಿಯರು ಸಂಜ್ಞಾ, ರಾಜ್ಞಿ ಮತ್ತು ಪ್ರಭೆ. ಸಂಜ್ಞೆ ಸೂರ್ಯನ ಪ್ರಖರತೆಯನ್ನು ತಾಳಲಾರದೆ ರೂಪಾಂತರ ಹೊಂದಿ ಛಾಯಾದೇವಿ ಆದಳು. ಸೂರ್ಯನಿಗೆ ಸಂಜ್ಞಾದೇವಿಯಲ್ಲಿ ಮನು, ಯಮ, ಯಮುನೆಯರು; ಛಾಯಾದೇವಿಯಲ್ಲಿ ಸಾವರ್ಣಿ, ಶನೈಶ್ಚರ, ತಪತಿ ಮತ್ತು ವಿಷ್ಟಿಯರೂ ಮಕ್ಕಳು. ಸೂರ್ಯನನ್ನು ಆದಿತ್ಯ, ದಿವಾಕರ, ಸವಿತ, ಅರ್ಕ, ಭಾನು, ಭಾಸ್ಕರ ಹೀಗೆ ಅನೇಕ ಹೆಸರುಗಳಿಂದ ಕರೆಯುತ್ತಾರೆ.

ಆದಿತ್ಯಹೃದಯ ಸ್ತೋತ್ರವನ್ನು ಪಠಿಸಿದ್ದರಿಂದ ಶ್ರೀರಾಮನು ರಾವಣನ ವಿರುದ್ಧ ವಿಜಯ ಸಾಧಿಸಿದ. ಮಹಾಯೋಗಿ ಯಾಜ್ಞವಲ್ಕ ್ಯ ಮಹರ್ಷಿಗಳಿಗೆ ಈ ಸೂರ್ಯನಿಂದಲೇ ಬ್ರಹ್ಮವಿದ್ಯೆ ಅನುಗ್ರಹಿಸಲ್ಪಟ್ಟಿದ್ದು. ಹನುಮಂತನೂ ಸಹ ಸೂರ್ಯನಿಂದ ಹಲವಾರು ವಿದ್ಯೆಗಳನ್ನು ಕಲಿತನು. ಶ್ರೀಕೃಷ್ಣನ ಮಗನಾದ ಸಾಂಬ ಮಾಡಿದ ಸೂರ್ಯೋಪಾಸನೆ ಜಗತ್ತಿಗೆ ಪ್ರಸಿದ್ಧವಾಗಿದೆ. ರಾಮಾಯಣದಲ್ಲಿ ಸೂರ್ಯನನ್ನು ಸುಗ್ರೀವನ ತಂದೆ ಎನ್ನಲಾಗಿದೆ. ಮಹಾಭಾರತದಲ್ಲಿ ದೂರ್ವಾಸಮುನಿಗಳು ಕುಂತಿಗೆ ಬೋಧಿಸಿದ ಮಂತ್ರದ ಪ್ರಭಾವದಿಂದ ಸೂರ್ಯ ಆಕೆಗೆ ನೀಡಿದ ಪುತ್ರನೇ ಕರ್ಣ.

ಪ್ರತಿದಿನ ಸೂರ್ಯನಮಸ್ಕಾರ ಮಾಡುವುದರಿಂದ ನಮ್ಮ ಜೀರ್ಣಶಕ್ತಿ ಹೆಚ್ಚುತ್ತದೆ. ನರಮಂಡಲ ಚೇತನಗೊಳ್ಳುತ್ತದೆ. ದೇಹದ ರಕ್ತ ಏರಿ ಚಲನೆ ಕ್ರಮಬದ್ಧವಾಗುತ್ತದೆ ಮತ್ತು ಚರ್ಮದ ಕಾಂತಿ ಹೆಚ್ಚುತ್ತದೆ. ಇತ್ತೀಚೆಗೆ ಮಧ್ಯಪ್ರದೇಶದ ರಾಜ್ಯದಲ್ಲಿ ಈ ಸೂರ್ಯನಮಸ್ಕಾರ ಒಂದು ದಾಖಲೆಯನ್ನು ಮಾಡಿತು. ಆ ಕಾರ್ಯಕ್ರಮಕ್ಕೆ ಅಲ್ಲಿನ ಸುಮಾರು 50 ಲಕ್ಷ ಶಾಲಾಮಕ್ಕಳು ಭಾಗಿಯಾಗಿದ್ದರು. ಈ ಸೂರ್ಯನಮಸ್ಕಾರ ಯೋಗಾಭ್ಯಾಸದ ಒಂದು ಪ್ರಮುಖ ಭಾಗವಾಗಿದೆ.

ಸೂರ್ಯನ ದೇವಾಲಯಗಳು

ಭಾರತದಲ್ಲಿ ಅನೇಕ ಸೂರ್ಯ ದೇವಾಲಯಗಳಿವೆ. ಮುಖ್ಯವಾದವು – 1) ಒರಿಸ್ಸಾದ ಕೊನಾರ್ಕ್. ಇಲ್ಲಿನ ದೇವಾಲಯವು ಸೂರ್ಯನ ರಥದ ಆಕಾರದಲ್ಲಿದೆ ಹಾಗೂ ಏಳು ಕುದುರೆಗಳಿಂದ ಎಳೆಯುತ್ತಿರುವ 12 ಜೊತೆ ಚಕ್ರಗಳಿಂದ ಕೂಡಿದೆ. ಇಲ್ಲಿ ನಾವು ಕಲಾತ್ಮಕವಾದ ಶಿಲ್ಪಕಲೆಗಳನ್ನು ನೋಡಬಹುದು.

2) ತಮಿಳುನಾಡಿನ ಕುಂಭಕೋಣಂಗೆ 22 ಕಿ.ಮೀ ದೂರದಲ್ಲಿರುವ ಸೂರ್ಯನಾರ್ ಕೋಯಿಲ್. 3) ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯ ಅರಸಳ್ಳಿ ಎಂಬಲ್ಲಿ ಸೂರ್ಯನ ಕಿರಣಗಳು ರಥಸಪ್ತಮಿಯ ದಿನ ಸೂರ್ಯನ ಪ್ರತಿಮೆಯ ಮೇಲೆ ಬೀಳುವ ಹಾಗೆ ಕೆತ್ತಲಾಗಿದೆ. ಇವೆಲ್ಲಕ್ಕಿಂತ ಮುಖ್ಯವಾಗಿ ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿನ ಶ್ರೀ ವಿದ್ಯಾಶಂಕರ ದೇವಾಲಯ. ಇಲ್ಲಿ ಕೆತ್ತನೆಯ 12 ಕಲ್ಲಿನ ಕಂಬಗಳಿವೆ. ಒಂದೊಂದರ ಮೇಲೂ 12 ರಾಶಿಗಳನ್ನು ಕೆತ್ತಲಾಗಿದೆ. ಸೌರಮಾನಗಳಲ್ಲಿ ಸೂರ್ಯನ ಕಿರಣಗಳು ಆಯಾ ತಿಂಗಳು ಆಯಾ ರಾಶಿಯ ಕಂಬದ ಮೇಲೆ ಬೀಳುವಂತೆ ಕೆತ್ತಲಾಗಿದೆ.

ಈ ಕಂಬಗಳು ವಾಸ್ತುಶಿಲ್ಪದ ಪರಿಣತಿಗೆ ಸಾಕ್ಷ್ಯಳಾಗಿವೆ. ರಥಸಪ್ತಮಿಯಂದು ಅರುಣೋದಯ ಸಮಯದಲ್ಲಿ ಏಳು ಎಕ್ಕದ ಎಲೆಯನ್ನು ನಮ್ಮ ದೇಹದ ಮೇಲೆ ಇಟ್ಟುಕೊಂಡು ಸೂರ್ಯನನ್ನು ಧ್ಯಾನಿಸುತ್ತಾ ಸ್ನಾನಮಾಡಬೇಕು. ನಂತರ ಪ್ರತ್ಯಕ್ಷದೇವನಾದ ಸೂರ್ಯನನ್ನು ಪೂಜಿಸಬೇಕು. ಈ ರೀತಿ ಪೂಜಿಸಿದರೆ ಕೀರ್ತಿ, ಶೌರ್ಯ, ತೇಜಸ್ಸು, ಆಯುಷ್ಯ ಅನುಗ್ರಹಿಸಲ್ಪಡುತ್ತದೆ.

ಈ ಆಚರಣೆ ಏಕೆ?

ಶ್ರೀಕೃಷ್ಣನು ಯುಧಿಷ್ಠಿರನಿಗೆ ರಥಸಪ್ತಮಿಯ ಮಹತ್ವವನ್ನು ವಿವರಿಸಿದ ಕಥೆಯಿದೆ. ಯಶೋವರ್ಮನೆಂಬ ರಾಜನ ಮಗನು ಹುಟ್ಟಿನಿಂದಲೇ ರೋಗಿಷ್ಠನಾಗಿದ್ದ. ಸಂಚಿತ ಕರ್ಮದಿಂದ ಬಂದಿರುವ ಈ ಕಾಯಿಲೆಯ ನಿವಾರಣೆಗೆ ರಥಸಪ್ತಮಿ ವ್ರತವನ್ನು ಆಚರಿಸಲು ಜ್ಯೋತಿಷಿಗಳು ಸೂಚಿಸಿದ್ದರು. ಅದರಂತೆ ರಥಸಪ್ತಮಿಯ ದಿನ ಸೂರ್ಯಾರಾಧನೆ ಮಾಡಲಾಗಿ ರಾಜಪುತ್ರನು ಆರೋಗ್ಯವಂತನಾದನು. ಪಾಂಡವರು ವನವಾಸಕಾಲದಲ್ಲಿ ಕೃಷ್ಣನ ಆದೇಶದಂತೆ ಸೂರ್ಯಾರಾಧನೆ ಮಾಡಿ ಅಕ್ಷಯಪಾತ್ರೆ ಪಡೆದಿದ್ದರು. ಸೂರ್ಯಾರಾಧನೆ ಮಾಡಿ, ಚಿನ್ನ ನೀಡುವ ಶಮಂತಕಮಣಿಯನ್ನು ಪಡೆದ ಸತ್ರಾಜಿತನ ಕಥೆ ಹರಿವಂಶದಲ್ಲಿದೆ. ಮಯೂರನೆಂಬ ಕವಿ ಸೂರ್ಯಶತಕವೆಂಬ ಗ್ರಂಥವನ್ನು ರಚಿಸಿ ದೃಷ್ಟಿಶಕ್ತಿಯನ್ನು ಮತ್ತೆ ಪಡೆದನೆನ್ನುತ್ತಾರೆ. ವ್ಯಕ್ತಿಯ ಜನ್ಮಕುಂಡಲಿಯಲ್ಲಿ ಸೂರ್ಯನು ಬಲಹೀನನಾಗಿದ್ದರೆ ಅಥವಾ ಷಡ್ಬಲವಿರದಿದ್ದರೆ ರಥಸಪ್ತಮಿಯಂದು ಸೂರ್ಯಾರಾಧನೆ ಮಾಡುವುದು ಉತ್ತಮ. ಭಾರತ, ಮಧ್ಯ ಆಫ್ರಿಕಾ, ಈಜಿಪ್ಟ್, ಗ್ರೀಸ್ ಹಾಗೂ ಮಧ್ಯ ಏಷ್ಯಾಗಳಲ್ಲಿ ಸೂರ್ಯರಾಧನೆ ಆಚರಣೆಯಲ್ಲಿದೆ.

(ಲೇಖಕರು ಆಧ್ಯಾತ್ಮಿಕ ಚಿಂತಕರು)