ಸೂರಿನ ಹೆಸರಲ್ಲಿ ಮೋಸದ ಚೂರಿ!

ಲಕ್ಷ್ಮೇಶ್ವರ:ಹೆಣ್ಣೊಂದು ಕಲಿತರೆ ಶಾಲೆಯೊಂದನ್ನು ತೆರೆದಂತೆ ಎನ್ನುವ ಗಾದೆ ಮಾತೊಂದಿದೆ. ಆದರೆ, ಕಲಿತ ಹೆಣ್ಣು ಮಗಳೊಬ್ಬಳು ಸಾವಿರಾರು ಮುಗ್ಧರನ್ನು ವಂಚಿಸಿದ ಪ್ರಕರಣ ವರಿಯಾಗಿದೆ.

ವಾಸ್ತವ್ಯಕ್ಕೆ ಸೂರಿನ ಆಸೆ ತೋರಿಸಿ, ನಂಬಿಸಿ ಚಾಲಾಕಿತನದಿಂದ ಕೋಟ್ಯಂತರ ರೂ. ಪೀಕಿದ ಘಟನೆ ಲಕ್ಷ್ಮೇಶ್ವರ ಪಟ್ಟಣದಲ್ಲಿ ಮಂಗಳವಾರ ಬೆಳಕಿಗೆ ಬಂದಿದೆ. ಕಲಬುರಗಿ ಮೂಲದ ಶರಣಮ್ಮ ಶ್ರೀನಿವಾಸ ಕವಲದಾರ ಎಂಬ ಮಹಿಳೆಯೇ ಮಹಾ ವಂಚಕಿ. ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಮನೆ ಕೊಡಿಸುವುದಾಗಿ 3 ಸಾವಿರಕ್ಕೂ ಹೆಚ್ಚು ಜನರಿಂದ ಕೋಟ್ಯಂತರ ರೂ. ಸಂಗ್ರಹಿಸಿದ್ದಾಳೆ . ಸುಮಾ ಎಂದು ಹೆಸರು ಬದಲಾಯಿಸಿಕೊಂಡು ಲಕ್ಷ್ಮೇಶ್ವರದ ಅಂಚೆ ಕಚೇರಿ ಎದುರಿನ ಕಟ್ಟಡವೊಂದರಲ್ಲಿ ಪ್ರಿಯದರ್ಶಿನಿ ಸಹಕಾರಿ ಸಂಘ (ರ.ನಂ-ಎಆರ್ 18/ಆರ್​ಎಸ್​ಆರ್/ ನೋಂದಣಿ/ 51098/2018-19) ಆರಂಭಿಸಿದ್ದಾಳೆ. ಈ ಸಂಘದ ಹೆಸರಿನಲ್ಲಿ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಮನೆ ಕೊಡಿಸುವುದಾಗಿ ನಕಲಿ ಬಾಂಡ್, ರಸೀದಿ ಸೃಷ್ಟಿಸಿ ತಲಾ ಒಬ್ಬರಿಂದ 4500 ರೂ. ಪಡೆದಿದ್ದಾಳೆ. ಇಷ್ಟೇ ಅಲ್ಲದೆ, ಕುರಿ ಸಾಕಾಣಿಕೆ, ಪ್ರಿಯದರ್ಶಿನಿ ಹೆಸರಿನ ವಿವಿಧ ಸಂಘಗಳಿಗೆ ಸದಸ್ಯರನ್ನಾಗಿಸಲು ಸಾವಿರಾರು ಶೇರು ಸಂಗ್ರಹ ಸೇರಿ ಸರ್ಕಾರದ ಯೋಜನೆಗಳನ್ನು ಕೊಡಿಸುತ್ತೇನೆಂದು ಸಾರ್ವಜನಿಕರಿಂದ ಹಣ ಪಡೆದಿದ್ದಾಳೆ.

ಗದಗ, ಹಾವೇರಿ, ಧಾರವಾಡ ಜಿಲ್ಲೆಗಳಿಂದ ಈ ಮಹಿಳೆ ಸುಮಾರು 3 ಸಾವಿರಕ್ಕೂ ಹೆಚ್ಚು ಜನರಿಂದ 1 ಕೋಟಿ ರೂ.ಗಳಿಗೂ ಹೆಚ್ಚು ಹಣ ಪೀಕಿದ್ದಾಳೆ. ಒಂದು ವರ್ಷದಿಂದ ಲಕ್ಷ್ಮೇಶ್ವರವನ್ನು ಕೇಂದ್ರ ಸ್ಥಾನವನ್ನಾಗಿಸಿಕೊಂಡು ಮುಗ್ಧ ಹೆಣ್ಣುಮಕ್ಕಳು, ಕೂಲಿಕಾರರು, ಅಂಧರು, ಬಡವರನ್ನೇ ಗುರಿಯಾಗಿಸಿಕೊಂಡು ಈ ಕೃತ್ಯ ಎಸಗಿದ್ದಾಳೆ. ಮೇಲ್ನೋಟಕ್ಕೆ ರಾಜಾರೋಷವಾಗಿಯೇ ಜನರಿಂದ ಹಣ ಸುಲಿಗೆ ಮಾಡಿದ ಈ ಮಹಿಳೆಯ ಕೃತ್ಯದ ಹಿಂದೆ ಭಾರೀ ವಂಚಕರ ಜಾಲವೇ ಇರಬಹುದೆಂದು ಶಂಕಿಸಲಾಗಿದೆ.

ಹಣ ತುಂಬಿ ವರ್ಷವಾದರೂ ಮನೆ ದೊರೆಯದ ಕುರಿತು ಪುರಸಭೆಗೆ ತೆರಳಿ ವಿಚಾರಿಸಿದಾಗ ಈ ಕೃತ್ಯ ಬಯಲಾಗಿದೆ. ಮೋಸಕ್ಕೊಳಗಾದ ಎಲ್ಲರೂ ವಂಚಕಿಯನ್ನು ಪುರಸಭೆಗೆ ಕರೆತಂದು ವಿಚಾರಣೆಗೊಳಪಡಿಸಿದ್ದಾರೆ. ಆದರೆ, ಈ ಮಹಿಳೆಗೂ ಪುರಸಭೆಗೂ ಯಾವುದೇ ಸಂಬಂಧವಿಲ್ಲ ಎಂದು ಪುರಸಭೆಯವರು ಜಾರಿಕೊಳ್ಳುತ್ತಿದ್ದಾರೆ. ಇದರಿಂದ ರೊಚ್ಚಿಗೆದ್ದ ಮಹಿಳೆಯರು ವಂಚಕಿಯನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡು ಪೊಲೀಸರಿಗೆ ಒಪ್ಪಿಸಿದ್ದಾರೆ.

ಈ ಸುದ್ದಿ ಹರಡುತ್ತಿದ್ದಂತೆಯೇ ಲಕ್ಷ್ಮೇಶ್ವರ, ದೊಡ್ಡೂರ, ಪುಟಗಾಂವ್ ಬಡ್ನಿ, ಬೆಳ್ಳಟ್ಟಿ, ನಾದಿಗಟ್ಟಿ, ನೆಲೂಗಲ್, ಚಿಕ್ಕ ಸವಣೂರ, ಸೂರಣಗಿ, ಹುಲ್ಲೂರ, ಶಿಗ್ಲಿ, ಬಾಲೆಹೊಸೂರ, ಅಮರಾಪುರ, ಸಂಕದಾಳ ಸೇರಿ ಅನೇಕ ಗ್ರಾಮಗಳ ಮಹಿಳೆ ಪೊಲೀಸ್ ಠಾಣೆಗೆ ದೌಡಾಯಿಸಿದ್ದಾರೆ.

ಮೋಸಹೋದವರು:

ಅವರಲ್ಲಿ ರೇಣವ್ವ ಹೊನಕೇರಿ, ಶಂಕ್ರಮ್ಮ ಹಿರೇಮಠ, ಅನಸವ್ವ ಮರಿಹೊಳಲಣ್ಣವರ, ನಿರ್ಮಲ ಅಗಸಿಬಾಗಿಲ, ಯಲ್ಲಪ್ಪ ಪೂಜಾರ, ಹಾಲಮ್ಮ ಮಡಿವಾಳರ, ಚನ್ನವ್ವ ಗೌರಿ, ಮಲ್ಲಮ್ಮ ಪಟ್ಟೇದ, ಮಹಾದೇವಕ್ಕ ಪಾಟೀಲ, ಕೋಟೆಪ್ಪ ಕೊಪ್ಪದ, ಅಶೋಕ ಕರೆಕೊಪ್ಪದ, ಮಾಂತೇಶ ಕಡಕೋಳ ಮಂಜುನಾಥ ಕಡಕೋಳ ಪ್ರಮುಖರಾಗಿದ್ದಾರೆ. ಪರಿಸ್ಥಿತಿ ಅರಿತ ಪೊಲೀಸರು ವಂಚಕಿಯನ್ನು ವಿಚಾರಣೆಗೊಳಪಡಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪುಟಗಾಂವ್ ಬಡ್ನಿ ಗ್ರಾಮದ ಅಂಧ ಮಹಿಳೆ ಶೇಖವ್ವ ಅವರು, ಚಾಲಾಕಿ ಮಹಿಳೆಯ ಮಾತಿಗೆ ಮರುಳಾಗಿ ಮನೆಗಾಗಿ 4500 ರೂ., ಸಂಘದ ಸದಸ್ಯತ್ವಕ್ಕಾಗಿ 10 ಸಾವಿರ ರೂ. ಕೊಟ್ಟಿದ್ದಾಳೆ. ಈಗ ಇತ್ತ ಮನೆಯೂ ಇಲ್ಲ, ದುಡ್ಡೂ ವಾಪಸ್ ಬರುವ ಲಕ್ಷಣವೂ ಇಲ್ಲದೆ ಕಂಗಾಲಾಗಿದ್ದಾಳೆ. ಹಾಲಪ್ಪ ಗೌರಿ, ಗಂಗಾಧರ ಹೆಬ್ಬಳ್ಳಿ ಎಂಬುವರಿಗೆ ಕುರಿ ಸಾಕಾಣಿಕೆಗೆ 2 ಲಕ್ಷ ರೂ. ಸಾಲ ಕೊಡಿಸುವುದಾಗಿ ಪ್ರತಿಯೊಬ್ಬರಿಂದ 15 ಸಾವಿರ ರೂ. ವಸೂಲಿ ಮಾಡಿದ್ದಾಳೆ.

ಮಂಗಳ ಸೂತ್ರ ಹರಿದಳು!

ಪ್ರಧಾನಿ ಮೋದಿ ಹೆಸರು ಹೇಳಿ ಮನೆ ಕೊಡಿಸುತ್ತೇನೆ ಎಂದು ನಂಬಿಸಿ, ನಾನು ಸೇರಿ ಅನೇಕ ಮಹಿಳೆಯರಿಂದ ದುಡ್ಡು ಪಡೆದಿದ್ದಾಳೆ. ಕೇಳಿದರೆ ಏನಾದರೊಂದು ಕುಂಟು ನೆಪ ಹೇಳುತ್ತ ಕಾಲ ದೂಡುತ್ತಿದ್ದಾಳೆ. ಇದರಿಂದ ಸಂಶಯ ಬಂದು ಪುರಸಭೆಯಲ್ಲಿ ವಿಚಾರಿಸಿದಾಗ ಮೋಸ ಗೊತ್ತಾಗಿದೆ. ಈ ಕುರಿತು ವಂಚಕಿಯನ್ನು ಪ್ರಶ್ನಿಸಲಾಗಿ ಹಲ್ಲೆ ಮಾಡಿ ಮಂಗಳ ಸೂತ್ರ ಹರಿದಿದ್ದಾಳೆ. ಈ ವಿಷಯ ಬಹಿರಂಗ ಪಡಿಸಿರುವ ನಿನ್ನನ್ನು ನೋಡಿಕೊಳ್ಳುತ್ತೇನೆ ಎಂದು ಜೀವ ಬೆದರಿಕೆ ಹಾಕಿದ್ದಾಳೆ ಎಂದು ಲಕ್ಷ್ಮೇಶ್ವರ ಚಹಾದಂಗಡಿಯ ಶಿವಲೀಲಾ ಗೊಂಡಬಾಳ ಬಿಕ್ಕಿ ಬಿಕ್ಕಿ ಅಳುತ್ತ ಗೋಳು ತೋಡಿಕೊಂಡರು.

ಖಾಸಗಿ ಸಹಕಾರಿ ಸಂಘವೊಂದರ ಹೆಸರಿನಲ್ಲಿ ಪಿಎಂಎವೈ ಯೋಜನೆಯಡಿ ಮನೆ ಕೊಡಿಸುವುದಾಗಿ ಹೇಳಿ ಹಣ ಲಪಟಾಯಿಸಿರುವ ಪ್ರಕರಣಕ್ಕೂ ಪುರಸಭೆಗೆ ಯಾವುದೇ ಸಂಬಂಧವಿಲ್ಲ. ಮೋಸಕ್ಕೊಳಗಾದವರು ಪುರಸಭೆಗೆ ಬಂದು ಪ್ರಶ್ನಿಸಿದಾಗಲೇ ಗಮನಕ್ಕೆ ಬಂದಿದೆ. ಈ ಕೂಡಲೇ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದೆ. ಸಾರ್ವಜನಿಕರು ಸರ್ಕಾರ ಯೋಜನೆಗೆ ಸಂಬಂಧಪಟ್ಟಂತೆ ನೇರವಾಗಿ ಪುರಸಭೆಯೊಂದಿಗೆ ವ್ಯವಹರಿಸಬೇಕು.

| ರವೀಂದ್ರ ಬಾಗಲಕೋಟ ಪುರಸಭೆ ಮುಖ್ಯಾಧಿಕಾರಿ