ಸೂಪರ್ ಕಿಂಗ್ಸ್ ಬೇಟೆಯಾಡಿದ ಈಗಲ್ಸ್ !

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಇಲ್ಲಿನ ಕೆಬಿಎನ್ ಟರ್ಫ ಮೈದಾನದಲ್ಲಿ ಆಯೋಜಿಸಿದ ಕೆಬಿಎನ್ ಪ್ರೀಮಿಯರ್ ಲೀಗ್ ಟಿ-20 ಕ್ರಿಕೆಟ್ ಟೂರ್ನಾಮೆಂಟ್ನ ಕ್ವಾಲಿಫೈಯರ್-2 ಪಂದ್ಯದಲ್ಲಿ ಸ್ಟೇಶನ್ ಈಗಲ್ಸ್ ಗೆಲುವು ಸಾಧಿಸುವ ಮೂಲಕ ಫೈನಲ್ ತಲುಪಿದೆ. ಇದರೊಂದಿಗೆ ಭಾನುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ರೌಜಾ ಸ್ಟಾರ್ಸ್ ತಂಡದೊಂದಿಗೆ ಟ್ರೋಫಿಗಾಗಿ ಸೆಣಸಾಟ ನಡೆಸಲಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಸ್ಟೇಶನ್ ಈಗಲ್ಸ್ 19.2 ಓವರ್ನಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು ಕೇವಲ 88 ರನ್ಗಳಿಸಿತು. ನೋಮಾನ್(20 ರನ್), ಲಖನ್ ಗವಾಡೆ (19 ರನ್) ಉತ್ತಮ ಬ್ಯಾಟಿಂಗ್ ಮಾಡಿದರೆ, ಇನ್ನುಳಿದ 9 ಬ್ಯಾಟ್ಸ್ಮನ್ಗಳು ಒಂದಂಕಿ ಮೊತ್ತಕ್ಕೆ ಔಟ್ ಆಗಿ ನಿರಾಸೆ ಮೂಡಿಸಿದರು. ಮಾರ್ಕೆಟ್ ಸೂಪರ್ ಕಿಂಗ್ಸ್ ಪರ ಬೌಲಿಂಗ್ನಲ್ಲಿ ಖೂಷ್ರೋ ಅಹ್ಮದ್ ಅಲಿ ಅನ್ಸಾರಿ (3 ವಿಕೆಟ್), ಆಸಿಫ್ ಸಿಕಂದರ್ (2 ವಿಕೆಟ್) ಮಾರಕ ಬೌಲಿಂಗ್ ಮಾಡಿದರು.

89 ರನ್ಗಳ ಸಾಧಾರಣ ಗುರಿ ಬೆನ್ನಟ್ಟಿದ ಮಾಕರ್ೆಟ್ ಸೂಪರ್ ಕಿಂಗ್ಸ್ ಬ್ಯಾಟ್ಸ್ಮನ್ಗಳ ಕಳಪೆ ಬ್ಯಾಟಿಂಗ್ನಿಂದ ಫೈನಲ್ ತಲುಪುವ ಅವಕಾಶ ಕೈ ಚೆಲ್ಲಿತು. 15.3 ಓವರ್ನಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು ಕೇವಲ 65 ರನ್ಗಳಿಸಿ 23 ರನ್ಗಳ ಅಂತರದಿಂದ ಸೋಲನುಭವಿಸಿ ಟೂರ್ನಿಯಿಂದ ಹೊರನಡೆಯಿತು. ಸಂತೋಶ ಮಟ್ಟಿ (31 ರನ್) ಹೊರತು ಪಡಿಸಿ ಇನ್ನಾವ ಬ್ಯಾಟ್ಸ್ಮನ್ ಸಹ ಈಗಲ್ಸ್ ತಂಡದ ಬೌಲರ್ಸ್ಗಳನ್ನು ಎದುರಿಸಲೇ ಇಲ್ಲ. 4 ದಾಂಡಿಗರು ಒಂದಂಕಿ ಮೊತ್ತಕ್ಕೆ ಔಟ್ ಆದರೆ, 5 ಆಟಗಾರರು ಸೊನ್ನೆ ಸುತ್ತಿದರು. ಸ್ಟೇಶನ್ ಈಗಲ್ಸ್ ಪರ ಶರಣ ಪಾಟೀಲ್ (6 ವಿಕೆಟ್) ಮಾರಕ ಬೌಲಿಂಗ್ ಮಾಡಿದರೆ, ಶ್ರೀನಿವಾಸ ಕಾಂತಿ 3 ವಿಕೆಟ್ ಪಡೆದು ಸಾಥ್ ನೀಡಿದರು. ಈ ಮೂಲಕ ತಂಡವನ್ನು ಫೈನಲ್ ತಲುಪಿಸುವಲ್ಲಿ ಯಶಸ್ವಿಯಾದರು.

ಶರಣ ಪಾಟೀಲ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಬಾಜನರಾದರು.