ಸೂಚನೆ ಬಳಿಕ ಬಿತ್ತನೆ ಬೀಜ ವಿತರಣೆ

ಮಂಡ್ಯ: ಕಾವೇರಿ ನೀರಾವರಿ ಸಲಹಾ ಸಮಿತಿ ಸೂಚನೆ ಬಳಿಕ ರೈತರಿಗೆ ಬಿತ್ತನೆ ಬೀಜ ವಿತರಿಸಲಾಗುವುದು ಎಂದು ಜಂಟಿ ಕೃಷಿ ನಿರ್ದೇಶಕಿ ರಾಜಸುಲೋಚನಾ ತಿಳಿಸಿದರು.

ನಗರದ ಜಿಲ್ಲಾ ಪಂಚಾಯಿತಿಯ ಕಾವೇರಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಾವೇದ್ ಅಖ್ತರ್ ಅಧ್ಯಕ್ಷತೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ (ಕೆಡಿಪಿ)ಯಲ್ಲಿ ಮಾತನಾಡಿ, ನಾಲೆಗಳಿಗೆ ನೀರು ಹರಿಸುವ ಕುರಿತು ಸ್ಪಷ್ಟ ತೀರ್ಮಾನ ಕೈಗೊಳ್ಳುವವರೆಗೆ ರೈತರಿಗೆ ಬಿತ್ತನೆ ಬೀಜ ನೀಡಲಾಗುವುದಿಲ್ಲ. ಇಲಾಖೆಯಲ್ಲಿ ಬಿತ್ತನೆ ಬೀಜ, ರಸಗೊಬ್ಬರಕ್ಕೆ ಯಾವುದೇ ಕೊರತೆ ಇಲ್ಲ ಎಂದು ಸಭೆಗೆ ವಿವರಿಸಿದರು.

ಜಿಲ್ಲೆಯಲ್ಲಿ ಮದ್ದೂರು, ಮಳವಳ್ಳಿ ತಾಲೂಕು ಹೊರತುಪಡಿಸಿ ಉಳಿದ ಐದು ತಾಲೂಕನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಈ ತಾಲೂಕಲ್ಲಿ ಬೆಳೆ ನಷ್ಟ ಸಮೀಕ್ಷೆಯನ್ನು ಪ್ರಾಯೋಗಿಕವಾಗಿ ಆರಂಭಿಸಲಾಗಿದೆ. ಶ್ರೀರಂಗಪಟ್ಟಣ, ಪಾಂಡವಪುರದಲ್ಲಿ ಸಮೀಕ್ಷಾ ಕಾರ್ಯ ಪ್ರಗತಿಯಲ್ಲಿದೆ. ಕಂದಾಯ ಹಾಗೂ ಕೃಷಿ ಇಲಾಖೆ ಜಂಟಿಯಾಗಿ ಸಮೀಕ್ಷಾ ಕಾರ್ಯ ನಡೆಸುತ್ತಿದೆ ಎಂದರು.

ಸರ್ವೇ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಸುತ್ತಾ, ಜನರಿಂದ ಹಣ ವಸೂಲಿ ಮಾಡುತ್ತಾ ಪೋರ್ಜರಿ ಸಹಿ ನಡೆಸಿದ ಆರೋಪದ ಮೇರೆಗೆ ಪರವಾನಗಿ ಪಡೆದ 18 ಭೂಮಾಪಕರು ಹಾಗೂ 34 ಜನ ಸರ್ಕಾರಿ ಭೂ ಮಾಪಕರನ್ನು ಶಿಸ್ತುಕ್ರಮಕ್ಕೆ ಒಳಪಡಿಸಲಾಗಿದೆ ಎಂದು ಸರ್ವೇ ಇಲಾಖೆ ಉಪ ನಿರ್ದೇಶಕಿ ಹೇಮಲತಾ ಸಭೆಗೆ ಮಾಹಿತಿ ನೀಡಿದರು.

ಒಂದೇ ಹಂತದಲ್ಲಿ ಲಸಿಕೆ:
ಡಿಎಚ್‌ಒ ಡಾ.ಮಂಚೇಗೌಡ ಮಾತನಾಡಿ, ಈ ಬಾರಿ ಪಲ್ಸ್ ಪೋಲಿಯೊ ಕಾರ್ಯಕ್ರಮವನ್ನು ಒಂದೇ ಹಂತದಲ್ಲಿ ಪೂರ್ಣಗೊಳಿಸಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಕಳೆದ ವರ್ಷ 1.35 ಲಕ್ಷ ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿತ್ತು. ಆ ವೇಳೆ ನಿರೀಕ್ಷೆಗೂ ಮೀರಿ 1.41 ಲಕ್ಷ ಮಕ್ಕಳಿಗೆ ಲಸಿಕೆ ಹಾಕಲಾಗಿದೆ. ಈ ವರ್ಷವೂ ಅದೇ ಗುರಿಯೊಂದಿಗೆ ಲಸಿಕಾ ಕಾರ್ಯಕ್ಕೆ 723 ಬೂತ್ ತೆರೆಯಲು ಸಿದ್ಧತೆ ನಡೆಸಲಾಗಿದೆ. ಇನ್ನು ಕರ್ನಾಟಕದಲ್ಲಿ 2007ರಿಂದ ಪೋಲಿಯೊಗೆ ತುತ್ತಾದ ಪ್ರಕರಣ ವರದಿಯಾಗಿಲ್ಲ. ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಲ್ಲಿ 23 ಪೋಲಿಯೊ ಪ್ರಕರಣ ವರದಿಯಾಗಿವೆ. ಅಲ್ಲಿ ರೋಗ ಸಂಪೂರ್ಣ ಮರೆಯಾಗುವವರೆಗೂ ಕಾರ್ಯಕ್ರಮ ಮುಂದುವರಿಸಲಾಗುವುದು ಎಂದರು.

ಕಾರ್ಯಪಾಲಕ ಇಂಜಿನಿಯರ್ ಬಸವರಾಜು ಮಾತನಾಡಿ, ನಾಗಮಂಗಲ ತಾಲೂಕಿನ 18 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸಲಾಗುತ್ತಿದೆ. ಪ್ರತಿದಿನ 38 ಟ್ರಿಪ್‌ಗಳಲ್ಲಿ ನೀರೊದಗಿಸಲಾಗುತ್ತಿದೆ. ಇನ್ನು ನಾಗಮಂಗಲ ತಾಲೂಕಿನ ಏಳು, ಕೆ.ಆರ್.ಪೇಟೆ ಎರಡು ಮತ್ತು ಮದ್ದೂರು ತಾಲೂಕಿನ ಒಂದು ಗ್ರಾಮಕ್ಕೆ ಖಾಸಗಿ ಕೊಳವೆಬಾವಿ ಮೂಲಕ ನೀರು ಪೂರೈಸಲಾಗುತ್ತಿದೆ ಎಂದು ಹೇಳಿದರು.
ಸಭೆಯಲ್ಲಿ ಜಿಪಂ ಅಧ್ಯಕ್ಷೆ ನಾಗರತ್ನ ಸ್ವಾಮಿ, ಉಪಾಧ್ಯಕ್ಷೆ ಗಾಯತ್ರಿ, ಸಿಇಒ ಕೆ. ಯಾಲಕ್ಕಿಗೌಡ, ಕಾವೇರಿ ನೀರಾವರಿ ನಿಗಮದ ಅಧೀಕ್ಷಕ ಇಂಜಿನಿಯರ್ ರಮೇಂದ್ರ ಇದ್ದರು.

ನಿದ್ರೆಗೆ ಜಾರಿದ ಅಧಿಕಾರಿಗೆ ತರಾಟೆ
ಸಭೆ ನಡೆಯುವ ವೇಳೆ ನಿದ್ರೆಗೆ ಜಾರುವುದರ ಜತೆಗೆ ಮೊಬೈಲ್ ಸಂಭಾಷಣೆ ನಡೆಸುತ್ತಿದ್ದ ಹಿರಿಯ ಭೂವಿಜ್ಞಾನಿ ನಾಗಭೂಷಣ್‌ಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಾವೇದ್ ಅಖ್ತರ್ ತರಾಟೆ ತೆಗೆದುಕೊಂಡಿದಲ್ಲದೆ, ನೋಟಿಸ್ ಜಾರಿಗೊಳಿಸುವಂತೆ ಸಿಇಒಗೆ ಸೂಚಿಸಿದರು.

ತಾವು ಕುಳಿತಿದ್ದ ಆಸನದಲ್ಲೇ ನಾಗಭೂಷಣ್ ನಿದ್ರೆಗೆ ಜಾರುತ್ತಿದ್ದರು. ಮಾಧ್ಯಮದವರು ನಿದ್ರೆ ಮಾಡುತ್ತಿದ್ದ ದೃಶ್ಯ ಸೆರೆಹಿಡಿದರೂ ಎಚ್ಚೆತ್ತುಕೊಳ್ಳಲಿಲ್ಲ. ಇದನ್ನು ಸೂಕ್ಷ್ಮವಾಗಿ ಗಮನಿಸಿದ ಸಿಇಒ, ರೀ, ನಾಗಭೂಷಣ್ ನಿದ್ರೆ ಮಾಡಬೇಡ್ರಿ. ಒಮ್ಮೆ ಫೋನ್‌ನಲ್ಲಿ ಮಾತನಾಡ್ತೀರಿ, ಇನ್ನೊಮ್ಮೆ ನಿದ್ರೆ ಮಾಡ್ತೀರಿ. ಸ್ವಲ್ಪ ಈ ಕಡೆ ಗಮನ ಇರಲಿ ಅಂತ ಎಚ್ಚರಿಸಿದರು. ಆದರೂ, ಅಧಿಕಾರಿ ಅದೇ ಚಾಳಿ ಮುಂದುವರಿಸಿದರು.

ಈ ವೇಳೆ ಜಾವೇದ್ ಅಖ್ತರ್, ನೋಟಿಸ್ ಜಾರಿ ಮಾಡಿ ವಿಚಾರಣಾ ಪ್ರಕ್ರಿಯೆ ಆರಂಭಿಸಿ. ವರದಿಯನ್ನು ಅವರ ಇಲಾಖೆ ಮೇಲಧಿಕಾರಿಗೆ ಕಳುಹಿಸಿ. ದಂಡ ವಿಧಿಸುವಂತೆ ಸೂಚಿಸಿದರು. ನಾವೇ ದೂರವಾಣಿ ಕರೆ ಸ್ವೀಕರಿಸದೆ ಸಭೆಯಲ್ಲಿ ತೊಡಗಿಸಿಕೊಂಡಿದ್ದೇವೆ. ಅವರಿಗೆ ಸಭೆಯ ಗಂಭೀರತೆ ಇಲ್ಲ. ಈ ಬಗ್ಗೆ ಕ್ರಮ ವಹಿಸಿ ಎಂದಾಗ, ನಾಗಭೂಷಣ್ ಎದ್ದು ನಿಂತು ಸಾರಿ ಸರ್ ಎಂದರು.

ಕಾಮಗಾರಿ ಆರಂಭಿಸಿಲ್ಲ
ಕೆಡಿಸಿ ಸಮಿತಿ ಸದಸ್ಯ ರಮೇಶ್ ಮಿಶ್ರಾ ಮಾತನಾಡಿ, ಚೀರನಹಳ್ಳಿ ಸರ್ಕಾರಿ ಶಾಲೆ ಕಟ್ಟಡ ದುರಸ್ತಿಗೆ ಸಂಬಂಧಿಸಿದಂತೆ 15 ಲಕ್ಷ ರೂ. ಅನುದಾನ ಬಿಡುಗಡೆಯಾಗಿ ಮೂರು ವರ್ಷವಾಗಿದೆ. ಆದರೂ, ಲ್ಯಾಂಡ್ ಆರ್ಮಿ ಇಲಾಖೆ ಅಧಿಕಾರಿಗಳು ಕಾಮಗಾರಿ ಪ್ರಾರಂಭಿಸಿಲ್ಲ. ಈ ಬಗ್ಗೆ ಹಲವು ಬಾರಿ ಗಮನಕ್ಕೆ ತಂದರೂ ಸ್ಪಂದಿಸುತ್ತಿಲ್ಲ. ರಾಜಕೀಯ ಕಾರಣಕ್ಕೆ ಅಧಿಕಾರಿಗಳು ಈ ರೀತಿ ವರ್ತಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಾವೇದ್ ಅಖ್ತರ್, ಏನೇ ಸಮಸ್ಯೆ ಇದ್ದರೂ ಪರಿಹರಿಸಿಕೊಳ್ಳಬೇಕು. ಜ.29ರಂದು ನಡೆಯುವ ಸಭೆಗೆ ಬರುವ ಮುನ್ನ ಕಾಮಗಾರಿ ಪ್ರಾರಂಭಿಸಿ ವರದಿ ನೀಡುವಂತೆ ಅಧಿಕಾರಿಗೆ ಸೂಚನೆ ನೀಡಿದರು.