ಸೂಕ್ಷ, ಅತಿ ಸೂಕ್ಷ್ಮ ಮತಗಟ್ಟೆಗಳಿಗೆ ಎಸ್‌ಪಿ ಭೇಟಿ

ವಿವಿಧೆಡೆ ಮೂಲಸೌಕರ್ಯ ಪರಿಶೀಲನೆ

ವಿಜಯವಾಣಿ ಸುದ್ದಿಜಾಲ ಕೊಳ್ಳೇಗಾಲ
ಪಟ್ಟಣ ಪೊಲೀಸ್ ಠಾಣೆ ಸೇರಿದಂತೆ ಗ್ರಾಮಾಂತರ ಠಾಣಾ ವ್ಯಾಪ್ತಿಯ ಶಾಲೆಗಳಲ್ಲಿ ಸಾರ್ವತ್ರಿಕ ಲೋಕಾಸಭಾ ಚುನಾವಣೆ ಹಿನ್ನೆಲೆ ಗುರುತಿಸಿರುವ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಮತಗಟ್ಟೆಗಳಿಗೆ ಸೋಮವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ ಭೇಟಿ ನೀಡಿ ಪರಿಶೀಲಿಸಿದರು.
ಪಟ್ಟಣದ ಭೀಮನಗರ ಬಡಾವಣೆಯಲ್ಲಿರುವ ರಮಾಬಾಯಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸೇರಿದಂತೆ ಚಿಲ್ಟ್ರನ್ ಪಾರ್ಕ್ ಪಕ್ಕದಲ್ಲಿರುವ ಟೌನ್ ಹಿರಿಯ ಪ್ರಾಥಮಿಕ ಶಾಲೆ, ದೇವಾಂಗಪೇಟೆಯಲ್ಲಿರುವ ಶ್ರೀ ಚೌಡೇಶ್ವರಿ ಶಾಲೆ ಹಾಗೂ ತಾಲೂಕಿನ ಕುಣಗಳ್ಳಿ ಸರ್ಕಾರಿ ಶಾಲೆಯಲ್ಲಿ ಚುನಾವಣೆಗೆ ಗುರುತಿಸಿರುವ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಮತಗಟ್ಟೆಗಳಿಗೆ ಧರ್ಮೇಂದ್ರ ಕುಮಾರ್ ಮೀನಾ, ಡಿವೈಎಸ್ಪಿ ಪುಟ್ಟಮಾದಯ್ಯ, ಸಿಪಿಐ ಶ್ರೀಕಾಂತ್, ಪಿಎಸೈ ವೀಣಾನಾಯಕ್ ಅವರೊಂದಿಗೆ ಭೇಟಿ ನೀಡಿದ್ದರು.
ಇದೇ ವೇಳೆ ಮತಗಟ್ಟೆಗಳಲ್ಲಿ ದೊರೆಯುವ ಸೌಕರ್ಯ, ಯಾವ ಕೋಮಿನ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಲು ಬರಲಿದ್ದಾರೆ. ಯಾವ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಈ ಭಾಗದಲ್ಲಿ ಪ್ರಬಲವಾಗಿದ್ದಾರೆ. ಗುಂಪು ಘರ್ಷಣೆಗಳಿಗೆ ಅವಕಾಶವಿದೆಯೇ? ಹಿಂದೆಲ್ಲ ನಡೆದಿರುವ ಶೇಕಡವಾರು ಮತದಾನದ ಮಾಹಿತಿ ಸೇರಿದಂತೆ ಮುಂದೆ ಕೈಗೊಳ್ಳಬೇಕಾದ ಅಗತ್ಯ ಪೊಲೀಸ್ ಬಂದೋಬಸ್ತ್ ಬಗ್ಗೆ ಎಸ್ಪಿ ಸ್ಥಳದಲ್ಲಿಯೇ ಮಾಹಿತಿ ಸಂಗ್ರಹಿಸಿದರು.
ನಂತರ ತಮ್ಮನ್ನು ಭೇಟಿ ಮಾಡಿದ ಸುದ್ಧಿಗಾರರೊಂದಿಗೆ ಮಾತನಾಡಿ ಧರ್ಮೇಂದ್ರ ಕುಮಾರ್ ಮೀನಾ, ಶಾಂತಿಯುತ ಮತದಾನಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಚುನಾವಣಾ ಅಕ್ರಮ ಮತ್ತು ಶಾಂತಿ ಭಂಗವನ್ನು ಸಹಿಸಲಾಗದು. ಚುನಾವಣೆ ವೇಳೆ ಗೊಂದಲವನ್ನುಂಟು ಮಾಡುವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಅಂತೆಯೇ, ಮತದಾರ ಪ್ರಭುಗಳು ಮುಕ್ತವಾಗಿ ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಲು ಎಲ್ಲ ರೀತಿಯ ರಕ್ಷಣೆ ಮತ್ತು ಸೌಕರ್ಯ ಕಲ್ಪಿಸಲಾಗುತ್ತದೆ ಎಂದರು.
ಜಿಲ್ಲೆಯ ಎಲ್ಲ ತಾಲೂಕಿನಲ್ಲಿರುವ ಆಯ್ದ ಸೂಕ್ಷ್ಮ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಲಾಗುತ್ತಿದೆ. ಯಳಂದೂರು ಭಾಗದಲ್ಲಿ 6 ಮತಗಟ್ಟೆಗಳಿಗೆ ಭೇಟಿ ನೀಡಲಾಗಿದೆ. ಕೊಳ್ಳೇಗಾಲ ಭಾಗದಲ್ಲಿ ಪ್ರವಾಸ ನಡೆಸಿದ ಬಳಿಕ ಗುಂಡ್ಲುಪೇಟೆ ಮತ್ತು ಚಾಮರಾಜನಗರ ಭಾಗದಲ್ಲಿ ಮತಗಟ್ಟೆಗಳಿಗೆ ಭೇಟಿ ನೀಡಲಿದ್ದೇನೆ. ಕಡ್ಡಾಯ ಮತದಾನಕ್ಕೆ ಎಲ್ಲರೂ ಮನಸ್ಸು ಮಾಡಬೇಕು. ಚುನಾವಣೆ ಮಾದರಿ ನೀತಿ ಸಂಹಿತೆಯನ್ನು ಎಲ್ಲರೂ ಪಾಲಿಸಬೇಕು ಎಂದು ಕರೆ ನೀಡಿದರು.
ಸುಳವಾಡಿ ಶಿಕ್ಷೆ ಗ್ಯಾರಂಟಿ: ಸುಳವಾಡಿ ವಿಷ ಪ್ರಸಾದ ಪ್ರಕರಣದಲ್ಲಿ ಚೇತರಿಕೆ ಕಂಡ ನೂರಾರು ಅಸ್ವಸ್ಥರಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಕಾರ್ಯ ನಿರ್ವಹಿಸಿದೆ. ಬಂಧಿತ ನಾಲ್ವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದ್ದು, ಕಾಲ ಮಿತಿಯೊಳಗೆ ನ್ಯಾಯಾಲಯಕ್ಕೆ ಪ್ರಕರಣದ ಚಾರ್ಜ್ ಶೀಟ್ ಅನ್ನು ಶನಿವಾರ ಸಲ್ಲಿಸಿದ್ದಾರೆ. 332 ಸಾಕ್ಷಿ ಸೇರಿದಂತೆ ವೈಜ್ಞಾನಿಕ ಸಾಕ್ಷಿಗಳನ್ನೊಳಗೊಂಡ 6163 ಪುಟಗಳ ವರದಿಯನ್ನು ನ್ಯಾಯಾಲಯಕ್ಕೆ ನೀಡಲಾಗಿದೆ. ಇದಕ್ಕೂ ಮೊದಲು ನುರಿತ ಸರ್ಕಾರಿ ಅಭಿಯೋಜಕರಿಂದ ಚಾರ್ಜ್‌ಶೀಟ್ ಪರಿಶೀಲನೆ ನಡೆಸಲಾಗಿದೆ. ಆರೋಪಿಗಳು ಪ್ರಕರಣದಿಂದ ಯಾವುದೇ ಕಾರಣಕ್ಕೂ ತಪ್ಪಿಸಿಕೊಳ್ಳದಂತೆ ಮೊಬೈಲ್ ಮಾಹಿತಿ, ಸಿಡಿಆರ್, ಎಫ್‌ಎಸ್‌ಎಲ್, ಮರೋಣೋತ್ತರ ಪರೀಕ್ಷೆ, ಅಸ್ವಸ್ಥರ ದೃಡಿಕರಣ ಪತ್ರಗಳನ್ನು ನ್ಯಾಯಾಲಯಕ್ಕೆ ನೀಡಿದ್ದು, ಆರೋಪಿಗಳಿಗೆ ಶಿಕ್ಷೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಶ್ರಮಿಸಿದವರಿಗೆ ಬಹುಮಾನ: ಸುಳವಾಡಿ ವಿಷ ಪ್ರಸಾದ ಪ್ರಕರಣದಲ್ಲಿ ಆರೋಪಿಗಳನ್ನು ಪತ್ತೆಯಚ್ಚುವಲ್ಲಿ 50ಕ್ಕೂ ಹೆಚ್ಚು ಪೊಲೀಸರು ಶ್ರಮಿಸಿದ್ದಾರೆ. ಅವರೆಲ್ಲರಿಗೆ ಈಗಾಗಲೇ ಇಲಾಖೆಯಿಂದ ಪ್ರಶಂಸನಿಯ ಪತ್ರ ನೀಡಲಾಗಿದೆ. ಅಗತ್ಯ ಬಹುಮಾನ ನೀಡುವ ಸಂಬಂಧ ಡಿಜಿಪಿ ಅವರಿಗೆ ಪಟ್ಟಿ ಕಳುಹಿಸಲಾಗಿದೆ. ಅನುಮತಿ ದೊರೆತ ತಕ್ಷಣ ಸೂಕ್ತ ಬಹುಮಾನ ನೀಡಿ ಪ್ರೋತ್ಸಾಹಿಸಲಾಗುವುದು. ಈ ನಡುವೆ ಘಟನೆ ನಡೆದ 3 ತಿಂಗಳೊಳಗೆ ಯಶಸ್ವಿಯಾಗಿ ಪ್ರಕರಣ ಭೇದಿಸಿ ನ್ಯಾಯಾಲಯಕ್ಕೆ ವರದಿ ನೀಡಿರುವ ತನಿಖಾಧಿಕಾರಿ ಡಿವೈಎಸ್ಪಿ ಪುಟ್ಟಮಾದಯ್ಯ ನೇತೃತ್ವದ ತಂಡದ ಮೇಲೆ ಗೌರವವಿದೆ ಎಂದರು.

18ಕೆಜಿಎಲ್-2
ಪೋಟೋ ಶೀರ್ಷಿಕೆ:
ಕೊಳ್ಳೇಗಾಲ ಪಟ್ಟಣದ ಭೀಮನಗರದ ಸರ್ಕಾರಿ ಶಾಲೆಯಲ್ಲಿ ಗುರುತಿಸಿರುವ ಮತಗಟ್ಟೆ ಸ್ಥಳವನ್ನು ಸೋಮವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ ಪರಿಶೀಲಿಸಿದರು.