ಸೂಕ್ಷ್ಮ ಮತಗಟ್ಟೆಗಳಿಗೆ ಸಿಸಿ ಕ್ಯಾಮರಾ

ಗದಗ:ಪ್ರಸಕ್ತ ಲೋಕಸಭೆ ಚುನಾವಣೆಯ ಮತದಾನಕ್ಕೆ ಜಿಲ್ಲಾ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಕಲ್ಪಿಸಿದೆ. ಸೂಕ್ಷ್ಮ ಮತಗಟ್ಟೆಗಳಿಗೆ ವಿಶೇಷ ಪಡೆ, ಸಿಸಿ ಕ್ಯಾಮರಾ ಅಳವಡಿಸಿ ಮತದಾರರು ನಿರ್ಭೀತಿಯಿಂದ ಮತದಾನ ಮಾಡಲು ಅನುಕೂಲ ಕಲ್ಪಿಸಿದೆ.

ಜಿಲ್ಲೆಯ ನಾಲ್ಕು ವಿಧಾನಸಭೆ ಕ್ಷೇತ್ರಗಳ ಪೈಕಿ ಗದಗ ವಿಧಾನಸಭೆ ಕ್ಷೇತ್ರದಲ್ಲಿ ಮುಖಂಡರ ಪ್ರಚಾರ ಗಮನ ಸೆಳೆಯಿತು. ಕಳೆದ ಐದು ದಶಕಗಳಿಂದ ಹುಲಕೋಟಿಯಲ್ಲಿ ಕಾಂಗ್ರೆಸ್ ಹೊರತುಪಡಿಸಿ ಅನ್ಯಪಕ್ಷಗಳ ಪ್ರಚಾರಕ್ಕೆ ಆಸ್ಪದ ನೀಡಿರಲಿಲ್ಲ. ಆದರೆ, ಈ ಚುನಾವಣೆಯಲ್ಲಿ ಬಿಜೆಪಿ ಮುಖಂಡ ಅನಿಲ ಮೆಣಸಿನಕಾಯಿ ನೇತೃತ್ವದಲ್ಲಿ ಪಕ್ಷದ ಕಾರ್ಯಕರ್ತರು ಹುಲಕೋಟಿಯಲ್ಲಿ ಮನೆಮನೆಗೆ ಭೇಟಿ ನೀಡಿ ಪ್ರಚಾರ ಮಾಡಿದರು.

ಈ ಹಿಂದೆ ಹುಲಕೋಟಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಮಾಜಿ ಸಿಎಂ ಜಗದೀಶ ಶೆಟ್ಟರ್, ಕೆ.ಎಸ್. ಈಶ್ವರಪ್ಪ ಸೇರಿ ಪಕ್ಷದ ಮುಖಂಡರಿಗೆ ಚುನಾವಣೆ ಸಂದರ್ಭದಲ್ಲಿ ಪ್ರಚಾರ ಮಾಡಲು ಅವಕಾಶವನ್ನೇ ನೀಡಿರಲಿಲ್ಲ. ಚುನಾವಣೆ ಪ್ರಚಾರಕ್ಕೆ ತೆರಳುವ ಅನ್ಯ ಪಕ್ಷಗಳ ಮುಖಂಡರಿಗೆ ಬೆದರಿಕೆ ಹಾಕುವುದು, ಅಡ್ಡಿಪಡಿಸುವುದು, ಪ್ರಚಾರ ಮಾಡಬಾರದು ಎಂದು ಪ್ರತಿಭಟಿಸಲಾಗುತ್ತಿತ್ತು. ಈ ಬಾರಿ ಬಿಜೆಪಿ ಯುವ ಮುಖಂಡರು ಹುಲಕೋಟಿಗೆ ತೆರಳಿ ಶಾಂತಿಯುತ ಪ್ರಚಾರ ಮಾಡಿದರು. ಕಾಂಗ್ರೆಸ್ ಮುಖಂಡರು ಪ್ರಚಾರಕ್ಕೆ ಸಹಕರಿಸಿ ಪ್ರಜಾಪ್ರಭುತ್ವ ಮೌಲ್ಯವನ್ನು ಎತ್ತಿ ಹಿಡಿದಿದ್ದು ಪ್ರಶಂಸೆಗೆ ಪಾತ್ರವಾಯಿತು.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹುಲಕೋಟಿ ಸೇರಿ ಕೆಲವು ಗ್ರಾಮಗಳಲ್ಲಿ ನಕಲಿ ಮತದಾನ ನಡೆಯಿತು ಎಂಬ ಆರೋಪವಿದೆ. ಈ ಹಿನ್ನೆಲೆಯಲ್ಲಿ ಹುಲಕೋಟಿ ಮತಗಟ್ಟೆಗೆ ಸಿಸಿ ಕ್ಯಾಮರಾ ಅಳವಡಿಸಬೇಕೆಂಬ ಬಿಜೆಪಿ ಮನವಿಗೆ ಜಿಲ್ಲಾಡಳಿತ ಪುರಸ್ಕರಿಸಿದೆ. ಹುಲಕೋಟಿ ಮತಗಟ್ಟೆಯಲ್ಲಿ ಸಿಸಿ ಕ್ಯಾಮರಾ ಅಳವಡಿಸಿ, ವಿಶೇಷ ಭದ್ರತೆಯನ್ನೂ ನೀಡಿದೆ.

Leave a Reply

Your email address will not be published. Required fields are marked *