ಸೂಕ್ತ ಚಿಕಿತ್ಸೆ ಸಿಗದಿದ್ದಕ್ಕೆ ಪ್ರತಿಭಟನೆ

ರೋಣ: ಸರಿಯಾಗಿ ಚಿಕಿತ್ಸೆ ದೊರೆಯುತ್ತಿಲ್ಲ ಎಂಬುದು ಹೊರರೋಗಿಗಳ ನಿತ್ಯ ಆರೋಪ. ನನ್ನೊಬ್ಬಳಿಂದಲೇ ರೋಗಿಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ ಎಂಬ ಅಳಲು ವೈದ್ಯೆಯೊಬ್ಬಳ್ಳದ್ದು. ಇದು ಪ್ರತಿದಿನದ ಪಡಿಪಾಟಲು.

ಇದರಿಂದ ಬೇಸತ್ತ ಹೊರರೋಗಿಗಳು ಏಕಾಏಕಿ ಶನಿವಾರ ಪ್ರತಿಭಟನೆ ನಡೆಸಿದಾಗ ವೈದ್ಯೆ ಎನ್.ಎನ್. ನಾಶಿಪುಡಿ ಸಾಥ್ ನೀಡಿದರು.

ಪಂ. ಭೀಮಸೇನ ಜೋಶಿ 100 ಹಾಸಿಗೆಯ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ನಿತ್ಯ ಇನ್ನೂರಕ್ಕೂ ಹೆಚ್ಚು ಹೊರರೋಗಿಗಳು ಚಿಕಿತ್ಸೆಗಾಗಿ ಬರುತ್ತಾರೆ. ರೋಗಿಗಳ ಸಂಖ್ಯೆ ಹೆಚ್ಚಿರುವುದರಿಂದ ಪ್ರತಿ ದಿನ ನಾಲ್ವರು ವೈದ್ಯರು ಕಡ್ಡಾಯವಾಗಿ ಕೆಲಸ ನಿರ್ವಹಿಸಬೇಕು. ಅಂಥದ್ದರಲ್ಲಿ ಡಾ. ಎನ್.ಎನ್. ನಾಶಿಪುಡಿ ಅವರನ್ನು ಹೊರತುಪಡಿಸಿ ಇನ್ನು ಮೂವರು ವೈದ್ಯರು ಗೈರಾಗಿದ್ದಾರೆ. ಪರಿಣಾಮ ಡಾ. ನಾಶಿಪುಡಿ ಅವರಿಗೆ ರೋಗಿಗಳನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲ. ಹೀಗಾಗಿ ಸಂಬಂಧಪಟ್ಟ ವೈದ್ಯರನ್ನು ದೂರವಾಣಿ ಮೂಲಕ ಸಂರ್ಪಸಿ ಕೂಡಲೆ ಆಸ್ಪತ್ರೆಗೆ ಆಗಮಿಸುವಂತೆ ವಿನಂತಿಸಿದರೂ ಸ್ಪಂದಿಸಲಿಲ್ಲ. ಇದು ಒಂದೇ ದಿನದ ಕಥೆಯಲ್ಲ. ಪ್ರತಿದಿನದ ವ್ಯಥೆ. ಹೀಗಾಗಿ ರೋಸಿ ಹೋದ ಡಾ. ನಾಶಿಪುಡಿ ಅವರು ಆಸ್ಪತ್ರೆ ಮುಂದೆ ಪ್ರತಿಭಟಿಸುತ್ತಿದ್ದ ಹೊರರೋಗಿಗಳಿಗೆ ಸಾಥ್ ನೀಡಿದರು.

ಹಿಂದೆ ಈ ಆಸ್ಪತ್ರೆ ಜಿಲ್ಲೆಗೆ ಮಾದರಿಯಾಗಿತ್ತು. ಇಲ್ಲಿನ ವೈದ್ಯರ ಉತ್ತಮ ಸೇವೆಯಿಂದ ತಾಲೂಕಿನ 15ಕ್ಕೂ ಹೆಚ್ಚು ಗ್ರಾಮಗಳ ರೋಗಿಗಳು ಆಗಮಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ವೈದ್ಯರ ನಿರ್ಲಕ್ಷ್ಯಂದ ಆಸ್ಪತ್ರೆ ದುಸ್ಥಿತಿಗೆ ತಲುಪಿದೆ. ನನ್ನೊಬ್ಬಳಿಂದಲೇ 200ಕ್ಕೂ ಹೆಚ್ಚು ರೋಗಿಗಳನ್ನು ಸಂಭಾಳಿಸಲು ಹೇಗೆ ಸಾಧ್ಯ? ಇದರಿಂದ ರೋಸಿ ಹೋಗಿರುವೆ ಎಂದು ವೈದ್ಯ ಡಾ. ಎನ್.ಎನ್. ನಾಶಿಪುಡಿ ಆರೋಪಿಸಿದರು.

ಪ್ರತಿಭಟನೆಯಲ್ಲಿ ಹೊರರೋಗಿಗಳಾದ ಶೈನಾಜಬೀ ಮಾಟಲದಿನ್ನಿ, ಗಿರಿಜವ್ವ ನವಲಗುಂದ, ಗೌರಮ್ಮ ತಳ್ಳಿಕೇರಿ, ಸುಕನ್ಯಾ ಕೊಡಿಕೊಪ್ಪ, ಶೋಭಾ ಗಡ್ಡಿ, ನೂರಜಾನ್ ಬಳ್ಳಾರಿ, ಸುನಂದಾ ನೀಲಗುಂದ, ಸವಿತಾ ಹೂಗಾರ, ಸುವರ್ಣಾ ಇಟಗಿ, ಸುಧಾ ಕಮ್ಮಾರ, ಲಲಿತಾ ಹೊಸಮನಿ, ಇತರರಿದ್ದರು.

ಈ ಕುರಿತು ಪತ್ರಿಕೆಯು ಜಿಲ್ಲಾ ವೈದ್ಯಾಧಿಕಾರಿಗಳನ್ನು ದೂರವಾಣಿ ಮೂಲಕ ಸಂರ್ಪಸಿದರೆ, ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ಇದೆ. ನಂತರ ಮಾತನಾಡುವೆ ಎಂದು ಪ್ರತಿಕ್ರಿಯಿಸಿದರು.

ಬನ್ನಿ.. ನೈಸರ್ಗಿಕ ಮಾವು ತಿನ್ನಿ

ವಿಜಯವಾಣಿ ಸುದ್ದಿಜಾಲ ಧಾರವಾಡ

ನಗರದ ರೈಲ್ವೆ ಸ್ಟೇಶನ್ ರಸ್ತೆಯ ತೋಟಗಾರಿಕೆ ಇಲಾಖೆ ಆವರಣದಲ್ಲಿ ಹಣ್ಣುಗಳ ರಾಜ ಎಂದೇ ಪ್ರಸಿದ್ಧ ಪಡೆದ ಮಾವಿನ ಘಮಲು ಆವರಿಸಿದೆ. ಇಡೀ ಆವರಣದಲ್ಲಿ ಮಾವಿನ ಹಣ್ಣಿನ ಮಳಿಗೆಗಳು ತಲೆ ಎತ್ತಿದ್ದು, ಎತ್ತ ನೋಡಿದರೂ ಮಾವಿನ ಸೊಬಗು ಕಾಣುತ್ತಿದೆ. ಮಾವು ಪ್ರಿಯರು ತೋಟಗಾರಿಕೆ ಆವರಣದತ್ತ ದಾಂಗುಡಿ ಇಡುತ್ತಿದ್ದಾರೆ.

ಜಿಲ್ಲೆಯ ರೈತರಿಂದ ನೇರವಾಗಿ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಹಾಗೂ ನೈಸರ್ಗಿಕ ವಿಧಾನದಿಂದ ಮಾಗಿಸಿದ ಹಣ್ಣುಗಳನ್ನು ತಲುಪಿಸುವ ಉದ್ದೇಶದಿಂದ ತೋಟಗಾರಿಕೆ ಇಲಾಖೆ ಆವರಣದಲ್ಲಿ 5 ದಿನಗಳ ಕಾಲ ಹಮ್ಮಿಕೊಡಿರುವ ಮಾವು ಮೇಳಕ್ಕೆ ಜಿ.ಪಂ. ಸಿಇಒ ಡಾ. ಬಿ.ಸಿ. ಸತೀಶ ಶನಿವಾರ ಚಾಲನೆ ನೀಡಿದರು.

ನಂತರ ಆವರಣದಲ್ಲಿ ನಿರ್ವಿುಸಿರುವ ಸುಮಾರು 60 ಮಳಿಗೆಗಳಿಗೆ ಭೇಟಿ ನೀಡಿ, ರೈತರೊಂದಿಗೆ ಮಾವಿನ ಹಣ್ಣುಗಳ ವಿವಿಧ ತಳಿಗಳ ಬಗ್ಗೆ ಮಾಹಿತಿ ಪಡೆದು ಮಾವಿನ ರುಚಿ ಸವಿದರು. ಅವರಿಗೆ ಅಪರ ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ, ಜಿ.ಪಂ. ಅಧ್ಯಕ್ಷೆ ವಿಜಯಲಕ್ಷ್ಮೀ ಪಾಟೀಲ, ಹಾಪ್​ಕಾಮ್್ಸ ಆಡಳಿತ ಮಂಡಳಿ ಅಧ್ಯಕ್ಷ ಈಶ್ವರಚಂದ್ರ ಹೊಸಮನಿ, ಇತರರು ಸಾಥ್ ನೀಡಿದರು.

ನಂತರ ಡಾ. ಬಿ.ಸಿ. ಸತೀಶ ಮಾತನಾಡಿ, ಮಧ್ಯವರ್ತಿಗಳ ಹಾವಳಿ ತಪ್ಪಿಸಿ ರೈತರಿಂದ ನೇರವಾಗಿ ಗ್ರಾಹಕರಿಗೆ ಮಾವುಗಳನ್ನು ಮಾರಾಟ ಮಾಡಲು ಮೇಳ ಅನುಕೂಲವಾಗಿದೆ. ಪ್ರತಿ ವರ್ಷವೂ ರೈತರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮುಂದಿ ದಿನಗಳಲ್ಲಿ ಸಹ ಇನ್ನೂ ಹೆಚ್ಚಿನ ರೈತರು ಮೇಳದಲ್ಲಿ ಪಾಲ್ಗೊಳ್ಳುವಂತಾಗಲಿ ಎಂದು ಶುಭ ಹಾರೈಸಿದರು.

ಮಾವು ಮೇಳಕ್ಕೆ ಸಂಜೆ ಚಾಲನೆ ನೀಡಿದ್ದರೂ, ಗ್ರಾಹಕರು ಬೆಳಗ್ಗೆಯಿಂದಲೇ ಮೇಳಕ್ಕೆ ಆಗಮಿಸಿ ಖರೀದಿಯಲ್ಲಿ ತೊಡಗಿದ್ದರು. ಮಧ್ಯವರ್ತಿಗಳ ಹಾವಳಿ ಇಲ್ಲದೆ ನೈಸರ್ಗಿಕವಾಗಿ ಮಾಗಿದ ಮಾವುಗಳನ್ನು ಖರೀದಿಸಲು ಮೇಳ ಅನುಕೂಲವಾಗಿದೆ ಎಂಬ ಅಭಿಪ್ರಾಯವನ್ನು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ರಾಮಚಂದ್ರ ಮಡಿವಾಳ ವ್ಯಕ್ತಪಡಿಸಿದರು.

ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಡಾ.ರಾಮಚಂದ್ರ ಮಡಿವಾಳ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಪ್ರಶಾಂತ ಕುಲಕರ್ಣಿ, ಜಿಲ್ಲಾ ಹಾಪ್​ಕಾಮ್್ಸ ವ್ಯವಸ್ಥಾಪಕ ನಿರ್ದೇಶಕ ಪ್ರವೀಣ ಕಾಮಾಟಿ, ಡಿ.ಟಿ. ಪಾಟೀಲ, ಉಳವಪ್ಪ ದಾಸನೂರ, ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ ಶಿಲ್ಪಶ್ರೀ, ಅಧಿಕಾರಿಗಳು, ಸಿಬ್ಬಂದಿ, ಇತರರು ಇದ್ದರು.

45 ತಳಿಗಳು ಲಭ್ಯ

ತೋಟಗಾರಿಕೆ ಇಲಾಖೆಯಲ್ಲಿ ಅವಳವಡಿಸಿರುವ ಅಂದಾಜು 60 ಮಳಿಗೆಗಳಲ್ಲಿ ವಿವಿಧ ತಳಿಯ ಮಾವುಗಳ ಪ್ರದರ್ಶನ ಹಾಗೂ ಮಾರಾಟ ನಡೆಯಲಿದೆ. ಸುತ್ತಲಿನ ಗ್ರಾಮಗಳಾದ ಕೆಲಗೇರಿ, ಚಿಕ್ಕಮಲ್ಲಿಗವಾಡ, ಜೋಗೆಲ್ಲಾಪುರ, ತೇಗೂರ ಸೇರಿದಂತೆ ಜಿಲ್ಲೆಯ ಸುತ್ತಲಿನ ಗ್ರಾಮಗಳ ಜನರು ಪಾಲ್ಗೊಂಡಿದ್ದಾರೆ. ಆಪೂಸ್, ಕಲ್ಮಿ, ರುಮಾನಿ, ಅಲ್ಪಾನ್ಸೋ, ಸ್ವರ್ಣ ಜಹಾಂಗೀರ, ದಶೇಹರಿ, ನೀಲಂ, ಮಲ್ಲಿಕಾ, ಸಣ್ಣೆಲೆ, ವನರಾಜ ಸೇರಿ 45ಕ್ಕೂ ಹೆಚ್ಚು ಮಾವಿನ ಹಣ್ಣುಗಳ ಮಾರಾಟ ನಡೆಸಿದ್ದಾರೆ.

**********

ಬೆಣ್ಣಿಹಳ್ಳದ ಎರಡು ದಂಡೆ ತುಂಬ ಹರಿದ ನೀರು

ವಿಜಯವಾಣಿ ಸುದ್ದಿಜಾಲ ನವಲಗುಂದ

ಬೇಸಿಗೆಯಿಂದ ಬಸವಳಿದ ಜನತೆಗೆ ತಾಲೂಕಿನ ಮೇಲಿನ ಪ್ರದೇಶದ ವಿವಿಧೆಡೆ ಮತ್ತು ಗ್ರಾಮೀಣ ಪ್ರದೇಶದ ಕೆಲವು ಕಡೆ ಮಳೆ ಸುರಿದಿದ್ದರಿಂದ ಶುಕ್ರವಾರ ಬೆಣ್ಣಿಹಳ್ಳದ ಎರಡು ದಂಡೆ ತುಂಬ ನೀರು ಹರಿದು ಈ ಭಾಗದ ಜನರು ಕಣ್ತುಂಬಿಕೊಳ್ಳುವಂತಾಯಿತು.

ಬೆಣ್ಣಿಹಳ್ಳದಲ್ಲಿ ಮಳೆ ನೀರು ಹರಿದಿದ್ದರಿಂದ ಗ್ರಾಮೀಣ ಭಾಗದ ಜನ, ಜಾನುವಾರುಗಳಿಗೆ, ಪಶು, ಪಕ್ಷಿಗಳಿಗೆ, ನೀರಿನ ದಾಹ ಇಂಗುವಂತಾಯಿತು.

ಬೆಣ್ಣಿಹಳ್ಳಕ್ಕೆ ಸೇರುವ ತುಪ್ಪರಿಹಳ್ಳದಲ್ಲಿಯೂ ಮಳೆ ನೀರು ಹರಿದು ಬಂದಿದ್ದರಿಂದ ಬೆಣ್ಣಿಹಳ್ಳದಲ್ಲಿ ಹೆಚ್ಚಿನ ನೀರಿನ ಹರಿವು ಕಂಡು ಬಂದಿದೆ. ಇದರಿಂದ ಹಳ್ಳದ ದಂಡೆಗುಂಟ ಇರುವ ತೋಟಪಟ್ಟಿಯಲ್ಲಿ ಹಣ್ಣು, ಹಂಪಲು ಬೆಳೆದ ರೈತರಿಗೂ ಅನುಕೂಲವಾಗಿದೆ. ಗ್ರಾಮೀಣ ಜನರು ಜಾನುವಾರುಗಳಿಗಾಗಿ, ಕುಡಿಯುವ ನೀರಿಗಾಗಿ ಕೆರೆ, ಕೊಳ್ಳಗಳಿಗೆ ಹೋಗುವುದು ತಪ್ಪಿದಂತಾಗಿದೆ.

ನವಲಗುಂದ ಪ್ರದೇಶದಲ್ಲಿ ಮಳೆ ಕಡಿಮೆಯಾದರೂ, ಕುಂದಗೋಳ ಮತ್ತು ಹುಬ್ಬಳ್ಳಿ ಭಾಗದಲ್ಲಿ ಹೆಚ್ಚಿನ ಮಳೆ ಸುರಿದಿದ್ದರಿಂದ ಬೆಣ್ಣಿಹಳ್ಳದಲ್ಲಿ ನೀರು ಕಾಣಿಸಿಕೊಂಡಿದೆ. ಬಿಟ್ಟು ಬಿಡದೇ ಮಳೆ ಸುರಿದರೆ ಬೆಣ್ಣಿಹಳ್ಳದಲ್ಲಿ ಪ್ರವಾಹ ಸೃಷ್ಟಿಯಾಗುತ್ತದೆ. ಅದಕ್ಕಾಗಿ ಹಳ್ಳದ ಪಕ್ಕದಲ್ಲಿರುವ ತೋಟಗಾರಿಕೆ ಮತ್ತು ಭೂಮಿ ಉಳುಮೆ ಮಾಡುವ ರೈತರು ಎಚ್ಚರಿಕೆಯಿಂದ ಇರಬೇಕಾಗುತ್ತದೆ.

ಬೆಣ್ಣಿಹಳ್ಳದ ದಡದಲ್ಲಿರುವ ಜಮೀನುಗಳಲ್ಲಿ ಬೆಳೆ ಬೆಳೆದ ರೈತರ ಬೆಳೆಗಳು ಮಳೆಗಾಲ ಸಂದರ್ಭದಲ್ಲಿ ಪ್ರವಾಹದಿಂದ ಹಾನಿ ಅನುಭವಿಸುವ ಪರಿಸ್ಥಿತಿ ಎದುರಿಸಬೇಕಾಗುತ್ತದೆ. ಎರಡು ದಿನ ಸುರಿದ ಮಳೆಯಿಂದ ರೈತರಿಗೆ ಜಮೀನುಗಳನ್ನು ಹದಗೊಳಿಸಲು ಅನುಕೂಲವಾಗಿದೆ.

ಮಳೆ ಪ್ರಮಾಣದ ವಿವರ

ನವಲಗುಂದ ವ್ಯಾಪ್ತಿಯಲ್ಲಿ 27ಮಿಮೀ, ಮೊರಬ, ಯಮನೂರ, ಶಿರೂರ, ಶಿರಕೋಳ, ಗುಮ್ಮಗೋಳ, ಸಾಸ್ವಿಹಳ್ಳಿ ವ್ಯಾಪ್ತಿಯಲ್ಲಿ ಸರಾಸರಿ 34 ಮಿಮೀ ಮಳೆಯಾಗಿದೆ. ಅದರಂತೆ ಅಣ್ಣಿಗೇರಿ ವ್ಯಾಪ್ತಿಯಲ್ಲಿ 19 ಮಿಮೀ, ಚಿಲಕವಾಡದಲ್ಲಿ 13.50 ಮಿಮೀ ಮಳೆಯಾಗಿದೆ.

Leave a Reply

Your email address will not be published. Required fields are marked *