ಸುಸಂಸ್ಕೃತ ಮನವೆಂಬ ಮಹಾಸಾಧನ

| ತಾರೋಡಿ ಸುರೇಶ

ಮನಸ್ಸು ನಮ್ಮ ಜೀವನವನ್ನು ಆಳುತ್ತದೆ. ಅದು ಎಳೆದತ್ತ ನಮ್ಮ ಬದುಕು ಸಾಗುತ್ತದೆ. ಹಾಗೆಂದು ಅದರ ನಡೆಯನ್ನೆಲ್ಲ ಒಪ್ಪಲಾಗುವುದಿಲ್ಲ. ಸುಸಂಸ್ಕೃತವಾದ ಮನಸ್ಸಾದರೆ ಬದುಕು ಚಂದ. ಇಲ್ಲದಿದ್ದರೆ ನರಕ. ಇಬ್ಬರು ಸ್ನೇಹಿತರು ಯಾತ್ರೆಗೆ ಹೊರಟರು. ಅನೇಕ ತೀರ್ಥಕ್ಷೇತ್ರಗಳನ್ನು ಸಂದರ್ಶಿಸುತ್ತ ಕೊನೆಗೆ ತಿರುಪತಿಗೆ ಬಂದರು. ತಿರುಪತಿಯಲ್ಲಿ ಮೇಲೆ ಏರಿದರೆ ಶ್ರೀವೆಂಕಟರಮಣನ ದಿವ್ಯವೂ ಭವ್ಯವೂ ಆದ ದೇವಾಲಯ. ಅತ್ಯಲ್ಪ ಪರಿಶ್ರಮದಿಂದಲೇ ಭಗವಂತನ ಪರಮ ಪಾವನವಾದ ಎಡೆ. ಅದೇ ಕೆಳಗಡೆ ಭವ್ಯವಾದ ನಗರ. ಇಂದ್ರಿಯಕ್ಷೇತ್ರದ ಸೌಖ್ಯಕ್ಕೆ ಬೇಕಾದ ಎಲ್ಲವೂ ಲಭ್ಯ. ಅವರಲ್ಲಿ ಒಬ್ಬನಿಗೆ ಸಿನಿಮಾ ನೋಡೋಣವೆನ್ನಿಸಿತು. ರುಚಿರುಚಿಯಾದ ತಿಂಡಿ ತಿನ್ನಬೇಕೆನಿಸಿತು. ನಗರವನ್ನು ಸುತ್ತೋಣವೆನ್ನಿಸಿತು. ಬೆಟ್ಟ ಹತ್ತುವ ಪರಿಶ್ರಮ ಏಕೆ? ಆರಾಮಾಗಿರೋಣ ಎಂದುಕೊಂಡ. ತನ್ನ ಸ್ನೇಹಿತನಿಗೂ ಅದೇ ಸಲಹೆ ನೀಡಿದ. ಆದರೆ ಜೊತೆಗಾರ ಅದನ್ನು ಒಪ್ಪದೆ, ತಾನು ಬಂದಿರುವುದು ದೇವರ ದರ್ಶನಕ್ಕೆ ಎಂದು ಬೆಟ್ಟವೇರಿ ದೇವಸ್ಥಾನ ತಲುಪಿದ.

ಅವರ ಮರಣಾನಂತರ ದೇವಾಲಯಕ್ಕೆ ಹೋದವನನ್ನು ಯಮದೂತರು ನರಕಕ್ಕೂ, ನಗರದಲ್ಲಿಯೇ ಉಳಿದಿದ್ದವನನ್ನು ದೇವದೂತರು ಸ್ವರ್ಗಕ್ಕೂ ಕರೆದೊಯ್ದರು. ಇದು ಯಾವ ನ್ಯಾಯ? ಎಂಬ ಪ್ರಶ್ನೆ ಉದ್ಭವಿಸಿತು. ನಂತರ ವಿಮರ್ಶೆ ಮಾಡಲಾಗಿ ಮನಸ್ಸಿನ ಮಹಿಮೆ ತಿಳಿಯಿತು. ದೇವರ ದರ್ಶನಕ್ಕೆ ಹೋಗದವನು ಮನಸ್ಸಿನಲ್ಲಿಯೇ ಪಶ್ಚಾತ್ತಾಪ ಪಡುತ್ತಿದ್ದ. ತಾನು ದಾರಿತಪ್ಪಿದೆ ಎಂಬ ದುಃಖ ಅವನನ್ನು ಆವರಿಸಿತು. ದೇವರ ದರ್ಶನದ ಮಹಾಲಾಭದಿಂದ ವಂಚಿತನಾದೆನಲ್ಲ ಎಂಬ ಕೊರಗು. ಈಗ ತನ್ನ ಗೆಳೆಯ ದೇವರನ್ನು ನೋಡುತ್ತಿದ್ದಿರಬಹುದು, ಭಗವನ್ಮೂರ್ತಿ ಎಷ್ಟು ಸುಂದರವಾಗಿರಬಹುದು ಎಂದು ತಾನು ದೇವಾಲಯದಲ್ಲಿಲ್ಲದಿದ್ದರೂ ದೇವರ ಸುತ್ತಲೂ ಅವನ ಮನಸ್ಸು ಸಂಚರಿಸು ತ್ತಿತ್ತು. ಆದರೆ ದೇವರ ದರ್ಶನಕ್ಕೆ ತೆರಳಿದ್ದ ಸ್ನೇಹಿತನ ಯೋಚನೆಯೇ ಬೇರೆಯಾಗಿತ್ತು. ತನ್ನ ಸ್ನೇಹಿತನಂತೆ ನಿರ್ಧರಿಸದೆ ಅವನು ಅನುಭವಿಸುತ್ತಿರುವ ಭೋಗಗಳನ್ನೆಲ್ಲ ಅನ್ಯಾಯವಾಗಿ ಕಳೆದುಕೊಂಡೆನಲ್ಲ ಎಂದು ಕೊರಗುತ್ತಿದ್ದ. ಇಬ್ಬರ ದೇಹಗಳು ಅವರವರಿಗೆ ಬೇಕಾದ ಜಾಗದಲ್ಲಿದ್ದರೂ ಮನಸ್ಸು ಮಾತ್ರ ವಿರುದ್ಧವಾಗಿತ್ತು. ಪುಣ್ಯ-ಪಾಪಗಳು ಅವರ ಮನಸ್ಸು ಹಬ್ಬಿಕೊಂಡಿದ್ದ ಕ್ಷೇತ್ರಕ್ಕನುಗುಣವಾಗಿ ಫಲ ಕೊಟ್ಟವು. ‘ಮನ ಏವ ಮನುಷ್ಯಾಣಾಂ ಕಾರಣಂ ಬಂಧಮೋಕ್ಷಯೋಃ’ -ಮನಸ್ಸೇ ಬಂಧಮೋಕ್ಷಗಳಿಗೆ ಕಾರಣ ಎಂದು ಮನಸ್ಸಿನ ಪರಿಚಯವುಳ್ಳ ಜ್ಞಾನಿಗಳು ಜ್ಞಾಪಿಸಿದ್ದಾರೆ. ಶುದ್ಧವಾದ ಮನಸ್ಸುಂಟಾಗಲೀ ಎಂದು ಷೋಡಶ ಸಂಸ್ಕಾರಗಳನ್ನು ಅಳವಡಿಸಿಕೊಟ್ಟಿದ್ದಾರೆ. ದಿನಚರಿ, ಹಬ್ಬ ಹರಿದಿನಗಳು, ಉಡುಗೆ-ತೊಡುಗೆ, ಆಚಾರ-ವಿಚಾರಗಳು, ಕಾವ್ಯೇತಿಹಾಸಪುರಾಣಗಳು, ಗುರುಕುಲಗಳು ಇತ್ಯಾದಿ ಸರ್ವರ್ಸ³ಯಾದ ಜೀವನವಿಧಾನವನ್ನು ರಚಿಸಿಕೊಟ್ಟಿದ್ದಾರೆ. ಸರಯೂನದಿಯ ಪಾವಿತ್ರ್ಯವನ್ನು ನೋಡಿದಾಗ ಭಗವಾನ್ ವಾಲ್ಮೀಕಿಗಳು ‘ಸನ್ಮನುಷ್ಯ ಮನೋ ಯಥಾ’-‘ಪರಮಾತ್ಮನಲ್ಲಿ ಲಯಗೊಂಡವನ ಮನಸ್ಸಿನಂತಿದೆ’ ಎಂದು ಆಸ್ವಾದಿಸುತ್ತಾರೆ. ಶುದ್ಧವಾದ ಮನಸ್ಸುಳ್ಳವನಿಗೆ ಒಲಿಯುವ ಭಾಗ್ಯವದು. ಮಧಿಸಿದ ಆನೆಯನ್ನು, ಪಳಗಿದ ಆನೆಯ ಸಹಾಯದಿಂದ ಪಳಗಿಸಬಹುದಲ್ಲವೇ ಎಂದು ಶ್ರೀರಂಗ ಮಹಾಗುರುಗಳು ಜ್ಞಾಪಿಸುತ್ತಿದ್ದರು. ಹಾಗೆ ಮನಸ್ಸನ್ನು ಪಳಗಿದ ಜ್ಞಾನಿಗಳ ಸಹವಾಸದಲ್ಲಿ ತೊಡಗಿಸಿಕೊಂಡಾಗ ನಮ್ಮ ಮನಸ್ಸೂ ಪಳಗುತ್ತದೆ. ಆಗ ನಮ್ಮ ಮನಸ್ಸೂ ಭಗವನ್ಮೂಲದಲ್ಲಿ ವಿಹರಿಸುವ ಮಹಾಸಾಧನವಾಗುತ್ತದೆ.

(ಲೇಖಕರು ಹವ್ಯಾಸಿ ಬರಹಗಾರರು)

(ಪ್ರತಿಕ್ರಿಯಿಸಿ:[email protected])

Leave a Reply

Your email address will not be published. Required fields are marked *