ಸುಶಿಕ್ಷಿತರಾದಾಗ ದೇಶದ ಅಭಿವೃದ್ಧಿ ಸಾಧ್ಯ

ಮುಳಬಾಗಿಲು: ಪ್ರತಿಯೊಬ್ಬರೂ ಶಿಕ್ಷಣವಂತರಾದಾಗ ಮಾತ್ರ ದೇಶ ಅಭಿವೃದ್ಧಿಯಾಗುತ್ತದೆ ಎಂದು ಬಿಇಒ ಪಿ.ಸೋಮೇಶ್ ತಿಳಿಸಿದರು.
ನಗರದ ಮುತ್ಯಾಲಪೇಟೆಯ ಚೇತನ ವಿದ್ಯಾಮಂದಿರದಲ್ಲಿ ತಾಪಂ ಶನಿವಾರ ಏರ್ಪಡಿಸಿದ್ದ 54ನೇ ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಸಪ್ತಾಹ ಉದ್ಘಾಟಿಸಿ ಮಾತನಾಡಿ, ಭೂಮಿಗೆ ಬಿದ್ದ ಬೀಜ, ಎದೆಗೆ ಬಿದ್ದ ಅಕ್ಷರ ಒಂದಲ್ಲಾ ಒಂದು ದಿನ ಫಲಕೊಡುತ್ತದೆ. ಮಹಿಳೆಯೊಂದು ಕಲಿತರೆ ಶಾಲೆಯೊಂದು ತೆರದಂತೆ ಎಂಬ ಮಾತಿನಂತೆ ಎಲ್ಲರೂ ಶಿಕ್ಷಿತರಾಗಬೇಕು ಎಂದರು.

ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಜಿ.ಎಂ. ಗಂಗಪ್ಪ ಮಾತನಾಡಿ, ಓದು ಬರಹ ಬರಲಿಲ್ಲವೆಂದರೆ ಸರ್ಕಾರದ ಯೋಜನೆಗಳು ಸಫಲವಾಗುವುದಿಲ್ಲ, ಒಂದು ಪ್ರದೇಶದ ಮಾನವ ಸಂಪನ್ಮೂಲ ಅಭಿವೃದ್ಧಿಗೆ ಸಾಕ್ಷರತೆ ಪ್ರಮುಖವಾದ ಅಂಶವಾಗಿದೆ.
2011ರ ಜನಗಣತಿ ಪ್ರಕಾರ ಸಾಕ್ಷರತಾ ಪ್ರಮಾಣ ಶೇ 75ರಷ್ಟಿದ್ದು ಇದರಲ್ಲಿ ಮಹಿಳೆಯರ ಸಾಕ್ಷರತಾ ಪ್ರಮಾಣ ಶೇ.68 ಮತ್ತು ಪುರುಷರ ಸಾಕ್ಷರತಾ ಪ್ರಮಾಣ ಶೇ82 ಆಗಿದ್ದು ಮಹಿಳೆ ಮತ್ತು ಪುರುಷರ ಪ್ರಮಾಣದಲ್ಲಿ ಶೇ 14ರಷ್ಟು ಅಂತರವಿದೆ. ಈ ಅಂತರ ಹೋಗಾಲಾಡಿಸಲು ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಲಾಗಿದೆ ಎಂದು ತಿಳಿಸಿದರು.

ಚೇತನ ವಿದ್ಯಾಮಂದಿರದ ಸಂಸ್ಥಾಪಕ ಆರ್‌ಎಸ್‌ಎಸ್ ಮುಖಂಡ ಎನ್.ನಾರಾಯಣಪ್ಪ, ತಾಲೂಕು ಪ್ರೇರಕರ ಸಂಘದ ಅಧ್ಯಕ್ಷ ತಾಯಲೂರು ನಾರಾಯಣಪ್ಪ ಮಾತನಾಡಿದರು. ಸಾಕ್ಷರತೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ತಾಲೂಕಿನ ಉತ್ತಮ ಬೋಧಕರನ್ನು ಸನ್ಮಾನಿಸಲಾಯಿತು.

ತಾಲೂಕು ಅಕ್ಷರದಾಸೋಹ ಸಹಾಯಕ ನಿರ್ದೇಶಕ ವಿ.ಆನಂದ್, ತಾಲೂಕು ಲೋಕ ಶಿಕ್ಷಣ ಸಮಿತಿ ಸಂಯೋಜಕ ವಿ.ಎಸ್.ಕೋದಂಡರಾಮಯ್ಯ, ಸಂಪನ್ಮೂಲ ವ್ಯಕ್ತಿ ಜಿ.ವಿ.ವರದರಾಜ್, ಬೆಳಕು ಟ್ರಸ್ಟ್ ಸಂಸ್ಥಾಪಕಿ ಮಂಡಿಕಲ್ ರಾಧಮಣಿ, ಚೇತನ ವಿದ್ಯಾಮಂದಿರ ಮುಖ್ಯ ಶಿಕ್ಷಕಿ ಲಕ್ಷ್ಮೀದೇವಿ, ಕೆಜಿಎ್ ಲೋಕ ಶಿಕ್ಷಣ ಸಮಿತಿ ಸಂಯೋಜಕ ಆನಂದ್, ರವಿಚಂದ್ರ ನಾಯ್ಡು, ಶ್ಯಾಗತ್ತೂರು ನಾರಾಯಣಸ್ವಾಮಿ ಇದ್ದರು.

 

Leave a Reply

Your email address will not be published. Required fields are marked *