ಸುವರ್ಣ ತ್ರಿಭುಜ ಬೋಟ್ ಮುಳುಗಡೆ ಕಾರಣ ತನಿಖೆ ಮಾಡಿ

ಕಾರವಾರ: ಸುವರ್ಣ ತ್ರಿಭುಜ ಬೋಟ್ ಮುಳುಗಡೆಗೆ ಕಾರಣವನ್ನು ತಿಳಿಯಲು ಸಮರ್ಪಕ ತನಿಖೆ ನಡೆಸಬೇಕು ಎಂದು ಜಿಲ್ಲೆಯ ಮೀನುಗಾರರು ಒತ್ತಾಯಿಸಿದ್ದಾರೆ.

ಮಹಾರಾಷ್ಟ್ರ ರಾಜ್ಯದ ಮಾಲ್ವಾಣ್ ಸಮೀಪ ಸುವರ್ಣ ತ್ರಿಭುಜ ಬೋಟ್ ಮುಳುಗಡೆಯಾಗಿರು ವುದನ್ನು ನೌಕಾಸೇನೆ, ಮೀನುಗಾರರ ತಂಡ ಹಾಗೂ ಉಡುಪಿ ಶಾಸಕ ರಘುಪತಿ ಭಟ್ ಖಚಿತ ಮಾಡಿದ್ದಾರೆ. ಆದರೆ, ಮೀನುಗಾರರು ಏನಾದರು ಎಂಬ ಬಗ್ಗೆ ಇದುವರೆಗೂ ಸ್ಪಷ್ಟತೆ ಇಲ್ಲ. ಬೋಟ್ ಮುಳುಗಡೆಗೆ ಕಾರಣ ತಿಳಿದುಬಂದಿಲ್ಲ.

ಭಾರತೀಯ ನೌಕಾಸೇನೆಯ ಐಎನ್​ಎಸ್ ಕೊಚ್ಚಿ ಯುದ್ಧ ಹಡಗು ಡಿಕ್ಕಿಯಾಗಿ ಬೋಟ್ ಮುಳುಗಡೆ ಯಾಯಿತು ಎಂದು ಮಾಜಿ ಸಚಿವ ಪ್ರಮೋದ ಮಧ್ವರಾಜ್ ಆರೋಪಿಸಿದ್ದಾರೆ. ಐಎನ್​ಎಸ್ ಕೊಚ್ಚಿ ನೌಕೆಗೆ ಹಾನಿಯಾಗಿರುವ ಫೋಟೋಗಳನ್ನೂ ಅವರು ಬಿಡುಗಡೆ ಮಾಡಿದ್ದಾರೆ.

ಮೂರು ತಿಂಗಳ ಹಿಂದೆಯೇ ಈ ವಿಷಯ ಮೀನುಗಾರರ ವಲಯದಲ್ಲಿ ಹರಡಿತ್ತು. ಆದರೆ, ಅದನ್ನು ಯಾವುದೇ ಅಧಿಕಾರಿಗಳು ಖಚಿತ ಮಾಡಿರಲಿಲ್ಲ. ಈಗಲಾದರೂ ಸತ್ಯವನ್ನು ಬಹಿರಂಗ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಸತ್ಯಶೋಧನಾ ಸಮಿತಿ ರಚಿಸಲಿ: ಮೀನುಗಾರರ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸತ್ಯಶೋಧನಾ ಸಮಿತಿ ರಚಿಸಲು ಜಿಲ್ಲಾಡಳಿತ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಅದರಂತೆ ಸರ್ಕಾರ ಸತ್ಯ ಶೋಧನಾ ಸಮಿತಿ ರಚಿಸಿ ಸತ್ಯ ಬಹಿರಂಗಪಡಿಸಬೇಕು ಎಂದು ಮೀನುಗಾರರ ಮುಖಂಡರು, ನಾಪತ್ತೆಯಾದ ಮೀನುಗಾರರ ಕುಟುಂಬದವರು ಒತ್ತಾಯಿಸಿದ್ದಾರೆ.

ತಲಾ 6 ಲಕ್ಷ ರೂ. ಪರಿಹಾರ :ನಾಪತ್ತೆಯಾದ ಮೀನುಗಾರರ ಕುಟುಂಬದವರಿಗೆ ಮೀನುಗಾರಿಕೆ ಇಲಾಖೆಯಿಂದ ತಲಾ 6 ಲಕ್ಷ ರೂ. ಪರಿಹಾರ ಒದಗಿಸುವುದಾಗಿ ಇಲಾಖೆಯ ಉಪನಿರ್ದೇಶಕ ನಾಗರಾಜ್ ತಿಳಿಸಿದ್ದಾರೆ. ‘ವಿಜಯವಾಣಿ’ಯೊಂದಿಗೆ ಮಾತನಾಡಿದ ಅವರು, ಕುಟುಂಬದ ಸದಸ್ಯರಿಂದ ಒಂದು ಬಾಂಡ್ ಬರೆಸಿಕೊಂಡು ನಾವು ಇದೇ ವಾರದಲ್ಲಿ ಹಣವನ್ನು ಚೆಕ್ ರೂಪದಲ್ಲಿ ಅವರ ಮನೆಗಳಿಗೆ ತಲುಪಿಸಲಾಗುವುದು ಎಂದಿದ್ದಾರೆ. ಈ ಹಿಂದೆ ಪ್ರತಿ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ ನೀಡಲಾಗಿತ್ತು.

ನೌಕಾಸೇನೆಯ ಹಡಗು ಡಿಕ್ಕಿಯಾಗಿ ಸುವರ್ಣ ತ್ರಿಭುಜ ಬೋಟ್ ಮುಳುಗಿತೇ ಎಂಬುದನ್ನು ಸ್ಪಷ್ಟ ಪಡಿಸಬೇಕು ಎಂದು ಈ ಹಿಂದೆ ನಡೆದ ಮೀನುಗಾರರ ಸಭೆಯಲ್ಲೂ ಒತ್ತಾಯಿಸಿದ್ದೆವು. ಅಧಿಕಾರಿಗಳು ಯಾವುದೇ ಸ್ಪಷ್ಟನೆ ನೀಡಿಲ್ಲ. ಈಗಲಾದರೂ ನೌಕಾಸೇನೆ ಅಥವಾ ಜಿಲ್ಲಾಡಳಿತ ಈ ಕುರಿತು ಸತ್ಯಾಸತ್ಯತೆ ಬಹಿರಂಗಪಡಿಸಬೇಕು. | ಗಣಪತಿ ಮಾಂಗ್ರೆ ಮೀನುಗಾರರ ಮುಖಂಡ

Leave a Reply

Your email address will not be published. Required fields are marked *