ಸುವರ್ಣ ತ್ರಿಭುಜ ಬೋಟ್ ಪತ್ತೆಗೆ 3 ದಿನ ಕಾರ್ಯಾಚರಣೆ

ಕಾರವಾರ: ಸುವರ್ಣ ತ್ರಿಭುಜ ಬೋಟ್ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿರುವ ನೌಕಾಸೇನೆ ಹಾಗೂ ಮೀನುಗಾರರ ತಂಡ ಶುಕ್ರವಾರ ಕಾರವಾರ ತೀರಕ್ಕೆ ಮರಳಿದೆ.

ಉಡುಪಿ ಶಾಸಕ ರಘುಪತಿ ಭಟ್ ಅವರಿದ್ದ 9 ಮೀನುಗಾರರ ತಂಡ ‘ಐಎನ್​ಎಸ್ ನಿರೀಕ್ಷಕ’ ಯುದ್ಧ ನೌಕೆಯಲ್ಲಿ ಭಾನುವಾರ ರಾತ್ರಿ ಕದಂಬ ನೌಕಾನೆಲೆಯಿಂದ ತೆರಳಿತ್ತು. ನಿರಂತರ ಮೂರು ದಿನಗಳ ಹುಡುಕಾಟದ ಬಳಿಕ ಮಹಾರಾಷ್ಟ್ರ ರಾಜ್ಯದ ಮಾಲ್ವಾಣ್ ಕಡಲ ತೀರದಿಂದ ಸುಮಾರು 33 ನಾಟಿಕಲ್ ಮೈಲ್ ದೂರದಲ್ಲಿ ಬೋಟ್​ನ ಅವಶೇಷಗಳು ಪತ್ತೆಯಾದವು. ಮೀನುಗಾರರು ಮೃತಪಟ್ಟಿರುವ ಸಾಧ್ಯತೆ ಹೆಚ್ಚಿದೆ ಎಂದು ಶಾಸಕ ರಘುಪತಿ ಭಟ್ ಅವರು ಮಾಧ್ಯಮಗಳ ಜೊತೆ ತಮ್ಮ ಅಭಿಪ್ರಾಯ ಹಂಚಿಕೊಂಡರು.

ಸೋನಾರ್ ತಂತ್ರಜ್ಞಾನ: ಶಬ್ಧದ ತರಂಗಗಳನ್ನು ನೀರಿನಡಿ ಬಿಟ್ಟು ಅದರ ಆಧಾರದ ಮೇಲೆ ವಸ್ತುಗಳಿರುವುದನ್ನು ಪತ್ತೆ ಹಚ್ಚುವ ಸೋನಾರ್ ತಂತ್ರಜ್ಞಾನದ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತಿತ್ತು. 64 ಮೀಟರ್ ಆಳದಲ್ಲಿ ಬೋಟ್ ಅವಶೇಷ ಇರುವುದು ಪತ್ತೆಯಾಯಿತು. ನಂತರ ವಿಡಿಯೋ ಮಾಡಿ ಪರಿಶೀಲಿಸಿದಾಗ ಅದೇ ಸುವರ್ಣ ತ್ರಿಭುಜ ಎಂದು ಖಚಿತವಾಗಿದೆ ಎಂದು ಶಾಸಕ ರಘುಪತಿ ಭಟ್ ವಿವರಿಸಿದರು.

ಮುಳುಗು ತಜ್ಞರಿಂದ ಪರಿಶೀಲನೆ: ಗುರುವಾರ ಬೆಳಗ್ಗೆ ನೌಕಾಸೇನೆಯ ಮುಳುಗು ತಜ್ಞರು 64 ಮೀಟರ್ ಸಮುದ್ರ ತಳಕ್ಕೆ ಇಳಿದು ಬೋಟ್​ನ ಫೋಟೊ ಹಾಗೂ ವಿಡಿಯೋ ಮಾಡಿಕೊಂಡು ಬಂದಿದ್ದಾರೆ. ಅದೂ ಸುಲಭವಾಗಿರಲಿಲ್ಲ. 64 ಮೀಟರ್ ಆಳಕ್ಕೆ ಇಳಿಯಬೇಕು ಎಂದರೆ ನೀರಿನ ಒತ್ತಡ ಹೆಚ್ಚಿರುವುದರಿಂದ ಮುಳುಗು ತಜ್ಞರನ್ನು ನೀರಿಗಿಳಿಯುವ ಏಳು ತಾಸು ಮೊದಲು ಒತ್ತಡ ಹೆಚ್ಚಿರುವ ಕೊಠಡಿಯೊಂದರಲ್ಲಿ ಭದ್ರವಾಗಿಡಲಾಗಿತ್ತು. ನಂತರ ಅವರು ಸುಲಭವಾಗಿ ಕೆಳ ಹೋದರು ಎಂದು ಕಾರ್ಯಾಚರಣೆಯ ಕ್ಷಣಗಳನ್ನು ಭಟ್ ತಿಳಿಸಿದರು.

ತುಂಡಾದ ಬೋಟ್: ಬೋಟ್​ನ ಮಧ್ಯ ಭಾಗದಲ್ಲಿ ಯಾವುದೋ ವಸ್ತು ಹೊಡೆದು ತುಂಡಾಗಿದೆ. ಭಾಗಗಳು ಸಂಪೂರ್ಣ ಛಿದ್ರವಾಗಿದೆ. ಆದರೆ, ಬೋಟ್​ನಲ್ಲಿದ್ದ ಒಬ್ಬರ ಕುರಿತೂ ಬೋಟ್​ನ ಸಮೀಪ ಯಾವುದೇ ಕುರುಹೂ ಕಂಡುಬಂದಿಲ್ಲ . ಇದರಿಂದ ಮೀನುಗಾರರು ಉಳಿದಿರುವ ಸಾಧ್ಯತೆ ಕಡಿಮೆ ಎಂದು ರಘುಪತಿ ಭಟ್ ಹೇಳಿದ್ದಾರೆ.

ಮತ್ತೆ ಕೇಂದ್ರ ರಕ್ಷಣಾ ಸಚಿವರ ಬಳಿಗೆ: ನವದೆಹಲಿಗೆ ತೆರಳಿ ನಾವು ರಕ್ಷಣಾ ಸಚಿವರನ್ನು ಭೇಟಿ ಮಾಡಿದ್ದೆವು. ನೌಕಾಸೇನೆಯಿಂದ ಹುಡುಕಾಟ ಸಾಧ್ಯವಿಲ್ಲ ಎಂದಾದಲ್ಲಿ ಮೀನುಗಾರರನ್ನು ಕರೆದೊಯ್ಯುವಂತೆ ವಿನಂತಿಸಿದ್ದೆವು. ಅವರ ಸಹಕಾರದಲ್ಲಿ ಇದೇ ಮೊದಲ ಬಾರಿಗೆ ನೌಕಾಸೇನೆಯ ಹಡಗಿನಲ್ಲಿ ಇತರ ವ್ಯಕ್ತಿಗಳನ್ನು ಕರೆದೊಯ್ಯಲಾಗಿದೆ ಎಂದು ರಘುಪತಿ ಭಟ್ ವಿವರಿಸಿದರು. ಬೋಟ್​ನ್ನು ಮೇಲೆತ್ತುವ ಕೆಲಸವಾಗಬೇಕು. ನಾಪತ್ತೆಯಾದವರ ಕುಟುಂಬಗಳಿಗೆ ಪರಿಹಾರ ದೊರಕಿಸಿಕೊಡುವ ಕೆಲಸವಾಗಬೇಕು. ಈ ಹಿನ್ನೆಲೆಯಲ್ಲಿ ಇನ್ನೊಮ್ಮೆ ನವದೆಹಲಿಗೆ ತೆರಳಿ ಕೇಂದ್ರ ರಕ್ಷಣಾ ಸಚಿವರನ್ನು ಭೇಟಿಯಾಗಲಿದ್ದೇವೆ ಎಂದು ರಘುಪತಿ ಭಟ್ ಹೇಳಿದರು.

ಸಂಪೂರ್ಣ ಸಾಕ್ಷಿ ಸಿಗದೇ ನಂಬಲಾಗದು: ಗೋಕರ್ಣ: ಡಿಸೆಂಬರ್ 15ರಂದು ಗೋವಾ ಸಮೀಪದ ಸಮುದ್ರದಲ್ಲಿ ನಾಪತ್ತೆಯಾದ ತ್ರಿಭುಜ ಬೋಟ್ ಅವಶೇಷ ಗುರುವಾರ ಪತ್ತೆಯಾದ ಸುದ್ದಿ ಬಂದಿದೆ. ಇದೇ ಬೋಟ್​ನಲ್ಲಿದ್ದ ಮಾದನಗೇರಿಯ ಸತೀಶ ಹರಿಕಂತ್ರ ಕೂಡ ಬೋಟ್ ಜೊತೆ ಕಾಣೆಯಾಗಿದ್ದಾರೆ. ಅವರ ಸಮಸ್ತ ಕುಟುಂಬ ಇಂದಿಗೂ ಸತೀಶ ಬಂದೇ ಬರುತ್ತಾರೆ ಎಂಬ ವಿಶ್ವಾಸದಲ್ಲಿದೆ. ಅವಶೇಷಗಳು ಸುವರ್ಣ ತ್ರಿಭುಜ ಬೋಟ್​ನದ್ದು ಎನ್ನುವುದನ್ನು ಅವರು ಒಪ್ಪದಾಗಿದ್ದಾರೆ.

ಗುರುವಾರ ಪತ್ತೆಯಾದ ಬೋಟ್ ಅವಶೇಷದ ಬಗ್ಗೆ ಅವರ ತಂದೆ ಈಶ್ವರ ಹರಿಕಂತ್ರ ಹಲವು ರೀತಿಯ ಸಂದೇಹಗಳನ್ನು ವ್ಯಕ್ತಪಡಿಸಿದ್ದಾರೆ. ‘ಸ್ವತಃ ನೌಕಾ ದಳವೇ ಕೆಲ ತಿಂಗಳ ಹಿಂದೆ ಸರ್ವ ಬಗೆಯಿಂದ ಹುಡುಕಾಟ ಮಾಡಿದರೂ ಸಿಗದ ಬೋಟ್ ಅವಶೇಷ ಈಗೆಲ್ಲಿಂದ ಬಂತು ಎಂಬ ಅನುಮಾನವನ್ನು ಹೊರಹಾಕಿದ್ದಾರೆ. ಈ ಬಗ್ಗೆ ಮಾತನಾಡಿದ ಈಶ್ವರ ಹರಿಕಂತ್ರ ಮುಳುಗಿದ ಬೋಟ್​ಅನ್ನು ಮೇಲಿತ್ತಿ ನೋಡದೆ ಏನೂ ಹೇಳಲು ಸಾಧ್ಯವಿಲ್ಲ. ಬೋಟ್ ಮುಳುಗಿದ್ದೇ ಆದಲ್ಲಿ ಅದರಲ್ಲಿದ್ದ ಏಳು ಮೀನುಗಾರರು, ಸರಕು ಸಾಮಾನುಗಳು ಮತ್ತು ಮೀನುಗಾರಿಕೆ ಹಲಗೆಗಳು ಏಕೆ ತೇಲಿ ಬಂದಿಲ್ಲ? ಸಂಸದ ಅನಂತಕುಮಾರ ಹೆಗಡೆ ಅವರು ಭೇಟಿಯಾದಾಗ ಇದರ ಹಿಂದೆ ಬೇರೆಯದೇ ಕಾರಣ ಇರಬಹುದು ಎಂದಿದ್ದರು. ನಮ್ಮ ಕುಟುಂಬದ ಎಲ್ಲರೂ ಸಹ ಪ್ರತ್ಯೇಕ ಹಿನ್ನೆಲೆ ಇದ್ದೀತು ಎಂಬ ಸಂಶಯದಲ್ಲಿ ಇಂದಿಗೂ ಇದ್ದೇವೆ. ಕಾರಣ ಸಂಪೂರ್ಣ ಸಾಕ್ಷಿ ಸಿಗದೇ ನಾವು ಹೇಳಿಕೆಗಳನ್ನು ನಂಬುವ ಸ್ಥಿತಿಯಲ್ಲಿಲ್ಲ’ ಎಂದಿದ್ದಾರೆ.

ಪತ್ನಿ ಬಾಣಂತಿ: ನಾಪತ್ತೆಯಾದ ಸತೀಶ ಹರಿಕಂತ್ರ ಪತ್ನಿ ಮೂರು ದಿನಗಳ ಹಿಂದೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ತವರು ಮನೆ ಹಿಲ್ಲೂರಿನಲ್ಲಿರುವ ಆಕೆ ಆಘಾತಗೊಳ್ಳಬಹುದು ಎಂಬ ಆತಂಕದಿಂದ ಅವಶೇಷ ದೊರೆತ ಸುದ್ದಿಯನ್ನು ಇನ್ನೂ ತಿಳಿಸಲಾಗಿಲ್ಲ ಎಂದು ಈಶ್ವರ ಹರಿಕಂತ್ರ ಹೇಳಿದ್ದಾರೆ.

ಸಿಎಂ ಜತೆಗಿನ ಸಭೆ ರದ್ದು: ಸುವರ್ಣ ತ್ರಿಭುಜ ಬೋಟ್ ನಾಪತ್ತೆ ಘಟನೆಗೆ ಸಂಬಂಧಿಸಿದ ಎಲ್ಲ ಮೀನುಗಾರ ಕುಟುಂಬದವರನ್ನು ಶುಕ್ರವಾರ ಮುಖ್ಯಮಂತ್ರಿ ಕುಮಾರಸ್ವಾಮಿ ಉಡುಪಿಗೆ ಬಂದು ಭೇಟಿಯಾಗಲು ಸಂದೇಶ ಕಳಿಸಿದ್ದರು. ಅದರ ಪ್ರಕಾರ ಶುಕ್ರವಾರ ಬೆಳಿಗ್ಗೆ ಮಾದನಗೇರಿಯ ಈಶ್ವರ ಹರಿಕಂತ್ರ ಮತ್ತು ಕುಮಟಾ-ಹೊನ್ನಾವರದ ಇಬ್ಬರು ಮೀನುಗಾರರು ರೈಲಿನ ಮೂಲಕ ಉಡುಪಿಗೆ ಹೊರಟಿದ್ದರು. ಈ ಮಧ್ಯೆ ಹೊನ್ನಾವರ ಮಂಕಿ ಬಳಿ ಮೀಟಿಂಗ್ ರದ್ದಾಗಿದೆ. ನೀವು ಬರುವುದು ಬೇಡ ಎಂಬ ಕರೆ ಬಂದು ಎಲ್ಲರೂ ವಾಪಸ್ಸಾದರು.