Friday, 16th November 2018  

Vijayavani

ಜನಾರ್ದನರೆಡ್ಡಿ ಕೇಸ್ ಬೆನ್ನಲ್ಲೇ ಡಿಕೆಶಿಗೆ ಬಂಧನ ಭೀತಿ - ಇಡಿಯಿಂದ 3ನೇ ಬಾರಿ ಇಡಿ ನೋಟಿಸ್ ಜಾರಿ        ಆ್ಯಂಬಿಂಡೆಟ್ ಪ್ರಕರಣದಲ್ಲಿ ಇಡಿ ಹೆಸರಿಗೆ ಆಕ್ಷೇಪ - ಸಿಸಿಬಿ ವಿರುದ್ಧ ಇಡಿ ಜಂಟಿ ನಿರ್ದೇಶಕ ಗರಂ        ಸಚಿವ ಸಂಪುಟ ವಿಸ್ತರಣೆಗೆ ಧನುರ್ಮಾಸದ ಎಫೆಕ್ಟ್ - ಸದ್ಯಕ್ಕಿಲ್ಲ ಆಕಾಂಕ್ಷಿಗಳಿಗೆ ಸಚಿವ ಭಾಗ್ಯ - ಕಾಂಗ್ರೆಸ್ಸಿಗರಲ್ಲಿ ಮತ್ತೆ ಅಸಮಾಧಾನ        ರಾಜ್ಯಾದ್ಯಂತ ಭುಗಿಲೆದ್ದ ರೈತರ ಹೋರಾಟದ ಕಿಚ್ಚು - ರೈತರನ್ನು ಭೇಟಿಯಾಗುವುದಾಗಿ ಹೇಳಿದ ಕುಮಾರಸ್ವಾಮಿ        ಗಾಂಧಿ ಕುಟುಂಬ ಬಿಟ್ಟು ಬೇರೆಯವರು ಎಐಸಿಸಿ 5 ಅಧ್ಯಕ್ಷರಾಗಲಿ - ಕಾಂಗ್ರೆಸ್​ಗೆ ಪ್ರಧಾನಿ ಮೋದಿಯಿಂದ ನೇರ ಸವಾಲು        ತಮಿಳುನಾಡಿನಾದ್ಯಂತ ಗಜ ಚಂಡಮಾರುತದ ಅರ್ಭಟ - 20ಕ್ಕೂ ಹೆಚ್ಚು ಮಂದಿ ದುರ್ಮರಣ - ಅಪಾರ ಆಸ್ತಿ ಪಾಸ್ತಿ, ಬೆಳೆ ನಾಶ       
Breaking News

ಸುರೇಶ ಕಟ್ಟಿಮನಿಗೆ ಅಧ್ಯಕ್ಷ ಸ್ಥಾನ ಗಟ್ಟಿ

Saturday, 18.08.2018, 10:41 PM       No Comments

ಗದಗ: ಹಲವು ನಾಟಕೀಯ ಬೆಳವಣಿಗೆ, ಬಂಡಾಯ ಚಟುವಟಿಕೆಗಳಿಗೆ ಕಾರಣವಾದ ಗದಗ-ಬೆಟಗೇರಿ ನಗರಸಭೆ ನೂತನ ಅಧ್ಯಕ್ಷರಾಗಿ 34ನೇ ವಾರ್ಡ್ ಸದಸ್ಯ ಸುರೇಶ ಕಟ್ಟಿಮನಿ ಆಯ್ಕೆಯಾಗಿದ್ದಾರೆ. ಐದು ವರ್ಷದ ಅವಧಿಯಲ್ಲಿ ಸುರೇಶ ಕಟ್ಟಿಮನಿ ಅವರು 8ನೇ ಅಧ್ಯಕ್ಷರಾಗಿದ್ದಾರೆ.

ನಗರಸಭೆ ಸಭಾಭವನದಲ್ಲಿ ಉಪವಿಭಾಗಾಧಿಕಾರಿ ಪಿ.ಎಸ್. ಮಂಜುನಾಥ ನೇತೃತ್ವದಲ್ಲಿ ಜರುಗಿದ ಮತದಾನ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುರೇಶ ಕಟ್ಟಿಮನಿ ಅವರು 20 ಮತಗಳನ್ನು ಪಡೆದು ಗೆಲುವು ಸಾಧಿಸಿದರು. ಬಿಜೆಪಿ ಬೆಂಬಲಿತ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಪ್ರಕಾಶ ಬಾಕಳೆ ಅವರು 14 ಮತ ಪಡೆದು ಪರಾಭವಗೊಂಡರು.

ಕಾಂಗ್ರೆಸ್ ಸದಸ್ಯರೊಬ್ಬರು ತಿರುಗಿಬಿದ್ದು ಬಿಜೆಪಿ ಬೆಂಬಲ ಪಡೆದು ಅಭ್ಯರ್ಥಿಯಾಗಿದ್ದು ಕಾಂಗ್ರೆಸ್ ಮುಖಂಡರಿಗೆ ನುಂಗಲಾರದ ತುತ್ತಾಗಿತ್ತು. ಶತಾಯಗತಾಯ ನಗರಸಭೆಯನ್ನು ವಶಕ್ಕೆ ಪಡೆಯಲು ಸ್ವತಃ ಶಾಸಕ ಎಚ್.ಕೆ. ಪಾಟೀಲ, ಮಾಜಿ ಶಾಸಕ ಡಿ.ಆರ್. ಪಾಟೀಲ ಅಖಾಡಕ್ಕಿಳಿದಿದ್ದು ಹುಬ್ಬೇರುವಂತೆ ಮಾಡಿತು.

ಕಾಂಗ್ರೆಸ್​ನ 23 ಸದಸ್ಯರ ಪೈಕಿ ಒಬ್ಬರು ಮೃತಪಟ್ಟಿದ್ದಾರೆ. ಎಲ್.ಡಿ. ಚಂದಾವರಿ ಅವರು ವಿದೇಶ ಪ್ರಯಾಣದಲ್ಲಿದ್ದಾರೆ. ಈ ಚುನಾವಣೆಯಲ್ಲಿ ಶಾಸಕರು ಮತ್ತು ಸಂಸದರು ಮತದಾನ ಮಾಡುವ ಹಕ್ಕು ಇರುವುದರಿಂದ ಶಾಸಕ ಎಚ್.ಕೆ. ಪಾಟೀಲ, ಸಂಸದ ಶಿವಕುಮಾರ ಉದಾಸಿ ಅವರು ಕೈಎತ್ತುವ ಮೂಲಕ ತಮ್ಮ ಅಭ್ಯರ್ಥಿಗೆ ಬೆಂಬಲ ಸೂಚಿಸಿದರು.

ಸಿಡಿದೆದ್ದ ಬಾಕಳೆ: ಕಳೆದ ತಿಂಗಳು ಮೊದಲ ವಾರದಲ್ಲಿ ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಬಿ.ಬಿ. ಅಸೂಟಿ ರಾಜೀನಾಮೆ ಸಲ್ಲಿಸಿದ ನಂತರ ಉಪಾಧ್ಯಕ್ಷರಾಗಿದ್ದ ಪ್ರಕಾಶ ಬಾಕಳೆ ಅವರನ್ನು ಪ್ರಭಾರಿ ಅಧ್ಯಕ್ಷರನ್ನಾಗಿ ನಿಯೋಜಿಸಲಾಗಿತ್ತು. 1 ತಿಂಗಳು 20 ದಿನ ಕಾಲ ಹಂಗಾಮಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಪ್ರಕಾಶ ಬಾಕಳೆ, ತಮ್ಮನ್ನು ಇನ್ನೆರಡು ತಿಂಗಳು ಕಾಲ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಸಿ ಮುಖಂಡರಲ್ಲಿ ಬೇಡಿಕೊಂಡಿದ್ದರು. ಆದರೆ, ಬಾಕಳೆ ಅವರ ಮನವಿಯನ್ನು ಶಾಸಕ ಎಚ್.ಕೆ. ಪಾಟೀಲ ಮತ್ತು ಮಾಜಿ ಶಾಸಕ ಡಿ.ಆರ್. ಪಾಟೀಲ ತಿರಸ್ಕೃರಿಸಿದ್ದರು. ಹತ್ತಾರು ವರ್ಷಗಳ ಕಾಲ ಪಕ್ಷಕ್ಕಾಗಿ ದುಡಿದಿದ್ದೇನೆ. ಮಹಾನವಮಿವರೆಗೆ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಸಿ ಎಂದು ಪರಿಪರಿಯಾಗಿ ಬೇಡಿಕೊಂಡರೂ ಮುಖಂಡರು ಒಪ್ಪಲಿಲ್ಲ. ಇದರಿಂದ ಪಕ್ಷದ ವಿರುದ್ಧವೇ ಸಿಡಿದೆದ್ದ ಪ್ರಕಾಶ ಬಾಕಳೆ ಬಿಜೆಪಿ ಬೆಂಬಲ ಪಡೆದು ನಾಮಪತ್ರ ಸಲ್ಲಿಸಿದರು ಎಂದು ಕಾಂಗ್ರೆಸ್ ಕಾರ್ಯಕರ್ತರೊಬ್ಬರು ತಿಳಿಸಿದ್ದಾರೆ.

ಮಧ್ಯಾಹ್ನ 1.30ರ ನಂತರ ನಗರಸಭೆ ಸದಸ್ಯರು ಆಗಮಿಸತೊಡಗಿದರು. ಪ್ರಭಾರಿ ಅಧ್ಯಕ್ಷ ಪ್ರಕಾಶ ಬಾಕಳೆ ಅವರು ಸಂಸದ ಶಿವಕುಮಾರ ಉದಾಸಿ ಅವರ ಕಾರಿನಲ್ಲಿ ನಗರಸಭೆ ಆಗಮಿಸಿದ್ದು ಮತ್ತಷ್ಟು ಕುತೂಹಲಕ್ಕೆ ಕಾರಣವಾಯಿತು. ಮಾಜಿ ಅಧ್ಯಕ್ಷ ಬಿ.ಬಿ. ಅಸೂಟಿ ಸಹ ಕೊಂಚ ತಡವಾಗಿ ಆಗಮಿಸಿದ್ದು ನಾನಾ ಉಹಾಪೋಹಕ್ಕೆ ಕಾರಣವಾಯಿತು. ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಗೊಂಡಿದ್ದರಿಂದ ಅಸೂಟಿ ಅವರು ಅಧಿಕಾರ ಅನುಭವಿಸಲಿಲ್ಲ. ಮತ್ತೆರಡು ತಿಂಗಳು ಕಾಲ ಮುಂದುವರಿಸಿ ಅಸೂಟಿ ಮಾಡಿಕೊಂಡಿದ್ದ ಮನವಿಯನ್ನು ಆಗ ಮುಖಂಡರು ಪರಿಗಣಿಸಿರಲಿಲ್ಲ. ಹೀಗಾಗಿ ಅಸೂಟಿ ಅವರು ಕಾಂಗ್ರೆಸ್​ಗೆ ಕೈಕೊಡುತ್ತಾರೆ ಎಂಬ ಸುದ್ದಿ ಹಬ್ಬಿತ್ತು. ಕೊನೆಗೂ ಅವರು ನಗರಸಭೆಗೆ ಆಗಮಿಸಿದ್ದರಿಂದ ಕಾಂಗ್ರೆಸ್ ಮುಖಂಡರು ನಿರಾಳರಾದರು. ಇಷ್ಟಾದರೂ ಕೊನೆಯ ಕ್ಷಣದವರೆಗೂ ಬಿಜೆಪಿಯವರು ಆತ್ಮವಿಶ್ವಾಸದಲ್ಲಿದ್ದರು. ಪ್ರಕಾಶ ಬಾಕಳೆ ಅವರೇ ಅಧ್ಯಕ್ಷರಾಗುತ್ತಾರೆ ಎಂಬ ಆಶಯದಲ್ಲಿದ್ದರು. ಆದರೆ, ಮುಖಂಡರಾದ ಎಚ್.ಕೆ. ಪಾಟೀಲ, ಡಿ.ಆರ್. ಪಾಟೀಲ ಅಖಾಡಕ್ಕೆ ಇಳಿದಿದ್ದರಿಂದ ಬಿಜೆಪಿ ಲೆಕ್ಕಾಚಾರ ಬುಡಮೇಲಾಯಿತು ಎಂದು ಬಿಜೆಪಿ ಕಾರ್ಯಕರ್ತರೊಬ್ಬರು ವಿವರಿಸಿದರು.

ಎಲ್ಲರನ್ನೂ ಸಮಾಧಾನಪಡಿಸುವ ತಂತ್ರ: 2013ರಲ್ಲಿ ಜರುಗಿದ ನಗರಸಭೆ ಚುನಾವಣೆಯಲ್ಲಿ 35 ವಾರ್ಡ್​ಗಳ ಪೈಕಿ 23 ಕಾಂಗ್ರೆಸ್, 12 ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸಿತು. ಕಾಂಗ್ರೆಸ್ ನಗರಸಭೆ ಚುಕ್ಕಾಣಿ ಹಿಡಿಯಿತಲ್ಲದೇ, ಪೂರ್ಣ ಪ್ರಮಾಣದ ಮತ್ತು ಪ್ರಭಾರಿ ಅಧ್ಯಕ್ಷರಾಗಿ ಎಂಟು ಸದಸ್ಯರು ಅಧಿಕಾರ ಅನುಭವಿಸಿದ್ದಾರೆ. ರುದ್ರಮ್ಮ ಕೆರಕಲಮಟ್ಟಿ, ಕೃಷ್ಣಾ ಪರಾಪುರ, ಶಿವಲೀಲಾ ಅಕ್ಕಿ, ಶ್ರೀನಿವಾಸ ಹುಯಿಲಗೋಳ, ಪೀರಸಾಬ ಕೌತಾಳ, ಬಿ.ಬಿ. ಅಸೂಟಿ, ಪ್ರಕಾಶ ಬಾಕಳೆ ಇದೀಗ ಸುರೇಶ ಕಟ್ಟಿಮನಿ ಸೇರಿ 8 ಕಾಂಗ್ರೆಸ್ ಸದಸ್ಯರು ಅಧ್ಯಕ್ಷರಾಗಿದ್ದಾರೆ. ಎಲ್ಲರನ್ನೂ ಸಮಾಧಾನಪಡಿಸುವ ಕಾಂಗ್ರೆಸ್ ಮುಖಂಡರ ತಂತ್ರ ಕೊನೆಯ ಗಳಿಗೆಯಲ್ಲಿ ಕೈಕೊಟ್ಟಿದೆ. ಕಟ್ಟಾ ಕಾಂಗ್ರೆಸ್ಸಿಗ ಪ್ರಕಾಶ ಬಾಕಳೆ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದಲ್ಲದೆ, ಶಾಸಕ ಎಚ್.ಕೆ. ಪಾಟೀಲ, ಮಾಜಿ ಶಾಸಕ ಡಿ.ಆರ್. ಪಾಟೀಲ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು ವಿಶೇಷವಾಗಿತ್ತು.

Leave a Reply

Your email address will not be published. Required fields are marked *

Back To Top