ಸುಬಾಹು ಗಸ್ತು ತಂತ್ರಾಂಶ ಬಿಡುಗಡೆ


ಚಾಮರಾಜನಗರ : ಜಿಲ್ಲಾ ಪೊಲೀಸ್ ಇಲಾಖೆಯು ಅಭಿವೃದ್ಧಿ ಪಡಿಸಿರುವ ಸುಬಾಹು ಗಸ್ತು ನಿರ್ವಹಣಾ ತಂತ್ರಾಂಶವನ್ನು ದಕ್ಷಿಣ ವಲಯ ಐಜಿಪಿ ಶರತ್‌ಚಂದ್ರ ಅವರು ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಬಿಡುಗಡೆ ಮಾಡಿದರು.

ಬಳಿಕ ಮಾತನಾಡಿದ ಅವರು, ಸುಬಾಹು ತಂತ್ರಾಂಶವನ್ನು 2018ರ ಫೆಬ್ರವರಿಯಿಂದಲೂ ಜಿಲ್ಲೆಯ ಗುಂಡ್ಲುಪೇಟೆ, ಚಾಮರಾಜನಗರ, ಕೊಳ್ಳೇಗಾಲ ಪಟ್ಟಣ ಠಾಣೆಗಳ ಪ್ರಮುಖ ಸರಹದ್ದುಗಳಲ್ಲಿ ಅಳವಡಿಸಿ ಪ್ರಾಯೋಗಿಕವಾಗಿ ಜಾರಿ ಮಾಡಲಾಗಿತ್ತು. ಇದರಿಂದ ರಾತ್ರಿ ಕಳ್ಳತನ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ಇನ್ನು ಮುಂದಿನ ದಿನಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಜಿಲ್ಲೆಯ ಪಟ್ಟಣಗಳಲ್ಲಿ ಸುಬಾಹು ಗಸ್ತು ನಿರ್ವಹಣಾ ತಂತ್ರಾಂಶವನ್ನು ಬಳಸಲಾಗುವುದು ಎಂದರು.

ಜಿಲ್ಲೆಯ ಪಟ್ಟಣಗಳ ನಾಗರೀಕರು ಈ ತಂತ್ರಾಂಶವನು ತಮ್ಮ ಸ್ಮಾರ್ಟ್ ಪೋನ್‌ಗಳಿಗೆ ಡೌನ್ ಲೋಡ್ ಮಾಡಿಕೊಳ್ಳಬಹುದು. ಜತೆಗೆ ಗಸ್ತಿಗೆ ನಿಯೋಜಿಸಿರುವ ಪೊಲೀಸ್ ಸಿಬ್ಬಂದಿಯೂ ಸಹ ಮಾಡಕೊಳ್ಳಲಿದ್ದಾರೆ ಎಂದು ತಿಳಿಸಿದರು.

ಮನೆಗಳಿಗೆ ಕ್ಯೂಆರ್ ಎಂಬ ಕೋಡ್ ನೀಡಲಾಗುತ್ತದೆ. ಗಸ್ತು ಪೊಲೀಸರು ಮನೆಗಳಿಗೆ ತೆರಳಿ ಕ್ಯೂಆರ್ ಎಂಬ ಕೋಡ್ ಅನ್ನು ಸ್ಕಾೃನ್ ಮಾಡಬೇಕು. ಆಗ ಅವರು ಸ್ಥಳಕ್ಕೆ ಹೋಗಿ ಪರಿಶೀಲಿಸಿದ್ದಾರೆ ಎಂಬುದು ಗೊತ್ತಾಗಲಿದೆ ಎಂದು ಹೇಳಿದರು.

ಈ ತಂತ್ರಾಂಶ ಬಳಸಿ ಗಸ್ತಿನಲ್ಲಿರುವ ಎಂಒಬಿ, ರೌಡಿ, ಎಚ್.ಎಸ್. ವ್ಯಕ್ತಿಗಳ ಚಲನವಲನಗಳ ಮೇಲೆ ಸೂಕ್ತ ನಿಗಾ ವಹಿಸಲು ಅನುಕೂಲವಾಗಲಿದೆ. ಸಾರ್ವಜನಿಕರು 2-3 ದಿನಗಳ ಕಾಲ ಮನೆಬಿಟ್ಟು ಹೋಗುವ ಸಂದರ್ಭದಲ್ಲಿ ಈ ತಂತ್ರಾಂಶದ ಮೂಲಕ ಹತ್ತಿರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರೆ ಕೂಡಲೇ ಠಾಣಾಧಿಕಾರಿ ಗಮನಕ್ಕೆ ಬರಲಿದೆ. ಅವರು ಗಸ್ತು ಸಿಬ್ಬಂದಿ ಗಮನಕ್ಕೆ ತಂದು ಮನೆಗಳ್ಳತನ ತಡೆಯಲು ಸಹಕಾರಿಯಾಗಲಿದೆ ಎಂದರು.

ಈ ತಂತ್ರಾಂಶವನ್ನು ಸಂಬಂಧಪಟ್ಟ ಠಾಣಾಧಿಕಾರಿಗಳು, ಮೇಲಧಿಕಾರಿಗಳು, ಜಿಲ್ಲಾ ನಿಯಂತ್ರಣ ಕೊಠಡಿ ಸಿಬ್ಬಂದಿ ಬಳಸಲಿದ್ದಾರೆ. ಈ ಮೂಲಕ ರಾತ್ರಿ ಗಸ್ತಿನ ಕಾರ್ಯವೈಖರಿಯನ್ನು ಪರಿಶೀಲಿಸಬಹುದು. ನಿಖರವಾದ ಮಾಹಿತಿಯನ್ನು ಪಡೆಯಬಹುದು ಎಂದು ತಿಳಿಸಿದರು.

ಈಗಾಗಲೇ ಜಿಲ್ಲೆಯ ಗುಂಡ್ಲುಪೇಟೆ, ಚಾಮರಾಜನಗರ, ಕೊಳ್ಳೇಗಾಲ ಪಟ್ಟಣಗಳ ಪ್ರಮುಖ ಸ್ಥಳಗಳ 200 ಮನೆಗಳಿಗೆ ತಂತ್ರಾಂಶದ ಕ್ಯೂಆರ್ ಎಂಬ ಕೋಡ್‌ಗಳನು ನೀಡಲಾಗಿದೆ. ಪಟ್ಟಣಗಳ ಸಾರ್ವಜನಿಕರು ಈ ಪ್ರಯೋಜನ ಪಡೆದುಕೊಂಡು ಅಪರಾಧ ನಿಯಂತ್ರಣಕ್ಕೆ ಪೊಲೀಸ್ ಇಲಾಖೆ ಜತೆ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.