Friday, 16th November 2018  

Vijayavani

ಕೋರ್​​ ಕಮಿಟಿ ಸ್ಥಾನಕ್ಕಾಗಿ ಬಿಜೆಪಿಯಲ್ಲಿ ಫೈಟ್- ಶೋಭಾಗೆ ಸ್ಥಾನ ನೀಡಲು ಹೆಗಡೆ ಜತೆ ಬಿಎಸ್​ವೈ ಪೈಪೋಟಿ        ಮೈಸೂರು ಪಾಲಿಕೆ ಮೇಯರ್​, ಉಪ ಮೇಯರ್​ ಸ್ಥಾನಕ್ಕಿಂದು ಚುನಾವಣೆ: ಮೇಯರ್​ ಗಾದಿಗಾಗಿ ದೋಸ್ತಿಗಳ ಫೈಟ್​        ಅಯ್ಯಪ್ಪನ ದರ್ಶನಕ್ಕಾಗಿ ಕೇರಳದ ಕೊಚ್ಚಿಗೆ ಬಂದಿಳಿದ ಹೋರಾಟಗಾರ್ತಿ ತೃಪ್ತಿ ದೇಸಾಯಿಗೆ ಪ್ರತಿಭಟನೆ ಬಿಸಿ        ಗಜ ಚಂಡಮಾರುತ ಅಬ್ಬರ: ತಮಿಳುನಾಡಿನ ಕರಾವಳಿವಳಿಯಲ್ಲಿ ಜನ ತತ್ತರ, ರಾಜ್ಯದ ದಕ್ಷಿಣ ಒಳನಾಡಿನಲ್ಲೂ ಮಳೆ ಸಾಧ್ಯತೆ        ಕಬ್ಬಿಗೆ ಸಮರ್ಪಕ ಬೆಲೆ ನೀಡುವಂತೆ ಆಗ್ರಹಿಸಿ ಮುಧೋಳದಲ್ಲಿ ರೈತರ ಬೃಹತ್​ ಹೋರಾಟ       
Breaking News

ಸುಪ್ರೀಂಕೋರ್ಟ್ ಸಂಕಷ್ಟ ಸುಖಾಂತ್ಯ

Tuesday, 16.01.2018, 3:04 AM       No Comments

ನವದೆಹಲಿ: ಸುಪ್ರೀಂಕೋರ್ಟ್​ನಲ್ಲಿ ಕಳೆದ ವಾರಾಂತ್ಯದಲ್ಲಿ ಎದಿದ್ದ ಬಿಕ್ಕಟ್ಟು ಶಮನವಾಗಿದ್ದು, ಮುಖ್ಯ ನ್ಯಾಯಮೂರ್ತಿ (ಸಿಜೆಐ) ದೀಪಕ್ ಮಿಶ್ರಾ ವಿರುದ್ಧ ಬಂಡಾಯ ಸಾರಿದ್ದ ನಾಲ್ವರು ಹಿರಿಯ ನ್ಯಾಯಮೂರ್ತಿಗಳು ಸೋಮವಾರ ಕರ್ತವ್ಯಕ್ಕೆ ಹಾಜರಾಗಿದ್ದರು.

ಸಿಜೆಐ ಕೊಠಡಿಯಲ್ಲಿ ಬೆಳಗ್ಗೆ 10.30ಕ್ಕೆ ನಡೆದ ಸಭೆಯಲ್ಲಿ ಸುಪ್ರೀಂ ಕೋರ್ಟ್​ನ ಎಲ್ಲ ನ್ಯಾಯಮೂರ್ತಿಗಳು ಗೊಂದಲವನ್ನು ಪರಿಹರಿಸಿಕೊಂಡಿದ್ದಾರೆ ಎಂದು ಆಟಾರ್ನಿ ಜನಲರ್ ಕೆ.ಕೆ.ವೇಣುಗೋಪಾಲ್ ತಿಳಿಸಿದರು.

ಹಿರಿಯ ನ್ಯಾಯಮೂರ್ತಿಗಳಾದ ಜೆ.ಚೆಲಮೇಶ್ವರ್, ರಂಜನ್ ಗೊಗೋಯಿ, ಮದನ್ ಬಿ. ಲೋಕುರ್, ಕುರಿಯನ್ ಜೋಸೆಫ್ ಸುದ್ದಿಗೋಷ್ಠಿ ನಡೆಸಿ ಸಿಜೆಐ ಧೋರಣೆಯನ್ನು ಬಹಿರಂಗವಾಗಿ ಟೀಕಿಸಿದ್ದರು. ಹಿರಿಯ ನ್ಯಾಯಮೂರ್ತಿಗಳ ಪೀಠವನ್ನು ಕಡೆಗಣಿಸಿ ಬೇರೆ ಪೀಠಗಳಿಗೆ ಮಹತ್ವ ಪ್ರಕರಣಗಳನ್ನು ವಹಿಸಲಾಗುತ್ತಿದೆ, ಸವೋಚ್ಚ ನ್ಯಾಯಾಲಯದಲ್ಲಿ ಆಡಳಿತ ಸರಿಯಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಸಿಜೆಐ ವಿರುದ್ಧ ನಾಲ್ವರು ಸಹೋದ್ಯೋಗಿ ಹಿರಿಯ ನ್ಯಾಯಮೂರ್ತಿಗಳು ಈ ಆರೋಪ ಮಾಡಿದ್ದರು.

ಸುಪ್ರೀಂಕೋರ್ಟ್​ನಲ್ಲಿ ಉಂಟಾಗಿದ್ದ ಈ ಬಿಕ್ಕಟ್ಟನ್ನು ಸರಿಪಡಿಸಲು ಬಾರ್ ಕೌನ್ಸಿಲ್ ಆಫ್ ಇಂಡಿಯಾ (ಬಿಸಿಐ) 7 ಮಂದಿ ತಂಡವನ್ನು ರಚಿಸಿತ್ತು. ಈ ನಿಯೋಗವು ಸಿಜೆಐ, ಬಂಡಾಯದ ಕಹಳೆ ಊದಿದ್ದ ನಾಲ್ವರು ನ್ಯಾಯಮೂರ್ತಿ ಸೇರಿದಂತೆ 15ಕ್ಕೂ ಹೆಚ್ಚು ನ್ಯಾಯಮೂರ್ತಿಗಳನ್ನು ಭಾನುವಾರ ಭೇಟಿ ಮಾಡಿತ್ತು. ಈ ಮಧ್ಯೆ, ಸುಪ್ರೀಂ ಕೋರ್ಟ್​ನ ಬಾರ್ ಅಸೋಸಿಯೇಷನ್ ಕೂಡ ಗೊಂದಲ ಶಮನಕ್ಕೆ ಸವೋಚ್ಚ ನ್ಯಾಯಾಲಯದ ಎಲ್ಲ ನ್ಯಾಯಮೂರ್ತಿಗಳು ಸೇರಿ ಪರಿಹಾರ ಕಂಡುಕೊಳ್ಳಬೇಕು ಎಂದು ಕೋರಿತ್ತು.

ರಾಜೀವ್ ಹತ್ಯೆ ಪ್ರಕರಣವೂ ಕಿರಿಯ ಪೀಠಕ್ಕೆ

ಕಿರಿಯ ಜಸ್ಟೀಸ್​ಗಳ ಪೀಠದಲ್ಲಿ ನಡೆದಿದ್ದ ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಮೇಲ್ಮನವಿ ವಿಚಾರಣೆ ಮಹತ್ವದ ಪ್ರಕರಣಗಳನ್ನು ಕಿರಿಯ ನ್ಯಾಯಮೂರ್ತಿಗಳ ಪೀಠಕ್ಕೆ ವಹಿಸಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್​ನ ನಾಲ್ವರು ಹಿರಿಯ ನ್ಯಾಯಮೂರ್ತಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ, ಈ ಹಿಂದೆ ಕೂಡ ಮಹತ್ವದ ಮತ್ತು ಸೂಕ್ಷ್ಮ ಪ್ರಕರಣಗಳನ್ನು ಕಿರಿಯ ನ್ಯಾಯಮೂರ್ತಿಗಳ ಪೀಠ ವಿಚಾರಣೆ ನಡೆಸಿದ ಉದಾಹರಣೆಗಳು ಇವೆ. ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಗಲ್ಲು ಶಿಕ್ಷೆಯ ತೀರ್ಪನ್ನು ಪ್ರಶ್ನಿಸಿ ಅಪರಾಧಿ ನಳನಿ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯನ್ನು ಕಿರಿಯ ನ್ಯಾಯಮೂರ್ತಿಗಳಿದ್ದ ಕೆ.ಟಿ.ಥಾಮಸ್, ಡಿ.ಪಿ.ವಾಧವ ಮತ್ತು ಎಸ್.ಎಸ್.ಎಂ.ಕದ್ರಿ ಅವರ ಪೀಠ ನಡೆಸಿತ್ತು. ಆಗ ಹಿರಿಯ ಮತ್ತು ಕಿರಿಯ ನಾಯ್ಯಮೂರ್ತಿಗಳಿರುವ ಪೀಠ ಎಂಬ ಆಕ್ಷೇಪ ಎದ್ದಿರಲಿಲ್ಲ ಎಂದು ಕಾನೂನು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಶಾಂತಿಯ ಸಂಧಾನಕ್ಕೆ ನ್ಯಾ.ಬಾಬ್ಡೆ ಕಾರಣ

ನ್ಯಾಯಾಂಗದ ಮಹಾಮನೆಯಲ್ಲಿ ಎದ್ದಿದ್ದ ಸುಂಟರಗಾಳಿಯನ್ನು ಸಮಾಧಾನದಿಂದ ಹೋಗಲಾಡಿಸುವ ಕೆಲಸವನ್ನು ಹಿರಿಯ ನ್ಯಾ. ಶರದ್ ಅರವಿಂದ್ ಬೊಬ್ಡೆ ಮಾಡಿದ್ದಾರೆ. ಸಿಜೆಐ ದೀಪಕ್ ಮಿಶ್ರಾ ಮತ್ತು ಬಂಡಾಯ ಬಾವುಟ ಹಾರಿಸಿದ್ದ ನಾಲ್ವರು ಹಿರಿಯ ನ್ಯಾಯಮೂರ್ತಿಗಳ ನಡುವೆ ಸಂಧಾನದ ಸೇತುವನ್ನು ಬೊಬ್ಡೆ ರಚಿಸಿದ್ದರು ಎಂದು ಮೂಲಗಳು ತಿಳಿಸಿವೆ. ನಾಲ್ವರು ಹಿರಿಯ ಜಸ್ಟೀಸ್​ಗಳು ಸುದ್ದಿಗೋಷ್ಠಿ ನಡೆಸಿದ ನಂತರ ಬಾಬ್ಡೆ ಮತ್ತು ಎಲ್.ನಾಗೇಶ್ವರ್ ರಾವ್ ಅವರು ನ್ಯಾ.ಚೆಲಮೇಶ್ವರ ಅವರ ನಿವಾಸಕ್ಕೆ ಹೋಗಿದ್ದರು. ನಂತರ ಭಾನುವಾರ ಕೂಡ ಬೊಬ್ಡೆ ಚೆಲಮೇಶ್ವರ್ ಅವರ ನಿವಾಸಕ್ಕೆ ಭೇಟಿ ನೀಡಿ, ಯಾವುದೇ ಭಿನ್ನಾಭಿಪ್ರಾಯವಿದ್ದರೂ ಅದನ್ನು ಆಂತರಿಕವಾಗಿ ರ್ಚಚಿಸಿ ಬಗೆಹರಿಸಿಕೊಳ್ಳೋಣ. ಮಾಧ್ಯಮದ ಮುಂದೆ ಹೋಗಿ, ನ್ಯಾಯಾಂಗದ ಘನತೆ ಹಾಳುಮಾಡುವುದು ಬೇಡ ಎಂಬ ಸಲಹೆಯನ್ನು ಬೊಬ್ಡೆ ನೀಡಿದ್ದರು ಎಂದು ಮೂಲಗಳು ಹೇಳಿವೆ. ನವೆಂಬರ್​ನಲ್ಲಿ ದೀಪಕ್ ಮಿಶ್ರಾ ನಿವೃತ್ತಿಯ ನಂತರ ಸಿಜೆಐ ಹುದ್ದೆಗೆ ಹಿರೀತನದ ಅರ್ಹರ ಪಟ್ಟಿಯಲ್ಲಿ ಬಾಬ್ಡೆ ಕೂಡ ಇದ್ದಾರೆ.

 ಕಥೆ ಸುಖಾಂತ್ಯದೊಂದಿಗೆ ಮುಗಿದಿದೆ. ನಾಲ್ವರು ಹಿರಿಯ ಜಸ್ಟೀಸ್​ಗಳು ಎತ್ತಿದ ವಿಷಯ ಅಂತರಿಕವಾಗಿತ್ತು ಮತ್ತು ಇದು ಆಂತರಿಕವಾಗಿಯೇ ಅಂತ್ಯಕಂಡಿದೆ. ರಾಜಕೀಯ ಪಕ್ಷಗಳು ಮತ್ತೆ ಈ ವಿಷಯವನ್ನು ಕೆದಕಿ ಲಾಭ ಪಡೆಯಲು ಯತ್ನಿಸಬಾರದು.

| ಮನನ್ ಕುಮಾರ್ ಮಿಶ್ರಾ, ಬಿಸಿಐ ಅಧ್ಯಕ್ಷ

 

ಈಗ ಎಲ್ಲವು ಸರಿಹೋಗಿದೆ. ಸುಪ್ರೀಂಕೋರ್ಟ್ ಎಂದಿನಂತೆ ಕಾರ್ಯನಿರ್ವಹಿ ಸುತ್ತಿದೆ. ನಾಲ್ವರು ಹಿರಿಯ ನ್ಯಾಯಮೂರ್ತಿಗಳು ಶುಕ್ರವಾರ ನಡೆಸಿದ್ದ ಸುದ್ದಿಗೋಷ್ಠಿ ‘ಟೀ ಕಪ್​ನಲ್ಲೆದ್ದ ಬಿರುಗಾಳಿ’ಯಷ್ಟೆ ಇದು ಈಗ ಶಮನವಾಗಿದೆ

| ಕೆ.ಕೆ.ವೇಣುಗೋಪಾಲ್, ಆಟಾರ್ನಿ ಜನರಲ್

 

ಕ್ರಮ ಜರುಗಿಸಲ್ಲ ಎಂದು ಸಿಜೆಐ ಮುಗುಳ್ನಗೆ

ಸೋಮವಾರ ಸುಪ್ರೀಂಕೋರ್ಟ್​ನಲ್ಲಿ ಕಲಾಪ ಆರಂಭವಾಗುತ್ತಿದ್ದಂತಯೇ ಹಿರಿಯ ವಕೀಲ ಆರ್.ಪಿ.ಲೂಥ್ರಾ, ಸವೋಚ್ಚ ನ್ಯಾಯಾಲಯದ ಘನತೆಯನ್ನು ಮಣ್ಣುಪಾಲು ಮಾಡುವ ಬೆಳವಣಿಗೆಗಳು ನಡೆಯುತ್ತಿವೆ. ಇದಕ್ಕೆ ಮಂಗಳ ಹಾಡಬೇಕು ಎಂದು ಕೋರಿದರು. ಸಿಜೆಐ ದೀಪಕ್ ಮಿಶ್ರಾ ಮುಗುಳ್ನಕ್ಕು, ಇಲ್ಲ ಯಾವುದೇ ಕ್ರಮ ಇಲ್ಲವೆಂದರು. ಬಂಡಾಯ ಸಾರಿದ್ದ ನಾಲ್ವರು ಹಿರಿಯ ನ್ಯಾಯಮೂರ್ತಿಗಳು ಸುಪ್ರೀಂ ಕೋರ್ಟ್ ಮೊಗಸಾಲೆಯಲ್ಲಿ ಎದುರಾದ ಸಿಬ್ಬಂದಿ ವರ್ಗದವರನ್ನು ಎಂದಿನಂತೆ ಮಾತನಾಡಿಸಿದರು.

ಜಸ್ಟೀಸ್​ಗಳ ವಿರುದ್ಧ ಕ್ರಮ ಬೇಡ

ಸುಪ್ರೀಂಕೋರ್ಟ್​ನಲ್ಲಿ ಉಂಟಾಗಿದ್ದ ಸಮಸ್ಯೆ ಮುಗಿದಿದೆ. ನಾಲ್ವರು ನ್ಯಾಯಮೂರ್ತಿಗಳ ಪ್ರಮಾಣಿಕತೆ ಮತ್ತು ದಕ್ಷತೆ ಬಗ್ಗೆ ಸಂಶಯವಿಲ್ಲ. ಅವರ ವಿರುದ್ಧ ಕ್ರಮ ಅನಗತ್ಯ ಎಂದು ಬಾರ್ ಕೌನ್ಸಿಲ್ ಆಫ್ ಇಂಡಿಯಾ ಹೇಳಿದೆ. ನ್ಯಾಯಧೀಶ ಲೋಯಾ ನಿಗೂಢ ಸಾವಿನ ಪ್ರಕರಣವನ್ನು ವಿಚಾರವನ್ನು ಅನಗತ್ಯವಾಗಿ ಎಳೆದು ತರಬಾರದು ಎಂದು ರಾಜಕೀಯ ಪಕ್ಷಗಳಿಗೆ ಎಚ್ಚರಿಕೆ ನೀಡಿದೆ.


ಬಂಡಾಯದ ಘಟನೆ ಭವಿಷ್ಯದಲ್ಲಿ ಪಾಠವಾಗಲಿ

| ರಂಜಿ ಥಾಮಸ್, ಸುಪ್ರೀಂಕೋರ್ಟ್ ಬಾರ್ ಅಸೋಸಿಯೇಷನ್​ನ ಮಾಜಿ ಕಾರ್ಯದರ್ಶಿ

ಸದರಿ ಬಿಕ್ಕಟ್ಟಿಗೆ ಕಾರಣ ಯಾರೇ ಇರಬಹುದು, ನ್ಯಾಯಮೂರ್ತಿಗಳನ್ನೇ ಪ್ರಶ್ನೆ ಮಾಡುವ ಘಟನೆಯೊಂದು ಸಂಭವಿಸಿಬಿಟ್ಟಿದೆ. ಭವಿಷ್ಯದ ನ್ಯಾಯಮೂರ್ತಿಗಳಿಗೆ ಈ ಘಟನಾವಳಿಗಳು ಪಾಠವಾಗಬೇಕು. ಜನರು ದೇವರ ನಂತರದ ಸ್ಥಾನವನ್ನು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಿಗೆ ನೀಡಿದ್ದಾರೆ. ಹೀಗಾಗಿ ಯಾವುದೇ ಅಪನಂಬಿಕೆಗೆ ಕಾರಣರಾಗದೆ, ಅತ್ಯಂತ ಜವಾಬ್ದಾರಿಯಿಂದ ಅವರು ವರ್ತಿಸಬೇಕು. ಮುಖ್ಯ ನ್ಯಾಯಮೂರ್ತಿಗಳು ಸಮಾನರಲ್ಲಿ ಮೊದಲಿಗರಾಗಿದ್ದರೂ, ಸಹ ನ್ಯಾಯಮೂರ್ತಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಬಹುಮುಖ್ಯ. ಕೇಸುಗಳನ್ನು ಹಂಚುವ ವಿಚಾರದಲ್ಲಿ ಸಿಜೆಐಗೆ ಪರಮೋಚ್ಚ ಅಧಿಕಾರವಿದ್ದರೂ, ಹಿರಿಯ ನ್ಯಾಯಮೂರ್ತಿಗಳ ಮಾತುಗಳನ್ನು ಪರಿಗಣಿಸಿದರಷ್ಟೇ ಸೌಹಾರ್ದ ವಾತಾವರಣ ಮೂಡಲು ಸಾಧ್ಯ. ನ್ಯಾಯಮೂರ್ತಿಗಳ ಮಧ್ಯೆ ಅಪನಂಬಿಕೆ ಸೃಷ್ಟಿಯಾದರೆ, ನ್ಯಾಯ ಬೇಡುವ ಶ್ರೀ ಸಾಮಾನ್ಯ ಎಲ್ಲಿಗೆ ಹೋಗಬೇಕು? ಸುಪ್ರೀಂಕೋರ್ಟ್​ನ ಸಿಜೆಐ ಯಾರೇ ಆಗಿರಲಿ, ಸಹ ನ್ಯಾಯಮೂರ್ತಿಗಳೊಂದಿಗೆ ಅವರು ಪಾರದರ್ಶಕತೆ ಕಾಯ್ದುಕೊಳ್ಳಬೇಕು. ಯಾವಾಗ ಜವಾಬ್ದಾರಿಗಳ ಸಮರ್ಪಕ ಹಂಚಿಕೆ ಆಗುವುದಿಲ್ಲವೋ ಆಗ ಅಪನಂಬಿಕೆ ಸೃಷ್ಟಿಯಾಗುತ್ತದೆ. ಯಾವುದೇ ವಿಷಯದಲ್ಲಾಗಲೀ, ಯಾವ ನ್ಯಾಯಮೂರ್ತಿ ತೀರ್ಪು ನೀಡಿದರು ಎಂದು ಜನರು ಯೋಚಿಸುವುದಿಲ್ಲ. ಅದು ಸುಪ್ರೀಂಕೋರ್ಟ್ ತೀರ್ಪು ಎಂದಷ್ಟೇ ಮನದಲ್ಲಿ ಅಚ್ಚೊತ್ತಿರುತ್ತದೆ. ಪ್ರತಿಯೊಬ್ಬ ನ್ಯಾಯಮೂರ್ತಿ ಕೂಡ ನ್ಯಾಯಾಂಗದ ಆಧಾರಸ್ತಂಭವಿದ್ದಂತೆ. ಒಂದು ಕಂಭಕ್ಕೆ ಹಾನಿಯಾದರೂ ಇಡೀ ಕಟ್ಟಡ ಕುಸಿಯಬಹುದು.

Leave a Reply

Your email address will not be published. Required fields are marked *

Back To Top