ಸುನೀಲ್ ಶೆಟ್ಟಿ ಪುತ್ರನ ಆರ್​ಎಕ್ಸ್ 100 ಸವಾರಿ

ಬಾಲಿವುಡ್​ನ ಸ್ಟಾರ್ ನಟ ಸುನೀಲ್ ಶೆಟ್ಟಿ ಪುತ್ರಿ ಆಥಿಯಾ ಶೆಟ್ಟಿ 2015ರಲ್ಲಿಯೇ ‘ಹೀರೋ’ ಚಿತ್ರದ ಮೂಲಕ ಬಣ್ಣದ ಬದುಕಿಗೆ ಕಾಲಿಟ್ಟರು. ಆದರೆ ಅವರಿಗೆ ಹೇಳಿಕೊಳ್ಳುವಂಥ ಗೆಲುವು ದಕ್ಕಲಿಲ್ಲ. ಈಗ ಸುನೀಲ್ ಪುತ್ರ ಅಹಾನ್ ಶೆಟ್ಟಿ ಹೀರೋ ಆಗಲು ತುದಿಗಾಲಿನಲ್ಲಿ ನಿಂತಿದ್ದಾರೆ. ತೆಲುಗಿನಲ್ಲಿ ತೆರೆಕಂಡು ಸೂಪರ್ ಹಿಟ್ ಆಗಿರುವ ‘ಆರ್​ಎಕ್ಸ್ 100’ ಚಿತ್ರ ಹಿಂದಿಗೆ ರಿಮೇಕ್ ಆಗುತ್ತಿದ್ದು, ಆ ಚಿತ್ರದ ಮೂಲಕ ಅಹಾನ್ ಸಿನಿಪಯಣ ಆರಂಭವಾಗಲಿದೆ.

‘ಆರ್​ಎಕ್ಸ್ 100’ ಚಿತ್ರವನ್ನು ಹಿಂದಿಗೆ ರಿಮೇಕ್ ಮಾಡಲಾಗುತ್ತಿದೆ ಎಂಬ ಸುದ್ದಿ ಬಹಳ ದಿನಗಳಿಂದಲೂ ಕೇಳಿಬರುತ್ತಿತ್ತು. ಅದಕ್ಕೆ ಅಹಾನ್ ನಾಯಕ ಎಂಬುದಾಗಿಯೂ ಅನೇಕರು ಊಹಿಸಿದ್ದರು. ಆದರೆ ಯಾವುದೂ ಅಧಿಕೃತವಾಗಿರಲಿಲ್ಲ. ಈಗ ನಿರ್ವಪಕ ಸಾಜಿದ್ ನಾಡಿಯದ್ವಾಲ ಅವರು ವಿಷಯ ಬಹಿರಂಗ ಪಡಿಸಿದ್ದಾರೆ. ‘ನಾನು ‘ಆರ್​ಎಕ್ಸ್ 100’ ಚಿತ್ರದ ರಿಮೇಕ್ ಹಕ್ಕುಗಳನ್ನು ಖರೀದಿಸಿದ್ದೇನೆ. ಇದು ಅಹಾನ್​ಗೆ ಚೊಚ್ಚಲ ಸಿನಿಮಾ ಆಗಲಿದೆ. ಯುವಜನತೆಗೆ ಈ ಚಿತ್ರದ ಕಥೆ ಇಷ್ಟವಾಗಲಿದೆ. ಮೂಲ ಚಿತ್ರವನ್ನು 10 ಬಾರಿ ನೋಡಿದವರಿದ್ದಾರೆ. 2019ರ ಮೇ ತಿಂಗಳಲ್ಲಿ ಸಿನಿಮಾ ತೆರೆಕಾಣಿಸುವ ಆಲೋಚನೆ ಇದೆ’ ಎಂಬುದಾಗಿ ನಿರ್ವಪಕರು ತಿಳಿಸಿದ್ದಾರೆ. ಅಂದಹಾಗೆ, ಜಾಕಿ ಶ್ರಾಫ್ ಪುತ್ರ ಟೈಗರ್ ಶ್ರಾಫ್ ಅವರನ್ನು ಬಾಲಿವುಡ್​ನಲ್ಲಿ ಲಾಂಚ್ ಮಾಡಿದ್ದು ಕೂಡ ಇದೇ ಸಾಜಿದ್ ನಾಡಿಯದ್ವಾಲ ಎಂಬುದು ವಿಶೇಷ. ಇನ್ನು, ಸುನೀಲ್ ಶೆಟ್ಟಿ ಮತ್ತು ಸಾಜಿದ್ ನಡುವೆ ಒಳ್ಳೆಯ ಸ್ನೇಹವಿದೆ. ಸುನೀಲ್ ನಟಿಸಿದ್ದ ‘ವಖ್ತ್ ಹಮಾರಾ ಹೈ’ ಚಿತ್ರಕ್ಕೆ ಸಾಜಿದ್ ಬಂಡವಾಳ ಹೂಡಿದ್ದರು. ಸದ್ಯ ‘ಆರ್​ಎಕ್ಸ್ 100’ ರಿಮೇಕ್​ಗೆ ಯಾರು ನಿರ್ದೇಶನ ಮಾಡುತ್ತಾರೆ, ಅಹಾನ್​ಗೆ ಜೋಡಿಯಾಗಿ ಯಾರು ನಟಿಸಲಿದ್ದಾರೆ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ. -ಏಜೆನ್ಸೀಸ್

Leave a Reply

Your email address will not be published. Required fields are marked *