Wednesday, 12th December 2018  

Vijayavani

ಮಧ್ಯಪ್ರದೇಶದಲ್ಲಿ ಸರ್ಕಾರ ರಚನೆ ಕಸರತ್ತು -ಕೈಗೆ ಬೆಂಬಲ ಘೋಷಿಸಿದ ಮಾಯಾವತಿ -ಶಾಸಕಾಂಗ ಪಕ್ಷದ ಸಭೆ ಕರೆದ ಕಾಂಗ್ರೆಸ್        ಪಾನ್ ಬ್ರೋಕರ್ ಡೀಲ್ ಪ್ರಕರಣದ ತನಿಖೆ ಚುರುಕು -ಸಹಕಾರ ಇಲಾಖೆಯಿಂದ ನೋಟಿಸ್ -ಇದು ದಿಗ್ವಿಜಯ ನ್ಯೂಸ್ ವರದಿ ಫಲಶ್ರುತಿ        ಋಣ ಸಂದಾಯಕ್ಕೆ ಮುಂದಾದ ರಾಮಲಿಂಗಾರೆಡ್ಡಿ -ಬಿಜೆಪಿ ಕಾರ್ಪೋರೇಟರ್ ಗೆ ಸ್ಥಾಯಿ ಸಮಿತಿ ಅಧ್ಯಕ್ಷ ಪಟ್ಟ -ಪುತ್ರಿ ಗೆಲುವಿಗೆ ಸಹಕರಿಸಿದ್ದಕ್ಕೆ ಗಿಫ್ಟ್        ಸರ್ಕಾರದ ವಿರುದ್ಧ ಇಂದು ಬರಾಸ್ತ್ರ -ಸಿಎಂಗೆ ಬಿಸಿ ಮುಟ್ಟಿಸಲು ಬಿಎಸ್‌ವೈ ರಣತಂತ್ರ -ಅತ್ತ ಭದ್ರತೆಗೆ ಬಂದ ಎಸ್ಪಿಗೆ ಕೈಕೊಟ್ಟ ಕಾರು        ಕಿಡ್ನಾಪರ್ಸ್ ಹಿಡಿಯಲು ಪ್ರೇಮಿಗಳ ವೇಷ -ಆಂಧ್ರಕ್ಕೆ ಆಗಿ ಹೋದ ಪೊಲೀಸರು -ಶಿವಾಜಿನಗರ ಠಾಣೆ ಪೊಲೀಸರಿಂದ ಕಿರಾತಕರಿಗೆ ಕೋಳ        ಮುಂಬೈನಲ್ಲಿಂದು ಅಂಬಾನಿ ಮಗಳ ಅದ್ಧೂರಿ ವಿವಾಹ -ಹಿಲರಿ ಕ್ಲಿಂಟನ್ ಸೇರಿ ಗಣ್ಯಾತಿಗಣ್ಯರು ಭಾಗಿ - ಸ್ಯಾಂಡಲ್‌ವುಡ್‌ನಲ್ಲಿ ದಿಗಂತ್, ಐಂದ್ರಿತಾ ಮದುವೆ ಸಂಭ್ರಮ       
Breaking News

ಸುದರ್ಶನ್ ಪತ್ನಿ ಶೈಲಶ್ರೀ ಈಗೆಲ್ಲಿದ್ದಾರೆ, ಹೇಗಿದ್ದಾರೆ?

Friday, 12.01.2018, 3:03 AM       No Comments

|ಗಣೇಶ್ ಕಾಸರಗೋಡು

‘ವಿಜಯನಗರದ ವೀರಪುತ್ರ’ ಚಿತ್ರದ ನಾಯಕ ಆರ್.ಎನ್.ಸುದರ್ಶನ್ ವಿಧಿವಶರಾಗಿ ಆಗಲೇ ನಾಲ್ಕಾರು ತಿಂಗಳುಗಳೇ ಕಳೆದಿವೆ. ಹಾಗಿದ್ದರೆ ಅವರ ಧರ್ಮಪತ್ನಿಯೂ ಆದ ನಟಿ, ನೃತ್ಯಗಾರ್ತಿ ಶೈಲಶ್ರೀ ಸುದರ್ಶನ್ ಎಲ್ಲಿದ್ದಾರೆ? ಹೇಗಿದ್ದಾರೆ? ಎಂಬ ಕುತೂಹಲದಿಂದ ಮಲ್ಲತ್ತಹಳ್ಳಿಯ ಬಾಡಿಗೆ ಮನೆಯಲ್ಲಿ ಅವರ ಮುಂದೆ ಕುಳಿತಾಗ ಅವರು ಹೇಳಿದ್ದಿಷ್ಟು; ಚೆನ್ನೈನ ಸ್ವಂತ ಮನೆಯಲ್ಲಿ ನಾವು ಸುಖವಾಗಿದ್ದೆವು. ಅಲ್ಪಸ್ವಲ್ಪ ಸಂಪಾದನೆಯೂ ಇತ್ತು. ಆ ಪರಮಾತ್ಮ ನಮಗೆ ಬದುಕು ನಡೆಸುವಷ್ಟು ಕೊಟ್ಟಿದ್ದ. ಆದರೆ ಯಾರೋ ಬಂದು ನಮ್ಮ ಸುಖ ಸಂಸಾರಕ್ಕೆ ಕಿಚ್ಚಿಡುವಂಥ ಸಲಹೆ ಕೊಟ್ಟುಬಿಟ್ಟರು. ‘ಬೆಂಗಳೂರಿನಲ್ಲಿ ಬೇಕಾದಷ್ಟು ಅವಕಾಶಗಳಿವೆ. ವರ್ಷಕ್ಕೆ ನೂರಾರು ಸಿನಿಮಾಗಳು ತೆರೆಕಾಣುತ್ತಿವೆ. ಚೆನ್ನೈನಲ್ಲಿದ್ದರೆ ಮುಂದೆ ನಿಮಗೆ ಕಷ್ಟವಾಗಬಹುದು. ನಿಮಗೆ ಮಕ್ಕಳಿಲ್ಲ, ಕಾಯಿಲೆ ಬಿದ್ದರೆ ಚೆನ್ನೈನಲ್ಲಿ ನೋಡಿಕೊಳ್ಳುವವರು ಯಾರು? ಬುದ್ಧಿವಂತಿಕೆಯಿಂದ ಬೆಂಗಳೂರಿಗೆ ಶಿಫ್ಟ್ ಮಾಡಿಕೊಳ್ಳಿ. ಒಳ್ಳೆದಾಗುತ್ತದೆ…’ ಎಂಬ ಸಲಹೆ ಕೊಟ್ಟರು. ಹೌದಲ್ಲ ಎಂದೆನಿಸಿದ್ದು ನಿಜ. ಆದರೂ ಸ್ವಲ್ಪ ಸಮಯ ಯೋಚಿಸಿದೆವು. ಕೊನೆಗೆ ಅವರ (ಸುದರ್ಶನ್) ಸಲಹೆಯಂತೆಯೇ ಚೆನ್ನೈಗೆ ಗುಡ್ ಬೈ ಹೇಳಿದೆವು. ಬೆಂಗಳೂರಿನಲ್ಲೇ ಸೆಟ್ಲ್ ಆಗುವುದರಿಂದ ಚೆನ್ನೈನಲ್ಲಿರುವ ಮನೆಯನ್ನು ಮಾರಾಟ ಮಾಡಿದೆವು. ಸಿಕ್ಕ ದುಡ್ಡನ್ನು ಬ್ಯಾಂಕ್​ನಲ್ಲಿಟ್ಟೆವು. ಅವಕಾಶಗಳೇನೂ ಸಿಗದಿದ್ದರೆ ಬಡ್ಡಿಯಲ್ಲಿ ಜೀವನ ಮಾಡೋಣ ಅಂತ ಅಂದುಕೊಂಡೆವು… – ಇಷ್ಟು ಹೇಳಿದ ಶೈಲಶ್ರೀ, ಒಮ್ಮೆ ಗೋಡೆ ಮೇಲಿನ ಸುದರ್ಶನ್ ಫೋಟೋ ನೋಡಿಕೊಂಡರು. ತುಟಿ ಪಟಪಟ ಅಲುಗಾಡಿತು!

ಈಗ ಶೈಲಶ್ರೀ ಅವರ ಸಿನಿಮಾ ಬದುಕಿನ ವಿವರಗಳತ್ತ ಬರುವುದಿದ್ದರೆ; ನಿಮಗೆ ಆಶ್ಚರ್ಯವಾಗಬಹುದು. ಯೌವನದಲ್ಲಿ ಚೆಂದುಳ್ಳಿ ಚೆಲುವೆಯಾಗಿದ್ದ ಶೈಲಶ್ರೀ ಇಂಡಿಯನ್ ಏರ್​ಲೈನ್ಸ್​ನಲ್ಲಿ ಗಗನಸಖಿಯಾಗಿದ್ದವರು! ಆ ಹುದ್ದೆಗೆ ರಾಜೀನಾಮೆ ನೀಡಿ ಚಿತ್ರರಂಗಕ್ಕೆ ಕಾಲಿಟ್ಟ ಅವರು ನಟಿಸಿದ ಮೊಟ್ಟ ಮೊದಲ ಚಿತ್ರ ‘ಸಂಧ್ಯಾರಾಗ’. ಮತ್ತೆ ಹಿಂದಿರುಗಿ ನೋಡದ ಚೆಲುವೆ, ‘ಬಂಗಾರದ ಹೂವು’, ‘ಕಾಡಿನ ರಹಸ್ಯ’, ‘ಮನಸ್ಸಿದ್ದರೆ ಮಾರ್ಗ’, ‘ವಾಗ್ದಾನ’… ಮೊದಲಾದ ಚಿತ್ರಗಳಲ್ಲಿ ನಟಿಸಿದರು. ನಾಯಕ ನಟ ಸುದರ್ಶನ್ 1971ರಲ್ಲಿ ನಿರ್ವಿುಸಿದ ‘ನಗುವ ಹೂವು’ ಚಿತ್ರದಲ್ಲಿ ಮನೋಜ್ಞವಾಗಿ ನಟಿಸಿ ಉದ್ಯಮದ ಜತೆಗೆ ಸುದರ್ಶನ್ ಅವರ ಗಮನ ಸೆಳೆದರು! ಇವರಿಬ್ಬರ ನಡುವೆ ಪ್ರೇಮಾಂಕುರವಾದದ್ದು ಇದೇ ಸಮಯದಲ್ಲಿ. ಕೊನೆಗೆ 1974ರಲ್ಲಿ ತಯಾರಾದ ‘ಬಂಗಾರದ ಪಂಜರ’ ಚಿತ್ರದ ಸಂದರ್ಭದಲ್ಲಿ ಮದುವೆಯಾದರು..

-ಇವಿಷ್ಟು ಸಂಕ್ಷಿಪ್ತವಾಗಿ ಶೈಲಶ್ರೀ ಸುದರ್ಶನ್ ಬದುಕಿನ ನೋಟ. ಇನ್ನು ಅವರ ಇಂದಿನ ಬದುಕಿನ ಕಥೆ- ವ್ಯಥೆಯತ್ತ ಬರುವುದಿದ್ದರೆ: ‘ಹಾಗೆ ತುಂಬ ನಿರೀಕ್ಷೆಯಿಟ್ಟು ಚೆನ್ನೈನಿಂದ ಬೆಂಗಳೂರಿಗೆ ಬಂದವರಿಗೆ ನಿರಾಸೆ ಕಾದಿತ್ತು. ಕೈತುಂಬ ಅವಕಾಶ ಸಿಗುವುದೆಂದು ಹುರಿದುಂಬಿಸಿದವರು ಎಲ್ಲಿ ಮಾಯವಾದರೋ ಕಾಣೆ? ಕೈಗೆ ಸಿಕ್ಕಿದ್ದು ಒಂದೆರಡು ಚಿತ್ರಗಳ ಅವಕಾಶ. ಬಾಡಿಗೆ ಮನೆ ಹಿಡಿದುಕೊಂಡೆವು. ಈ ಹಂತದಲ್ಲಿ ಇಲ್ಲಸಲ್ಲದ ಗಾಸಿಪ್ ಸುದ್ದಿಗಳು ಹರಡಿದವು. ಗತಿಗೋತ್ರವಿಲ್ಲದೆ ದಂಪತಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ, ಕೊನೆಗೆ ಜಗ್ಗೇಶ್ ಅವರಿಗೊಂದು ಮನೆ ಮಾಡಿಕೊಟ್ಟು ಅವರ ಬದುಕಿಗೆ ಆಧಾರವಾದರು.. ಎಂಬಂಥ ಗಾಸಿಪ್​ಗಳು! ಆದರೆ ನಡೆದದ್ದೇ ಬೇರೆ. ಆ ಕಥೆ ಇಲ್ಲಿ ಅಗತ್ಯವಿಲ್ಲ!! ಬೆಂಗಳೂರಿನಲ್ಲಿ ಕಷ್ಟಕರ ಬದುಕು ಸಾಗಿಸಬೇಕಾಗಿತ್ತು. ಸಂಪಾದನೆಯಿಲ್ಲದೆ ಇವರು ಮನೆಯಲ್ಲೇ ಕೂರುವಂತಾಯಿತು. ನಾನು ನೃತ್ಯ ಕ್ಲಾಸುಗಳ ಮೊರೆ ಹೋದೆ. ಅಕ್ಕಪಕ್ಕದ ಮನೆಯವರ ಮಕ್ಕಳಿಗೆ ನೃತ್ಯ, ಸಂಗೀತ ಹೇಳತೊಡಗಿದೆ. ಈ ನಡುವೆ ನಮ್ಮವರು ಕಾಯಿಲೆ ಬಿದ್ದರು. ಎಲ್ಲಿಂದಲೋ ಎಷ್ಟೇ ಸಹಾಯ ಬಂದರೂ ನಮ್ಮ ಕೈಯಿಂದ ಖರ್ಚಾಗುವುದು ತಪ್ಪಲಿಲ್ಲ. ಬ್ಯಾಂಕ್​ನಲ್ಲಿಟ್ಟ ಹಣ ಮುಗಿಯುತ್ತ ಬಂತು. ಬಡ್ಡಿ ಹಣ ಶೂನ್ಯವಾಯಿತು. ಮತ್ತೆ ಕಾಯಿಲೆ ಬಿದ್ದರು ನಮ್ಮವರು. ಈಗ ಸಂಪೂರ್ಣವಾಗಿ ಕೈ ಬರಿದು ಮಾಡಿಕೊಂಡೆವು. ಕೊನೆಗೂ ನಮ್ಮವರು ಬದುಕಿ ಉಳಿಯಲಿಲ್ಲ. ನನ್ನನ್ನು ಅನಾಥಳನ್ನಾಗಿ ಮಾಡಿ ಹೊರಟು ಹೋದರು…’

ಮತ್ತೆ ಗೋಡೆ ಮೇಲಿನ ಸುದರ್ಶನ್ ಫೋಟೋ ನೋಡಿದರು. ಅಸಹಾಯಕರಾಗಿ ಕಣ್ಣೀರಿಡುತ್ತ ಹೇಳತೊಡಗಿದರು; ‘ಈಗ ಈ ಕಾಂಕ್ರೀಟ್ ಕಾಡಿನಲ್ಲಿ ನನ್ನ ಒಂಟಿ ಬದುಕು ಸಾಗಿದೆ. ನೃತ್ಯ, ಸಂಗೀತ ಹೇಳಿಕೊಟ್ಟು ಇಲ್ಲಿ ಬದುಕಲು ಸಾಧ್ಯವೇ? ಹೀಗಾಗಿ ಕಿರುತೆರೆಯ ಧಾರಾವಾಹಿಗಳಲ್ಲಿ ನಟಿಸಲು ಶುರು ಮಾಡಿದ್ದೇನೆ. ರವಿ ಗರಣಿ ಕರೆದು ತಮ್ಮ ಧಾರಾವಾಹಿಯಲ್ಲಿ ಅವಕಾಶ ಮಾಡಿಕೊಟ್ಟಿದ್ದಾರೆ. ಅವರ ಹೊಟ್ಟೆ ತಣ್ಣಗಿರಲಿ. ಇದು ಸಾಕಾಗಲ್ಲ. ಸಿನಿಮಾ ಅವಕಾಶಗಳು ಸಿಕ್ಕರೆ ನಾನು ಬಚಾವ್. ಕನಿಕರದಿಂದ, ಕರುಣೆಯಿಂದ ಬಿಟ್ಟಿ ಕೊಡುವ ದುಡ್ಡು ನನಗೆ ಬೇಡ. ನಾನು ಮಹಾಸ್ವಾಭಿಮಾನಿ. ಕೊಡುವುದಿದ್ದರೆ ಸಿನಿಮಾಗಳಲ್ಲಿ ನಟಿಸುವ ಅವಕಾಶ ಮಾಡಿಕೊಡಿ. ಅಷ್ಟು ಸಾಕು, ಹೇಗೋ ಬದುಕಿಕೊಳ್ಳುತ್ತೇನೆ..’ – ಎಂದು ಹೇಳುತ್ತ ಮತ್ತೆ ಮೂರನೇ ಬಾರಿಗೆ ಗೋಡೆ ಮೇಲಿನ ಯಜಮಾನರ ಫೋಟೋ ನೋಡಿದರು. ಕಣ್ಣಂಚಿನಲ್ಲಿ ಗಳಗಳ ನೀರು! ಕನ್ನಡ ಚಿತ್ರರಂಗದ ಪಿತಾಮಹರಾದ ಆರ್. ನಾಗೇಂದ್ರರಾಯರ ಸೊಸೆಗೆ ಇಂಥಾ ಗತಿಯೇ? ಇನ್ನು ಆರು ತಿಂಗಳಲ್ಲಿ ಆ ಬಾಡಿಗೆ ಮನೆಯನ್ನು ಖಾಲಿ ಮಾಡಬೇಕು. ಅಲ್ಲಿಯವರೆಗೆ ಓನರ್ ಬಾಡಿಗೆ ಹೆಚ್ಚಿಸುವುದಿಲ್ಲ ಎಂದು ಪ್ರಾಮಿಸ್ ಮಾಡಿದ್ದಾರಂತೆ. ಅಕ್ಕಪಕ್ಕದ ಮನೆಯವರು ಇವರನ್ನು ಸ್ವಂತ ಬಂಧುವಿನಂತೆಯೇ ನೋಡಿಕೊಳ್ಳುತ್ತಿದ್ದಾರೆ. ಆದರೆ ಇದು ಎಷ್ಟು ಸಮಯ? ಮುಂದೇನು ಎಂಬ ಯಕ್ಷಪ್ರಶ್ನೆ ಒಂದು ಕಾಲದ ಬೇಡಿಕೆಯ ಈ ನಟಿಯನ್ನು ಕಾಡುತ್ತಿದೆ. ಕಿವಿ, ಕಣ್ಣಿದ್ದವರು ಈ ಕಡೆ ಗಮನಿಸಬಹುದು..

Leave a Reply

Your email address will not be published. Required fields are marked *

Back To Top