ಸುಗ್ಗಿ ಹಬ್ಬಕ್ಕೆ ಚಾಲನೆ

ಗೋಕರ್ಣ: ಹಾಲಕ್ಕಿ ಒಕ್ಕಲಿಗರ ಹುಳಸೇಕೇರಿ ಪಂಗಡ ವತಿಯಿಂದ ಪಾರಂಪರಿಕ ಸುಗ್ಗಿ ಉತ್ಸವ ಬುಧವಾರ ರಾತ್ರಿ ವಿಧ್ಯುಕ್ತವಾಗಿ ಆರಂಭವಾಯಿತು. ಕ್ಷೇತ್ರ ಪದ್ಧತಿಯಂತೆ ಹಿಲಾಲು ಗೌರವ ಸನ್ಮಾನದೊಂದಿಗೆ ಮಹಾಬಲೇಶ್ವರ ಮಂದಿರಕ್ಕೆ ಆಗಮಿಸಿದ ಸುಗ್ಗಿ ತಂಡ ಆತ್ಮಲಿಂಗಕ್ಕೆ ವಿಶೇಷ ಕುಣಿತ ಸೇವೆ ಸಮರ್ಪಿಸಿತು.

ಆಡಳಿತ ಪ್ರಮುಖ ಜಿ.ಕೆ. ಹೆಗಡೆ ಹುಳಸೇಕೇರಿ ಪಂಗಡದ ಅರಸು ಗೌಡರಾದ ಮಹಾಬಲೇಶ್ವರ ಗೌಡರಿಗೆ ಮಂದಿರದ ವತಿಯಿಂದ ಗೌರವಿಸಿದರು. ನಂತರ ಶ್ರೀದೇವರ ಉತ್ಸವದೊಂದಿಗೆ ಸಾಗಿದ ಸುಗ್ಗಿ ತಂಡ ಪಟ್ಟವಿನಾಯಕ ಮಂದಿರಕ್ಕೆ ತೆರಳಿತು. ಮಧ್ಯರಾತ್ರಿ ವೇಳೆ ಅಲ್ಲಿಂದ ಮಹಾಗಣಪತಿ ಮಂದಿರಕ್ಕೆ ಬಂದ ಸುಗ್ಗಿ ಉತ್ಸವ ಕಾಮ ದಹನದಲ್ಲಿ ಪಾಲ್ಗೊಂಡಿತು. ಪ್ರಸಾದ ರೂಪದಲ್ಲಿ ಕಾಮ ದಹನದ ಕರಿ ಪ್ರಸಾದ ವಿತರಣೆಯೊಂದಿಗೆ ಸುಗ್ಗಿ ಹಬ್ಬದ ಮೊದಲ ದಿನದ ಕಾರ್ಯಕ್ರಮ ಕೊನೆಯಾಯಿತು. ಸಾವಿರಾರು ಜನ ಕಾರ್ಯಕ್ರಮದಲ್ಲಿ ಭಾಗವಹಿಸಿ ಧಾರ್ವಿುಕ ಮತ್ತು ಜಾನಪದ ಪದ್ಧತಿಯಂತೆ ನಡೆದ ವಿವಿಧ ಪ್ರಕ್ರಿಯೆಗಳನ್ನು ವೀಕ್ಷಿಸಿದರು.