ಸುಗಮ ಸಂಗೀತಕ್ಕೆ ಪ್ರತ್ಯೇಕ ಗೋಷ್ಠಿ ನಡೆಸಲಿ

ಧಾರವಾಡ: ಈ ಮೊದಲಿನ ದಿನಗಳಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಸುಗಮ ಸಂಗೀತಕ್ಕೆ ಪ್ರತ್ಯೇಕ ಗೋಷ್ಠಿಗಳನ್ನು ಏರ್ಪಡಿಸಲಾಗುತ್ತಿತ್ತು. ಆದರೆ, ಸುಮಾರು ಎರಡು ವರ್ಷಗಳಿಂದ ಈ ಗೋಷ್ಠಿ ಏರ್ಪಡಿಸುತ್ತಿಲ್ಲ. ಕಸಾಪ ರಾಜ್ಯಾಧ್ಯಕ್ಷ ಡಾ. ಮನು ಬಳಿಗಾರ ಅವರು ಇಂತಹ ಮನೋಧರ್ಮ ಪ್ರದರ್ಶಿಸುವುದು ಸರಿಯಲ್ಲ ಎಂದು ಅಭಿಪ್ರಾಯ ವ್ಯಕ್ತವಾಯಿತು.

ಕನ್ನಡ ಸಾಹಿತ್ಯ ಸಮ್ಮೇಳನ ಅಂಗವಾಗಿ ಕೃವಿವಿ ಆವರಣದ ಪ್ರೇಕ್ಷಾಗೃಹ ಸಭಾಂಗಣದಲ್ಲಿ ಭಾನುವಾರ ಜರುಗಿದ ಕಾವ್ಯ ಪ್ರಚಾರದ ವಿಭಿನ್ನ ನೆಲೆಗಳು ಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ಸಾಹಿತಿಗಳು ಅಸಮಾಧಾನ ಹೊರಹಾಕಿದರು.

ಕೇವಲ ಗೋಷ್ಠಿಗಳಲ್ಲಿ ಮಾತ್ರವಲ್ಲದೆ ಸಾಹಿತ್ಯ ಸಮ್ಮೇಳನದ ಎಲ್ಲ ವೇದಿಕೆಗಳಲ್ಲಿ ಸರ್ವಾಧ್ಯಕ್ಷರ ಜೊತೆ ಕಸಾಪ ರಾಜ್ಯಾಧ್ಯಕ್ಷ ಭಾವಚಿತ್ರ ಅಳವಡಿಸುವ ಪದ್ಧತಿ ಜಾರಿಗೊಳಿಸಿದ್ದಾರೆ. ಇದು ಸರಿಯಾದ ಕ್ರಮವಲ್ಲ. ಇದು ಕನ್ನಡಿಗರ ಹಬ್ಬ ಎಂದು ತಿಳಿಯಬೇಕು. ಹೀಗಾಗಿ ರಾಜ್ಯಾಧ್ಯಕ್ಷರು ಈ ಮನೋಧರ್ಮ ಕೈಬಿಡಬೇಕು ಎಂಬ ಮಾತುಗಳು ಸಹ ಕೇಳಿಬಂದವು.

ಆಶಯ ನುಡಿ ಮಂಡಿಸಿದ ಸಾಹಿತಿ ಬಿ.ಆರ್. ಲಕ್ಷ್ಮಣರಾವ್ ಅವರು, ಕಾವ್ಯ ಪ್ರಚಾರದಲ್ಲಿ ಸಂಗೀತ ವಹಿಸಿರುವ ಪಾತ್ರ ಏನು ಎಂಬುದು ಅತ್ಯಂತ ಮುಖ್ಯವಾಗಿದೆ. ಕಾವ್ಯ ಮತ್ತು ಸಂಗೀತಕ್ಕೆ ಅವಿನಾಭಾವ ಸಂಬಂಧವಿದೆ. ಶುದ್ಧ ಶಾಸ್ತ್ರೀಯ ಸಂಗೀತಕ್ಕೆ ಸಾಹಿತ್ಯದ ಹಂಗಿಲ್ಲ. ಅಭಿಜಾತ ಕವಿಗಳಾದ ಪಂಪ, ರನ್ನ, ಕುಮಾರವ್ಯಾಸ, ಕುವೆಂಪು ಅವರ ಕೃತಿಗಳು ಇನ್ನೂ ಜನರ ಮನಸ್ಸಿನಲ್ಲಿವೆ ಎಂದರು.

ಅಭಿಜಾತ ಕಾವ್ಯ ಜನರಿಗೆ ತಲುಪಲು ಗಮಕ ಮುಖ್ಯ. ಸುಗಮ ಸಂಗೀತಕ್ಕೆ ಕಾವ್ಯವೇ ಜೀವಾಳ. ಕಾವ್ಯವನ್ನು ಜನರಿಗೆ ತಲುಪಿಸುವ ಕೆಲಸವನ್ನು ಸುಗಮ ಸಂಗೀತ ಮಾಡುತ್ತಿದೆ. ಇಂದಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚಾಗಿದ್ದರಿಂದ ಸಿಡಿಗಳಿಗೆ ಬೆಲೆಯೇ ಇಲ್ಲದಂತಾಗಿದೆ. ಇದೇ ಕಾರಣದಿಂದ ರೆಕಾರ್ಡಿಂಗ್​ಗೆ ಕಂಪನಿಗಳು ಮುಂದಾಗುತ್ತಿಲ್ಲ. ಮಾರಾಟ ವ್ಯವಸ್ಥೆಯೂ ಇಲ್ಲದಂತಾಗಿದೆ. ಸುಗಮ ಸಂಗೀತ, ಗಮಕಗಳು ಹೊಸ ಆಯಾಮ ಕಂಡುಕೊಂಡು ಹೊಸ ಪ್ರಚಾರದತ್ತ ಗಮನಹರಿಸಬೇಕು ಎಂದರು.

ವೈ.ಕೆ. ಮುದ್ದುಕೃಷ್ಣ ಅವರು ಸುಗಮ ಸಂಗೀತ ಕುರಿತು ಮಾತನಾಡಿ, ಸುಗಮ ಸಂಗೀತವನ್ನು ಒಂದು ಕ್ಷೇತ್ರ, ಪ್ರಕಾರ ಎಂದು ಪರಿಶೀಲಿಸಿದರೆ 20ನೇ ಶತಮಾನದ ಕೂಸು ಎನ್ನಬಹುದು. 60-80ರ ದಶಕದವರೆಗೆ ಚಲನಚಿತ್ರ ವಾದ್ಯದ ಅಬ್ಬರವೇ ಹೆಚ್ಚಾಗಿತ್ತು. ನಂತರದಲ್ಲಿ ನಿತ್ಯೋತ್ಸವ ಧ್ವನಿಸುರಳಿ ಬಿಡುಗಡೆಯಾಗುತ್ತಿದ್ದಂತೆ ಸುಗಮ ಸಂಗೀತ ಮುಂಚೂಣಿಗೆ ಬಂದಿತು ಎಂದರು.

ಸಿ. ಅಶ್ವತ್ಥ ಅವರಿಗೆ ಸುಗಮ ಸಂಗೀತದ ಹುಚ್ಚು ಹೆಚ್ಚಾಗಿತ್ತು. ಹೀಗಾಗಿ 14 ಜಿಲ್ಲೆಗಳಲ್ಲಿ ಸುಗಮ ಸಂಗೀತದ ಪ್ರಚಾರ ನಡೆಸಿದ್ದೇವು. ಕಾವ್ಯ ಹುಟ್ಟಿದ್ದು ವಿವಿಧ ಕಾಲಘಟ್ಟದಲ್ಲಿ. ಓದುವ ಕಾವ್ಯವನ್ನು ಇಂದು ಸಾಕಷ್ಟು ಜನರು ರಚಿಸುತ್ತಾರೆ. ಆದರೆ, ಸಂಗೀತ ಸಂಯೋಜನೆ ಮಾಡುವಂತೆ ರಚನೆ ಮಾಡುವುದು ಕಡಿಮೆಯಾಗಿದೆ. ಕಾವ್ಯ ಮತ್ತು ಸಂಗೀತ ಬರೆಯುವವರಿಗೆ, ಸಂಯೋಜಕರಿಗೆ, ಹಾಡುಗಾರರಿಗೆ ವ್ಯಕ್ತಿತ್ವ ಕಟ್ಟಿಕೊಡುತ್ತದೆ ಎಂದರು.

ರತ್ನಾ ಮೂರ್ತಿ ಅವರು ಗಮಕ ಕುರಿತು ಮಾತನಾಡಿ, ಗಮಕ ಬಿಟ್ಟು ಹಳೆಗನ್ನಡ ಬಗ್ಗೆ ರ್ಚಚಿಸಲು ಸಾಧ್ಯವಿಲ್ಲ. ಹಳೆಗನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಗಮಕ ಚರ್ಚೆ ಕೈಬಿಟ್ಟಿದ್ದರು. ಇದು ಗಮಕಿಗಳಿಗೆ ನೋವು ತಂದಿದೆ. ಮುಂದಿನ ದಿನಗಳಲ್ಲಿ ಇಂತಹ ತಪ್ಪುಗಳು ನಡೆಯದಂತೆ ಆಯೋಜಕರು ಗಮನಿಸಬೇಕು. ಬರೆದ ಕಾವ್ಯ ಓದಿ ಸಹೃದಯರಿಗೆ ತಲುಪದಿದ್ದರೆ, ಅಕ್ಷರ ರೂಪದಲ್ಲಿ ಮಾತ್ರ ಉಳಿದು ಬೆಳಕಿಗೆ ಬರುವುದಿಲ್ಲ. ಲವ-ಕುಶರು ಪ್ರಥಮ ಗಮಕಿಗಳು ಎಂಬ ನಂಬಿಕೆ ಇದೆ. ಗಮಕಿಗಳಿಗೆ ಸಾಹಿತ್ಯದ ತಿಳಿವಳಿಕೆ ಸರಿಯಾಗಿರಬೇಕು ಎಂದರು.

ರಾಧಿಕಾ ಕಾಖಂಡಕಿ ಅವರು ಶಾಸ್ತ್ರೀಯ ಸಂಗೀತ ಕುರಿತು ಮಾತನಾಡಿ, ಶಾಸ್ತ್ರೀಯ ಸಂಗೀತದಲ್ಲಿ ಡಾ. ಮಲ್ಲಿಕಾರ್ಜುನ ಮನಸೂರ, ಪಂ. ಭೀಮಸೇನ್ ಜೋಶಿ, ಪಂ. ರಾಜಗುರು ಅವರು ಪ್ರಸಿದ್ಧರಾಗಿದ್ದಾರೆ. ಸಂಗೀತ ಸಂಯೋಜನೆ ಮಾಡಲು ಸಂಗೀತ ಮತ್ತು ಸಾಹಿತ್ಯದಲ್ಲಿ ಪರಿಣಿತಿ ಹೊಂದಿರಬೇಕು. ಪ್ರಚಾರಕ್ಕಿಂತ ಜನರ ಮನಸ್ಸಿನಲ್ಲಿ ಅಚ್ಚಳಿಯಬೇಕು. ಇದಕ್ಕೆ ಕಾವ್ಯ ಸಂಯೋಜನೆ ಮುಖ್ಯ ಎಂದರು.

ಡಾ.ಟಿ.ಎಸ್. ಸತ್ಯವತಿ ಅಧ್ಯಕ್ಷತೆ ವಹಿಸಿದ್ದರು. ಡಾ. ಪದ್ಮಾ ಚಿನ್ಮಯ ಸ್ವಾಗತಿಸಿದರು. ಡಾ. ರತ್ನಶೀಲಾ ಗುರಡ್ಡಿ ನಿರೂಪಿಸಿದರು.