ಸುಖ ಪ್ರಾಪ್ತಿಗೆ ಧಾರ್ವಿುಕ ಕಾರ್ಯ ಅಗತ್ಯ

ಧಾರವಾಡ: ಪ್ರತಿಯೊಬ್ಬರೂ ಜೀವನದಲ್ಲಿ ಕಷ್ಟಗಳು ಬಾರದೇ, ಸುಖವಾಗಿ ಇರಬೇಕೆಂದು ಬಯಸುತ್ತಾರೆ. ಆದರೆ ಸುಖವಾಗಿರಲು ಏನು ಮಾಡಬೇಕು ಎಂಬುದನ್ನು ಮರೆಯುತ್ತಾರೆ. ಸುಖ ಪ್ರಾಪ್ತಿಗೆ ಧಾರ್ವಿುಕ ಕಾರ್ಯಗಳನ್ನು ಮಾಡಬೇಕು ಎಂದು ಶೃಂಗೇರಿಯ ಕಿರಿಯ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಹೇಳಿದರು.

ವಿಜಯಯಾತ್ರೆ ಪ್ರಯುಕ್ತ ನಗರಕ್ಕೆ ಆಗಮಿಸಿರುವ ಅವರು ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಮಂಗಳವಾರ ಸಂಜೆ ನಾಗರಿಕರಿಂದ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.  ಮನುಷ್ಯ ಶರೀರ, ಮನಸ್ಸು ಮತ್ತು ಮಾತನ್ನು ಧರ್ಮದ ಕಾರ್ಯಕ್ಕೆ ಬಳಸಿಕೊಳ್ಳಬೇಕು. ಲೋಕದಲ್ಲಿ ಬೆಲ್ಲದ ಮಾಧುರ್ಯದಂಥ ಅನುಭವ ಪಡೆಯಲು ಈ ಮೂರನ್ನು ಒಳ್ಳೆಯದಕ್ಕೆ ಉಪಯೋಗಿಸಬೇಕು. ಆದರೆ ಮನುಷ್ಯನು ಶರೀರವನ್ನು ದುಡಿಸಿಕೊಳ್ಳದೇ ಸುಖ ಬೇಡುತ್ತಾನೆ. ಉತ್ತಮ ಕೆಲಸ ಮಾಡಿದಾಗ ಮಾತ್ರ ಭಗವಂತನ ಅನುಗ್ರಹ ಪ್ರಾಪ್ತಿಯಾಗುತ್ತದೆ. ಒಳ್ಳೆಯ ಕೆಲಸಕ್ಕೆ ವಿಘ್ನಗಳು ಬರುತ್ತವೆ. ಅವುಗಳನ್ನು ಸಮರ್ಥವಾಗಿ ಎದುರಿಸಿದಾಗ ಮಾತ್ರ ಬದುಕಿನಲ್ಲಿ ಯಶಸ್ಸು ದೊರೆಯಲು ಸಾಧ್ಯವಾಗುತ್ತದೆ ಎಂದರು.

ನಾವು ಮಾಡುವ ಕರ್ಮಗಳನ್ನು ನೋಡಿ ಭಗವಂತ ಫಲ ಕೊಡುತ್ತಾನೆ. ಜಗತ್ತಿನಲ್ಲಿ ಎಲ್ಲರಿಗೂ ಕಷ್ಟ- ದುಃಖಗಳು ಸಹಜ. ಉತ್ತಮ ಕಾರ್ಯಗಳಿಂದ ಸುಖ, ಕೆಟ್ಟದ್ದರಿಂದ ಕಷ್ಟಗಳು ಎದುರಾಗುತ್ತವೆ. ಮನುಷ್ಯ ಒಳ್ಳೆಯದನ್ನು- ಕೆಟ್ಟದ್ದನ್ನು ಮಾಡಿದರೆ ಕಷ್ಟ- ಸುಖ ಎದುರಾಗುತ್ತವೆ ಎಂದರು.  ಇದೇ ಸಂದರ್ಭದಲ್ಲಿ ಶ್ರೀಗಳಿಗೆ ನಾಗರಿಕರು ಅಭಿನಂದನಾ ಪತ್ರ ಹಾಗೂ ಫಲ- ಪುಷ್ಪ ಸಮರ್ಪಿಸಿದರು.

ಶೃಂಗೇರಿ ಪೀಠದ ಆಡಳಿತಾಧಿಕಾರಿ ಡಾ. ವಿ.ಆರ್. ಗೌರೀಶಂಕರ ಮಾತನಾಡಿ, ಶೃಂಗೇರಿ ಮಠಕ್ಕೆ ಅಪಾರವಾದ ಶಿಷ್ಯವೃಂದವಿದೆ. ಮಠವು ಗುರು- ಶಿಷ್ಯ ಪರಂಪರೆಯಿಂದ ಪ್ರಸಿದ್ಧಿಯಾಗಿದೆ. ಸಾಮಾಜಿಕ ಸಮಸ್ಯೆಗಳು ನಿವಾರಣೆಯಾಗಬೇಕಾದರೆ ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿ- ಪರಂಪರೆಯನ್ನು ತಿಳಿಸಿಕೊಡಬೇಕು. ಕಾಲ ಬದಲಾಗಿಲ್ಲ, ನಮ್ಮ ಮನೋಭಾವ ಬದಲಾಗಿದೆ. ಧರ್ಮದ ಬಗ್ಗೆ ಪ್ರತಿಯೊಬ್ಬರೂ ಚಿಂತನೆ ಮಾಡಬೇಕು. ಅದಕ್ಕಾಗಿ ಮಠದಿಂದ ಇಂಥ ವಿಜಯಯಾತ್ರೆ ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ಪಂ. ಮಧುಸೂದನ ಶಾಸ್ತ್ರಿ ಹಂಪಿಹೊಳಿ, ಡಾ. ಎಚ್.ವಿ. ಡಂಬಳ, ಪಂ. ನಾಗೇಶ ಶಾಸ್ತ್ರಿ, ಜಿ.ಆರ್. ಕುಲಕರ್ಣಿ, ರಾಜು ಪಾಟೀಲ ಕುಲಕರ್ಣಿ, ರವಿ ದೇಶಪಾಂಡೆ, ವೇಣಿಮಾಧವ ಶಾಸ್ತ್ರಿ, ಕೃಷ್ಣ ಜೋಶಿ, ಪ್ರಕಾಶ ಉಡಿಕೇರಿ, ನಿಂಗಣ್ಣ ಕುಂಟಿ, ಶಂಕರ ಕುಲಕರ್ಣಿ, ಇತರರು ಇದ್ದರು.

ಶೃಂಗೇರಿ ಶ್ರೀಗಳ ಇಂದಿನ ಕಾರ್ಯಕ್ರಮ

ವಿಜಯಯಾತ್ರೆ ಪ್ರಯುಕ್ತ ನಗರಕ್ಕೆ ಆಗಮಿಸಿರುವ ಶೃಂಗೇರಿಯ ಕಿರಿಯ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ನ. 14ರಂದು ವಿವಿಧ ಧಾರ್ವಿುಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವರು. ನಗರದ ಯಾಲಕ್ಕಿ ಶೆಟ್ಟರ್ ಕಾಲನಿಯ ಶ್ರೀ ಶಂಕರ ಮಠದಲ್ಲಿ ಬೆಳಗ್ಗೆ 8ಕ್ಕೆ ಶ್ರೀಮಠದ ಅರ್ಚಕರಿಂದ ಶ್ರೀ ಶಾರದಾ ಚಂದ್ರಮೌಳೇಶ್ವರ ಪೂಜೆ ನೆರವೇರಲಿದೆ. 10 ಗಂಟೆಗೆ ಶ್ರೀಗಳು ಶ್ರೀ ಶಾರದಾಂಬೆ ಹಾಗೂ ಶ್ರೀ ಶಂಕರಾಚಾರ್ಯರ ಮೂರ್ತಿಗಳಿಗೆ ಕುಂಭಾಭಿಷೇಕ ನೆರವೇರಿಸುವರು. ನಂತರ ಭಕ್ತರಿಂದ ಪಾದಪೂಜೆ, ಭಿಕ್ಷಾವಂದನೆ ಸ್ವೀಕರಿಸುವರು. ನಂತರ ಭಕ್ತರಿಗೆ ಫಲಮಂತ್ರಾಕ್ಷತೆ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.