ಬಸವಕಲ್ಯಾಣ: ಬಸವಾದಿ ಶರಣರ ಅನುಭಾವದಿಂದ ಹೊರಹೊಮ್ಮಿದ ವಚನಗಳೇ, ನಮ್ಮ ಧರ್ಮ ಗ್ರಂಥವಾಗಿ ರೂಪ ತಾಳಿದೆ ಎಂದು ಭಾಲ್ಕಿಯ ಶ್ರೀ ಗುರುಬಸವ ಪಟ್ಟದ್ದೇವರು ನುಡಿದರು.
ವಿಶ್ವ ಬಸವಧರ್ಮ ಟ್ರಸ್ಟ್ ಅನುಭವ ಮಂಟಪದಿಂದ ನಡೆಯಯಲಿರುವ ೪೫ನೇ ಶರಣ ಕಮ್ಮಟ ಹಾಗೂ ಅನುಭವ ಮಂಟಪ ಉತ್ಸವ-೨೦೨೪ ನಿಮಿತ್ತ ಅಕ್ಕಮಹಾದೇವಿ ಕಾಲೇಜು ಮೈದಾನದ ಪ್ರವಚನದ ವೇದಿಕೆಯಲ್ಲಿ ನ.೧೬ ರಿಂದ ೨೨ರ ವರೆಗೆ ನಡೆಯುವ ಸಾಮೂಹಿಕ ವಚನ ಪಾರಾಯಣದ ಕರಪತ್ರ ಬಿಡುಗಡೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಪೂಜ್ಯರು ಮಾತನಾಡಿದರು.
ಇಂದು ನಮ್ಮ ಜೀವನ ಸುಖಿ ಮತ್ತು ಸಂತೃಪ್ತ ಮಾಡಿಕೊಳ್ಳಬೇಕಾದರೆ ವಚನಗಳ ಅಧ್ಯಯನ ಅತ್ಯಂತ ಅವಶ್ಯಕವಾಗಿದೆ. ಅದರಲ್ಲಿಯೂ ವಿಶೇಷವಾಗಿ ಬಸವಣ್ಣನವರ ವಚನಗಳು ದುಃಖಿತರನ್ನು ಸಮಾಧಾನ ಪಡಿಸುತ್ತವೆ. ಕಷ್ಟದಲ್ಲಿದ್ದವರಿಗೆ ಧೈರ್ಯ ಮತ್ತು ಆತ್ಮಸ್ಥೈರ್ಯ ತುಂಬುತ್ತವೆ. ಬಡವ, ದೀನ, ದುಃಖಿತರ ಕುರಿತು ಪ್ರೀತಿಯನ್ನು ಹೆಚ್ಚಿಸುತ್ತವೆ. ಧಾರ್ಮಿಕ ತತ್ವಗಳ ಜತೆಗೆ ಬದುಕುವ ವಿಧಾನವನ್ನು ಕಲಿಸಿಕೊಡುತ್ತವೆ ಎಂದು ಹೇಳಿದರು.
ಮನಗುಂಡಿಯ ಶ್ರೀ ಬಸವಾನಂದ ಸ್ವಾಮೀಜಿ ಅವರು ವಚನಗಳಲ್ಲಿ ಆರೋಗ್ಯ-ಅಧ್ಯಾತ್ಮ ಕುರಿತು ಪ್ರವಚನ ನಡೆಸಿಕೊಟ್ಟರು. ಸಹಾಯಕ ಆಯುಕ್ತ ಮುಕುಲ ಜೈನ್ ಕಾರ್ಯಕ್ರಮ ಉದ್ಘಾಟಿಸಿದರು. ಸಾಮೂಹಿಕ ವಚನ ಪಾರಾಯಣದ ಕರಪತ್ರವನ್ನು ತಹಸೀಲ್ದಾರ್ ಡಾ.ದತ್ತಾತ್ರೇಯ ಗಾದಾ ಬಿಡುಗಡೆ ಮಾಡಿದರು.
ಶ್ರೀ ಬಸವೇಶ್ವರ ದೇವಸ್ಥಾನ ವಿಶ್ವಸ್ಥ ಮಂಡಳಿ ಅಧ್ಯಕ್ಷ ಶಶಿಕಾಂತ ದುರ್ಗೆ, ಬಿಡಿಪಿಸಿ ನಿರ್ದೇಶಕ ಜಗನ್ನಾಥ ಖೂಬಾ ಇತರರಿದ್ದರು. ಸಾಮೂಹಿಕ ವಚನ ಪಾರಾಯಣ ಸೇವಾ ಸಮಿತಿಯ ಅಧ್ಯಕ್ಷರಾಗಿ ಡಾ.ಸಂಗೀತಾ ರಮೇಶ ಮಂಠಾಳೆ ಹಾಗೂ ಕಾರ್ಯಾಧ್ಯಕ್ಷರಾಗಿ ಪ್ರೊ.ಮೀನಾಕ್ಷಿ ಪ್ರಭು ಬಿರಾದಾರ ಅವರನ್ನು ನೇಮಕ ಮಾಡಲಾಗಿದ್ದು, ಇವರನ್ನು ಪೂಜ್ಯರು ಸನ್ಮಾನಿಸಿ ಆಶೀರ್ವದಿಸಿದರು.
ಬಸವಣ್ಣನವರ ವಚನಗಳು ನಮಗೆ ಪರಮಾತ್ಮನ ಸನ್ನಿಧಿಯಲ್ಲಿಯೇ ಒಯ್ದು ಬಿಡುತ್ತವೆ. ಅಲ್ಲಿಯ ಬೆಳಕಿನೊಳಗಿನ ಬೆಳಗಿನಲ್ಲಿ ನಮ್ಮನ್ನು ತೇಲಿ ಬಿಡುತ್ತವೆ. ಆಗ ನಮಗೆ ಪರಮಾತ್ಮನ ದರ್ಶನವೇ ಆಗುತ್ತದೆ. ಅದಕ್ಕಾಗಿ ನಾವು ಸಾಮೂಹಿಕ ವಚನ ಪಾರಾಯಣ ಮಾಡಬೇಕು. ಪಾರಾಯಣ ಮಾಡುವುದರಿಂದ ಬಸವಾದಿ ಶರಣರ ದೈವಿ ಕರುಣೆ ನಮ್ಮ ಕುಟುಂಬದ ಮೇಲೆ ಶ್ರೀರಕ್ಷೆಯಾಗಿ ನಿಲ್ಲುತ್ತದೆ. ಆದರಿಂದ ಎಲ್ಲರೂ ಈ ಸಾಮೂಹಿಕ ವಚನ ಪಾರಾಯಣದಲ್ಲಿ ಭಾಗವಹಿಸಿ.
| ಶ್ರೀ ಗುರುಬಸವ ಪಟ್ಟದ್ದೇವರು ಹಿರೇಮಠ ಸಂಸ್ಥಾನ ಭಾಲ್ಕಿ