ಹುಬ್ಬಳ್ಳಿ: ಇಲ್ಲಿನ ಶ್ರೀ ಶ್ವೇತಾಂಬರ ಜೈನ ತೇರಾಪಂಥ ಮಹಾಸಭಾ ಆಶ್ರಯದಲ್ಲಿ ಆಯೋಜಿಸಿರುವ ಮರ್ಯಾದಾ ಮಹೋತ್ಸವದಲ್ಲಿ ಮೂರು ಪಂತಗಳ ಸಾಧು-ಸಾಧಿ್ವ ಸಂತರ ಸಮಾಗಮ ಮತ್ತು ಜೈನ ಧರ್ಮದಲ್ಲಿ ತ್ಯಾಗದ ಮಹತ್ವದ ವಿಷಯದ ಕುರಿತು ಪ್ರವಚನೆಯ ಅಧ್ಯಾತ್ಮಿಕ ಸಭೆ ಸಂಸ್ಕಾರ ಶನಿವಾರ ಜರುಗಿತು.
ಆಚಾರ್ಯ ಶ್ರೀ ಮಹಾಶ್ರಮಣಜಿ ಸಾನಿಧ್ಯದಲ್ಲಿ ಆಚಾರ್ಯ ಶ್ರೀ ಅಜಿತ ಶೇಖರ ಸೂರಿಶ್ವರ, ರಾಷ್ಟ್ರಸಂತ ಆಚಾರ್ಯ ಶ್ರೀ ಗುಣಧರನಂದಿ ಮಹಾರಾಜರು ಪ್ರವಚನ ನೀಡಿ, ಅಹಿಂಸಾ ತತ್ವ ಪಾಲಿಸುವಂತೆ ಕರೆ ನೀಡಿದರು.
ಆಚಾರ್ಯ ಶ್ರೀ ಮಹಾಶ್ರಮಣಜಿ ಮಾತನಾಡಿ, ಭೂಲೋಕದ ಭೋಗಗಳನ್ನು ತ್ಯಜಿಸಿದವನೇ ತ್ಯಾಗಿ. ಜೈನ ಧರ್ಮದಲ್ಲಿ ತ್ಯಾಗವು ಮಹತ್ವವಾದದ್ದು. ಜೀವನದಲ್ಲಿ ಶಾಂತಿ ಪಡೆದುಕೊಳ್ಳಲು ಈ ಲೋಕದ ಸುಖಭೋಗಗಳನ್ನು ತ್ಯಜಿಸಿ ತ್ಯಾಗ ಮಾಡುವುದೇ ಜೈನರ ಲಕ್ಷವಾಗಿರಬೇಕು ಎಂದರು.
ಆಚಾರ್ಯ ಶ್ರೀ ಅಜಿತ ಶೇಖರ ಸೂರಿಶ್ವರ ಮಾತನಾಡಿ, ಸರಳತೆ, ಸಹಜತೆ, ಶಾಂತಿ ಜೈನ ಧರ್ಮದ ಪ್ರತೀಕ. ಸಂಸಾರದ ಉಪಭೋಗಗಳನ್ನು ತ್ಯಜಿಸುವುದನ್ನು ರೂಡಿಸಿಕೊಳ್ಳಬೇಕು ಎಂದು ಹೇಳಿದರು.
ದಿಗಂಬರ ಆಚಾರ್ಯರಾದ ರಾಷ್ಟ್ರಸಂತ ಶ್ರೀ ಗುಣಧರನಂದಿ ಮಹಾರಾಜರು, ಅಂತರಂಗ, ಬಹಿರಂಗದ ಆಸೆಗಳನ್ನು ತ್ಯಜಿಸುವುದರಿಂದ ಮನಸ್ಸು ಸಂತುಲನೆಯಲ್ಲಿರುತ್ತದೆ ಎಂದು ಸಲಹೆ ನೀಡಿದರು.
ಆಚಾರ್ಯ ಶ್ರೀ ಮಹಾಪ್ರಜ್ಞಾರವರು ಬರೆದೆ ಎಕಲಾ ಚಲೋ ಎಂಬ ಪುಸ್ತಕದ ಬಗ್ಗೆ ಮಾಹಿತಿ ನೀಡಲಾಯಿತು. ಶ್ರೀ ಗುಣಧರನಂದಿ ಮಹಾರಾಜರು ಆಚಾರ್ಯ ಶ್ರೀ ಮಹಾಶ್ರಮಣಜಿಯವರನ್ನು ಹುಬ್ಬಳ್ಳಿಯಲ್ಲಿ ಈ ಬಾರಿಯ ಚಾತುರ್ವಸ ನಡೆಸಲು ವಿನಂತಿಸಿದರು.
ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ ಹಾಗೂ ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ ಮಾತನಾಡಿದರು. ಜೈನ ಮರುಧರ ಸಂಘದ ಅಧ್ಯಕ್ಷ ಪುಖರಾಜ ಸಂಘವಿ ಹಾಗೂ ದಿಗಂಬರ ಜೈನ ಸಮಾಜದ ಅಧ್ಯಕ್ಷ ಶಾಂತಿನಾಥ ಹೋತಪೇಟ ಅತಿಥಿಗಳಾಗಿದ್ದರು.
ಮಹೇಂದ್ರ ಸಿಂಘಿ, ಪಾರಸಮಲ್ ಭಾಪನಾ, ದಲಿಚಂದ ಕೋಠಾರಿ, ಮುಕೇಶ ಬಟೆವರಾ, ಮಹಾವೀರ ಕೊಠಾರಿ, ಮಹೇಂದ್ರ ಪಾಲಗೋತಾ, ಪಾರಸಮಲ್ ಬನ್ಸಾಲಿ, ಮರ್ಯಾದಾ ಮಹೋತ್ಸವದ ಚೇರ್ಮನ್ ಸೋಹನಲಾಲ ಕೋಠಾರಿ ಮತ್ತಿತರರಿದ್ದರು.