ಸುಕ್ರಜ್ಜಿ ಪಂಚ ಭೂತಗಳಲ್ಲಿ ಲೀನ

blank

ಅಂಕೋಲಾ: ಜಾನಪದ ಕೋಗಿಲೆ ಎಂದೇ ಹೆಸರಾದ ಅಂಕೋಲಾದ ಹೆಸರನ್ನು ರಾಷ್ಟ್ರ ಮಟ್ಟದಲ್ಲಿ ಪ್ರಸಿದ್ಧಿಪಡಿಸಿದ ಸುಕ್ರಿ ಬೊಮ್ಮ ಗೌಡ(91)ಇನ್ನಿಲ್ಲ. ಗುರುವಾರ ಬಡಗೇರಿಯ ತಮ್ಮ ನಿವಾಸದಲ್ಲಿ ಅವರು ನಿಧನರಾದರು. ಇದರಿಂದ ಅಂಕೋಲಾ ಶೋಕ ಸಾಗರದಲ್ಲಿ ಮುಳುಗಿದೆ. ಬಡಗೇರಿ ಗ್ರಾಮದ ಜನ ಅಕ್ಷರಶಃ ಕಣ್ಣೀರು ಹಾಕುತ್ತಿದ್ದಾರೆ.

ಕಾರವಾರ, ಅಂಕೋಲಾ ಕುಮಟಾಕ್ಕೆ ಸೀಮಿತವಾಗಿದ್ದ ಹಾಲಕ್ಕಿ ಬುಡಕಟ್ಟಿನ ವಿಶಿಷ್ಟ ವಸ್ತ್ರ ವಿನ್ಯಾಸ, ಆಚರಣೆಗಳು, ಸಾಂಸ್ಕೃತಿಕ ಪದ್ಧತಿಗಳನ್ನು ಇತರು ಅಧ್ಯಯನ ಮಾಡುವಂತೆ ಮಾಡಿದವರು. ತಾರ್ಲೆ, ಸುಗ್ಗಿ ಕುಣಿತಗಳು ರಾಷ್ಟ್ರಮಟ್ಟದ ವೇದಿಕೆಯಲ್ಲಿ ಪ್ರದರ್ಶನಗೊಳ್ಳುವಂತೆ ಮಾಡಿದವರು ಸುಕ್ರಿ ಬೊಮ್ಮ ಗೌಡ. ದೇಶದ ಅತ್ಯುನ್ನತ ಪ್ರಶಸ್ತಿಗಳಲ್ಲಿ ಒಂದಾದ ಪದ್ಮಶ್ರೀಗೆ ಭಾಜನರಾಗಿ ಅಂಕೋಲಾದ ಕೀರ್ತಿಯನ್ನು ರಾಷ್ಟ್ರ ಮಟ್ಟದಲ್ಲಿ ಹಾರಿಸಿದ್ದರು. ಸ್ವತಃ ಪ್ರಧಾನಿ ನರೇಂದ್ರ ಮೋದಿ ಬಂದು ಸುಕ್ರಿ ಗೌಡ ಅವರ ಕಾಲ್ಮುಟ್ಟಿ ಆಶೀರ್ವಾದ ಪಡೆದರು. ಒಟ್ಟಿನಲ್ಲಿ ಅಂಕೋಲೆಯ ಹಾಗೂ ಹಾಲಕ್ಕಿ ಸಮುದಾಯದ ಬ್ರಾಂಡ್ ಅಂಬಾಸಿಡರ್​ನಂತಿದ್ದ ಸುಕ್ರಜ್ಜಿಯ ನಿರ್ಮಮನ ಅಂಕೋಲಾದಲ್ಲಿ ನೀರವ ವಾತಾವರಣ ಸೃಷ್ಟಿಸಿದೆ.

ಅಂತಿಮ ದರ್ಶನ:

ಗುರುವಾರ ಬೆಳಗಿನ ಜಾವ ಸುಕ್ರಿ ಗೌಡ ಅವರು ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಅವರ ಅಭಿ ಮಾನಿಗಳು ಅವರ ಮನೆಯ ಮುಂದೆ ಜಮಾಯಿಸಿದ್ದರು. ಮನೆಯ ಎದುರು ಅವರ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಆದಿಚುಂಚನಗಿರಿ ಮಿರ್ಜಾನ ಶಾಖೆಯ ನಿಶ್ಚಲಾನಂದ ಸ್ವಾಮೀಜಿ ಸುಕ್ರಿ ಗೌಡ ಅವರ ಪಾರ್ಥಿವ ಶರೀರಕ್ಕೆ ಗೌರವ ಸಲ್ಲಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಶಾಸಕ ಸತೀಶ ಸೈಲ್, ಮಾಜಿ ಶಾಸಕಿ ರೂಪಾಲಿ ನಾಯ್ಕ, ಮಾಜಿ ಸಚಿವ ಆನಂದ ಅಸ್ನೋಟಿಕರ, ಜಿಲ್ಲಾಧಿಕಾರಿ ಲಕ್ಷ್ತ್ರಿ್ಮಪ್ರಿಯಾ ಸೇರಿ ಹಲವು ಗಣ್ಯರು ಅಂತಿಮ ದರ್ಶನ ಪಡೆದರು.

ಸರ್ಕಾರಿ ಗೌರವ:

ಹಂಪಿ ಕನ್ನಡ ವಿವಿಯಿಂದ ನಾಡೋಜ ಬಿರುದು ಪಡೆದ ಸುಕ್ರಿ ಅವರ ಅಂತಿಮ ಸಂಸ್ಕಾರವನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಸುವಂತೆ ರಾಜ್ಯ ಶಿಷ್ಟಾಚಾರ ವಿಭಾಗದ ಸರ್ಕಾರದ ಅಧೀನ ಕಾರ್ಯದರ್ಶಿ ಎಲಿಷಾ ಆಂಡ್ರೂಸ್ ಆದೇಶ ಹೊರಡಿಸಿದ್ದರು. ಸುಕ್ರಿ ಅವರ ಕೇಣಿಯ ಜಾಗದಲ್ಲಿ ಅವರ ಅಂತಿಮ ಸಂಸ್ಕಾರವನ್ನು ನೆರವೇರಿಸಲಾಯಿತು. ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ತುಕಡಿಯಿಂದ ಮೂರು ಬಾರಿ ಕುಶಾಲ ತೋಪುಗಳನ್ನು ಸಿಡಿಸಿ, ರಾಷ್ಟ್ರಗೀತೆ ಹಾಡಿ ಗೌರವ ಸಲ್ಲಿಸಲಾಯಿತು. ಸುಕ್ರಿ ಗೌಡರ ಚಿತಕ್ಕೆ ಮೊಮ್ಮಗ ಗುರು ಶಂಕರ ಗೌಡ ಅಗ್ನಿ ಸ್ಪರ್ಶ ಮಾಡಿದರು.

ನಮ್ಮ ಹಾಲಕ್ಕಿ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂದು ನಾವು ಕಳೆದ ಹಲವು ದಶಕ ಗಳಿಂದ ಹೋರಾಟ ಮಾಡುತ್ತಲೇ ಬಂದಿದ್ದೇವೆ. ನಮ್ಮ ಹೋರಾಟದಲ್ಲಿ ಸುಕ್ರಿ ಗೌಡ ಅವರು ಕೂಡ ಪಾಲ್ಗೊಳ್ಳುತ್ತಿದ್ದರು. ಜಾನಪದ ಕಲೆಯ ಮೂಲಕ ನಮ್ಮ ಸಮಾಜವನ್ನು ದೇಶಾದ್ಯಂತ ಗುರುತಿಸುವಲ್ಲಿ ಸುಕ್ರಿ ಗೌಡ ಅವರ ಕೊಡುಗೆ ಅಪಾರವಾದದು. ಅವರ ಸಾವಿನಿಂದ ಸಮಾಜಕ್ಕೆ ಹಾಗೂ ಜಾನಪದ ಕ್ಷೇತ್ರಕ್ಕೆ ಭಾರಿ ನಷ್ಟ ಉಂಟಾಗಿದೆ.

ಹನುಮಂತ ಬೊಮ್ಮು ಗೌಡ

ಅಧ್ಯಕ್ಷ, ಉಕ ಜಿಲ್ಲಾ ಹಾಲಕ್ಕಿ ಒಕ್ಕಲಿಗರ ಸಂಘ

ಸುಕ್ರಿ ಗೌಡ ಅವರು ಜಿಲ್ಲೆ, ಕರ್ನಾಟಕವನ್ನು ದೇಶಾದ್ಯಂತ ಗುರುತಿಸುವಂತೆ ಮಾಡಿದವರು. ಪದ್ಮಶ್ರೀಯಂತಹ ಅತ್ಯುನ್ನತ ಗೌರವಕ್ಕೆ ಪಾತ್ರರಾಗಿದ್ದು, ಇವರು ಸಾವಿರಾರು ಜಾನಪದ ಹಾಡುಗಳನ್ನು ಸೃತಿಪಟಲದಲ್ಲಿಟ್ಟುಕೊಂಡು ಹಾಡುತ್ತಿರುವುದು ಅಚ್ಚರಿಯ ಸಂಗತಿ. ಅಂತಹ ಜಾನಪದ ಕೋಗಿಲೆ ನಿಧನ ರಾಗಿರುವುದು ನಿಜಕ್ಕೂ ಜಾನಪದ ಲೋಕಕ್ಕೆ ದೊಡ್ಡ ನಷ್ಟವಾದಂತಾಗಿದೆ.

ಮಂಕಾಳ ವೈದ್ಯ

ಉಕ ಜಿಲ್ಲಾ ಉಸ್ತುವಾರಿ ಸಚಿವ

ಬಡತನದ ಬೇಗೆಯಲ್ಲೇ ಬೆಳೆದುಬಂದ ಸುಕ್ರಿ ಬೊಮ್ಮ ಗೌಡ ತಮ್ಮೆಲ್ಲ ನೋವುಗಳನ್ನು ನುಂಗಿಕೊಂಡು ಜಾನಪದ ಲೋಕವನ್ನು ಶ್ರೀಮಂತಗೊಳಿಸಿದರು. ಸಾರಾಯಿ ವಿರೋಧಿ ಆಂದೋಲನದಲ್ಲಿ ಪಾಲ್ಗೊಂಡು ಸಾಮಾಜಿಕ ಸ್ವಾಸ್ಥ್ಯ ಬಗ್ಗೆಯೂ ಅಪಾರ ಕಳಕಳಿ ಹೊಂದಿದ್ದರು. ಅವರಿಲ್ಲದೆ ಜಾನಪದ ಲೋಕ ಬಡವಾಗಿದೆ. ನಮ್ಮೆಲ್ಲರಿಗೆ ಅವರು ಮಾರ್ಗದರ್ಶಕರಾಗಿದ್ದರು.

ರೂಪಾಲಿ ನಾಯ್ಕ

ಬಿಜೆಪಿ ರಾಜ್ಯ ಉಪಾಧ್ಯಕ್ಷೆ

ಸುಕ್ರಿ ಗೌಡ ಅವರು ಜಾನಪದ ಸಂಸ್ಕೃತಿಯ ಸಂರಕ್ಷಕಿಯಾಗಿದ್ದರು. ಅದಮ್ಯ ಚೇತನವನ್ನು ನಾಡು ಕಳೆದುಕೊಂಡಂತಾಗಿದೆ. ಮದ್ಯ ಮಾರಾಟ ತಡೆಯಲು ಅವರು ಹಿಂದೆ ಜನಾಂದೋಲನವನ್ನೂ ನಡೆಸಿದ್ದರು.

ವಿಶ್ವೇಶ್ವರ ಹೆಗಡೆ ಕಾಗೇರಿ

ಸಂಸದ

 

Share This Article

ಜ್ಯೋತಿಷ್ಯದ ಪ್ರಕಾರ ಅಂಗೈ ತುರಿಕೆ ಏನನ್ನು ಸೂಚಿಸುತ್ತೆ ಗೊತ್ತಾ..? ಶುಭವೋ..ಅಶುಭವೋ devotional

devotional: ಕಣ್ಣು ಮಿಟುಕಿಸುವುದು, ತುಟಿಗಳು ನಡುಗುವುದು ಮತ್ತು ಕಣ್ಣು ರೆಪ್ಪೆಗಳು ಮಿಟುಕಿಸುವುದು ಮುಂತಾದ ಶಕುನಗಳನ್ನು ಅನುಸರಿಸುತ್ತಾರೆ.…

ಸಿಹಿಯಾದ, ರಸಭರಿತ ಕಲ್ಲಂಗಡಿ ಹಣ್ಣನ್ನು ಆಯ್ಕೆ ಮಾಡೋದು ಹೇಗೆ? ಈ ಸಿಂಪಲ್​ ಟ್ರಿಕ್ಸ್​ ಫಾಲೋ ಮಾಡಿದ್ರೆ ಸಾಕು! Watermelon

Watermelon : ಎಲ್ಲಡೆ ಬೇಸಿಗೆ ಆರಂಭವಾಗಿದ್ದು, ಬಿಸಿಲಿನ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸುಡುವ ಬಿಸಿಲಿನಿಂದಾಗಿ…

ಪುರುಷರಿಗಿಂತ ಮಹಿಳೆಯರ ಮೇಲೆಯೇ ಮದ್ಯಪಾನದ ಎಫೆಕ್ಟ್​ ಜಾಸ್ತಿ! ಅಚ್ಚರಿಯ ಕಾರಣ ಹೀಗಿದೆ… Alcohol

Alcohol : ಇತ್ತೀಚಿನ ದಿನಗಳಲ್ಲಿ ಮದ್ಯ ಮತ್ತು ಸಿಗರೇಟ್ ಪುರುಷರಿಗೆ ಮಾತ್ರ ಸೀಮಿತವಾಗಿಲ್ಲ. ಮಹಿಳೆಯರೂ ಸಹ…