ಸುಂಕ ವಸೂಲಿಗೆ ರೈತರ ವಿರೋಧ

ಕುದೂರು: ಟೋಲ್​ಗಳಲ್ಲಿ ರೈತರ ವಾಹನಗಳಿಂದ ಸುಂಕ ವಸೂಲಿ ವಿರೋಧಿಸಿ ಸೋಲೂರು – ನೆಲಮಂಗಲ ನಡುವಿನ ರಾಷ್ಟ್ರೀಯ ಹೆದ್ದಾರಿ 75ರ ದೇವಿಹಳ್ಳಿ ಟೋಲ್ ಬಳಿ ಮಾಗಡಿ ತಾಲೂಕು ಹಸಿರುಸೇನೆ ಹಾಗೂ ರೈತ ಸಂಘದ ಸದಸ್ಯರು ಮಂಗಳವಾರ ಪ್ರತಿಭಟನೆ ನಡೆಸಿದರು.

ಹಸಿರು ಸೇನೆ ಜಿಲ್ಲಾಧ್ಯಕ್ಷ ಲಕ್ಷ್ಮಣಸ್ವಾಮಿ ಮಾತನಾಡಿ, ಹೂವು, ಹಣ್ಣು, ತರಕಾರಿಗಳ ಮಾರಾಟಕ್ಕೆ ನಗರಗಳಿಗೆ ರೈತರು ತೆರಳಬೇಕು. ಬೆಳೆ ಬೆಳೆಯಲು ಹಾಕಿದ ಬಂಡವಾಳವೇ ಕೈಸೇರಲು ಕಷ್ಟವಾಗಿರುವಾಗ, ಬಾಡಿಗೆ ವಾಹನದಲ್ಲಿ ಬೆಳೆದ ಉತ್ಪನ್ನಗಳನ್ನು ಮಾರುಕಟ್ಟೆಗೆ ಸಾಗಿಸುವ ರೈತರಿಗೆ ಟೋಲ್ ವಸೂಲಿ ಬರೆ ಎಳೆದಂತಾಗಿದೆ. ಕೂಡಲೇ ಟೋಲ್ ರದ್ದು ಮಾಡಬೇಕು ಎಂದು ಒತ್ತಾಯಿಸಿದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಜತೆ ರ್ಚಚಿಸಿ ಟೋಲ್ ಸಂಗ್ರಹಿಸುವ ಬಗ್ಗೆ ನಿರ್ಧರಿಸಲಾಗುವುದು. ಇದಕ್ಕೆ 4-5 ದಿನ ಅವಕಾಶ ನೀಡಿ. ಸಭೆಗೆ ರೈತ ಸಂಘದವರನ್ನು ಆಹ್ವಾನಿಸಲಾಗುವುದು ಎಂದು ಟೋಲ್ ಕೇಂದ್ರದ ಅಧಿಕಾರಿ ವೆಂಕಟಸ್ವಾಮಿ ಧರಣಿ ನಿರತ ರೈತರ ಮನವೊಲಿಸಿದರು. ರೈತರು ಬೆಳೆದ ಉತ್ಪನ್ನಗಳನ್ನು ಸೋಲೂರು ಮಾರ್ಗದ ನೆಲಮಂಗಲದಿಂದ ಬೆಂಗಳೂರಿಗೆ ಸಾಗಿಸುವ ವಾಹನಗಳಿಗೆ 3 ದಿನ ಸುಂಕ ವಸೂಲಿ ಮಾಡುವುದಿಲ್ಲ ಎಂದು ಭರವಸೆ ನೀಡಿದರು. ನಂತರ ರೈತರು ಧರಣಿ ಕೈಬಿಟ್ಟರು.

ಪ್ರತಿಭಟನೆಯಲ್ಲಿ ಕುದೂರು, ತಿಪ್ಪಸಂದ್ರ ಹಾಗೂ ಸೋಲೂರು ಹೋಬಳಿ ವ್ಯಾಪ್ತಿಯ ರೈತರು ಭಾಗವಹಿಸಿದ್ದರು. ಪ್ರತಿಭಟನೆಯಿಂದಾಗಿ ಹೆದ್ದಾರಿಯಲ್ಲಿ ಕೆಲಕಾಲ ಸಂಚಾರದಟ್ಟಣೆ ಉಂಟಾಗಿತ್ತು.

ಹಸಿರು ಸೇನೆ ಘಟಕದ ಕುದೂರು ಹೋಬಳಿ ಅಧ್ಯಕ್ಷ ಕೆ.ಆರ್.ಮಂಜುನಾಥ್ , ಮಾಗಡಿ ಘಟಕದ ಅಧ್ಯಕ್ಷ ಗೋವಿಂದರಾಜು, ತಿಪ್ಪಸಂದ್ರ ಘಟಕದ ಅಧ್ಯಕ್ಷ ನಾಗರಾಜು ಮತ್ತಿತತರಿದ್ದರು.

Leave a Reply

Your email address will not be published. Required fields are marked *