ಸುಂಟಿಕೊಪ್ಪ: ರಾಜ್ಯ ಸರ್ಕಾರದ ಮಲತಾಯಿ ಧೋರಣೆಯಿಂದ ಜಿಲ್ಲೆಯ ಶಾಸಕರ ನಿರ್ಲಕ್ಷ್ಯದಿಂದ ಜಿಲ್ಲೆಯ ಜನತೆಯು ಡೀಸೆಲ್ ಬಳಕೆಗೆ ಮಾರುಹೋಗಿದ್ದು, ಹಿಂದಿನ ಹಾಗೂ ಪ್ರಸ್ತುತ ಆಡಳಿತ ನಡೆಸುತ್ತಿರುವ ಸರ್ಕಾರಗಳು ಹಾಗೂ ಜಿಲ್ಲೆಯ ಶಾಸಕರು ಸರ್ಕಾರದ ಗಮನಕ್ಕೆ ತರದ ಹಿನ್ನೆಲೆಯಲ್ಲಿ ಜಿಲ್ಲೆಯ ಜನತೆಯು ಕಳೆದ 5 ವರ್ಷಗಳಿಂದ ಸೀಮೆಎಣ್ಣೆಯ ಸೌಲಭ್ಯವನ್ನು ಕಸಿದುಕೊಂಡಿರುವುದು ವಿಷಾದ ಸಂಗತಿ ಎಂದು ಸಂವಾದದಲ್ಲಿ ಕೇಳಿಬಂತು.
ಕೊಡಗು ಜಿಲ್ಲೆಗೆ ಹೊಂದಿಕೊಂಡಂತೆ ಇರುವ ಸುತ್ತಮುತ್ತಲ್ಲಿನ ಜಿಲ್ಲೆಗಳಲ್ಲಿ ಸೀಮೆಎಣ್ಣೆ ವಿತರಣೆಯಾಗುತ್ತಿದ್ದು, ಜಿಲ್ಲೆಯ ಜನತೆಗೆ ಮಾತ್ರ ಈ ಸೌಲಭ್ಯದಿಂದ ವಂಚಿತರಾಗಿರುವುದು ಜಿಲ್ಲೆಯನ್ನು ಪ್ರತಿನಿಧಿಸುತ್ತಿರುವ ಜನಪ್ರತಿನಿಧಿಗಳು ಗಮನಹರಿಸದಿರುವ ಬಗ್ಗೆ ಸಂವಾದದಲ್ಲಿ ಗ್ರಾಮಸ್ಥರು ಆಳಲನ್ನು ವ್ಯಕ್ತಪಡಿಸಿದರು.
ಕೊಡಗು ಜಿಲ್ಲೆಯು ಹಸಿರು ವನಸಿರಿಯಿಂದ ಕೂಡಿದ ಗುಡ್ಡಗಾಡು ಪ್ರದೇಶವಾಗಿದ್ದು, ಅತೀವ ಮಳೆ ಸುರಿಯುವ ಮಲೆನಾಡು ಪ್ರದೇಶವಾಗಿದೆ. ಜಿಲ್ಲೆಯಲ್ಲಿ ಮಳೆಗಾಲದಲ್ಲಿ ಬಿರುಗಾಳಿ ಮಹಾಮಳೆಗೆ ಅದೇಷ್ಟೋ ಕುಗ್ರಾಮಗಳಿಗೆ ತಿಂಗಳುಗಟ್ಟಲೇ ವಿದ್ಯುತ್ ಸಂಪರ್ಕ ಕಡಿತಗೊಂಡಾಗ ದೀಪ ಉರಿಸಲು ಹಾಗೂ ಮನೆಯಲ್ಲಿ ಕಟ್ಟಿಗೆ ಒಲೆಗಳಲ್ಲಿ ಅಡುಗೆ ದೀವಟಿಕೆಗಳನ್ನು ಉರಿಸಲು ಕುಗ್ರಾಮದ ಜನತೆಯು ದುಬಾರಿ ವೆಚ್ಚದ ಡಿಸೇಲ್ ಮೊರೆ ಹೋಗುವಂತಾಗಿದೆ.
ಕೊಡಗಿನಲ್ಲಿ ಮೂಲ ನಿವಾಸಿಗಳಾದ ಪರಿಶೀಷ್ಟ ಜನಾಂಗದವರು ಅರಣ್ಯ ಅಂಚಿನಲ್ಲಿಯೇ ನೆಲೆಸಿದ್ದಾರೆ. ಅದೆಷ್ಟೋ ಕುಟುಂಬಗಳು ಪ್ಲಾಸ್ಟಿಕ್ ಹೊದಿಕೆಯಲ್ಲಿಯೇ ಮನೆಯನ್ನು ನಿರ್ಮಿಸಿಕೋಂಡು ಜೀವನ ಸಾಗಿಸುತ್ತಿದ್ದು, ಈ ಮಂದಿಯು ಸೀಮೆಎಣ್ಣೆ ದೊರೆಯದ ಹಿನ್ನೆಲೆಯಲ್ಲಿ ಕಗ್ಗತ್ತಿನಲ್ಲಿ ಇರಲಾಗದೆ ಇಂದಿಗೂ ಪೆಟ್ರೋಲ್ ಬಂಕ್‌ಗಳಿಂದ ದುಬಾರಿ ಹಣ ತೆತ್ತು ಡೀಸೆಲ್ ಖರೀದಿಸುವ ಮೂಲಕ ರಾತ್ರಿಯನ್ನು ಕಳೆಯುವಂತಯಾಗಿದೆ. ಜಿಲ್ಲೆಯಲ್ಲಿ ಎಡೆಬಿಡದೆ ಸುರಿಯುವ ಜಡಿಮಳೆಯ ಸಂದರ್ಭ ಮೂಲನಿವಾಸಿಗಳ ಕುಟುಂಬ ಹಾಗೂ ಪುಟ್ಟಕಂದಮ್ಮಗಳ ಗೋಳು ಹೇಳ ತೀರದಾಗಿದೆ. ಈ ಗಂಭೀರ ಸಮಸ್ಯೆಯ ಬಗ್ಗೆ ಆಹಾರ ಇಲಾಖೆ ಹಾಗೂ ಜಿಲ್ಲಾಡಳಿತ ರಾಜ್ಯ ಸರ್ಕಾರದೊಂದಿಗೆ ಪತ್ರ ವ್ಯವಹಾರವನ್ನು ನಡೆಸಲಾಗಿದ್ದರೂ ರಾಜ್ಯ ಸರ್ಕಾರ ಜಿಲ್ಲೆಯ ಗಂಭೀರ ಸಮಸ್ಯೆಯ ಬಗ್ಗೆ ಗಮನ ಹರಿಸದಿರುವುದು ಬೇಸರದ ಸಂಗತಿ.
ಈ ಹಿಂದೆ ಜಿಲ್ಲೆಗೆ ಸೀಮೆಎಣ್ಣೆ ವಿತರಿಸುವ ಟೆಂಡರ್ ಪಡೆದುಕೊಂಡಿದ್ದ ಗುತ್ತಿಗೆದಾರರೊಬ್ಬರು ಜಿಲ್ಲೆಯ ವಿವಿಧ ನ್ಯಾಬೆಲೆ ಅಂಗಡಿಗಳಿಗೆ ವಿತರಣೆಯನ್ನು ಮಾಡುತ್ತಿದರು. ಜಿಲ್ಲೆಯು ಗುಡ್ಡಗಾಡು ಪ್ರದೇಶವಾಗಿರುವುದ್ದರಿಂದ ವಿತರಣೆಗೆ ದುಬಾರಿ ವೆಚ್ಚ ತಗಲುತ್ತಿದ್ದು, ಸರ್ಕಾರವು ನೀಡುವ ಮೊತ್ತ ಗುತ್ತಿಗೆದಾರರಿಗೆ ನಷ್ಟವನ್ನು ಉಂಟುಮಾಡಿತ್ತು. ಅದರೂ ಗುತ್ತಿಗೆದಾರರು ಜನತೆಗಾಗಿ ಹಾಗೂ ಅಧಿಕಾರಿಗಳ ಭರವಸೆಯ ಮೇರೆಗೆ ನಷ್ಟದ ನಡುವೆಯೂ ಸೀಮೆಎಣ್ಣೆ ವಿತರಿಸುತ್ತಿದ್ದರು. ಆದರೆ ಸರ್ಕಾರ ಗುತ್ತಿಗೆದಾರರಿಗೆ ಬರಬೇಕಾದ ಹಣ ಲಕ್ಷಾಂತರ ರೂ. ಬಾಕಿ ಉಳಿಸಿಕೊಂಡ ಹಿನ್ನೆಲೆಯಲ್ಲಿ ಗುತ್ತಿಗೆದಾರರು ನಷ್ಟಕ್ಕೊಳಗಾಗಿ ವಿತರಣೆಯನ್ನೇ ನಿಲ್ಲಿಸಿದರು. ಇದರಿಂದ ಬಡಜ
ನತೆಯು ತೀವ್ರ ಸಂಕಷ್ಟ ಎದುರಿಸುವಂತಾಗಿ ಸೀಮೆಎಣ್ಣೆ ದೊರೆಯದೆ ಬದಲಿಯಾಗಿ ದುಬಾರಿ ಬೆಲೆಯ ಡೀಸೆಲ್ ಬಳಸುವಂತಾಗಿದೆ.
ಒಂದೆಡೆ ಜಿಲ್ಲೆಯಲ್ಲಿ ಕಾಡಾನೆ ಹಾಗೂ ವನ್ಯಪ್ರಾಣಿಗಳ ಹಾವಳಿಯು ಹೆಚ್ಚಾಗಿದ್ದು, ಜನತೆಯು ಮತ್ತಷ್ಟು ಅತಂಕದಲ್ಲಿ ದಿನ ದೂಡುವಂತಹ ಸಂದರ್ಭ ಎದುರುಗೊಂಡಿದೆ. ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ಜಿಲ್ಲೆಗೆ ಸೀಮೆಎಣ್ಣೆ ವಿತರಣೆಗೆ ಮುಂದಾಗಬೇಕೆಂದು ಸಂವಾದದಲ್ಲಿ ಆಗ್ರಹಿಸಿದರು.
ಜಿಲ್ಲೆಯಲ್ಲಿ ನೋಂದಾಯಿತ ಪಡಿತರ ಚೀಟಿಗಳಿಗೆ ಅಂದಾಜು 60 ಸಾವಿರ ಲೀಟರ್ ಸೀಮೆಎಣ್ಣೆ ಬೇಡಿಕೆಯಿದ್ದು, ಅದನ್ನು ಗುತ್ತಿಗೆದಾರರು ವಿತರಿಸುತ್ತಿದ್ದರು. ಆದರೆ ಕೊಡಗು ಗುಡ್ಡಗಾಡು ಪ್ರದೇಶವಾಗಿದ್ದರಿಂದ ಗುತ್ತಿಗೆದಾರರಿಗೆ ನ್ಯಾಯಬೆಲೆ ಅಂಗಡಿಗಳಿಗೆ ವಿತರಿಸಲು ಕಷ್ಟಸಾಧ್ಯ ಹಾಗೂ ತೀವ್ರ ನಷ್ಟ ಉಂಟು ಮಾಡುವುದರ ಜತೆಗೆ ಸರ್ಕಾರದಿಂದ ದೊರೆಯಬೇಕಿದ್ದ ಬಾಕಿ ಹಣ ಸಂದಾಯಗೊಳ್ಳದ ಹಿನ್ನಲೆಯಲ್ಲಿ ವಿತರಣೆಯನ್ನು ಸ್ಥಗಿತಗೊಳಿಸಿದ್ದಾರೆ ಎಂದು ಸಂವಾದದಲ್ಲಿ ಕೇಳಿ ಬಂದಿತು.