ಸಿ.ಎಸ್.ಪುರ ಕೆರೆ ತುಂಬಿಸಲು ಅಧಿಕಾರಿಗಳ ತಾರತಮ್ಯಕ್ಕೆ ಖಂಡನೆ

ಗುಬ್ಬಿ : ಸಿ.ಎಸ್.ಪುರ ಕೆರೆ ತುಂಬಿಸಲು ಅಧಿಕಾರಿಗಳು ತಾರತಮ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿ ನೂರಾರು ರೈತರು ನಾರನಹಳ್ಳಿ ಡಿ-26 ವಿತರಣಾ ನಾಲೆಯ ಬಳಿ ಶಾಸಕ ಜಯರಾಮ್ ನೇತೃತ್ವದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ಕೆರೆಗಳಿಗೆ ನೀರು ಬಿಟ್ಟಿರುವ ಕುರಿತು ಜಿಲ್ಲಾಧಿಕಾರಿಗೆ ಹೇಮಾವತಿ ನೀರಾವರಿ ಅಧಿಕಾರಿಗಳು ತಪ್ಪು ಮಾಹಿತಿ ನೀಡುತ್ತಿದ್ದಾರೆ. ಜಿಲ್ಲಾಧಿಕಾರಿಗಳೆ ಖುದ್ದು ಸಿ.ಎಸ್.ಪುರ ಕೆರೆ ವಿಕ್ಷಣೆ ಮಾಡಿದ್ದಾರೆ. ಆದರೆ ಅಧಿಕಾರಿಗಳು ನೀರು ತುಂಬಿಸುತ್ತಿಲ್ಲ ಎಂದು ಶಾಸಕ ಮಸಾಲೆ ಜಯರಾಮ್ ಆರೋಪಿಸಿದರು.

ಸಿ.ಎಸ್.ಪುರ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ 12.5 ಕೋಟಿ ರೂ. ಖರ್ಚು ಮಾಡಲಾಗಿದೆ. ಆದರೆ ಕೆರೆಗೆ ನೀರು ಹೇಗೆ ಬರುತ್ತದೆ? ಅಲ್ಲಿಂದ ಎಲ್ಲಿಗೆ ನೀರು ನೀಡಬೇಕು ಅನ್ನುವ ಕನಿಷ್ಠ ಜ್ಞಾನವೂ ಅಧಿಕಾರಿಗಳಿಗೆ ಇಲ್ಲ. ಈ ಯೋಜನೆಯಿಂದ ಇಲ್ಲಿನ ಜನರಿಗೆ ಪ್ರಯೋಜನವಾಗಿಲ್ಲ ಎಂದರು.

ಜಿಪಂ ಸದಸ್ಯೆ ಗಾಯತ್ರಿ ನಾಗರಾಜು ಮಾತನಾಡಿ ಸಿ.ಎಸ್.ಪುರ ಕೆರೆಗೆ ಅಗತ್ಯವಿರುವಷ್ಟು ನೀರು ತುಂಬಿಸುವುದರಿಂದ ಈ ಭಾಗದ ರೈತರಿಗೆ ಅನುಕೂಲವಾಗುತ್ತದೆ. ನಾಲೆಯಲ್ಲಿ ಹರಿಸಿದ ನೀರಿನ ಲೆಕ್ಕ ನೀಡಬೇಡಿ, ಕೆರೆಯಲ್ಲಿ ಸಂಗ್ರಹವಾದ ನೀರಿನ ಮಟ್ಟದ ಲೆಕ್ಕ ನೀಡಿ ಎಂದರು.

ಸ್ಥಳಕ್ಕೆ ಬಂದ ಹೇಮಾವತಿ ನಾಲೆ ಅಧಿಕಾರಿ ಶಿವರಾಜು, ಅ.15ರವರೆಗೂ ನೀರು ಹರಿಸಲಾಗುತ್ತದೆ. ಮತ್ತೆ ನ.1ರಿಂದ ನಂತರ ನೀರು ಹರಿಸಲಾಗುತ್ತದೆ. 45 ಎಂಸಿಎಪ್​ಟಿ ನೀರು ಬೀಡಲು ಆದೇಶವಿದ್ದು, ಎಲ್ಲ ಕೆರೆಗಳನ್ನು ತುಂಬಿಸಬೇಕು. ಆದರೆ ನಾಲೆಯಲ್ಲಿ ಅಷ್ಟೊಂದು ಪ್ರಮಾಣದಲ್ಲಿ ನೀರು ಹರಿಯುತ್ತಿಲ್ಲ ಎಂದು ತಿಳಿಸಿದರು.

ತಾಪಂ ಸದಸ್ಯ ಭಾನುಪ್ರಕಾಶ್, ಮುಖಂಡರಾದ ನಾಗರಾಜು, ಇಡಗೂರು ರವಿ, ಚಂದ್ರಣ್ಣ, ಪಾಪು, ಲಕ್ಷಿ್ಮೕ ದೇವಮ್ಮ, ಗೌರಮ್ಮ, ಪಾಂಡು ಸದಯ್ಯ ಹಾಗೂ ರೈತರಿದ್ದರು.

ಕಳೆದ ಭಾರಿ ಪ್ರತಿಭಟನೆ ಮಾಡಿದಾಗ ಅಧಿಕಾರಿಗಳು ನಮ್ಮ ವ್ಯಾಪ್ತಿಗೆ ಸೆ.15 ರಿಂದ 25ರವರೆಗೂ ನೀರು ಬೀಡುತ್ತೆವೆ ಎಂದರು. ಆದರೆ ಕೇವಲ 3 ದಿನ ನೀರು ಬಿಟ್ಟು ಸುಮ್ಮನಾದರು. ಸುಳ್ಳು ಹೇಳಿಕೊಂಡು ಅಧಿಕಾರಿಗಳು ಮೋಸ ಮಾಡುತ್ತಿದ್ದಾರೆ.

| ಮಸಾಲ ಜಯರಾಮ್ ತುರುವೇಕೆರೆ ಶಾಸಕ