ಕಳಸ: ಮುಂಗಾರು ಮಳೆ ಸರಿಯಾದ ಸಮಯಕ್ಕೆ ಮಲೆನಾಡಿಗೆ ಕಾಲಿರಿಸಿದೆ. ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಹಳ್ಳ, ತೊರೆಗಳಲ್ಲಿ ನೀರು ಹರಿಯಲಾರಂಭಿಸಿದ್ದು ಮಲೆನಾಡಿನ ಜನರು ಈ ಬಾರಿಯೂ ಸಿಹಿ ನೀರಿನಲ್ಲಿ ಸಿಗುವ ಮೀನು ಹಿಡಿದು ಖಾದ್ಯ ತಯಾರಿಸಿ ಸವಿಯುತ್ತಿದ್ದಾರೆ.
ಮುಂಗಾರು ಮಳೆ ಜೋರಾಗುತ್ತಿದ್ದಂತೆ ನದಿಯಿಂದ ಮೊಟ್ಟೆ ಇಡಲು ಬಯಲು ಪ್ರದೇಶದತ್ತ ಜಾಗ ಹುಡುಕಿಕೊಂಡು ಬರುವ ಮೀನುಗಳನ್ನು ಹಿಡಿಯಲು ಮತ್ಸೃಪ್ರಿಯರು ಹಗಲು ರಾತ್ರಿಯೆನ್ನದೆ ಗದ್ದೆ, ಹಳ್ಳ, ತೊರೆಗಳಲ್ಲಿ ಕಾಯುತ್ತಾರೆ. ಮೀನು ಹಿಡಿಯಲು ಬಲೆ, ಕತ್ತಿ ಹಿಡಿದುಕೊಂಡು ಹೋಗುವುದು ಕಳಸ ಸುತ್ತಮುತ್ತಲಿನ ಹಳ್ಳಿ ಪ್ರದೇಶಗಳಲ್ಲಿ ಸಾಮಾನ್ಯ. ನದಿಗಳನ್ನು ಸೇರುವ ಹಳ್ಳ, ತೊರೆ, ಗದ್ದೆಗಳಲ್ಲಿ ರಾತ್ರಿ ಜನರು ಟಾರ್ಚ್ ಅಥವಾ ಸೀಮೆಎಣ್ಣೆಯ ದೀಪದ ಸಹಾಯದಿಂದ ಕತ್ತಿ ಹಿಡಿದುಕೊಂಡು ನೀರಿನಲ್ಲಿ ಮೀನುಗಳನ್ನು ಗಮನಿಸಿ ಕತ್ತಿಯಲ್ಲಿ ಕಡಿದು ತರುತ್ತಾರೆ. ಸ್ಥಳೀಯವಾಗಿ ಇವುಗಳನ್ನು ಹೆಂಗೊಳೆ, ಕಲಿಗಿರಿ, ಬಾಳೆ ಮೀನು, ಹಸಲು, ಏಡಿಗಳೆಂದು ಕರೆಯಲಾಗುತ್ತದೆ.