ಸಿಹಿ-ಕಹಿಗಳ ಮಿಶ್ರಣದ 2022ಕ್ಕೆ ಗುಡ್ ಬೈ

ಮಂಜುನಾಥ ಟಿ.ಭೋವಿ ಮೈಸೂರು

ಮತ್ತೊಂದು ‘ಹೊಸ ವರ್ಷ’ ಎದುರಾಗಿದೆ. 2022ಕ್ಕೆ ವಿದಾಯ ಹೇಳಿ, 2023 ಅನ್ನು ಅಪ್ಪಿಕೊಳ್ಳಲು ಜನರು ಉತ್ಸುಕರಾಗಿದ್ದಾರೆ.

ಈ ಸಂದರ್ಭದಲ್ಲಿ ಜಿಲ್ಲೆಯ ಹಿನ್ನೋಟದ ಮೇಲೆ ದೃಷ್ಟಿ ಹಾಯಿಸಿದಾಗ ಅನೇಕ ಏರಿಳಿತಗಳು ಗೋಚರವಾಗುತ್ತವೆ. ಶೈಕ್ಷಣಿಕ, ಪ್ರವಾಸೋದ್ಯಮ, ರಾಜಕೀಯ ಸೇರಿದಂತೆ ವಿವಿಧ ರಂಗದಲ್ಲಿ ಸಿಹಿ-ಕಹಿ ಮಿಳಿತವಾಗಿದೆ. ಹೀಗಾಗಿ, ಈ ವರುಷವು ಜಿಲ್ಲೆಯ ಪಾಲಿಗೆ ಬೇವು-ಬೆಲ್ಲವೇ ಸರಿ..!

ಆದ್ದರಿಂದ, ಈಗಾಗಲೇ ಆಗಿರುವ ಕಹಿಯನ್ನು ನುಂಗಿಕೊಂಡು, ಅದು ಮುಂದೆ ಪುನರಾವರ್ತನೆಯಾಗದಂತೆ ನೋಡಿಕೊಳ್ಳಬೇಕಾಗಿದೆ. ಸಿಹಿ ಘಟನೆಯಿಂದ ಹಿಗ್ಗದೆ ಹೊಸ ಮನ್ವಂತರದತ್ತ ಮುನ್ನಡೆಯಬೇಕಾಗಿದೆ. ಈ ಹಿನ್ನೆಲೆಯಲ್ಲಿ ಹಿನ್ನೋಟದ ಸಾರಾಂಶ ಇಲ್ಲಿದೆ.

ಮೈವಿವಿಗೆ ಕೆಟ್ಟ ಹೆಸರು:
ಮೈಸೂರು ವಿಶ್ವವಿದ್ಯಾಲಯಕ್ಕೆ ಕೆಟ್ಟ ಹೆಸರು ಬರುವ ಅನೇಕ ಘಟನೆಗಳು ನಡೆದಿವೆ. ವಿವಿ ನಡೆಸುವ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಯಲ್ಲಿ (ಕೆ-ಸೆಟ್) ನಡೆದಿದೆ ಎನ್ನಲಾದ ಅವ್ಯವಹಾರದ ಕುರಿತು ತನಿಖೆ ನಡೆಸಲು ಆದೇಶಿಸಲಾಗಿದೆ. ಜತೆಗೆ, ಈ ಪರೀಕ್ಷೆ ನಡೆಸುವ ಅವಕಾಶವೂ ಕೈತಪ್ಪಿದೆ. ಕೆ-ಸೆಟ್ ನಡೆಸುವ ಜವಾಬ್ದಾರಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ)ಕ್ಕೆ ವರ್ಗಾವಣೆಯಾಗಿದೆ. ಇದು ವಿವಿಗೆ ಆರ್ಥಿಕ ನಷ್ಟದ ಜತೆಗೆ ಪ್ರತಿಷ್ಠೆಯೂ ಮಣ್ಣು ಪಾಲಾಗಿದೆ.

ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದಿಂದ 2022ನೇ ಸಾಲಿನ ರಾಷ್ಟ್ರೀಯ ಸಾಂಸ್ಥಿಕ ರ‌್ಯಾಂಕಿಂಗ್ ಚೌಕಟ್ಟಿನ (ಎನ್‌ಐಆರ್‌ಎಫ್) ರ‌್ಯಾಂಕಿಂಗ್ ಪಟ್ಟಿಯಲ್ಲಿ ಮೈವಿವಿ 19ರಿಂದ 33ನೇ ಸ್ಥಾನಕ್ಕೆ ಕುಸಿತ ಕಂಡಿತ್ತು. ದೇಶದ ಸಮಗ್ರ ಉನ್ನತ ಶಿಕ್ಷಣ ಸಂಸ್ಥೆ ಪಟ್ಟಿಯಲ್ಲೂ ಇಳಿಕೆ ಆಗಿತ್ತು. 40ರ ಸ್ಥಾನದಿಂದ 54ಕ್ಕೆ ಜಾರಿದೆ. ಕ್ಯೂ.ಎಸ್. ವರ್ಲ್ಡ್ ಯನಿವರ್ಸಿಟಿ ರ‌್ಯಾಂಕಿಂಗ್‌ನಲ್ಲಿ ವಿವಿ 8 ದಕ್ಷಿಣ ಏಷ್ಯಾ ದೇಶಗಳ ನಡುವೆ 110ನೇ ಸ್ಥಾನ ಪಡೆದಿದೆ. ಇದಕ್ಕೆ ಬೋಧಕರ ಕೊರತೆಯೇ ಕಾರಣವಾಗಿದ್ದು, ಶಿಕ್ಷಣ ಗುಣಮಟ್ಟ ಕುಸಿತಕ್ಕೂ ಕೈಗನ್ನಡಿಯಾಗಿದೆ.

ಈ ನಡುವೆ, ಮಾ.22ರಂದು ನಟ, ದಿವಂಗತ ಪುನೀತ್ ರಾಜಕುಮಾರ್ ಅವರಿಗೆ ಮರಣೋತ್ತರ ಗೌರವ ಡಾಕ್ಟರೇಟ್ ಪದವಿಯನ್ನು ಮೈವಿವಿ ಪ್ರದಾನ ಮಾಡಿತ್ತು. ಜತೆಗೆ, ರಕ್ಷಣಾ ವಿಜ್ಞಾನಿ, ಡಿಆರ್‌ಡಿಒ ನಿವೃತ್ತ ಮಹಾನಿರ್ದೇಶಕ ಡಾ.ವಿ.ಕೆ. ಅತ್ರೆ, ಮಳವಳ್ಳಿಯ ಜಾನಪದ ಕಲಾವಿದ ಎಂ.ಮಹಾದೇವಸ್ವಾಮಿ ಅವರಿಗೂ ಗೌರವ ಡಾಕ್ಟರೇಟ್ ನೀಡಲಾಯಿತು.

ಮುಕ್ತಗಂಗೋತ್ರಿಯಲ್ಲೂ ಗದ್ದಲ:
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಈ ಸಲವೂ ಅನೇಕ ಆರೋಪ, ಪ್ರತ್ಯಾರೋಪ ಪ್ರತಿಧ್ವನಿಸಿದ್ದವು. ಸಿಬ್ಬಂದಿ ಮೇಲೆ ಕುಲಪತಿಯ ಸಮ್ಮುಖದಲ್ಲಿ ಹಲ್ಲೆ ಪ್ರಕರಣ ನಡೆಯಿತು. ಲೈಂಗಿಕ ಆರೋಪವೂ ಕೇಳಿಬಂದಿತು. ಇದು ವಿವಿಗೆ ಕೆಟ್ಟ ಹೆಸರು ತಂದಿತ್ತು. ಡಾ.ಎಸ್.ವಿದ್ಯಾಶಂಕರ್ ಬಳಿಕ ನ.11ರಂದು ಮುಕ್ತ ವಿವಿಗೆ ನೂತನ ಕುಲಪತಿಯಾಗಿ ಪ್ರೊ.ಶರಣಪ್ಪ ವೈಜನಾಥ ಹಲಸೆ ಬಂದಿದ್ದಾರೆ.
ಏ.25ರಂದು ಮುಕ್ತ ವಿವಿ 17ನೇ ವಾರ್ಷಿಕ ಘಟಿಕೋತ್ಸವ ಸಮಾರಂಭ ನಡೆಯಿತು. ವಿಆರ್‌ಎಲ್ ಸಮೂಹ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಆನಂದ ಸಂಕೇಶ್ವರ, ಆರ್‌ವಿ ಸಮೂಹ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎ.ವಿ.ಎಸ್. ಮೂರ್ತಿ, ಬೆಂಗಳೂರಿನ ಟಾಟಾ ಗ್ಲೋಬಲ್ ಸಂಪನ್ಮೂಲ ನಿರ್ವಹಣಾ ಸೇವಾ ಸಂಸ್ಥೆಯ ಉಪಾಧ್ಯಕ್ಷ ಇ.ಎಸ್. ಚಕ್ರವರ್ತಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು. 8,338 ಅಭ್ಯರ್ಥಿಗಳು ಪದವಿ ಪಡೆದರು.

ಸಂಗೀತ ವಿವಿಯಲ್ಲಿ ಸುಧಾರಣೆ ಇಲ್ಲ
ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದಲ್ಲಿ ಈ ವರ್ಷವೂ ಗಮನಾರ್ಹ ಬದಲಾವಣೆ ಗೋಚರವಾಗಲಿಲ್ಲ. ಇನ್ನೂ ಸ್ವಂತ ಕಟ್ಟಡ, ಕಾಯಂ ಸಿಬ್ಬಂದಿ, ಹಾಸ್ಟೆಲ್ ಸೇರಿದಂತೆ ಮೂಲಸೌಕರ್ಯ ಕಲ್ಪಿಸಿಕೊಡಲು ಆಗಿಲ್ಲ. ಈ ನಡುವೆ, ಕೆಲಸದಿಂದ ತೆಗೆದ ಕ್ರಮವನ್ನು ಖಂಡಿಸಿ ತಾತ್ಕಾಲಿಕ ಗುತ್ತಿಗೆ ನೌಕರರು 100 ದಿನಕ್ಕಿಂತ ಹೆಚ್ಚು ಕಾಲ ಪ್ರತಿಭಟನೆ ನಡೆಸಿದ್ದರೂ ಪ್ರಯೋಜನವಾಗಲಿಲ್ಲ.

ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ; ಪಿಯುಸಿಯಲ್ಲಿ ಕಳಪೆ:
2021-22ನೇ ಶೈಕ್ಷಣಿಕ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಯಲ್ಲಿ ಗಮನ ಸೆಳೆದಿದ್ದು, ಶೇ.91.38ರಷ್ಟು ವಿದ್ಯಾರ್ಥಿಗಳು ಪಾಸಾಗಿದ್ದರು. ಕಳೆದ ಎರಡು ವರ್ಷಕ್ಕೆ ಹೋಲಿಕೆ ಮಾಡಿದರೆ ಇದು ಗಣನೀಯ ಹೆಚ್ಚಳವಾಗಿದೆ. ಆದರೆ, 2021-2022ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಜಿಲ್ಲೆ ಕಳಪೆ ಸಾಧನೆ ಮಾಡಿದ್ದು, ಜಿಲ್ಲೆಯ ಫಲಿತಾಂಶ ಶೇ.3ರಷ್ಟು ಇಳಿಕೆಯಾಗಿತ್ತು.
2020ನೇ ಸಾಲಿನಲ್ಲಿ ಶೇ.67.98ರಷ್ಟು ಫಲಿತಾಂಶವಾಗಿತ್ತು. ಈ ಸಲ ಶೇ.64.45ರಷ್ಟು ಫಲಿತಾಂಶ ಬಂದಿದೆ. ರಾಜ್ಯಮಟ್ಟದಲ್ಲಿ ಜಿಲ್ಲೆ 17ನೇ ಸ್ಥಾನ ಪಡೆಯುವ ಮೂಲಕ 3 ಸ್ಥಾನವನ್ನು ಇಳಿಕೆ ಕಂಡಿತ್ತು.

ಯೂಕ್ರೇನ್ ವಿದ್ಯಾರ್ಥಿಗಳ ಸಂಕಷ್ಟ:
ಯೂಕ್ರೇನ್-ರಷ್ಯಾ ಯುದ್ಧ ಬಿಕ್ಕಟ್ಟಿನಿಂದ ಜಿಲ್ಲೆಯ 30 ಅಧಿಕ ವೈದ್ಯಕೀಯ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದರು. ಅವರನ್ನು ವಾಪಸ್ ಕರೆತರಲಾಗಿದೆ. ಆದರೆ, ವಿದ್ಯಾಭ್ಯಾಸ ಮುಂದುವರಿಸಲು ಇನ್ನೂ ಸಾಧ್ಯವಾಗಿಲ್ಲ. ಇವರೆಲ್ಲ ಬೇರೆ ದೇಶಗಳ ಕಡೆ ಮುಖ ಮಾಡಿದ್ದಾರೆ.

ಅನ್ ಲೀಸ್ ಕಲವರ:
ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಆಯೋಜಿಸಿದ್ದ ಜಾಗತಿಕ ಹಬ್ಬ ‘ಅನ್ ಲೀಸ್-2022’ ಕಾರ್ಯಕ್ರಮ ವೈಭವ ನಡೆಯಿತು. ‘ಸುಸ್ಥಿರ ಅಭಿವೃದ್ಧಿಗಾಗಿ ನಾವೀನ್ಯತೆ ಪ್ರಯೋಗಾಲಯ’ ಶೀರ್ಷಿಕೆಯಡಿ ಒಂದು ವಾರ ನಡೆದ ಅಂತಾರಾಷ್ಟ್ರೀಯ ಕಾರ್ಯಕ್ರಮದಲ್ಲಿ 167 ದೇಶಗಳ 5 ಸಾವಿರ ಯುವ ಜನರು ಜಮಾವಣೆಗೊಂಡಿದ್ದರು.

ಪ್ರವಾಸೋದ್ಯಮಕ್ಕೆ ಬೂಸ್ಟರ್:
2020 ಮತ್ತು 2021ರಲ್ಲಿ ಕರೊನಾದಿಂದ ತತ್ತರಿಸಿದ ಮೈಸೂರು ಪ್ರವಾಸೋದ್ಯಮಕ್ಕೆ ಪ್ರಸ್ತಕ ಸಾಲಿನಲ್ಲಿ ಹೊಸ ಚೈತನ್ಯ ದೊರೆಯಿತು. ಕರೊನಾ ಹಾವಳಿ ತಗ್ಗಿ, ಕೋವಿಡ್ ನಿರ್ಬಂಧಗಳೂ ತೆರವುಗೊಂಡಿದ್ದರಿಂದ ಮೈಸೂರಿನತ್ತ ದೇಶ-ವಿದೇಶಿ ಪ್ರವಾಸಿಗರು ಇಲ್ಲಿಗೆ ಆಗಮಿಸಿದ್ದು, ಪ್ರವಾಸೋದ್ಯಮಕ್ಕೆ ಅನುಕೂಲವಾಗಿದೆ.

ತೀವ್ರ ವಿರೋಧ ವ್ಯಕ್ತವಾದ್ದರಿಂದ ಚಾಮುಂಡಿಬೆಟ್ಟದಲ್ಲಿ ರೋಪ್ ವೇ ಯೋಜನೆ ಕೈಬಿಡಲಾಯಿತು. ಪ್ರಸ್ತಕ ಬಜೆಟ್‌ನಲ್ಲಿ ಈ ಯೋಜನೆಯನ್ನು ಘೋಷಿಸಲಾಗಿತ್ತು. ಪರಿಸರವಾದಿಗಳು, ಸಾರ್ವಜನಿಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಇದಕ್ಕೆ ಮಣಿದ ರಾಜ್ಯ ಸರ್ಕಾರವು ಈ ಯೋಜನೆಯಿಂದ ಹಿಂದೆ ಸರಿಯಿತು.

ಜೆಡಿಎಸ್‌ನಲ್ಲಿ ವಿವಿಧ ಏರಿಳಿತ:
ಜೆಡಿಎಸ್ ಪಡಸಾಲೆಯಲ್ಲಿ ಬಿಸಿ ಮತ್ತು ತಂಗಾಳಿ ಎರಡೂ ಬೀಸಿದೆ. 3 ವರ್ಷದಿಂದ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದ ಶಾಸಕ ಜಿ.ಟಿ.ದೇವೇಗೌಡ ನಡೆಯಿಂದ ಜೆಡಿಎಸ್ ಜಿಲ್ಲೆಯಲ್ಲಿ ಸೊರಗಿತ್ತು. ನಾಯಕತ್ವ ಬಿಕ್ಕಟ್ಟಿನಿಂದ ಕಾರ್ಯಕರ್ತರ ಪಡೆಯಲ್ಲಿ ಹುರುಪು ಇರಲಿಲ್ಲ. ಇದನ್ನು ಅರಿತ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಮಧ್ಯಪ್ರವೇಶದಿಂದ ಜಿಟಿಡಿ ಪಕ್ಷದಲ್ಲೇ ಉಳಿದುಕೊಳ್ಳುವಂತೆ ಮನವೊಲಿಸಿದರು. ಕಾಂಗ್ರೆಸ್, ಬಿಜೆಪಿನಲ್ಲಿ ಅಪ್ಪ-ಮಗನಿಗೆ ಟಿಕೆಟ್ ದೊರೆಯಲ್ಲ ಎಂಬುದು ಖಚಿತವಾಗುತ್ತಿದ್ದಂತೆ ಜಿಟಿಡಿ ಸಹ ಪಕ್ಷದಲ್ಲೇ ಮುಂದುವರಿಯಲು ಮನಸ್ಸು ಮಾಡಿದರು. ಇದರಿಂದ ಜಿಟಿಡಿ, ಪಕ್ಷಕ್ಕೆ ಅನುಕೂಲಕರ ಸನ್ನಿವೇಶ ಸೃಷ್ಟಿಯಾಗಿದೆ.

Share This Article

A. P. J. Abdul Kalam ಅವರ ಈ ಟ್ರಿಕ್ಸ್​​ಗಳನ್ನು ವಿದ್ಯಾರ್ಥಿಗಳು ಓದುವಾಗ ಮಿಸ್​ ಮಾಡ್ದೆ ಅನುಸರಿಸಿ

ಮಿಸೈಲ್ ಮ್ಯಾನ್ ಎಂದೇ ಖ್ಯಾತರಾಗಿರುವ ಭಾರತದ ಮಹಾನ್ ವಿಜ್ಞಾನಿ ಹಾಗೂ ಮಾಜಿ ರಾಷ್ಟ್ರಪತಿ ಡಾ.ಎಪಿಜೆ ಅಬ್ದುಲ್…

ಹೊಳೆಯುವ ಮುತ್ತಿನಂತಹ ಹಲ್ಲುಗಳಿಗೆ ಈ ಟಿಪ್ಸ್ ಫಾಲೋ ಮಾಡಿ..! Home Remedies

ಬೆಂಗಳೂರು: ಪ್ರತಿಯೊಬ್ಬರೂ ತಮ್ಮ ಹಲ್ಲುಗಳು ಮುತ್ತಿನಂತೆ ಬಿಳಿ ಮತ್ತು ಹೊಳೆಯುವಂತೆ ಕಾಣಬೇಕೆಂದು ಬಯಸುತ್ತಾರೆ. ಏಕೆಂದರೆ.. ನಮ್ಮ…

ಮೊದಲು ತಲೆಗೆ ನೀರು ಹಾಕ್ತೀರಾ? ಸ್ನಾನ ಮಾಡುವ ಸರಿಯಾದ ವಿಧಾನ ಯಾವುದು? ಇಲ್ಲಿದೆ ಉಪಯುಕ್ತ ಮಾಹಿತಿ | Bathing

Bathing: ದೈಹಿಕ ನೈರ್ಮಲ್ಯ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರತಿದಿನ ಸ್ನಾನ ಮಾಡಲು ಆರೋಗ್ಯ ತಜ್ಞರು ಶಿಫಾರಸು…